varthabharthi


ವೈವಿಧ್ಯ

ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು

ವಾರ್ತಾ ಭಾರತಿ : 29 Oct, 2019
ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು

ಭಾಗ-2

ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಲು ತರಬೇತಿ ಪಡೆದ ನುರಿತ ಸಿಬ್ಬಂದಿ ಸಂಸ್ಥೆಗಳಿಂದ ಸಂಬಳ ಪಡೆಯುತ್ತಾರೆ. ನೆಟ್ಟಿಗರ ಸಂಖ್ಯೆಗೆ ಹೋಲಿಸಿದರೆ ಇವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ನೆಟ್ಟಿಗರಿಂದ ಪಡೆಯುವ ಮಾಹಿತಿಗಳನ್ನು ಸಂಸ್ಕರಿಸಿ ವ್ಯಾಪಾರಿಗಳಿಗೆ ತಲುಪಿಸುವುದು, ಜಾಹೀರಾತುದಾರರನ್ನು ಜಾಲತಾಣದಲ್ಲಿ ಜಾಹೀರಾತು ಹೂಡುವಂತೆ ಆಕರ್ಷಿಸುವುದು ಇವರ ಕೆಲಸ. ಈ ಕೆಲಸಗಳಿಂದಾಗಿ ಅವರಿಗೆ ಸಿಗುವ ಸಂಬಳ ಅಲ್ಪವೇನಲ್ಲ, ನಿಜ. ಆದರೂ ಅವರ ದುಡಿಮೆಯಿಂದಾಗಿ ಜಾಲತಾಣ ಕಂಪೆನಿಗಳ ಆದಾಯವೇನೂ ಕೋಟಿಗಟ್ಟಲೆ ಹೆಚ್ಚುವುದಿಲ್ಲ. ಹಾಗಿದ್ದರೆ ನೆಟ್ಟಿಗರು ಜಾಲತಾಣಗಳ ಆದಾಯವನ್ನು ಈಗ ಇರುವಷ್ಟು ಅಗಾಧ ಪ್ರಮಾಣದಲ್ಲಿ ಹೇಗೆ ಹೆಚ್ಚಿಸುತ್ತಿರಬಹುದು?

ನೆಟ್ಟಿಗರು ಒಂದೇ ಸಮಯದಲ್ಲಿ ಮೂರು ಬಗೆಯ ಬಿಟ್ಟಿ ದುಡಿಮೆ ಮಾಡುತ್ತಾರೆ. ಒಂದು, ಜಾಲತಾಣವನ್ನು ತೆರೆದ ಕ್ಷಣವೇ ಜಾಲತಾಣಕ್ಕೆ ಜಾಹೀರಾತುದಾರರಿಂದ ಹಣಸಂದಾಯವಾಗುವ ಸಮಯದ ಗಣನೆ ಪ್ರಾರಂಭವಾಗುತ್ತದೆ. ಅಂದರೆ ನೆಟ್ಟಿಗರು ಜಾಲತಾಣವನ್ನು ವೀಕ್ಷಿಸಲು ತೆರೆಯುವುದೇ ಜಾಲತಾಣ ಕಂಪೆನಿಗೆ ಕೊಡುವ ಬಿಟ್ಟಿ ದುಡಿಮೆಯಾಗುತ್ತದೆ. ಎರಡು, ನೆಟ್ಟಿಗರು ಜಾಲತಾಣದಲ್ಲಿ ವಿಹರಿಸುತ್ತಿದ್ದಂತೆ, ಅವರಿಂದ ಪಡೆದ ಸಂಸ್ಕರಿಸಿದ ಮಾಹಿತಿಯನ್ನು ಆಧರಿಸಿ ಆ ನೆಟ್ಟಿಗರ ಇಷ್ಟ, ಆಯ್ಕೆ, ಮನೋಧರ್ಮಗಳನ್ನು ಆಧರಿಸಿ ಲಗತ್ತಿಸಿದ ಜಾಹೀರಾತು ಕಾಣಿಸಿಕೊಳ್ಳುತ್ತದೆ. ನೆಟ್ಟಿಗರು ಅದನ್ನು ತೆರೆದರೆ ಸಾಕು, ಸರಕನ್ನು ಕೊಂಡುಕೊಳ್ಳಬೇಕೆಂದಿಲ್ಲ, ಜಾಹೀರಾತುದಾರರಿಂದ ಜಾಲತಾಣಕ್ಕೆ ಹಣ ರವಾನೆಯಾಗುತ್ತದೆ. ಮೂರು, ನೆಟ್ಟಿಗರು ಆ ಜಾಹೀರಾತಿನಲ್ಲಿ ನೋಡಿದ ಸರಕನ್ನು ಖರೀದಿಸಿದರೆ, ಆಗಲೂ ಜಾಲಿಗ ಕಂಪೆನಿಗೆ ಜಾಹೀರಾತುದಾರರಿಂದ ಹಣ ಸಂದಾಯವಾಗುತ್ತದೆ.

ಇದಲ್ಲದೆ ಪ್ರತಿಯೊಬ್ಬ ನೆಟ್ಟಿಗನೂ ಬಳಕೆದಾರನಾಗಿ ಜಾಲತಾಣವನ್ನು ತೆರೆಯುತ್ತಲೇ ಎರಡು ಬಗೆಯ ಬಿಟ್ಟಿ ದುಡಿಮೆಯಲ್ಲಿ ತೊಡಗುತ್ತಾನೆ. ಒಂದು, ತನ್ನ ಸ್ವವಿವರಗಳನ್ನು ಜಾಲತಾಣದಲ್ಲಿ ಬಿಡುತ್ತಾನೆ. ಒಂದು ಎಲೆಯನ್ನು ಮುಟ್ಟಿದರೆ ಇಡೀ ಮರವೇ ಸ್ಪಂದಿಸುವಂಥ ಸಂಪರ್ಕಜಾಲವುಳ್ಳ ಜಾಲತಾಣಗಳಲ್ಲಿ ತನ್ನ ಸ್ವವಿವರಗಳನ್ನು ಕೊಡುವುದರೊಂದಿಗೆ ತನ್ನೊಂದಿಗೆ ನಾನಾ ರೀತಿಯಲ್ಲಿ ಸಂಪರ್ಕವಿರುವ ಎಲ್ಲರ ವಿವರಗಳನ್ನೂ ಜಾಲತಾಣಕ್ಕೆ ತಲುಪಿಸುವ ಕೊಂಡಿಯಾಗುತ್ತಾನೆ. ಈ ಜಾಲತಾಣಗಳನ್ನು ತೆರೆಯುವ ನೆಟ್ಟಿಗರ ಆಸೆ, ಆಯ್ಕೆ, ಅನಿಷ್ಟ, ರಾಜಕೀಯ ಒಲವು, ಕುಟುಂಬದ ಸದಸ್ಯರ ವಿವರಗಳು ಇನ್ನೂ ಅದೆಷ್ಟೋ ಮಾಹಿತಿಗಳನ್ನು ತಾಣದ ಮಾಹಿತಿ ಭಂಡಾರದೊಳಕ್ಕೆ ಬಸಿದುಕೊಳ್ಳುವಂತೆ ಸಾಮಾಜಿಕ ಜಾಲತಾಣಗಳು ರಚನೆಯಾಗಿವೆ. ಒಬ್ಬ ಶ್ರಮಿಕನನ್ನು ನೇಮಿಸಿಕೊಂಡು ಅವನಿಂದ ಶ್ರಮವನ್ನು ಬಸಿದುಕೊಂಡು ಬಿಟ್ಟಿ ದುಡಿಮೆಯ ಲಾಭವನ್ನು ಪಡೆಯುವ ಬಂಡವಾಳಶಾಹಿ ಉತ್ಪಾದನಾ ವಿಧಾನವೇ ಇಲ್ಲೂ ಬಳಕೆಯಾಗುತ್ತದೆ. ಮಾಮೂಲಿ ಅರ್ಥದಲ್ಲಿ ಕಾಪಿರೈಟ್ ನಿರ್ಬಂಧವಿಲ್ಲದೆ ಕೇವಲ ಮಾಹಿತಿಯನ್ನು ಮುಕ್ತವಾಗಿ ಕೊಡಲೆಂದೇ ರಚಿತವಾಗಿರುವ ಒಂದೆರಡು ಜಾಲತಾಣಗಳನ್ನು ಬಿಟ್ಟರೆ ಉಳಿದೆಲ್ಲ ಜಾಲತಾಣಗಳೂ ಬಿಟ್ಟಿಯಾಗಿ ಮಾಹಿತಿಯನ್ನು ಕಲೆಹಾಕಿ ವಾಣಿಜ್ಯವೂ ಸೇರಿದಂತೆ ಅನೇಕ ಸ್ವಹಿತಾಸಕ್ತಿಯ ಉದ್ದೇಶಗಳಿಗಾಗಿಯೇ ಬಾಯಿತೆರೆದು ಕುಳಿತಿರುತ್ತವೆ.

ಈ ದಿನಗಳಲ್ಲಿ ಬಳಕೆದಾರರು ಯಾವುದೇ ವಾಣಿಜ್ಯಮಳಿಗೆಗೆ ಹೋಗಿ ಏನನ್ನೇ ಕೊಂಡರೂ ಖರೀದಿ ಪೂರ್ಣವಾಗುವ ಮೊದಲು ಫೀಡ್‌ಬ್ಯಾಕ್ ಹೆಸರಿನಲ್ಲಿ ಬಳಕೆದಾರನ ಸ್ವವಿವರಗಳನ್ನು, ಅವನ/ಅವಳ ಶಿಕ್ಷಣಮಟ್ಟ ಇತ್ಯಾದಿಯನ್ನು ಸಂಗ್ರಹಿಸುವುದು ಸಾಮಾನ್ಯ ಸಂಗತಿಯಾಗಿದೆ. ಸರಕುಗಳನ್ನು ಮಾರುವುದಕ್ಕಾಗಿಯೇ ಸಂಘಟಿತವಾಗುವ ವಾಣಿಜ್ಯಮೇಳಗಳು ಬಳಕೆದಾರರು ಬಂದರೆ ಸಾಕೆಂದು ಕಾಯುತ್ತಾ ಕುಳಿತಿದ್ದರೂ, ಪ್ರವೇಶ ಉಚಿತ ಎಂದು ಎಲ್ಲ ಕಡೆಗಳಲ್ಲಿ ಜಾಹೀರು ಮಾಡುವುದು ಹಾಸ್ಯಾಸ್ಪದ ಎನಿಸಿದರೂ, ಹಾಗೆ ಜಾಹೀರು ಮಾಡುವ ಮೂಲಕ ಬಳಕೆದಾರರಲ್ಲಿ ಸಾಮಾನ್ಯವಾಗಿ ಅಂತರ್ಗತವಾಗಿರುವ ಬಿಟ್ಟಿ ಬಗೆಗಿನ ದುರಾಸೆಯನ್ನು ಚೆನ್ನಾಗಿ ಬಳಕೆಮಾಡಿಕೊಳ್ಳುತ್ತಾರೆ. ಕುರಿಯನ್ನು ಒಮ್ಮೆ ದೊಡ್ಡಿಯೊಳಕ್ಕೆ ಬಿಟ್ಟುಕೊಂಡರೆ ಸಾಕು, ಅದರ ತುಪ್ಪಟ ಎಷ್ಟು ಬೆಳೆದಿದೆ, ಎಷ್ಟನ್ನು, ಯಾವಾಗ ಕತ್ತರಿಸಬೇಕೆಂಬುದು ಕುರಿಗಾಹಿಗೆ ಗೊತ್ತಿರುವಂತೆ ಬಳಕೆದಾರರು ಮೇಳದೊಳಕ್ಕೆ ಕಾಲಿಟ್ಟರೆ ಸಾಕು ಅವರಿಂದ ಮಿಗುತಾಯ ಮೌಲ್ಯವನ್ನು ಪಡೆಯುವುದು ಹೇಗೆ ಎಂಬುದು ವ್ಯಾಪಾರಿಗಳಿಗೆ ಗೊತ್ತು.

ಬಹಳಷ್ಟು ಸಲ ನೆಟ್ಟಿಗನೇ ಸ್ವಇಚ್ಛೆಯಿಂದ, ಸ್ವಸಂತೋಷಕ್ಕಾಗಿ, ಹೆಸರಿನ ಆಸೆಗಾಗಿ ಇನ್ನೂ ಅನೇಕ ಸುಪ್ತ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ತಾನೇ ಸಂಪಾದಿಸಿದ, ಸಂಗ್ರಹಿಸಿದ, ಸೃಷ್ಟಿಸಿದ, ವಿಷಯ-ಚಿತ್ರ-ವೀಡಿಯೊ ಸಾಮಗ್ರಿಯನ್ನು ತನ್ನ ಖರ್ಚಿನಲ್ಲೇ ಜಾಲತಾಣಕ್ಕೆ ತುಂಬುತ್ತಾನೆ. ಅವಕ್ಕೆ ಜಾಗ ಕೊಟ್ಟ ಉಪಕಾರಕ್ಕಾಗಿ ಜಾಲತಾಣವು ಅದನ್ನು ತನ್ನ ಸಾಮಗ್ರಿಯಾಗಿ ಮಾಡಿಕೊಳ್ಳುವುದರ ಮೂಲಕ ನೆಟ್ಟಿಗನ ಬಿಟ್ಟಿ ದುಡಿಮೆಯನ್ನು ತನ್ನ ಆದಾಯಕ್ಕಾಗಿ ಬಳಸಿಕೊಳ್ಳುತ್ತದೆ. ನೆಟ್ಟಿಗನ ಸಮ್ಮತಿಯನ್ನು ಯಾವುದೋ ಸಂದು ಗೊಂದಿನಲ್ಲಿ ಇರಿಸಿ, ನಿಬಂಧನೆಗಳಿಗೆ ನನ್ನ ಒಪ್ಪಿಗೆ ಇದೆ ಎಂಬುದು ಮಾತ್ರ ಎದ್ದುಕಾಣುವಂತೆ ನಿಬಂಧನೆಯ ಪತ್ರವು ರಚಿತವಾಗಿರುತ್ತದೆ. ಪತ್ರಿಕೆಗಳು, ಜಾಹೀರಾತುಗಳು ಕಡಿಮೆಯಿದ್ದಾಗ ಓದುಗ-ಲೇಖಕರಿಂದ ಆಹ್ವಾನಿಸಿದ ಬರಹ-ಚಿತ್ರಗಳಿಗೆ ಜಾಗಕೊಟ್ಟು ಸಂಸ್ಕೃತಿ ಪ್ರೀತಿಯನ್ನು ನಟಿಸುತ್ತಾ ಓದುಗರ ಶ್ರಮವನ್ನು ಬಿಟ್ಟಿಯಾಗಿ ಬಳಸಿಕೊಳ್ಳುವ ನಯವಂಚನೆ ಮುದ್ರಣ ಮಾಧ್ಯಮಗಳಲ್ಲೂ ಇದೆ.

ವಿಶ್ವದಾದ್ಯಂತ ಊಳಿಗಮಾನ್ಯ ಸಮಾಜಗಳ ವಾಣಿಜ್ಯ ಬಂಡವಾಳವು 16ನೇ ಶತಮಾನದಿಂದೀಚೆಗೆ ಯೂರೋಪಿನ ಸಮಾಜಗಳಲ್ಲಿ ನಡೆದ ಔದ್ಯಮಿಕ ಕ್ರಾಂತಿಯಿಂದಾಗಿ ಔದ್ಯಮಿಕ ಬಂಡವಾಳವಾಗಿ ಬಂಡವಳಿಗ ಮತ್ತು ಶ್ರಮಿಕ ಎಂಬ ವರ್ಗಗಳ ಹುಟ್ಟಿಗೆ ಕಾರಣವಾಯಿತು. ಅಲ್ಲಿಂದೀಚೆಗೆ ನಿರಂತರವಾಗಿ ನಡೆಯುತ್ತಲೇ ಇರುವ ಯಂತ್ರೋಪಕರಣಗಳ ಆವಿಷ್ಕಾರಗಳು ಬಂಡವಳಿಗರು ಮತ್ತು ಶ್ರಮಿಕರ ನಡುವಿನ ಶ್ರಮಸಂಬಂಧಗಳನ್ನು, ಉತ್ಪಾದನಾ ವಿಧಾನಗಳನ್ನು, ಬಂಡವಾಳಶಾಹಿಯ ಸ್ವರೂಪವನ್ನು ಮಾರ್ಪಡಿಸುತ್ತಲೇ ಬಂದಿವೆ. ಇಪ್ಪತ್ತನೇ ಶತಮಾನದ ಆದಿಯಲ್ಲಿ ಬೆರಳೆಣಿಕೆಯ ದೇಶಗಳಲ್ಲಿ ಅಸ್ತಿತ್ವಕ್ಕೆ ಬಂದ ಸಮಾಜವಾದೀ ಶ್ರಮಸಂಬಂಧಗಳು ಮತ್ತು ಉತ್ಪಾದನಾ ಸಂಬಂಧಗಳ ಪ್ರಭಾವದ ಹೊರತಾಗಿಯೂ ಜಾಗತಿಕ ಬಂಡವಾಳವು ಜನಸಾಮಾನ್ಯರ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಂಡೇ ಬಂದಿದೆ. ಬಿಕ್ಕಟ್ಟಿನ ಮೇಲೆ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ ತಂತ್ರಜ್ಞಾನವನ್ನು ತನ್ನ ಕೈಲಿರಿಸಿಕೊಂಡೇ ಕಂಪ್ಯೂಟರ್ ಮತ್ತು ಡಿಜಿಟಲ್ ಯಂತ್ರೋಪಕರಣಗಳ ಹಣಕಾಸು ಬಂಡವಾಳ-ಕಾರ್ಪೊರೇಟ್ ಬಂಡವಾಳದ ಸ್ವರೂಪವನ್ನು ಪಡೆಯುವ ಹೊತ್ತಿಗೆ ‘‘ಇಡೀ ಸಮಾಜವೇ ಒಂದು ಕಾರ್ಖಾನೆ, ಎಲ್ಲ ಬಳಕೆದಾರರೂ ಕಾರ್ಮಿಕರು’’ ಎನ್ನಬಹುದಾದ ಹಂತವನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ವರ್ಗಬೇಧಗಳನ್ನೂ ಮೀರಿ ಎಲ್ಲರನ್ನೂ ಆವರಿಸಿರುವ ಜಾಲತಾಣಗಳು ಅವನ್ನು ಬಳಸುವ ನೆಟ್ಟಿಗರ ನೋಡುವಿಕೆಯನ್ನು ದುಡಿಮೆಯನ್ನಾಗಿಸಿದೆ. ಅವರನ್ನು ಬಳಕೆದಾರ-ಉತ್ಪಾದಕ ಎಂಬ ಸಂಕೀರ್ಣ ದುಡಿಮೆಗಾರರನ್ನಾಗಿ ಮಾಡಿದೆ. (ಕನ್ಸ್ಯೂಮರ್ ಮತ್ತು ಪ್ರೊಡ್ಯೂಸರ್ ಪದಗಳ ಹೈಬ್ರಿಡ್ ಆಗಿ, ಪ್ರೊಸ್ಯೂಮರ್ ಎಂಬ ಪದ ಈಗಾಗಲೇ ಬಳಕೆಯಲ್ಲಿದೆ). ಅತ್ಯಂತ ಸಂಕೀರ್ಣವಾದ ಇಂದಿನ ಬಂಡವಾಳಶಾಹಿಯು ನಡೆಸುತ್ತಿರುವ ಶೋಷಣೆಯ ಈ ಪ್ರಕ್ರಿಯೆಯನ್ನು, ಹಿಂದಿನ ದಿನಗಳ ಶ್ರಮಿಕರು ಕಾರ್ಖಾನೆ-ಉದ್ಯಮಗಳಲ್ಲಿ ತುತ್ತಾಗುವ ಶೋಷಣೆಯೊಂದಿಗೆ ಹೋಲಿಸುವಾಗ ಸಾಕಷ್ಟು ಕ್ಲಿಷ್ಟ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ವೀಕ್ಷಿಸುವುದೇ ಹೇಗೆ ಬಿಟ್ಟಿ ದುಡಿಮೆಯಾಗುತ್ತದೆ ಎನ್ನುವುದು ಮಾರ್ಕ್ಸ್ ಹೇಳುವ ಶೋಷಣೆಯ ಯಾವ ಗಂಧವೂ ಇಲ್ಲದವರಿಗಂತೂ ಅರ್ಥವಾಗುವುದು ಕಷ್ಟ.

 ಈಗ ಎಲ್ಲರ ಮನೆಗಳಲ್ಲೂ ಇರುವ ಟಿವಿ ವಾಹಿನಿಗಳು ವೀಕ್ಷಿಸುವವರನ್ನೇ ಹೊಸಬಗೆಯ ಕಾರ್ಮಿಕರನ್ನಾಗಿ ಮಾಡುತ್ತಿವೆ. ಅವರು ಟಿವಿ ಕಾರ್ಯಕ್ರಮಗಳನ್ನು ನೋಡುವುದೇ ಒಂದು ಕಾಯಕವಾಗುತ್ತದೆ. ಹೆಚ್ಚು ಜನರು ನೋಡಿದಷ್ಟೂ ಆ ವಾಹಿನಿಯ ಟಿಆರ್‌ಪಿ ಹೆಚ್ಚುತ್ತದೆ. ಟಿಆರ್‌ಪಿ ಹೆಚ್ಚಿದಷ್ಟೂ ಜಾಹೀರಾತುಗಳ ಸಂಖ್ಯೆ ಹೆಚ್ಚುತ್ತದೆ. ಅದರಿಂದ ವಾಹಿನಿಯ ಗಳಿಕೆ ಹೆಚ್ಚುತ್ತದೆ. ಇದು ಒಮ್ಮುಖದ ‘ಕಾರ್ಮಿಕತೆ’. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ವೀಕ್ಷಣೆಯು ಕಾಯಕವೂ ಹೌದು, ಮಿಗುತಾಯ ಮೌಲ್ಯವನ್ನು ಸೃಷ್ಟಿಸುವ ದುಡಿಮೆಯೂ ಹೌದು. ಒಟ್ಟಿನಲ್ಲಿ ಈ ಡಿಜಿಟಲ್ ಯುಗದ ಬಂಡವಾಳಿಗರ ಪಾಲಿಗೆ ಬಳಕೆದಾರನ ಬಳಕೆಯೇ ಹೇಗೆ ಬಿಟ್ಟಿ ದುಡಿಮೆಯಾಗಿ ಶೋಷಣೆಯಾಗಬಲ್ಲದು ಎಂಬುದನ್ನು ಒಂದು ಸಾಮಾನ್ಯ ಉದಾಹರಣೆಯನ್ನು ಕೊಡಬಹುದು. ಮಾರುವುದಕ್ಕಾಗಿಯೇ ಸಾಕುವ ಕುರಿ, ಕೋಳಿ, ಮೇಕೆಗಳು ಮತ್ತು ಹಾಲಿನ ವ್ಯಾಪಾರಕ್ಕಾಗಿಯೇ ‘ಸಾಕುವ’ ಹಸು-ಎಮ್ಮೆಗಳೊಂದಿಗೆ ಹೋಲಿಸಿದರೆ ಡಿಜಿಟಲ್ ಯುಗದ ಬಂಡವಾಳಶಾಹಿ ಸಂಸ್ಥೆಗಳು ನೆಟ್ಟಿಗರನ್ನು ಏತಕ್ಕಾಗಿ ಸಾಕುತ್ತಿವೆ ಎಂಬುದು ಅರ್ಥವಾಗಬಹುದು. ಈ ಪ್ರಾಣಿಗಳ ಬಗ್ಗೆ ಸಾಕುವವರು ತೋರಿಸುವ ಕಾಳಜಿ, ಕೊಡುವ ಮೇವು, ಹಿಂಡಿ ನೀರು, ಔಷಧೋಪಚಾರಗಳೆಲ್ಲಾ ಅವು ಹೆಚ್ಚು ಕೊಬ್ಬಿ, ಹೆಚ್ಚು ಹಾಲುಕೊಟ್ಟು ಹೆಚ್ಚು ಲಾಭ ಬರಲಿ ಎಂಬುದೇ ಆಗಿದೆ. ಹೀಗಾಗಿ ಈ ಪ್ರಾಣಿಗಳ ಕೆಲಸವೇ ತಿನ್ನುವುದು. ಅವುಗಳ ಸ್ವಂತ ಅಸ್ತಿತ್ವಕ್ಕೆ ಯಾವ ಬೆಲೆಯೂ ಇಲ್ಲ. ಅವು ಆ ಕ್ರಿಯೆಯಿಂದ ಉತ್ಪತ್ತಿಮಾಡುವುದೆಲ್ಲ ಮಾರಬಹುದಾದ ಸರಕನ್ನು. ಅದಲ್ಲದೆ, ಸಾಕುವವರಿಗೆ ಮತ್ತಷ್ಟು ಹಣ ತಂದುಕೊಡಬಲ್ಲ ಹಿಕ್ಕೆ, ತುಪ್ಪಟ, ಸೆಗಣಿ, ಗಂಜಲಗಳನ್ನು ಬದುಕಿರುವ ತನಕವೂ, ಚಕ್ಕಳ-ಮೊಳೆಗಳನ್ನು ಸತ್ತಮೇಲೂ ಬಿಟ್ಟುಹೋಗುತ್ತವೆ. ತಿನ್ನುವಾಗ ಅವು ‘ಮೇವನ್ನು ಆನಂದಿಸುತ್ತವೆ’ ಎಂಬುದು ಅವಕ್ಕೆ ಮಾಡುವ ಎಲ್ಲ ಆರೈಕೆಯು ಅವಕ್ಕಾಗಿ ಅಲ್ಲ, ಸಾಕುವವರ ಲಾಭಕ್ಕಾಗಿ ಎಂಬ ಸತ್ಯವನ್ನು ತಿರಸ್ಕರಿಸುವುದಿಲ್ಲ. ಸಣ್ಣಪುಟ್ಟ ಆದಾಯದವರೂ ಸೇರಿದಂತೆ, ಬಹುತೇಕ ನೆಟ್ಟಿಗರು ಜಾಲತಾಣಗಳಿಂದ ಪಡೆಯುವ ಸಂತೋಷ, ಸಂತೃಪ್ತಿಗಳು ಬಂಡವಾಳಶಾಹಿ ದೈತ್ಯ ಸಂಸ್ಥೆಗಳ ಲಾಭಕೋರತನವನ್ನು, ‘ಬಿಟ್ಟಿ ದುಡಿಮೆಯ’ ಮೂಲಕ ನೆಟ್ಟಿಗರ ಸಾಮಾಜಿಕ ಶ್ರಮವನ್ನು ಖಾಸಗಿ ಸಂಪತ್ತನ್ನಾಗಿ ಶೇಖರಿಸುವ ಬಂಡವಳಿಗರ ಅಮಾನುಷತೆ, ಅಮಾನವೀಯತೆಯನ್ನು ಇಲ್ಲವೆನಿಸುವುದಿಲ್ಲ. ಬಂಡವಾಳದ ಏಕೈಕ ಗುರಿ ಲಾಭ, ಹೆಚ್ಚು ಲಾಭ! ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳು ಜನಸಾಮಾನ್ಯರಲ್ಲಿ ಕಡಿಮೆ ಶ್ರಮ, ಹೆಚ್ಚಿನ ಸುಖ-ನೆಮ್ಮದಿಗಳ ಆಸೆ ಹುಟ್ಟಿಸಿದರೆ, ಬಂಡವಳಿಗರಿಗೆ ಅವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಶ್ರಮಿಕರ ಬಿಟ್ಟಿ ದುಡಿಮೆಯನ್ನು ಸಂಪತ್ತನ್ನಾಗಿಸುವುದು ಹೇಗೆ ಎಂಬ ಹಂಚಿಕೆಯಾಗಿರುತ್ತದೆ.

ಜನರು, ಶೋಷಣೆಯ ಬಗ್ಗೆ ಹೆಚ್ಚು ಹೆಚ್ಚು ಅರಿವು, ತಿಳುವಳಿಕೆಗಳನ್ನು ಪಡೆದು ಬಂಡವಾಳವಾದವನ್ನು ತಿರಸ್ಕರಿಸಿ ಸಮ ಸಮಾಜವನ್ನು ಕಟ್ಟುವವರೆಗೂ ಬಂಡವಾಳಿಗರು ಮೇಲುಗೈ ಪಡೆದು ಜನಸಮುದಾಯವನ್ನು ವಂಚಿಸುತ್ತಲೇ ಇರುತ್ತಾರೆ. ಇದಕ್ಕಾಗಿ ಬೇಕಾದ ಸಮಗ್ರ ರಾಜಕೀಯ ದೃಷ್ಟಿ ಮಾರ್ಕ್ಸ್‌ವಾದದಿಂದ ಮಾತ್ರ ದೊರೆಯುವಂಥದು. ಈ ಮಾಹಿತಿ ಪ್ರಧಾನ ಡಿಜಿಟಲ್ ಯುಗದ ಬಂಡವಾಳದಲ್ಲಿ ಸಾಮಾಜಿಕ ಜಾಲತಾಣಗಳ ಹಿಂದಿರುವ ರಾಜಕೀಯವನ್ನು ಅವುಗಳು ಮುಂದೆ ಮಾಡುವ ತಾತ್ಕಾಲಿಕ ಸಂತೋಷವು ಮರೆಸದಂತೆ ನೋಡಿಕೊಳ್ಳುವ ಎಚ್ಚರ ಅತ್ಯಂತ ಮುಖ್ಯವಾದದ್ದು. ‘‘ಜಾಗ್ರತನಾಗು ಬಳಕೆದಾರ ಜಾಗ್ರತನಾಗು’’ ಎನ್ನುವ ಸಂದೇಶ ಬಳಕೆದಾರರಾದ ನೆಟ್ಟಿಗರಿಗೆ ತೀರಾ ಅವಶ್ಯಕ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)