varthabharthi

ಗಲ್ಫ್ ಸುದ್ದಿ

ದುಬೈ: ದೀಪಾವಳಿ ವೇಳೆ ಈ ತಪ್ಪೆಸಗಿದರೆ 3 ತಿಂಗಳು ಜೈಲು ಶಿಕ್ಷೆ

ವಾರ್ತಾ ಭಾರತಿ : 26 Oct, 2019

ದುಬೈ, ಅ.26: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಯಾರಾದರೂ ಅಕ್ರಮವಾಗಿ ಪಟಾಕಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅವರಿಗೆ ಮೂರು ತಿಂಗಳುಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ದಿರ್ಹಂ ದಂಡವನ್ನು ವಿಧಿಸಲಾಗುವುದು ಎಂದು ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.

ಪಟಾಕಿಗಳಿಂದ ಆಗಬಹುದಾದ ಸಂಭಾವ್ಯ ಹಾನಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಉಂಟಾಗಿರುವ ಹಿನ್ನೆಲೆಯಲ್ಲಿ ಅಕ್ರಮ ಪಟಾಕಿ ಮಾರಾಟಕ್ಕೆ ಬಹುತೇಕವಾಗಿ ಕಡಿವಾಣ ಹಾಕಲಾಗಿದೆಯೆಂದು ಖಲೀಜ್ ಟೈಮ್ಸ್‌ನ ವರದಿ ತಿಳಿಸಿದೆ. ಯಾವುದೇ ಕಾರ್ಯಕ್ರಮದಲ್ಲಿ ಪಟಾಕಿಗಳನ್ನು ಬಳಸುವ ಮುನ್ನ ಕಾರ್ಯಕ್ರಮ ಸಂಯೋಜಕರು ದುಬೈ ಪೊಲೀಸರು ಹಾಗೂ ದುಬೈ ಮುನ್ಸಿಪಾಲಿಟಿ ಇನ್ಸ್‌ಪೆಕ್ಟರ್ ಅವರ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ದುಬೈ ನಗರಾಡಳಿತ ನಿರೀಕ್ಷಕರು ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳ ಅಕ್ರಮ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಟಾಕಿಗಳು ಜನರು ಹಾಗೂ ಆಸ್ತಿಪಾಸ್ತಿಗಳ ಸುರಕ್ಷತೆಯನ್ನು ಅಪಾಯಕ್ಕೊಡ್ಡುತ್ತಿರುವುದನ್ನು, ವಸ್ತುಗಳಿಗೆ ಹಾನಿಯುಂಟು ಮಾಡುತ್ತಿರುವುದನ್ನು ಹಾಗೂ ಪರಿಸರ ಮಾಲಿನ್ಯವುಂಟು ಮಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆಂದು ವರದಿಗಳು ತಿಳಿಸಿವೆ.

ಈ ಹಿಂದೆ, ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನು ಮಾಡಿದ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯನ್ನು ನಡೆಸಲಾಗಿತ್ತು. 2015ರಲ್ಲಿ ಪೊಲೀಸರು 23 ಟನ್ ಪಟಾಕಿಗಳನ್ನು ಹಾಗೂ 2014ರಲ್ಲಿ 28 ಟನ್ ಪಟಾಕಿಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)