varthabharthi


ವಿಶೇಷ-ವರದಿಗಳು

ದೀಪಾವಳಿ ಬೆಳಕನ್ನಷ್ಟೇ ಪಸರಿಸಲಿ...

ವಾರ್ತಾ ಭಾರತಿ : 26 Oct, 2019
ಡಾ. ಮುರಲೀ ಮೋಹನ್, ಚೂಂತಾರು

ದೀಪಾವಳಿ ಎನ್ನುವುದು ಬರೀ ಹೊಸಬಟ್ಟೆ, ಹಬ್ಬದೂಟ ಮತ್ತು ಸಿಡಿಮದ್ದಿನ ಆರ್ಭಟಕ್ಕೆ ಸೀಮಿತವಾಗಬಾರದು. ಅಲ್ಲದೆ ದೀಪಾವಳಿ ಆಚರಣೆ ಎನ್ನುವುದು ಶ್ರೀಮಂತಿಕೆ ಮತ್ತು ದೊಡ್ಡತನದ ಪ್ರದರ್ಶನಕ್ಕೆ ವೇದಿಕೆಯಾಗಬಾರದು. ಶರತ್ ಋತುವಿನ ಮಧ್ಯಭಾಗದಲ್ಲಿ ಬರುವ ದೀಪಾವಳಿ ಸಡಗರ ಸಂಭ್ರಮ ಮತ್ತು ಸಂತಸದ ಪ್ರತೀಕವಾಗಿರುತ್ತದೆ. ಈ ಶುಭಗಳಿಗೆಯಲ್ಲಿ ಮನೆಮಂದಿಯೆಲ್ಲಾ ಒಟ್ಟು ಸೇರಿ ಊರ ಕೇರಿನ ಜನರೆಲ್ಲಾ ಒಂದಾಗಿ ಜಾತಿ, ಮತ, ಧರ್ಮದ ಬೇಧವಿಲ್ಲದೇ ವಿಶ್ವ ಭಾತೃತ್ವವನ್ನು ಸಾರುವ ಮಾನವೀಯತೆಯ ಪ್ರತೀಕವಾದಾಗ ಮಾತ್ರ ದೀಪಾವಳಿಯ ಆಚರಣೆಗೆ ಹೆಚ್ಚು ಮೌಲ್ಯ ಬಂದೀತು ಮತ್ತು ಅರ್ಥಪೂರ್ಣವಾಗಬಹುದು.

ಕಾಲಚಕ್ರ ವೇಗವಾಗಿ ಚಲಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮುಗಿದ ದೀಪಾವಳಿ ಪುನಃ ಬಂದೇ ಬಿಟ್ಟಿತು. ದೀಪಾವಳಿ ಎಂದಾಕ್ಷಣ ನಮಗೆ ನೆನಪಾಗುವುದು ಸಾಲು ಸಾಲು ದೀಪಗಳು, ಸಿಡಿಮದ್ದುಗಳು, ರಾಕೆಟ್‌ಗಳು ಬಾಣ ಬಿರುಸುಗಳು. ಎಲ್ಲೆಲ್ಲೂ ಸಂಭ್ರಮದ ಸಡಗರದ ವಾತಾವರಣ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರ್ವಕಾಲ. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಎಂಬತ್ತರ ಆಸುಪಾಸಿನ ಮುದುಕರಿಗೂ ಎಲ್ಲಿಲ್ಲದ ಸಂಭ್ರಮ. ಮಕ್ಕಳಿಗೆ ಸುರು ಸುರುಕಡ್ಡಿ ಮತ್ತು ಹೂಕುಂಡದ ಬೆಳಕಿನ ಸುರಿಮಳೆ. ಅಜ್ಜ, ಅಜ್ಜಿಯರಿಗೆ ಮೊಮ್ಮಕ್ಕಳ ಜೊತೆ ಆಡುವ ನಲಿಯುವ ಮತ್ತು ತಮ್ಮ ಬಾಲ್ಯದ ದಿನಗಳ ಚೇಷ್ಟೆಗಳನ್ನು ಪುನಃ ಮೆಲುಕು ಹಾಕುವ ಸುಸಂದರ್ಭ. ಮಧುಮೇಹ ರೋಗವಿದ್ದರೂ ಹಬ್ಬದ ನೆಪದಲ್ಲಿ ಸಿಹಿತಿಂಡಿಯನ್ನು ಮೆಲ್ಲುವ ಸುವರ್ಣಾವಕಾಶ. ‘‘ಪರವಾಗಿಲ್ಲ, ಹೋಗಲಿ ಬಿಡಿ, ಹಬ್ಬದ ದಿನ ಒಂದು ಸ್ವೀಟ್ ತಿಂದಲ್ಲಿ ಏನಾಗಲ್ಲ’’ ಎಂದು ಸಮಜಾಯಿಸಿ ನೀಡುವ ಸೊಸೆಯಂದಿರು ಮತ್ತು ಮಕ್ಕಳು. ಒಟ್ಟಿನಲ್ಲಿ ಊರಿಗೆ ಊರೇ ಸಂಭ್ರಮ ಸಡಗರದಿಂದ ಮಿಂದೇಳುತ್ತಿರುತ್ತದೆ.

ಆದರೆ ಒಂದು ಅಂದಾಜಿನ ಪ್ರಕಾರ ದೀಪಾವಳಿ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಸಿಡಿಮದ್ದನ್ನು ಸಿಡಿಸಲಾಗುತ್ತದೆ. ದೀಪಾವಳಿ ಸಂಭ್ರಮ ಮತ್ತು ಸಂತಸದ ಪ್ರತೀಕವಾಗಿದ್ದರೂ, ಈ ಪಟಾಕಿ, ಸಿಡಿಮದ್ದು ಮತ್ತು ಬಾಣ ಬಿರುಸುಗಳಿಂದ ಆಗುವ ಅನಾಹುತ ಮತ್ತು ದುರಂತಗಳಿಗೆ ಏಣೆಯೇ ಇಲ್ಲ. ಅತಿಯಾದ ಸದ್ದು ಮಾಡುವ ಅಪಾಯಕಾರಿ ಪಟಾಕಿಗಳನ್ನು ಸರಕಾರ ನಿಷೇಧಿಸಿದೆ. ಈ ಸಂಬಂಧವಾಗಿ ಸ್ಪೋಟಕಗಳ ಕಾಯ್ದೆ ಮತ್ತು ನಿಯಮಗಳು ಎಂಬ ಕಾನೂನೇ ಇದ್ದರೂ ಜನರು ಮತ್ತು ವ್ಯಾಪಾರಿಗಳು ಈ ಕಾನೂನನ್ನು ಪರಿಪಾಲಿಸದಿರುವುದು ಬಹುದೊಡ್ಡ ವಿಷಾದನೀಯ ಸಂಗತಿ. ಸರಕಾರ ಕೂಡ ಈ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಮಾಡದಿರುವುದು ದುರದೃಷ್ಟಕರ ವಿಚಾರವಾಗಿದೆ. ಉತ್ತಮ ದರ್ಜೆಯ ಗುಣಮಟ್ಟದ ಪಟಾಕಿಗಳು ಮತ್ತು ಸಿಡಿಮದ್ದಿನ ತಯಾರಿಕೆ, ಅವುಗಳ ಸಂಗ್ರಹ, ಅಪಾಯಕಾರಿ ಸಿಡಿಮದ್ದುಗಳನ್ನು ಬಳಸದಿರುವಿಕೆ ಮುಂತಾದ ಕಾನೂನನ್ನು ಯಾರೂ ಪಾಲಿಸುತ್ತಿಲ್ಲ. ಇದೇ ಕಾರಣದಿಂದಲೇ ವಾತಾವರಣ ಕಲುಷಿತಗೊಳ್ಳುತ್ತಿದೆ. ಶ್ವಾಸಕೋಶ ಸಂಬಂಧಿ ರೋಗಗಳಾದ ಅಸ್ತಮ ಮುಂತಾದ ಚರ್ಮರೋಗಗಳು ಇತ್ಯಾದಿಗಳು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಉಲ್ಬಣಿಸುತ್ತಿದೆ. ಅದೇ ರೀತಿ ಬಾರೀ ಸದ್ದಿನ ಪಟಾಕಿ ಸಿಡಿಸುವುದರಿಂದ ಉಂಟಾಗುವ ಸದ್ದಿನಿಂದ ಶ್ರವಣಶಕ್ತಿ ಕುಂದುತ್ತದೆ. ಸಾಕುಪ್ರಾಣಿಗಳು, ಪಕ್ಷಿ ಸಂಕುಲಗಳು ಬೆದರಿ ಹಿಂಸೆಗೊಳಗಾಗುತ್ತದೆ. ಪುಟ್ಟ ಮಕ್ಕಳಿಗೂ ಹಿಂಸೆಯಾಗಬಹುದು ಮತ್ತು ಮಾನಸಿಕವಾಗಿ ಕುಗ್ಗಿ ಹೋಗಬಹುದು. ಮಕ್ಕಳು ತುಂಬಾ ಸದ್ದಿನ ಸಿಡಿಮದ್ದನ್ನು ಸಿಡಿಸಿದಾಗ ಭಯಬೀತರಾಗಬಹುದು. ಮಾನಸಿಕವಾಗಿ ವಿಶೇಷ ಪರಿಣಾಮ ಬೀರಿ ಮಾನಸಿಕ ಸ್ಥೈರ್ಯ ಉಡುಗಿ ಹೋಗಬಹುದು. ಅಜಾಗರೂಕತೆಯಿಂದ ಸಿಡಿಮದ್ದನ್ನು ಬಳಸಿದ್ದಲ್ಲಿ ಕೈಕಾಲುಗಳಿಗೆ ಸುಟ್ಟು ಗಾಯಗಳಾಗಬಹುದು, ಕಣ್ಣುಗಳಿಗೆ ಹಾನಿಯಾಗಬಹುದು. ದೇಹದ ಇತರ ಭಾಗಗಳಿಗೂ ಗಾಯವಾಗಬಹುದು. ಬೆಂಕಿಯ ಜೊತೆ ಸರಸ ಯಾವತ್ತೂ ಒಳ್ಳೆಯದಲ್ಲ. ಆದ್ದರಿಂದ ಆದಷ್ಟು ಹಚ್ಚುವವರಿಗೆ, ಪರಿಸರಕ್ಕೆ, ಜೀವಜಾಲಕ್ಕೆ ಹಾನಿ ತರುವಂತಹ ಪಟಾಕಿಗಳನ್ನು ಉರಿಸಲೇಬೇಡಿ. ಅಲ್ಲದೆ ಪಟಾಕಿಗಳನ್ನು ಹಚ್ಚುವುದಾದರೂ ಹಲವಾರು ಮುಂಜಾಗರೂಕತಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ಮುಂಜಾಗರೂಕತೆ ಮತ್ತು ಮುನ್ನೆಚ್ಚರಿಕೆ

► ಯಾವತ್ತೂ ಮನೆಯ ಒಳಗೆ ಪಟಾಕಿ ಸಿಡಿಮದ್ದು ಸುಡಲೇಬಾರದು. ನಾಲ್ಕು ಗೋಡೆಗಳ ನಡುವೆ ಪಟಾಕಿಯ ಜೊತೆ ಸರಸ ಯಾವತ್ತೂ ಅಪಾಯಕಾರಿ. ಮನೆಯ ಹೊರಗಡೆ ಬಯಲು ಪ್ರದೇಶದಲ್ಲಿ ಪಟಾಕಿ ಸಿಡಿಸುವುದು ಉತ್ತಮ.

► ಮಕ್ಕಳು ಪಟಾಕಿ ಸುಡುವಾಗ ಹಿರಿಯರು ಜೊತೆಗೆ ಇರಲೇಬೇಕು. ಯಾವತ್ತೂ ಮಕ್ಕಳ ಮೇಲೆ ವಿಶೇಷ ಮುತುವರ್ಜಿ ಮತ್ತು ಕಾಳಜಿ ಇರಿಸಬೇಕು. ಒಮ್ಮೆ ಸಿಡಿಸಲು ಯತ್ನಿಸಿದ ಸಿಡಿಯದೇ ಇದ್ದ ಪಟಾಕಿಯನ್ನು ಪುನಃ ಸಿಡಿಸುವ ಪ್ರಯತ್ನ ಮಾಡಲೇ ಬಾರದು. ಅಗ್ಗದ ಬೆಲೆಯ ಕಳಪೆ ಗುಣಮಟ್ಟದ ಸಿಡಿಮದ್ದು ಯಾವತ್ತೂ ಅಪಾಯಕಾರಿ. ಉಚಿತವಾಗಿ ಸಿಕ್ಕಿದ ಕಳಪೆ ದರ್ಜೆಯ ಪಟಾಕಿ ಉಪಯೋಗಿಸಬೇಡಿ.

► ಮಕ್ಕಳು ಪಟಾಕಿ ಹಚ್ಚುವಾಗ ಪರಸ್ಪರ ಚೇಷ್ಟೆ, ತುಂಟಾಟ ಮತ್ತು ಮಕ್ಕಳಾಟಿಕೆಗೆ ಅವಕಾಶ ನೀಡಬೇಡಿ. ಒಂದು ಕ್ಷಣದ ಮರೆವು ಮತ್ತು ತುಂಟಾಟ ಇನ್ನೊಬ್ಬರ ಜೀವಕ್ಕೆ ಅಂಧಕಾರ ತರಲೂ ಬಹುದು. ಮಕ್ಕಳಿಗೆ ಸುರುಸುರು ಕಡ್ಡಿ, ಹೂಕುಂಡ, ಭೂಚಕ್ರ, ಗುಬ್ಬಿ ಪಟಾಕಿ ಇತ್ಯಾದಿ ಕಡಿಮೆ ಸದ್ದಿನ ಮತ್ತು ಅಪಾಯ ಕಡಿಮೆ ಇರುವ ಪಟಾಕಿಗಳನ್ನು ನೀಡಬೇಕು. ಅಪಾಯಕಾರಿ ಸಿಡಿಮದ್ದನ್ನು ಮಕ್ಕಳಿಂದ ದೂರವಿಡಬೇಕು.

► ಪಟಾಕಿ ಸಿಡಿಸುವುದು ಧೈರ್ಯದ ಸಂಕೇತವಲ್ಲ. ಸಿಡಿಯುವ ಪಟಾಕಿಗಳನ್ನು ಕೈಯಲ್ಲಿ ಹೊತ್ತಿಸಬಾರದು. ಮಕ್ಕಳು ಇದನ್ನು ಧೈರ್ಯದ ಸಂಕೇತವೆಂದು ಭಾವಿಸುತ್ತಾರೆ ಮತ್ತು ಇತರ ಮಕ್ಕಳ ಮುಂದೆ ಮೊಂಡು ಧೈರ್ಯ ತೋರಿಸಲು ಹೋಗಿ ಅಪಾಯವನ್ನು ಆಹ್ವಾನಿಸುತ್ತಾರೆ. ಇದರ ಅಪಾಯ ಮತ್ತು ತೊಂದೆರೆಗಳ ಬಗ್ಗೆ ಹೆತ್ತವರು ತಿಳಿ ಹೇಳಬೇಕು.

► ಹೂಕುಂಡ, ಭೂಚಕ್ರ ಮುಂತಾದವುಗಳನ್ನು ಕೆಳಗಿ ಬಾಗಿ ಹಚ್ಚುವಾಗ ವಿಶೇಷ ಗಮನವಿರಲಿ. ಸಿಡಿಯದ ಪಟಾಕಿಗಳನ್ನು ಕೈಯಿಂದ ಮುಟ್ಟಲು ಹೋದಾಗ ಹಠಾತ್ ಸಿಡಿಯಲೂ ಬಹುದು. ಸಿಡಿಯದ ಪಟಾಕಿಗಳನ್ನು ಪುನಃ ಬಳಸಲೇ ಬೇಡಿ. ಸುರು ಸುರು ಕಡ್ಡಿ ಹೊತ್ತಿಸುವಾಗ ಹೊರಹೊಮ್ಮುವ ಕಿಡಿಗಳ ಬಗ್ಗೆ ಗಮನವಿರಲಿ. ಬೇರೆ ಮಕ್ಕಳ ದೇಹದ ಮೇಲೆ ಮತ್ತು ಮೈ ಮೇಲೆ ಬೆಂಕಿಯ ಕಿಡಿ ಸಿಡಿದು ಬೀಳದಂತೆ ಎಚ್ಚರವಹಿಸಿ. ಮೈ ಮೇಲೆ ಬಟ್ಟೆ ಧರಿಸಿ, ಮೈ ಮುಚ್ಚಿಕೊಂಡು ಸಿಡಿಮದ್ದನ್ನು ಮತ್ತು ಪಟಾಕಿಗಳನ್ನು ಹಚ್ಚಬೇಕು. ಹತ್ತಿಯ ಅಥವಾ ಕಾಟನ್ ಬಟ್ಟೆ ಉತ್ತಮ. ನೈಲಾನ್ ಬಟ್ಟೆ ಬಳಸಬಾರದು.

► ಪಟಾಕಿ ಸುಡುವಾಗ ಚಪ್ಪಲಿ ಧರಿಸಲೇಬೇಕು. ಮಕ್ಕಳೂ ಅವಸರದಲ್ಲಿ ಬರಿಗಾಲಲ್ಲಿ ಓಡಾಡುವಾಗ ಭೂಚಕ್ರ, ಸುರುಸುರುಬತ್ತಿ ಮತ್ತು ಹೂಕುಂಡ ಮುಂತಾದವುಗಳು ಸುಟ್ಟು ಹೋದ ಬಳಿಕವೂ ಬಿಸಿಯಾಗಿರುತ್ತದೆ. ಬರಿಗಾಲಿಗೆ ಬೆಂಕಿ ತಗಲಿ ಸುಟ್ಟು ಗಾಯವಾಗಬಹುದು. ಮಕ್ಕಳು ಬಳಸಿದ ಪಟಾಕಿಗಳನ್ನು ಒಂದು ಸುರಕ್ಷಿತ ಮೂಲೆಯಲ್ಲಿ ರಾಶಿ ಹಾಕುವುದು ಉತ್ತಮ. ಅದೇ ರೀತಿ ಪಟಾಕಿ ಹಚ್ಚುವ ಸಮಯದಲ್ಲಿ ಒಂದೆರಡು ಬಕೆಟ್ ನೀರನ್ನು ಇಟ್ಟುಕೊಳ್ಳುವುದು ಅತೀ ಅಗತ್ಯ. ಹಾಗೆಯೇ ಪಟಾಕಿ ಸುಡುವ ಸಮಯದಲ್ಲಿ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು. ಆ ಕಾರಣದಿಂದ ಪ್ರಥಮ ಚಿಕಿತ್ಸೆ ಸಾಧನಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಯಾವುದೇ ರೀತಿಯ ನಿರ್ಲಕ್ಷ ಪ್ರಾಣಕ್ಕೆ ಸಂಚಕಾರ ತರಬಹುದು. ಸಾಕಷ್ಟು ಮುಂಜಾಗರೂಕತೆ ವಹಿಸಿದ್ದಲ್ಲಿ ದೊಡ್ಡ ಅನಾಹುತವನ್ನು ತಡೆಗಟ್ಟಬಹುದು. ಹಿರಿಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಿದ್ದಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿಗೂ ಬೆಳಕಿನ ಸಿಂಚನ ನೀಡಬಹುದು. ಇಲ್ಲವಾದಲ್ಲಿ ಬೆಳಕಿನ ಹಬ್ಬ ಕೆಲವರ ಬಾಳಿಗೆ ಶಾಶ್ವತ ಅಂಧಕಾರವನ್ನು ತರಲೂಬಹುದು ಎಂಬ ಕಟು ಸತ್ಯದ ಅರಿವು ಎಲ್ಲರಿಗೂ ಇದ್ದಲ್ಲಿ ದೀಪಾವಳಿಯ ಆಚರಣೆ ಹೆಚ್ಚು ಮೌಲ್ಯಪೂರ್ಣವಾಗಬಹುದು. ದೀಪಾವಳಿ ಎನ್ನುವುದು ಬರೀ ಹೊಸಬಟ್ಟೆ, ಹಬ್ಬದೂಟ ಮತ್ತು ಸುಡು ಮದ್ದಿನ ಆರ್ಭಟಕ್ಕೆ ಸೀಮಿತವಾಗಬಾರದು. ಅಲ್ಲದೆ ದೀಪಾವಳಿ ಆಚರಣೆ ಎನ್ನುವುದು ಶ್ರೀಮಂತಿಕೆ ಮತ್ತು ದೊಡ್ಡತನದ ಪ್ರದರ್ಶನಕ್ಕೆ ವೇದಿಕೆಯಾಗಬಾರದು. ಶರತ್ ಋತುವಿನ ಮಧ್ಯಭಾಗದಲ್ಲಿ ಬರುವ ದೀಪಾವಳಿ ಸಡಗರ ಸಂಭ್ರಮ ಮತ್ತು ಸಂತಸದ ಪ್ರತೀಕವಾಗಿರುತ್ತದೆ. ಈ ಶುಭಗಳಿಗೆಯಲ್ಲಿ ಮನೆಮಂದಿಯೆಲ್ಲಾ ಒಟ್ಟು ಸೇರಿ ಊರ ಕೇರಿನ ಜನರೆಲ್ಲಾ ಒಂದಾಗಿ ಜಾತಿ ಮತ ಧರ್ಮದ ಬೇಧವಿಲ್ಲದೇ ವಿಶ್ವ ಭಾತೃತ್ವವನ್ನು ಸಾರುವ ಮಾನವೀಯತೆಯ ಪ್ರತೀಕವಾದಾಗ ಮಾತ್ರ ದೀಪಾವಳಿಯ ಆಚರಣೆಗೆ ಹೆಚ್ಚು ಮೌಲ್ಯ ಬಂದೀತು ಮತ್ತು ಅರ್ಥಪೂರ್ಣವಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)