varthabharthi

ಸಂಪಾದಕೀಯ

ಸಹಭಾಗಿತ್ವದ ಹೆಸರಲ್ಲಿ ಪ್ರಹಾರ

ವಾರ್ತಾ ಭಾರತಿ : 25 Oct, 2019

‘ಸಹಭಾಗಿತ್ವ’ ಯಾವತ್ತೂ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿರುತ್ತದೆ. ದುರ್ಬಲರಿಗೆ ಸಬಲರು ಕೈ ಚಾಚಿ ಅವರನ್ನೂ ಸಬಲರನ್ನಾಗಿಸುವುದು ಸಹಭಾಗಿತ್ವ. ಸಬಲರು ದುರ್ಬಲರ ಪ್ರಯೋಜನ ಪಡೆದುಕೊಂಡು ಅವರನ್ನು ಇನ್ನಷ್ಟು ದುರ್ಬಲರನ್ನಾಗಿಸುವುದನ್ನು ಸಹಭಾಗಿತ್ವ ಎಂದು ಕರೆಯಲಾಗುವುದಿಲ್ಲ. ಕರಡಿ ಮತ್ತು ನರಿ ಕೃಷಿ ಮಾಡಿದ ಕತೆಯನ್ನು ಕೇಳಿಯೇ ನಾವೆಲ್ಲ ಬೆಳೆದಿದ್ದೇವೆ. ಈ ಜೋಡಿ ಪರಸ್ಪರ ಸಹಭಾಗಿತ್ವದಿಂದ ಗೆಣಸು ಬೆಳೆದವು. ನರಿ ಹೇಳಿತು ‘‘ಭೂಮಿಯ ಮೇಲೆ ಬೆಳೆದದ್ದೆಲ್ಲ ನಿನಗೆ ಇರಲಿ. ನನಗೆ ಭೂಮಿಯ ಒಳಗಿರುವುದೇ ಸಾಕು’’. ಗೆಣಸನ್ನೆಲ್ಲ ನರಿ ಬಾಚಿಕೊಂಡಿತು. ಕರಡಿಗೆ ಬರೇ ಸೊಪ್ಪು. ಇದಾದ ಬಳಿಕ ಸಹಭಾಗಿತ್ವದಲ್ಲಿ ಜೋಳ ಬೆಳೆದರು. ಈಗ ನರಿ ಹೇಳಿತು ‘‘ಕಳೆದ ಬಾರಿ ನಾನು ಭೂಮಿಯ ಒಳಗಿದ್ದಿದ್ದನ್ನು ಪಡೆದುಕೊಂಡೆ. ಈ ಬಾರಿ ಅದು ನಿನಗಿರಲಿ. ಮೇಲಿದ್ದದ್ದು ನನಗೆ’’. ಕರಡಿ ಒಪ್ಪಿಕೊಂಡಿತು. ನರಿಗೆ ಜೋಳ ಸಿಕ್ಕಿತು. ಕರಡಿಗೆ ಬರೇ ಗಿಡಗಳ ಬೇರು ಮಾತ್ರ. ಉದಾರೀಕರಣದ ಹೆಸರಿನಲ್ಲಿ ನಡೆದ ಆರ್ಥಿಕ ಸುಧಾರಣೆಯ ಬಳಿಕ ಈ ದೇಶದ ಕೃಷಿಕರು ಬೇರೆ ಬೇರೆ ರೀತಿಯಲ್ಲಿ ವಂಚನೆಗೊಳಗಾಗುತ್ತಲೇ ಬಂದರು.

ಚಿಲ್ಲರೆ ವ್ಯಾಪಾರಗಳಲ್ಲೂ ಸರಕಾರ ತೆಗೆದುಕೊಂಡ ನಿರ್ಧಾರಗಳು ಅಂತಿಮವಾಗಿ ಈ ದೇಶದ ಸಣ್ಣ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಇವೆಲ್ಲದರ ಜೊತೆಗೆ ನೋಟು ನಿಷೇಧವೂ ದೇಶದ ಕೃಷಿ ಉದ್ದಿಮೆಗಳು ಮತ್ತು ಸಣ್ಣ ಉದ್ದಿಮೆಗಳ ಗಾಯಗಳಿಗೆ ಬರೆ ಎಳೆದವು. ಅದರ ಬೆನ್ನಿಗೇ ಜಿಎಸ್‌ಟಿ, ಡಿಜಿಟಲ್ ಬ್ಯಾಂಕಿಂಗ್ ಇತ್ಯಾದಿ ಸರಕಾರದ ಕ್ರಾಂತಿಗಳಿಂದ ಆರ್ಥಿಕ ವಲಯ ರಕ್ತಪಾತದ ನಡುವೆ ಏದುಸಿರು ಎಳೆಯುತ್ತಾ ಬಿದ್ದುಕೊಂಡಿದೆ. ಇಂತಹ ಹೊತ್ತಿನಲ್ಲಿ, ಆರ್‌ಸಿಇಪಿ ಅಂದರೆ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ ಈ ದೇಶದ ವ್ಯಾಪಾರ ವಲಯದ ಮೇಲೆ ಪ್ರಹಾರ ಮಾಡಲಿದೆ. ಈಗಾಗಲೇ ದೇಶಾದ್ಯಂತ ಈ ಸಹಭಾಗಿತ್ವದ ಕುರಿತಂತೆ ಅಪಸ್ವರಗಳು ಎದ್ದಿವೆ. ಆದರೆ ಸರಕಾರ ಮಾತ್ರ, ಪಾಕಿಸ್ತಾನ, ಕಾಶ್ಮೀರ, 370ನೇ ವಿಧಿ, ರಾಮಮಂದಿರ ಇತ್ಯಾದಿ ಪದಗಳನ್ನು ಗುರಾಣಿಯಾಗಿಸಿ ರಕ್ಷಣೆ ಪಡೆಯುತ್ತಿದೆ. ಭಾರತ, ಚೀನಾ, ಜಪಾನ್, ಕಾಂಬೋಡಿಯಾ, ಮಲೇಶ್ಯಾ, ವಿಯೆಟ್ನಾಂ ಸಹಿತ ಹದಿನೈದು ದೇಶಗಳು ಸೇರಿದ ಪ್ರಾದೇಶಿಕ ಸಹಭಾಗಿತ್ವವನ್ನೇ ಆರ್‌ಸಿಇಪಿ ಎಂದು ಕರೆಯಲಾಗುತ್ತದೆ.

ಈ ಸಹಭಾಗಿತ್ವದೊಳಗಿರುವ ದೇಶಗಳು ಒಂದೇ ದೇಶವೆಂಬಂತೆ ತಮ್ಮ ಸರಕುಗಳನ್ನು ಯಾವುದೇ ಸುಂಕಗಳ ಭಾರವಿಲ್ಲದೆ ಪರಸ್ಪರ ಮಾರಾಟ ಮಾಡುವ ಅವಕಾಶವನ್ನು ಈ ಒಪ್ಪಂದ ನೀಡುತ್ತದೆ. ಭಾರತವು ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸುವ ಶಕ್ತಿಯನ್ನು ಹೊಂದಿದ್ದರೆ ಈ ಒಪ್ಪಂದ ಭಾರತಕ್ಕೆ ಲಾಭದಾಯಕವಾಗುತ್ತಿತ್ತೇನೋ. ಎಲ್ಲಕ್ಕಿಂತ ಮುಖ್ಯವಾಗಿ ಈ ಒಪ್ಪಂದ ಕುರಿತಂತೆ ಸರಕಾರ ಯಾವುದೇ ಪಾರದರ್ಶಕವಾದ ಚರ್ಚೆಗಳನ್ನು ನಡೆಸಿಲ್ಲ. ‘ಸ್ವಾತಂತ್ರೋತ್ಸವದ ದಿನ ಏನು ಮಾತನಾಡಬೇಕು?’ ಎಂದು ದೇಶದ ಜನರ ಜೊತೆಗೆ ಸಲಹೆ ಕೇಳುವ ಪ್ರಧಾನಿ, ಆರ್‌ಸಿಇಪಿ ಬಗ್ಗೆ ಕಳೆದ ಏಳು ವರ್ಷಗಳಲ್ಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಮತ್ತು ಈ ಕುರಿತಂತೆ ಯಾವುದೇ ಸಲಹೆಗಳನ್ನು ಸ್ವೀಕರಿಸಿಲ್ಲ. ನವೆಂಬರ್ ಹೊತ್ತಿನಲ್ಲಿ ಈ ಒಪ್ಪಂದದ ಅಂತಿಮ ಸುತ್ತಿನ ಸಭೆ ನಡೆಯಲಿದೆ. ಇತರ ದೇಶಗಳು ಈ ಬಗ್ಗೆ ತಮ್ಮ ತಮ್ಮ ಸಂಸತ್‌ಗಳಲ್ಲಿ ವಿವರಗಳನ್ನು ಮಂಡಿಸಿದ್ದು, ಚರ್ಚೆಗೆ ಅವಕಾಶಗಳನ್ನು ನೀಡಿದೆ. ಆದರೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವುಳ್ಳ ದೇಶ ಎಂದು ಕರೆದುಕೊಳ್ಳುವ ಭಾರತ, ತನ್ನ ಸಂಸತ್‌ನಲ್ಲಿ ಈ ಬಗ್ಗೆ ಯಾವ ಚರ್ಚೆಯನ್ನೂ ನಡೆಸಿಲ್ಲ. ಈ ಕುರಿತಂತೆ ಯಾವ ವಿವರಗಳೂ ಬಹಿರಂಗವಾಗಿಲ್ಲ. ಸೋರಿಕೆಯಾದ ಕೆಲವು ದಾಖಲೆಗಳ ಮೂಲಕವಷ್ಟೇ ತಜ್ಞರು ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಇಂತಹ ಒಪ್ಪಂದಕ್ಕೆ ಭಾಗೀದಾರವಾಗುವ ಮುನ್ನ, ಉಳಿದ ದೇಶಗಳೊಂದಿಗೆ ಸ್ಪರ್ಧಿಸುವ ಗುಣಮಟ್ಟ, ತಾಕತ್ತು ನಮ್ಮ ದೇಶಕ್ಕಿದೆಯೇ ಎನ್ನುವುದರ ಕಡೆಗೆ ನಾವು ಗಮನ ಹರಿಸಬೇಕಾಗಿದೆ. ಈಗಾಗಲೇ ವಿದೇಶಿ ಸರಕುಗಳ ಜೊತೆಗೆ ಸ್ಪರ್ಧಿಸಲು ಭಾರತ ಹೆಣಗಾಡುತ್ತಿದೆ. ಆಮದು ಈ ದೇಶದ ಸರಕುಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಚೀನಾದಂತಹ ದೇಶಗಳು ಈ ಒಪ್ಪಂದದ ಸಕಲ ಪ್ರಯೋಜನಗಳನ್ನು ತನ್ನದಾಗಿಸಿಕೊಳ್ಳಬಹುದು. ಜೊತೆಗೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗಳ ಡೈರಿ ಉತ್ಪನ್ನಗಳು ತೆರಿಗೆ ರಹಿತವಾಗಿ ಈ ದೇಶದ ಮಾರುಕಟ್ಟೆಯೊಳಗೆ ಪ್ರವೇಶಿಸಿತು ಎಂದಾದರೆ, ಈ ದೇಶದ ಹಾಲು ಉತ್ಪಾದನೆಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಈಗಾಗಲೇ, ಜಾನುವಾರು ಮಾರಾಟದ ಮೇಲೆ ಸರಕಾರ ತಳೆದಿರುವ ನಿಲುವು ಗ್ರಾಮೀಣ ಹೈನೋದ್ಯಮವನ್ನು ತೊಂದರೆಗೆ ಸಿಲುಕಿಸಿದೆ. ಜೊತೆಗೆ ಗೋರಕ್ಷಕರ ಕಾಟವೂ ರೈತರು ಗೋಸಾಕಣೆಯಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ. ಆದರೂ ಗ್ರಾಮೀಣ ಉದ್ದಿವೆುಯಲ್ಲಿ ಹೈನೋದ್ಯಮ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಸಹಕಾರ ಸಂಘದ ರೂಪದಲ್ಲಿ ಬೆಳೆದ ಈ ಉದ್ಯಮ, ಗ್ರಾಮೀಣ ಪ್ರದೇಶದ ಆರ್ಥಿಕ ಚೈತನ್ಯಕ್ಕೆ ಆನೆಬಲವನ್ನು ನೀಡಿದೆ. ಇದೀಗ ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾದ ಡೈರಿ ಉತ್ಪನ್ನಗಳು ದೇಶದೊಳಗಿರುವ ಹೈನೋದ್ಯಮ ಸಹಭಾಗಿತ್ವದ ಮೇಲೆ ದಾಳಿ ನಡೆಸಿದರೆ, ಅದು ಮಾಡುವ ಪರಿಣಾಮ ಇನ್ನಷ್ಟು ಭೀಕರ.

 ದೇಶದ ಆರ್ಥಿಕತೆ ಕುಸಿದು ಕೂತಿರುವ ಈ ದಿನಗಳಲ್ಲಿ, ಕೃಷಿ ಮತ್ತಿತರ ಕ್ಷೇತ್ರಗಳ ಗುಣಮಟ್ಟವನ್ನು ಹೆಚ್ಚಿಸುವ, ಇತರ ದೇಶಗಳ ಉತ್ಪನ್ನಗಳ ಜೊತೆಗೆ ಪೈಪೋಟಿ ನಡೆಸುವ ಶಕ್ತಿಯನ್ನು ನೀಡುವ ಸ್ಥಿತಿಯಲ್ಲಿ ನಮ್ಮ ಸರಕಾರ ಇಲ್ಲ. ಈ ಒಪ್ಪಂದದ ಪ್ರಸ್ತಾವ ಇಂದು ನಿನ್ನೆಯದೇನೂ ಅಲ್ಲ. ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲು ಸರಕಾರಕ್ಕೆ ಸಾಕಷ್ಟು ಸಮಯವೂ ಇತ್ತು. ಆದರೆ ಅಂತಹ ಪ್ರಯತ್ನ ನಡೆಯಲಿಲ್ಲ ಮಾತ್ರವಲ್ಲ, ಇರುವ ಉದ್ದಿಮೆಗಳೆಲ್ಲ ಸರಕಾರದ ನೀತಿಯಿಂದಾಗಿ ನಾಶದ ಹಂತ ತಲುಪಿತು. ಇಂತಹ ಹೊತ್ತಿನಲ್ಲಿ ಚೀನಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ನಂತಹ ದೇಶಗಳು ಯಾವ ತೆರಿಗೆಯೂ ಇಲ್ಲದೆ ಸಹಭಾಗಿತ್ವದ ಹೆಸರಿನಲ್ಲಿ ತಮ್ಮ ಉತ್ಪನ್ನಗಳನ್ನು ಈ ದೇಶಕ್ಕೆ ತಂದು ಸುರಿದರೆ, ಇಲ್ಲಿಯ ಉತ್ಪನ್ನಗಳನ್ನು ಏನು ಮಾಡಬೇಕು? ಇತರ ದೇಶಗಳ ಜೊತೆಗೆ ಪೈಪೋಟಿ ನಡೆಸುವ ಸಾಮರ್ಥ್ಯವೇ ಇಲ್ಲದ ಸಂದರ್ಭದಲ್ಲಿ, ಆರ್‌ಸಿಇಪಿ ಒಪ್ಪಂದ ಭಾರತದ ಆರ್ಥಿಕತೆಯನ್ನು ಇನ್ನಷ್ಟು ಡೋಲಾಯಮಾನಗೊಳಿಸಲಿದೆ. ಆದುದರಿಂದ ಆರ್‌ಸಿಇಪಿ ಕುರಿತಂತೆ ಸರ್ವ ವಿವರಗಳನ್ನು ದೇಶದ ಜನರ ಮುಂದಿಡಲು ಸರಕಾರಕ್ಕೆ ಒತ್ತಾಯ ಹೇರಬೇಕಾಗಿದೆ. ಈ ಒಪ್ಪಂದ ಸಂಸತ್‌ನಲ್ಲಿ ಚರ್ಚೆ ನಡೆಯಬೇಕು. ಆ ಬಳಿಕವಷ್ಟೇ ಸರಕಾರ ಸಹಿ ಹಾಕಬೇಕು. ಈ ನಿಟ್ಟಿನಲ್ಲಿ ಶ್ರೀಸಾಮಾನ್ಯರು ಸರ್ಜಿಕಲ್ ಸ್ಟ್ರೈಕ್, ಕಾಶ್ಮೀರ, ರಾಮಮಂದಿರ ಮೊದಲಾದ ವಿಸ್ಮತಿಯಿಂದ ಹೊರಬಂದು, ತಮ್ಮ ಮೂಲಭೂತ ಅಗತ್ಯಗಳ ಕಡೆಗೆ ಮೊದಲು ಗಮನ ಹರಿಸುವಂತಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮೋದಿ, ಅಮಿತ್ ಶಾರ ಭಾಷಣಗಳನ್ನೇ ಬೇಯಿಸಿ ತಿನ್ನಬೇಕಾದ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗಬಹುದು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)