varthabharthiವೈವಿಧ್ಯ

ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು

ವಾರ್ತಾ ಭಾರತಿ : 27 Oct, 2019
ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು

ಭಾಗ-1

ಮೇಲುನೋಟಕ್ಕೆ ಬಯಸಿದವರೆಲ್ಲರಿಗೂ ಬಯಸಿದ್ದನ್ನು ಬಿಟ್ಟಿಯಾಗಿ ಕೊಡುವಂತೆ ತೋರುವ ಈ ತಾಣಗಳ ಜಾಲದಲ್ಲಿ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡವರು ಕಡಿಮೆಯೇ. ಈ ಜಾಲತಾಣಗಳು ಬಿಟ್ಟಿ ಎನ್ನುವುದಾದರೆ, ಬೇಕೆನ್ನುವವರಿಗೆಲ್ಲಾ ಬಿಟ್ಟಿಯಾಗಿ ಏಕೆ ಸಿಗುತ್ತಿವೆ? ಹೇಗೆ ಸಿಗುತ್ತಿವೆ? ಈ ಜಾಲಗಳನ್ನು ನಿರ್ವಹಿಸಲು ತಗಲುವ ಖರ್ಚನ್ನು ಹೇಗೆ ನಿಭಾಯಿಸುತ್ತಾರೆ? ಅಥವಾ ಯಾರು ಕೊಡುತ್ತಿದ್ದಾರೆ? ಇವುಗಳಲ್ಲಿ ನಡೆಯುತ್ತಿರುವುದು ಯಾರಿಗೆ ಯಾರ ನಿರ್ದೇಶನವೂ ಇಲ್ಲದೆ ನೆಟ್ಟಿಗರು ತಮಗೆ ತಾವೇ ಮಾಡಿಕೊಂಡಿರುವ ಸಾಮಾಜಿಕ ಏರ್ಪಾಟಾಗಿದೆಯೆ? ಅಥವಾ ಖಂಡಾತರದಲ್ಲೆಲ್ಲೋ ಕುಳಿತಿರುವ, ಅಗೋಚರ ಜಾಲಿಗರ ಕೈಗೆ ಸಿಕ್ಕ ನೆಟ್ಟಿಗರು ಅನಿವಾರ್ಯವಾಗಿ ಆಡುತ್ತಿರುವ ಒಂದು ಮಾಯದ ಆಟವೆ? ಅಥವಾ ಅವರಿಗೇ ಗೊತ್ತಿಲ್ಲದಂತೆ ತಮ್ಮ ಖರ್ಚಿನಲ್ಲೇ ಆ ಜಾಲಿಗರಿಗಾಗಿ ಮಾಡುತ್ತಿರುವ ಬಿಟ್ಟಿ ದುಡಿಮೆಯೆ?

ಜನಸಾಮಾನ್ಯರ ಅರಿವಿಗೆ ಸುಲಭವಾಗಿ ನಿಲುಕದ, ಸಂವಹನ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ ಮತ್ತು ಚಿಹ್ನೆಗಳನ್ನು ಬಳಸುವ ಅಲ್ಗೊರಿದಮ್ ಎಂಬ ತಂತ್ರ ಭಾಷೆಯ ಸಂಕೀರ್ಣ ಕೂಸಾದ ಜಾಲತಾಣವು ಅದರ ಹೆಸರೇ ಹೇಳುವಂತೆ ಮಾಹಿತಿ-ಸಂದೇಶ-ಚಿತ್ರ -ಸಂಗೀತ-ಆಟಗಳನ್ನು ಒದಗಿಸುವ ಪರಸ್ಪರ ಸಂಬಂಧಗಳಿಂದಾದ ತಾಣಗಳ ಜಾಲ. ಮೇಲುನೋಟಕ್ಕೆ ಬಯಸಿದವರೆಲ್ಲರಿಗೂ ಬಯಸಿದ್ದನ್ನು ಬಿಟ್ಟಿಯಾಗಿ ಕೊಡುವಂತೆ ತೋರುವ ಈ ತಾಣಗಳ ಜಾಲದಲ್ಲಿ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡವರು ಕಡಿಮೆಯೇ. ಈ ಜಾಲತಾಣಗಳು ಬಿಟ್ಟಿ ಎನ್ನುವುದಾದರೆ, ಬೇಕೆನ್ನುವವರಿಗೆಲ್ಲಾ ಬಿಟ್ಟಿಯಾಗಿ ಏಕೆ ಸಿಗುತ್ತಿವೆ? ಹೇಗೆ ಸಿಗುತ್ತಿವೆ? ಈ ಜಾಲಗಳನ್ನು ನಿರ್ವಹಿಸಲು ತಗಲುವ ಖರ್ಚನ್ನು ಹೇಗೆ ನಿಭಾಯಿಸುತ್ತಾರೆ? ಅಥವಾ ಯಾರು ಕೊಡುತ್ತಿದ್ದಾರೆ? ಇವುಗಳಲ್ಲಿ ನಡೆಯುತ್ತಿರುವುದು ಯಾರಿಗೆ ಯಾರ ನಿರ್ದೇಶನವೂ ಇಲ್ಲದೆ ನೆಟ್ಟಿಗರು ತಮಗೆ ತಾವೇ ಮಾಡಿಕೊಂಡಿರುವ ಸಾಮಾಜಿಕ ಏರ್ಪಾಟಾಗಿದೆಯೆ? ಅಥವಾ ಖಂಡಾಂತರದಲ್ಲೆಲ್ಲೋ ಕುಳಿತಿರುವ, ಅಗೋಚರ ಜಾಲಿಗರ ಕೈಗೆ ಸಿಕ್ಕ ನೆಟ್ಟಿಗರು ಅನಿವಾರ್ಯವಾಗಿ ಆಡುತ್ತಿರುವ ಒಂದು ಮಾಯದ ಆಟವೆ? ಅಥವಾ ಅವರಿಗೇ ಗೊತ್ತಿಲ್ಲದಂತೆ ತಮ್ಮ ಖರ್ಚಿನಲ್ಲೇ ಆ ಜಾಲಿಗರಿಗಾಗಿ ಮಾಡುತ್ತಿರುವ ಬಿಟ್ಟಿ ದುಡಿಮೆಯೆ? ಕೆಲವರು ಇದು ಮನೋರಂಜನೆಯ ಆಕರ ಎನ್ನುತ್ತಾರೆ. ಇನ್ನು ಕೆಲವರು ಖರ್ಚಿಲ್ಲದ ಮಾಹಿತಿಯ ಭಂಡಾರ ಎನ್ನುತ್ತಾರೆ. ಮತ್ತೆ ಕೆಲವರಿಗೆ ಇದು ಯಾರ ನಿಯಂತ್ರಣಕ್ಕೂ ಸಿಗದೆ ಸ್ವಚ್ಛಂದವಾಗಿರುವ ಪ್ರಜಾತಾಂತ್ರಿಕ ಮಾಧ್ಯಮ. ಅಲ್ಲೊಬ್ಬರು, ಇಲ್ಲೊಬ್ಬರು ಇದು ಜನರ ಖಾಸಗಿತನಕ್ಕೆ ಲಗ್ಗೆ ಇಟ್ಟ ಆಧುನಿಕ ಗೂಢಚಾರಿಕೆಯ ತಂತ್ರಗಾರಿಕೆ ಎಂದು ಹೇಳುತ್ತಾರೆ. ಸಾಮಾಜಿಕ ಜಾಲತಾಣಗಳ ಒಡಲಿನಲ್ಲಿ ಇವೆಲ್ಲವೂ ಇರಬಹುದು, ಜೊತೆಗೆ ವರ್ಷವರ್ಷವೂ ಜಾಹೀರಾತುದಾರರೊಂದಿಗಿನ ಮಾಹಿತಿ ರಾಶಿಯ ವ್ಯಾಪಾರದಲ್ಲಿ ಕೋಟ್ಯಾಂತರ ಡಾಲರ್ ಗಳಿಸುತ್ತಿರುವ ವ್ಯಾಪಾರೀ ಸಂಸ್ಥೆಗಳೂ ಹೌದು ಎನ್ನುವುದು ಆ ಸಂಸ್ಥೆಗಳೇ ಪ್ರಕಟಿಸುವ ಶೇರು ಬೆಲೆ ಮತ್ತು ವಾರ್ಷಿಕ ಲೆಕ್ಕಪತ್ರಗಳಿಂದ ತಿಳಿದುಬರುತ್ತದೆ. ಈ ಮಾಹಿತಿಯನ್ನು ಈ ಜಾಲತಾಣಗಳಿಗೆ ಒದಗಿಸುತ್ತಿರುವವರು ಯಾರು? ನೆಟ್ಟಿಗರು ತಮ್ಮ ಸ್ವಂತ ಹಣ, ಸಮಯ, ಉಪಕರಣಗಳನ್ನು ವ್ಯಯಮಾಡಿ ಜಾಲತಾಣಗಳನ್ನು ತಮ್ಮದೇ ಆದ ಸ್ವಂತ ಕಾರಣ-ಉದ್ದೇಶಗಳಿಗಾಗಿ ಬಳಸುತ್ತಾರೆ ಎಂಬುದು ಸ್ಪಷ್ಟವಾಗಿಯೇ ಇದೆ. ಹಾಗೆಯೇ ಅವರು ಹಾಗೆ ಜಾಲತಾಣಗಳನ್ನು ಬಳಸುವಾಗ ಬೇಕಾದಷ್ಟು ಸ್ವವಿವರಗಳನ್ನು, ಅವರಿಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ನೇರವಾಗಿ, ಪರೋಕ್ಷವಾಗಿ ಈ ಜಾಲತಾಣಗಳಿಗೆ ಒದಗಿಸುತ್ತಾರೆ ಎಂಬುದೂ ನಿಜವೇ. ನೆಟ್ಟಿಗರು ಸಾಮಾಜಿಕ ಜಾಲತಾಣ ಸಂಸ್ಥೆಗಳ ಕೂಲಿಗಳಾಗಿ ಬಿಟ್ಟಿ ದುಡಿಮೆಯನ್ನು ಒದಗಿಸುತ್ತಿದ್ದಾರೆ ಎಂಬ ವಾದವಿದೆ. ಆದರೆ, ನೆಟ್ಟಿಗರೇನೂ ಕೊಟ್ಟ ಮಾಹಿತಿಗಾಗಿ ಸಾಮಾಜಿಕ ಜಾಲತಾಣ ಸಂಸ್ಥೆಗಳಿಂದ ಕೂಲಿ ಅಥವಾ ವೇತನವನ್ನೇನೂ ಪಡೆಯುವುದಿಲ್ಲ. ಅಂದಮೇಲೆ ಅವರು ಜಾಲತಾಣಗಳ ದುಡಿಮೆಗಾರರು ಹೇಗಾದಾರು? ನೆಟ್ಟಿಗರನ್ನು ದುಡಿಮೆಗಾರರು ಎಂದು ಪರಿಗಣಿಸಿದರೆ ತಾನೆ, ಅವರು ಬಿಟ್ಟಿ ದುಡಿಮೆಗಾರರಾಗುವ ಪ್ರಶ್ನೆ?

ಕಾರ್ಲ್‌ಮಾರ್ಕ್ಸ್ ಪ್ರಕಟಿಸಿದ ಬರಹಗಳಲ್ಲಿ ಬಹು ಮುಖ್ಯವಾದ ಎರಡು ನಿರ್ವಚನಗಳು ಇವೆ. ಅವುಗಳಲ್ಲಿ ಒಂದು ಶ್ರಮ. ಜೀವನಾಗತ್ಯ ವಸ್ತುಗಳ ಸೃಷ್ಟಿಗಾಗಿ ಶ್ರಮಿಕರು ಮಾಡುವ ಎಲ್ಲ ಕ್ರಿಯೆಗಳೂ ಶ್ರಮವೇ. ಈ ಸೃಷ್ಟಿಯಲ್ಲಿ ದೇಹ ಮತ್ತು ಮನಸ್ಸು (ಅಂದರೆ ಆಲೋಚನೆ, ಕಲ್ಪನೆ, ಪ್ರತಿಭೆ, ಕೌಶಲ, ತಂತ್ರ ಇತ್ಯಾದಿ) ಎರಡೂ ಸೇರಿರಬಹುದು. ಶ್ರಮಿಕರ ಶ್ರಮದ ಉತ್ಪನ್ನವು ದೈಹಿಕಶ್ರಮ ಪ್ರಧಾನವಾಗಿ ಹುಟ್ಟಿದ ವಸ್ತು ಇರಬಹುದು. ಉದಾಹರಣೆಗೆ ಒಂದು ಕೋಟು ಅಥವಾ ಒಂದು ಜೊತೆ ಚಪ್ಪಲಿ. ಹಾಗೆಯೇ ಮಾನಸಿಕಶ್ರಮ ಪ್ರಧಾನವಾಗಿ ಸೃಷ್ಟಿಯಾದ ಸೇವೆ ಇರಬಹುದು. ಉದಾಹರಣೆಗೆ, ತಂತ್ರಜ್ಞಾನ ಅಥವಾ ವಾಸ್ತುಶಿಲ್ಪ. ಆಧುನಿಕ ಕಾಲದ ಉದಾಹರಣೆಗಳನ್ನು ತೆಗೆದುಕೊಳ್ಳುವುದಾದರೆ, ಕಂಪ್ಯೂಟರ್ ಒಂದು ವಸ್ತು. ಅಲ್ಗೊರಿದಮ್ ಭಾಷೆಯಲ್ಲಿ ರಚಿಸಿದ ಸಾಫ್ಟ್‌ವೇರ್ ಒಂದು ಸೇವೆ. ವ್ಯಾವಹಾರಿಕವಾಗಿ ಕೋಟನ್ನು ಅಥವಾ ಕಂಪ್ಯೂಟರನ್ನು ಭೌತಿಕವಾದುದೆಂದೂ, ತಂತ್ರಜ್ಞಾನ, ಯಾವುದೇ ಜ್ಞಾನ ಅಥವಾ ಸಾಫ್ಟ್‌ವೇರ್‌ಅನ್ನು ಅಭೌತಿಕವೆಂದೂ ಕರೆಯುವುದು ಹಿಂದಿನಿಂದಲೂ ವಾಡಿಕೆಯಾಗಿದೆ. ಮಡಕೆ ಎಂಬುದು ಜೇಡಿ, ನೀರು ಮತ್ತು ಬೆಂಕಿ ಎಂಬ ವಸ್ತುಗಳನ್ನು ದೇಹಶ್ರಮ ಮತ್ತು ಮೇಧಾಶ್ರಮದ ಮೂಲಕ ಸಂಯೋಜಿಸಿದ ಭೌತಿಕವಸ್ತು. ಮಾನವ ದೇಹದಲ್ಲಿ ಹುಟ್ಟುವ ಶ್ರಮಶಕ್ತಿಯೂ ಸೇರಿದಂತೆ ಶಕ್ತಿಯ ಎಲ್ಲ ರೂಪಗಳೂ ಅಗೋಚರವೇ ಹೊರತು ಅಭೌತಿಕವಲ್ಲ. (ಮಡಕೆಯ ಮಾಡುವರೆ ಮಣ್ಣೇ ಮೊದಲು.. ಎಂಬ ಬಸವಣ್ಣನವರ ವಚನವನ್ನು ಇಲ್ಲಿ ನೆನಪಿಸಿಕೊಳ್ಳಬಹುದು). ದೈಹಿಕಶ್ರಮದಿಂದ ಹುಟ್ಟಿದ್ದು ಭೌತಿಕ, ಬೌದ್ಧಿಕಶ್ರಮದಿಂದ ಹುಟ್ಟಿದ್ದು ಅಭೌತಿಕ ಎನ್ನುವ ವಿಭಾಗದ ಹಿಂದೆ ಭಾವನಾವಾದೀ ತರ್ಕದ ಪ್ರಭಾವ ಇದೆ. ಅಂದರೆ, ವಸ್ತುವಿನಿಂದ ಬೇರೆಯಾಗಿ ಅಭೌತಿಕವಾಗಿರುವುದು ಯಾವುದೂ ಇಲ್ಲ ಮತ್ತು ಇವು ಶ್ರಮಸಂಬಂಧ ಜಾಲದಲ್ಲಿ ಸೃಷ್ಟಿಯಾಗುವುದರಿಂದ ಯಾವಾಗಲೂ ಸಾಮಾಜಿಕವೇ.

ಮಾರ್ಕ್ಸ್ ಮಾಡಿದ ಎರಡನೆಯ ಮುಖ್ಯ ನಿರ್ವಚನ, ಮೌಲ್ಯ. ಪ್ರಾಕೃತಿಕ ವಸ್ತುಗಳಿಗೆ ಮೌಲ್ಯವಿಲ್ಲ. ಮಾನವ ಶ್ರಮವನ್ನು ಅವಕ್ಕೆ ಸೇರಿಸಿದಾಗ ಮೌಲ್ಯ ಪ್ರಾಪ್ತಿಯಾಗುತ್ತದೆ. ಮೌಲ್ಯದಲ್ಲಿ ಎರಡು ವಿಧ. ಉಪಯೋಗಮೌಲ್ಯ ಮತ್ತು ವಿನಿಮಯ ಮೌಲ್ಯ. ಬಂಡವಾಳಿಗರು ಶ್ರಮಿಕರ ಶ್ರಮಶಕ್ತಿಯನ್ನು ಖರೀದಿಸಿ ಅವರಿಂದ ಪಡೆದ ಶ್ರಮದ ಒಂದು ಭಾಗಕ್ಕೆ ಮಾತ್ರ ವೇತನ ಕೊಟ್ಟು ವೇತನ ಕೊಡದ ಶ್ರಮದ ಹೆಚ್ಚುವರಿ ಫಲವನ್ನು (ಮಿಗುತಾಯ ಮೌಲ್ಯವನ್ನು) ಅವರೇ ಇಟ್ಟುಕೊಳ್ಳುತ್ತಾರೆ. ಅಂದರೆ ಶ್ರಮಿಕರಿಂದ ಪಡೆದ ಬಿಟ್ಟಿ ದುಡಿಮೆಯೇ ಮತ್ತಷ್ಟು ಬಿಟ್ಟಿದುಡಿಮೆಗೆ ಬಂಡವಾಳವಾಗಿ ಶ್ರಮಿಕರ ಮೇಲಿನ ಶೋಷಣೆಯು ಮುಂದುವರಿಯುತ್ತದೆ. ಈ ವಿಶ್ವದ ಸಂಪತ್ತೆಲ್ಲವೂ ಶ್ರಮಿಕರ ಪಾವತಿ ಮಾಡದ ಬಿಟ್ಟಿ ದುಡಿಮೆಯ ಫಲವಾದ ಮಿಗುತಾಯ ಮೌಲ್ಯದ ಸಂಚಯವೇ. ವ್ಯಾಪಾರದ ಲಾಭ, ಭೂಮಿಯ ಬಾಡಿಗೆ ಮತ್ತು ಹಣದ ವ್ಯಾಪಾರದ ಬಡ್ಡಿಗಳು ಈ ಮಿಗುತೆ ಮೌಲ್ಯದ ವಿವಿಧ ರೂಪಗಳು. ನಿರ್ವಚನಗಳನ್ನು ಹೇಗಿವೆಯೋ ಹಾಗೆ ಇವತ್ತಿನ ಸನ್ನಿವೇಶಕ್ಕೆ ಅನ್ವಯಿಸಿದರೆ, ನೆಟ್ಟಿಗರು ಜಾಲಿಗರಿಗೆ ಯಾವ ಬಿಟ್ಟಿ ದುಡಿಮೆಯನ್ನೂ ಕೊಡುತ್ತಿಲ್ಲ ಮತ್ತು ಅವರ ಶೋಷಣೆ ನಡೆಯುತ್ತಿಲ್ಲ ಎಂದು ಸ್ಪಷ್ಟವಾಗುತ್ತದೆ ಎಂಬುದು ಕೆಲವು ಚಿಂತಕರ ವಾದ. ಏಕೆಂದರೆ, ಅವರ ಪ್ರಕಾರ ಬಂಡವಾಳಿಗರು ಶ್ರಮಿಕರನ್ನು ಕೂಲಿ/ವೇತನ ಕೊಟ್ಟು ಉತ್ಪಾದನೆಯಲ್ಲಿ ತೊಡಗಿಸಿ ಅವರಿಂದ ಅಗತ್ಯ ಶ್ರಮದ ಜೊತೆಗೆ ಹೆಚ್ಚುವರಿ ಶ್ರಮವನ್ನು ಪಡೆದುಕೊಂಡರೆ ಮಾತ್ರ ಬಿಟ್ಟಿ ದುಡಿಮೆ ಇದೆ ಎಂದು ಹೇಳಬಹುದು.

ಮತ್ತೆ ಕೆಲವರು, ಮಾರ್ಕ್ಸ್ ನಿರ್ವಚಿಸುವ ಶ್ರಮ, ಮೌಲ್ಯ, ಬಿಟ್ಟಿದುಡಿಮೆ ಮತ್ತು ಮಿಗುತಾಯ ಮೌಲ್ಯಗಳ ಆಂತರ್ಯವನ್ನು ವಿಸ್ತರಿಸಿದರೆ ಮಾತ್ರ ಈ ಡಿಜಿಟಲ್ ಯುಗದ ಬಂಡವಾಳವಾದದ ಹೊಸ ವರಸೆಗಳು ಅರ್ಥವಾಗುತ್ತವೆ ಎಂದು ವಿವರಿಸುತ್ತಾರೆ.

ಈ ವಾದ-ವಿವಾದಗಳಲ್ಲಿನ ಸತ್ಯಾಸತ್ಯತೆಯನ್ನು ಅರ್ಥಮಾಡಿಕೊಳ್ಳು ವುದಕ್ಕಾಗಿ ಜಾಗತೀಕರಣ ಪ್ರಾರಂಭವಾದ ಹೊಸದರಲ್ಲಿ ಕಂಪ್ಯೂಟರ್, ಸ್ಮಾರ್ಟ್‌ಫೋನ್, ಜಾಲತಾಣಗಳು ಮತ್ತು ಸಾಮಾಜಿಕ ಜಾಲತಾಣಗಳು ಜನಸಾಮಾನ್ಯರನ್ನು ಆವರಿಸುವ ಮೊದಲು, ಕೆಲವು ಸಂದರ್ಭಗಳಲ್ಲಿ ಈಗಲೂ, ಬಂಡವಾಳಶಾಹಿ ವ್ಯಾಪಾರಿ-ಉದ್ಯಮಿಗಳು ಜನರಿಂದ ಮಾಹಿತಿ ಸಂಗ್ರಹಿಸಲು ಬಳಸುತ್ತಿದ್ದ ಕೆಲವು ವಿಧಾನಗಳನ್ನು ಪರಿಶೀಲಿಸಬಹುದು.

ಹಿಂದೆ-1. ಒಂದು ಉತ್ಪವನ್ನದ ಮಾರಾಟಕ್ಕೆ ಸಂಬಂಧಿಸಿದಂತೆ ಬಳಕೆದಾರರ ಸಮೀಕ್ಷೆ ಮಾಡ ಬೇಕೆಂದರೆ, ಸಿಬ್ಬಂದಿಯನ್ನು ನೇಮಿಸಿಕೊಂಡು, ಮನೆ ಮನೆಗೆ ಹೋಗಿ ಸ್ಯಾಂಪಲ್‌ಗಳನ್ನು ಕೊಟ್ಟು, ಅವರ ಅಭಿಪ್ರಾಯ ಗಳನ್ನು ಪಡೆಯುವ ನೆಪ ದಲ್ಲಿ ಮನೆ ಮುಖ್ಯಸ್ಥನ ಸ್ವವಿವರ, ಮನೆ ಜನರ ವಿವರಗಳು, ಕುಟುಂಬದ ಆದಾಯ, ಶಿಕ್ಷಣ ಮಟ್ಟ, ಅಭಿರುಚಿ, ಇತ್ಯಾದಿ ವಿವರಗಳನ್ನು ಖುದ್ದಾಗಿ ಪಡೆಯಬೇಕಾಗಿತ್ತು. ಅದಕ್ಕೆ ತಗಲುತ್ತಿದ್ದ ವೆಚ್ಚ, ಸಮಯ ಮತ್ತು ಸಿಬ್ಬಂದಿಯ ತರಬೇತಿ ವೆಚ್ಚಗಳನ್ನು ಉದ್ಯಮಿಗಳೋ ಅವರ ಏಜೆಂಟರೋ ಭರಿಸಬೇಕಾಗಿತ್ತು. ಈ ಡಿಜಿಟಲ್ ಯುಗದಲ್ಲಿ ಮಾಲ್‌ಗಳಲ್ಲಿ, ಜಾತ್ರೆ-ಉತ್ಸವ-ಮೇಳಗಳು ನಡೆಯುವ ಸ್ಥಳಗಳಲ್ಲಿ ಕೇವಲ ಒಂದು ಪೆಟ್ಟಿಗೆ ಇಟ್ಟು ಬೇಕಾದ ವಿವರಗಳನ್ನು ಪೆಟ್ಟಿಗೆಯಲ್ಲಿ ಹಾಕಿದರೆ ಬಹುಮಾನವಿದೆ ಎಂದು ಪ್ರಕಟಿಸಿದರೆ ಸಾಕು, ಸಮೀಕ್ಷೆಯು ಬಳಕೆದಾರರ ಖರ್ಚಿನಲ್ಲೇ ನಡೆದುಬಿಡುತ್ತದೆ. ಇದೇ ವಿಧಾನವನ್ನು ಸಮೀಕ್ಷೆ ನಡೆಸಬೇಕಾದ ನಗರದ ಬೇರೆ ಬೇರೆ ಭಾಗಗಳ ಲ್ಲಿರಿಸಿ, ಬೆರಳೆಣಿಕೆಯ ಸಿಬ್ಬಂದಿಯೊಂದಿಗೆ ಬೇಕಾದ ಫಲಿತಾಂಶಗಳನ್ನು ಪಡೆದುಕೊಳ್ಳುವುದು ಈಗ ಸಾಧ್ಯವಾಗಿದೆ. ಇದನ್ನು ಮಾರ್ಕ್ಸ್ ಹೇಳುವ ಮಾಮೂಲಿ ಅರ್ಥದಲ್ಲಿ ಜನಸಾಮಾನ್ಯರ ಬಿಟ್ಟಿ ದುಡಿಮೆ ಎನ್ನಬಹುದೆ? ಇಲ್ಲಿ ಬಳಕೆದಾರರ ಶೋಷಣೆ ನಡೆದಿದೆಯೆ?

ಈಗ-2. ಸ್ಪರ್ಧೆಯ ನೆಪದಲ್ಲಿ ದೊಡ್ಡ ಬಹುಮಾನದ ಆಸೆ ತೋರಿಸಿ ಸ್ಪರ್ಧಿಗಳ ಸ್ವಂತ ಖರ್ಚಿನಲ್ಲೇ ಹಾಡು, ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಅಗತ್ಯ ವೆಚ್ಚಗಳೊಂದಿಗೆ ಏರ್ಪಡಿಸಿ ಸ್ಪರ್ಧೆಯಲ್ಲಿ ಗೆದ್ದ ವ್ಯಕ್ತಿ-ತಂಡದ ಕಾರ್ಯಕ್ರಮವಲ್ಲದೆ, ಆಯ್ದ ಕಾರ್ಯಕ್ರಮಗಳನ್ನೂ ತಿಂಗಳಾನುಗಟ್ಟಲೆ ಪ್ರಸಾರ ಸಾಮಗ್ರಿಯಾಗಿ ಬಳಸಿಕೊಳ್ಳುವ ವಿಧಾನ ಟಿವಿ ಕಂಪೆನಿಗಳಲ್ಲಿ ಈ ದಿನಗಳಲ್ಲಿ ಸಾಮಾನ್ಯವಾಗಿದೆ. ವ್ಯಕ್ತಿ ಅಥವಾ ತಂಡಗಳಿಗೆ ಎಲ್ಲ ಸಮಾಧಾನಕರ/ಸಾಂಕೇತಿಕ ಪುರಸ್ಕಾರಗಳನ್ನು ಕೊಟ್ಟಮೇಲೂ ಈ ವಿಧಾನದಲ್ಲಿ ಅಡಕವಾಗಿರುವ ಬಿಟ್ಟಿ ದುಡಿಮೆಯ ಅಂಶವನ್ನು ಶೋಷಣೆ ಎನ್ನಲಾಗದೆ? ಹೆಚ್ಚು ಜನರು ವೀಕ್ಷಿಸಿದಷ್ಟೂ ಹೆಚ್ಚಿನ ಜಾಹೀರಾತುಗಳನ್ನು ಪಡೆಯುವ ಮೂಲಕ ಟಿವಿ ಕಂಪೆನಿಗಳು ಗಳಿಸುವ ಹಣವು ಪರೋಕ್ಷವಾಗಿ ಜನರಿಂದ ಉಪಾಯವಾಗಿ ಪಡೆಯುವ ಹೆಚ್ಚುವರಿ ಶ್ರಮದ ಮೌಲ್ಯವೇ ಅಲ್ಲವೆ?

3. ಬ್ಯಾಂಕಿನ ಸಿಬ್ಬಂದಿ ಒಂದು ಕಡೆ ಕುಳಿತು ಮಾಡುತ್ತಿದ್ದ ಕೆಲಸದ ಹೊರೆಯನ್ನು ವಿಕೇಂದ್ರೀಕರಿಸಿ, ಅವರಿಗೆ ಕೊಡುತ್ತಿದ್ದ ವೇತನ-ಭತ್ತೆಗಳನ್ನು ಉಳಿಸಿ, ಡಿಜಿಟಲೀಕರಣದ ಹೆಸರಿನಲ್ಲಿ ಖಾತೆದಾರರೇ ತಮ್ಮ ಸ್ವಂತ ಖರ್ಚಿನಲ್ಲಿ ಎಟಿಎಮ್‌ಗಳಿಗೆ ಹೋಗಿ ಅಥವಾ ಮನೆಯಲ್ಲೇ ಕುಳಿತು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ವಹಿಸುವ ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗಳ ಮೂಲಕ ಖಾತೆದಾರರ ಕೈಯಲ್ಲೇ ಮಾಡಿಸುವ ಸೇವೆ ಯಾರ ಸೇವೆ? ಮೇಲುನೋಟಕ್ಕೆ ಖಾತೆದಾರರಿಗೆ ಒದಗಿಸಿದ ವಿಶೇಷ ಸೌಲಭ್ಯದಂತೆ ಕಾಣುವ ಈ ಸೇವೆಯಲ್ಲಿ ಅಡಕವಾಗಿರುವುದು ಬ್ಯಾಂಕಿನ ಉದ್ಯೋಗಿಗಳಾಗಿ ಸಂಬಳ ಪಡೆಯದ ಜನರ ಬಿಟ್ಟಿ ದುಡಿಮೆಯೇ ಅಲ್ಲವೆ? ಈ ಬಿಟ್ಟಿ ದುಡಿಮೆಯಿಂದ ಬ್ಯಾಂಕುಗಳಿಗೆ ಉಳಿತಾಯವಾಗುವ ಹಣವು ಮಾರ್ಕ್ಸ್ ಹೇಳುವ ಮಿಗುತಾಯ ಮೌಲ್ಯದ ಮತ್ತೊಂದು ರೂಪವಲ್ಲವೆ? ಹಾಗೆ ಉಳಿದ ಹಣ ಉನ್ನತ ಅಧಿಕಾರಿಗಳ ಹೆಚ್ಚಿನ ಸಂಬಳಕ್ಕೆ, ಬ್ಯಾಂಕಿನ ಆಧುನೀಕರಣಕ್ಕೆ ಅಂದರೆ ಇತರ ವ್ಯಾಪಾರಿಗಳಿಗೆ, ಹೆಚ್ಚುವರಿ ಯಂತ್ರೋಪಕರಣಗಳಿಗಾಗಿ ಖರ್ಚುಮಾಡಬಹುದೇ ಹೊರತು ಖಾತೆದಾರರ ಠೇವಣಿಗಳಿಗೆ ಹೆಚ್ಚಿನ ಬಡ್ಡಿಯನ್ನು ಕೊಡುವುದಕ್ಕೆ ಬಳಕೆಯಾಗುವುದಿಲ್ಲ. ಹಾಗೆ ನೋಡಿದರೆ, ಬಡ್ಡಿಯನ್ನೂ ಇಳಿಸಿ, ಆಧುನೀಕರಣದ ವೆಚ್ಚಗಳನ್ನೂ ಬ್ಯಾಂಕಿನ ನಿರ್ವಹಣಾ ವೆಚ್ಚಗಳಿಗೆಂದು ಖಾತೆದಾರರಿಂದಲೇ ಪಡೆಯಬಹುದು. ಇಂತಹ ಎಲ್ಲ ಉಳಿತಾಯವನ್ನೂ, ಖಾತೆದಾರ-ಶ್ರಮಿಕರು ಹುಟ್ಟಿಸುವ ಮಿಗುತೆ ಮೌಲ್ಯವನ್ನು ಕ್ರೋಡೀಕರಿಸಿ ಬ್ಯಾಂಕಿನ ವಾರ್ಷಿಕ ಲಾಭ ಹೆಚ್ಚಿತೆಂದು ತೋರಿಸಬಹುದು. ಇಲ್ಲಿರುವ ಶೋಷಣಾ ವಿಧಾನ ಕಣ್ಣಿಗೆ ಕಾಣಿಸುತ್ತದೆಯೆ? ವರ್ಗೀಕರಿಸಲು, ಹೆಸರಿಸಲು ಬರುತ್ತದೆಯೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)