varthabharthi


ಸುಗ್ಗಿ

ಪುಂಡಿಕೋಲಿನ ದೀಪಾವಳಿ

ವಾರ್ತಾ ಭಾರತಿ : 25 Oct, 2019
ಎಲ್.ಸಿ.ಸುಮಿತ್ರಾ, ತೀರ್ಥಹಳ್ಳಿ

ಪುಂಡಿಸೊಪ್ಪು ಉತ್ತರ ಕರ್ನಾಟಕದಲ್ಲಿ ತರಕಾರಿಯಾಗಿ ಬಳಸುತ್ತಾರೆ. ನಾರಿನಿಂದ ಹಗ್ಗ ಹೊಸೆಯುತ್ತಾರೆ. ಮಲೆನಾಡಿನಲ್ಲಿ ದೀಪದ ಕೋಲು ಮತ್ತು ಹಗ್ಗ ಹೆಣೆಯಲು ಮಾತ್ರ ಬಳಕೆ.

ಅವತ್ತು ಶನಿವಾರ ಮಧ್ಯಾಹ್ನ ಸ್ಕೂಲಿಂದ ಬಂದು ಊಟ ಮಾಡಿ ನಾನು ಅಂಗಳದಲ್ಲಿ ನಾಯಿಮರಿ ಹತ್ತಿರ ಆಟ ಆಡ್ತಾ ಇದ್ದೆ. ಅಜ್ಜ ಚಪ್ಪಲಿ ಮೆಟ್ಟಿ ಎಲ್ಲಿಗೋ ಹೊರಟಿದ್ದು ಕಂಡು ನಾನೂ ಹೊರಟೆ. ಅಜ್ಜಯ್ಯ ಹೋಗಿದ್ದು ಗದ್ದೆಗೆ. ಎರಡು ಗದ್ದೆಗಳಲ್ಲಿ ಕಬ್ಬು ಬೆಳೆದಿದ್ದರು. ಕಬ್ಬಿನ ಬುಡ ಕ್ಲೀನ್ ಮಾಡಿ ಕಬ್ಬಿನ ಗರಿಗಳನ್ನೆ ಸುತ್ತಿ ಕಟ್ಟುವ ಕೆಲಸ ನಡೆಯುತ್ತಿತ್ತು. ಕಬ್ಬಿನ ಹಿತ್ತಿಲಿನ ಸುತ್ತಲೂ ಪುಂಡಿ ಗಿಡ ಬೆಳೆದಿದ್ದರು. ಬುಡದಲ್ಲಿ ಅಲಸಂಡೆ ಬಳ್ಳಿಗಳೂ ಬೆಳೆದಿದ್ದವು. ಅಜ್ಜ ಪುಂಡಿ ಗಿಡಗಳನ್ನು ಬುಡಕ್ಕೆ ಕಡಿಯುವಂತೆ ಹೇಳಿದರು. ಕೊಂಬೆ ರೆಂಬೆಗಳನ್ನು ಕಡಿದು ಮಧ್ಯದ ದಂಟುಗಳನ್ನು ಬಳ್ಳಿಯಲ್ಲಿ ಕಟ್ಟಿ ನರಸ ಎಂದು ನಮ್ಮ ಮನೆಯಲ್ಲಿ ತೋಟದ ಕೆಲಸ ಮಾಡುವವನು ಹಳ್ಳದ ನೀರಿನಲ್ಲಿ ಆ ದಂಟುಗಳನ್ನು ಮುಳುಗಿಸಿದ. ಮೇಲಿನ ತೊಗಟೆ ಸ್ವಲ್ಪ ಮೆತ್ತಗಾಗಲಿ ಅನ್ನುವ ಉದ್ದೇಶದಿಂದ ಮೂರುನಾಲ್ಕು ದಿನ ನೀರಿನಲ್ಲಿ ನೆನೆಸಿ ಆಮೇಲೆ ತೆಗೆದು ಸಿಪ್ಪೆ ಸುಲಿದು ಮಧ್ಯದ ಬಿಳಿ ದಂಟನ್ನು ಬಿಸಿಲಿನಲ್ಲಿ ಒಣಗಿಸುತ್ತಾರೆ. 

ಮತ್ತೊಂದು ಶನಿವಾರ ಸಂಜೆಯ ಹೊತ್ತಿಗೆ ನಾನು ಆಟ ಮುಗಿಸಿ ಅಂಗಳಕ್ಕೆ ಬಂದಾಗ ಕಲ್ಲು ಬೆಂಚಿನ ಮೇಲೆ ಕುಳಿತು ಅಜ್ಜ ಪುಂಡಿಕೋಲಿನ ಸಿಪ್ಪೆ ಬಿಡಿಸುತ್ತಿದ್ದರು. ನಾನೂ ಕೆಲವನ್ನು ತೆಗೆಯಲು ಪ್ರಯತ್ನಿಸಿದೆ. ನಾರು ತೆಗೆದ ಮೇಲೆ ಅದನ್ನು ಚೆನ್ನಾಗಿ ಬಿಡಿಸಿ ಒಣಗಿಸಿ ಹಗ್ಗ ಹೊಸೆಯುತ್ತಿದ್ದರು. ಈ ಹಗ್ಗ ಮೆತ್ತಗಿರುತ್ತಿತ್ತು. ಕರುಗಳನ್ನು ಕಟ್ಟಲು ಉಪಯೋಗಿಸುತ್ತಿದ್ದರು. ತೆಂಗಿನ ನಾರಿನ ಹಗ್ಗ ಕರುಗಳಿಗೆ ನೋವಾಗಬಹುದು ಎಂದು. ಹಗ್ಗ ಹೊಸೆಯುವಾಗ ಒಂದು ತುದಿ ಹಿಡಿದುಕೊಳ್ಳಲು ಹೇಳುತ್ತಿದ್ದರು. ನಾನಾಗಲಿ ತಮ್ಮನಾಗಲಿ ಸಂತೋಷದಿಂದ ಈ ಕೆಲಸ ಮಾಡುತ್ತಿದ್ದೆವು. ರಜೆಯ ದಿನಗಳಲ್ಲಿ ನಮಗೆ ಮಾಡಲು ಕೆಲಸವಾದರೂ ಏನಿತ್ತು. ನಮ್ಮದೇ ಆಟಗಳನ್ನು ಹುಡುಕಿಕೊಳ್ಳಬೇಕಿತ್ತು. ಹಾಗಾಗಿ ಅಂಗಳದಲ್ಲಿ ಅಡಕೆ ಚಪ್ಪರದ ಕೆಳಗೆ ಬಿದಿರಿನ ತಟ್ಟಿ ಹೆಣೆಯುವವರನ್ನು ನೋಡುತ್ತ ಕುಳಿತುಕೊಳ್ಳುವುದು, ದೊಡ್ಡವರು ಹೇಳುವ ಸಣ್ಣ ಕೆಲಸಗಳನ್ನು ಮಾಡುವುದು ಇಷ್ಟೆ. ಪುಂಡಿ ನಾರಿನ ಹಗ್ಗ ಹೆಣೆದ ಮೇಲೆ ಕೋಲುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಇಡುತ್ತಿದ್ದರು. ದೀಪಾವಳಿಯ ದಿನ ಗದ್ದೆಯಲ್ಲಿ, ತೋಟದಲ್ಲಿ, ಅಂಗಳದಲ್ಲಿ ದೀಪ ಉರಿಸಲು ಈ ಪುಂಡಿಕೋಲುಗಳು ಬಳಕೆಯಾಗುತ್ತಿದ್ದವು.

ಒಂದು ವರ್ಷ ನಮ್ಮ ಮನೆಯಲ್ಲಿ ಪುಂಡಿಗಿಡ ಬೆಳೆದಿರಲಿಲ್ಲ. ಆಗ ಅಜ್ಜಿಯ ತವರು ಮನೆಯಿಂದ ತಂದಿದ್ದರು. ಒಣಗಿದ ಪುಂಡಿಕೋಲುಗಳು ಹಗುರವಾಗಿರುತ್ತಿದ್ದವು. ಬೆಳ್ಳಗೆ ಆಕರ್ಷಕವೆನಿಸುತ್ತಿದ್ದವು. ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನ ಈ ದೀಪದ ಕೋಲುಗಳನ್ನು ಗದ್ದೆ ತೋಟ ಗಳಲ್ಲಿ ದೀಪ ಹಚ್ಚಲು ಅಣಿಗೊಳಿಸಬೇಕಾಗಿತ್ತು. ತೆಳ್ಳನೆ ಶುಭ್ರವಾಗಿ ಒಗೆದು ಒಣಗಿಸಿಟ್ಟಿರುತ್ತಿದ್ದರು. ಆ ಬಿಳಿ ಬಟ್ಟೆ ಯನ್ನು ಸಣ್ಣದಾಗಿ ಸೀಳಿ ಒಲೆಯ ಮೇಲೆ ಬಿಸಿ ಎಣ್ಣೆಯಲ್ಲಿ ನೆನೆಸಿ ಕೋಲಿನ ತುದಿಗೆ ಸುತ್ತುತ್ತಿದ್ದರು. ಬಟ್ಟೆಯನ್ನು ಸಣ್ಣಗೆ ಸೀಳುವ ಕೆಲಸ ಜೊತೆಗೆ ಅಜ್ಜ ಕೇಳಿದ ವಸ್ತುಗಳನ್ನು ಮನೆ ಯೊಳಗಿನಿಂದ ತಂದುಕೊಡುವ ಕೆಲಸ ನಮಗೆ. ಒಲೆಯ ಮೇಲಿಟ್ಟು ಎಣ್ಣೆಯಲ್ಲಿ ಬಿಸಿ ಮಾಡುವ ಕೆಲಸ ಅಮ್ಮನಿಗೆ. ಆ ಬತ್ತಿಯನ್ನು ಕೋಲಿಗೆ ಸುತ್ತುವ ಕೆಲಸ ಅಪ್ಪ ಅಥವಾ ಅಜ್ಜನಿಗೆ. ಈ ಕೋಲುಗಳಿಗೆ ಹೂಗುಚ್ಚವನ್ನು ಕಟ್ಟುತ್ತಿದ್ದರು. ಅದಕ್ಕೆ ಬೇಕಾದ ಕೇದಿಗೆ ಅಥವಾ ಮುಂಡುಗದ ಹೂಗಳು. (ಕಿತ್ತಳೆ ಎಲೆಗಳು), ಪಚ್ಚೆ ತೆನೆ, ಏಲಕ್ಕಿ ತೆನೆ, ಚೆಂಡು ಹೂಗಳು. ಎಲ್ಲವನ್ನೂ ಮೊದಲೇ ಒಂದು ಬಿದಿರಿನ ಬುಟ್ಟಿಯಲ್ಲಿ ಹೊಂದಿಸಿಡುತ್ತಿದ್ದೆವು. ಕೇದಗೆ ಹೂವಿನ ಒಂದು ಉದ್ದ ಎಸಳಿನ ಒಳಗೆ ಅಡಿಕೆ ಸಿಂಗಾರದ ಎಲೆಗಳು, ಕಿತ್ತಳೆ ಸೊಪ್ಪು, ಏಲಕ್ಕಿ ತೆನೆ, ಪಚ್ಚೆ ತೆನೆ, ಚೆಂಡು ಹೂ ಎಲ್ಲವನ್ನೂ ಸೇರಿಸಿ ಮೊದಲೇ ಕಟ್ಟಿ ಸಿದ್ಧಪಡಿಸಿರುತ್ತಿದ್ದರು. ಈ ಹೂವನ್ನು ಪ್ರತಿ ಕೋಲಿಗೂ ಆಲಂಕಾರಿಕವಾಗಿ ಕಟ್ಟುತ್ತಿದ್ದರು. ಈ ಕೆಲಸ ಮಾಡುವಾಗ ಈ ಕೇದಗೆ ಪಚ್ಚೆ ತೆನೆಗಳ ಪರಿಮಳ ಅಲ್ಲೆಲ್ಲ ಪಸರಿಸಿರುತ್ತಿತ್ತು. ಮನಕ್ಕೆ ಮುದ ನೀಡುವ ವಾತಾವರಣ.

ಈ ಪುಂಡಿಸೊಪ್ಪು ಉತ್ತರ ಕರ್ನಾಟಕದಲ್ಲಿ ತರಕಾರಿಯಾಗಿ ಬಳಸುತ್ತಾರೆ. ನಾರಿನಿಂದ ಹಗ್ಗ ಹೊಸೆಯುತ್ತಾರೆ. ಮಲೆನಾಡಿನಲ್ಲಿ ದೀಪದ ಕೋಲು ಮತ್ತು ಹಗ್ಗ ಹೆಣೆಯಲು ಮಾತ್ರ ಬಳಕೆ. ದೀಪಾವಳಿಯ ಸಂಜೆ ಹೀಗೆ ತಯಾರಿಸಿದ ಕೋಲುಗಳನ್ನು ಹಿಡಿದುಕೊಳ್ಳಲು ಇಬ್ಬರು ಹೂ ಹಿಡಿದುಕೊಳ್ಳಲು ಒಬ್ಬರು ದೀಪ ಹಚ್ಚಲು ಅಡಿಕೆ ದೆಬ್ಬೆಯ ದೊಂದಿ ಹಿಡಿದುಕೊಳ್ಳಲು ಒಬ್ಬರು ಹೀಗೆ ಅಪ್ಪ, ಅಜ್ಜ, ತಮ್ಮ ಒಬ್ಬ ಸಹಾಯಕನ ಜತೆ ಸಂಜೆ ಆರು ಗಂಟೆಗೆ ಗದ್ದೆ ಅಂಚಿನ ಮೇಲೆ ಸಾಲಾಗಿ ಹೋಗುತ್ತಿದ್ದರು. ಅಕ್ಕಪಕ್ಕದ ಮನೆಯವರೂ ಹೀಗೆ ಹೋಗುತ್ತಿದ್ದರು. ‘‘ಹಂಡೋಳಿಗೆ ಹುಂಡೋಳಿಗೆ ಲಕ್ಷ್ಮೀಕೋಲು ದೀಪಾವಳಿಗೆ... ಹೋಳಿಗೆ’’ ಎಂದೆಲ್ಲ ಮಕ್ಕಳು ರಾಗವಾಗಿ ಕೂಗುತ್ತಾ ಹೋಗುವಾಗ ಅಜ್ಜಿ ಬೆಳಗ್ಗೆ ಗೋಪೂಜೆ ಮಾಡಿ ಮೇಯಲು ಬಿಟ್ಟಿದ್ದ ದನಗಳನ್ನು ಕದಲಾರತಿ ಮಾಡಿ ಕೊಟ್ಟಿಗೆಯೊಳಕ್ಕೆ ಬಿಡುತ್ತಿದ್ದರು. 

ನಾವು ಮಕ್ಕಳು ದೀಪ ಹಚ್ಚಿ ಮನೆಯೊಳಗೆ ಬರುವಾಗ ಕೈಕಾಲು ತೊಳೆದು ಅಜ್ಜಿ ದೇವರ ಎದುರಿಗೆ ಇಟ್ಟಿದ್ದ ಅಕ್ಕಿ ತೆಂಗಿನಕಾಯಿ ಸೌತೆಕಾಯಿ ಇತ್ಯಾದಿ ಫಲವಸ್ತು ಗಳಿಗೆ ನಮಸ್ಕಾರ ಮಾಡಬೇಕಿತ್ತು. ಆಮೇಲೆ ಮೇಳಿದೇವರ ಪೂಜೆ. ಪಟಾಕಿ, ಭೂಚಕ್ರ, ಹೂಕುಡಿಕೆ, ನಕ್ಷತ್ರಕಡ್ಡಿ ಹಚ್ಚುವುದು. ಊಟ ಮುಗಿಯುದರಲ್ಲಿ ಕೋಲಾಟದವರು ಬರುತ್ತಿದ್ದರು. ವೃತ್ತಾಕಾರದಲ್ಲಿ ಕೋಲಾಟವಾಡುತ್ತಾ ಅಜ್ಜ ಮುತ್ತಜ್ಜರ ಹೆಸರಿನಲ್ಲಿ ಹಾಡು ಹೇಳುತ್ತಾ ಕೋಲು ಹಾಕುತ್ತಿದ್ದರು. ಅಜ್ಜ ತಾವು ನಿತ್ಯ ಉಪಯೋಗಿಸುತ್ತಿದ್ದ ಬಟ್ಟೆಗಳನ್ನು ಕೋಲಾಟದವರಿಗೆ ಅಕ್ಕಿ ದುಡ್ಡು ಕೊಟ್ಟಾದ ಮೇಲೆ ಕೊಡುತ್ತಿದ್ದರು. ತಾವು ಒಳಗಿನಿಂದ ಇನ್ನೆರಡು ಜತೆ ಶರ್ಟ್ ಪಂಚೆ ಹೊರಗೆ ತೆಗೆಯುತ್ತಿದ್ದರು. ಅಜ್ಜನ ಬದುಕು ಒಂದು ರೀತಿಯಲ್ಲಿ ನೂರಕ್ಕೆ ನೂರು ಗಾಂಧಿವಾದ. ಸರಳವಾದ ಎರಡು ಜತೆ ಶರ್ಟ್ ಎರಡು ಪಂಚೆ, ಮದುವೆ ಇತ್ಯಾದಿ ಸಂದರ್ಭಗಳಿಗಾಗಿ ಸ್ವಲ್ಪ ಉತ್ತಮವಾದ ಇನ್ನೊಂದು ಜತೆ ಬಟ್ಟೆ. ಊಟ ತಿಂಡಿಗಳೂ ಬಹಳ ಮಿತವಾಗಿ. ತಿರುಗಾಟ ಪ್ರವಾಸ ಯಾವುದೂ ಇಲ್ಲ. ಗದ್ದೆ ತೋಟಗಳೇ ನಿತ್ಯ ಹೋಗುತ್ತಿದ್ದ ಜಾಗಗಳು. ಅಷ್ಟು ಸರಳವಾಗಿ ಬದುಕಲು ಹೇಗೆ ಸಾಧ್ಯವಾಗುತ್ತಿತ್ತು ಅಂತ ಈಗ ಆಶ್ಚರ್ಯವಾಗುತ್ತದೆ.

ಇನ್ನೇನು ನಿದ್ದೆ ಬಂತು ಅನ್ನುವಾಗ ಅಂಟಿಗೆ ಪಂಟಿಗೆಯವರ ರಾಗ ಕೇಳುತ್ತಿತ್ತು. ದೀಪಾವಳಿಯ ರಾತ್ರಿ ಹೀಗೆ ಕಳೆಯುತಿತ್ತು. ಮರುದಿವಸ ಕರಿ ಅದರ ಮರುದಿನ ವರ್ಷ್ತೊಡಕು. ಹೊಸತು, ಕಾಣಿಕೆ ಕಟ್ಟುವುದು. ಮೂರು ದಿನ ಮೂರು ಕ್ಷಣದಂತೆ ಕಳೆದುಹೋಗುತ್ತಿತ್ತು. ಈಗ ದೀಪಾವಳಿ ಒಂದೆ ದಿನ... ಪುಂಡಿ ಕೋಲು ಸಿಗದಿರುವುದರಿಂದ ಅಡಿಕೆ ದೆಬ್ಬೆಯನ್ನು ಸೀಳಿ ದೀಪ ಹಚ್ಚುತ್ತಾರೆ. ದೂರದ ಊರಿನಲ್ಲಿರುವ ಮಕ್ಕಳು ಹಬ್ಬಕ್ಕೆ ಬರಲು ಏನೇನೊ ತೊಂದರೆಗಳು. ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮ ಮಾತ್ರ. ದೀಪಾವಳಿ ನೆನಪಿನಲ್ಲಿ ಮಾತ್ರ ಆಗಿದೆ. ಟಿವಿಗಳಲ್ಲಿ ಮಾತ್ರ ದೀಪಾವಳಿ ಧಮಾಕ. ಹಬ್ಬದ ದಿನ ಮನೆಯ ಎರಡು ಮೂರು ಜನ ಬಿಟ್ಟರೆ ಊಟಕ್ಕೆ ಯಾರೂ ಇಲ್ಲ. ಸಂಜೆ ದೀಪದ ಕೋಲು ಹಚ್ಚಲೂ ಸಹಾಯಕರಿಲ್ಲ. ನಿಜ ಹೇಳಬೇಕೆಂದರೆ ನಮ್ಮೂರಲ್ಲಿ ಗದ್ದೆಗಳೇ ಇಲ್ಲ. ಎಲ್ಲ ಅಡಿಕೆ ತೋಟಗಳಾಗಿವೆ. ದೊಡ್ಡ ಊರುಗಳ ಸಮೀಪ ಇರುವ ಗದ್ದೆಗಳು ಸೈಟ್‌ಗಳಾಗಿವೆ. ಬದಲಾವಣೆ ಸಹಜ ಆದರೆ ಪ್ರಕೃತಿ ವಿರುದ್ಧವಾಗಿ ಅಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)