varthabharthi


ವಿಶೇಷ-ವರದಿಗಳು

ಕರ್ನಾಟಕದಲ್ಲಿ ಕನ್ನಡ ಕಡೆಗಣಿಸಲ್ಪಡಲು ಕನ್ನಡಿಗರ ಕೀಳರಿಮೆಯೇ ಕಾರಣ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ವಾರ್ತಾ ಭಾರತಿ : 30 Oct, 2019
ಸಂದರ್ಶನ: ಬಸವರಾಜು ಮೇಗಲಕೇರಿ

ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ, ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆಯಾದ ಕನ್ನಡಕ್ಕೆ, ತನ್ನದೇ ಆದ ಪ್ರಾಮುಖ್ಯತೆ ಇದೆ, ಐತಿಹಾಸಿಕ ಹಿನ್ನೆಲೆ ಇದೆ. ಕನ್ನಡದ ಲಿಪಿಗೆ ವಿಶ್ವದ ಲಿಪಿಗಳ ರಾಣಿ ಎಂಬ ಹೆಗ್ಗಳಿಕೆ ಇದೆ. ಅಮೋಘ ವರ್ಷ ‘ಕವಿರಾಜಮಾರ್ಗ’ ರಚಿಸುವಾಗ ಇಂಗ್ಲಿಷ್ ಭಾಷೆ ಆಗಿನ್ನೂ ಅಂಬೆಗಾಲಿಡುತ್ತಿತ್ತು. ಹಿಂದಿ ಭಾಷೆ ಹುಟ್ಟಿರಲೇ ಇಲ್ಲ ಎನ್ನುವ ಮಾಹಿತಿ ಇದೆ. ಇದೆಲ್ಲವನ್ನು ಬಲ್ಲ ರಾಷ್ಟ್ರಕವಿ ಕುವೆಂಪು, ಕನ್ನಡ ಭಾಷೆಯ ಸರಳ ಸಹಜ ಶುದ್ಧತೆಗೆ ಮಾರುಹೋಗಿ, ‘ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು’ ಎಂದದ್ದು ಕನ್ನಡಿಗರ ಹೃದಯದಲ್ಲಿ ನೆಲೆಯಾಗಿದೆ.

ಇಂತಹ ಕನ್ನಡ ಭಾಷೆ ಇವತ್ತು ಜಾಗತೀಕರಣದ ಪ್ರಭಾವದಿಂದ, ಇಂಗ್ಲಿಷ್ ಅವಲಂಬನೆಯಿಂದ, ಕೇಂದ್ರ ಸರಕಾರದ ಹಿಂದಿ ಹೇರಿಕೆಯಿಂದ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಹಿನ್ನಡೆ ಅನುಭವಿಸುವಂತಾಗಿದೆ. ಜೊತೆಗೆ ಕನ್ನಡಿಗರೇ ಕನ್ನಡವನ್ನು ಕೀಳರಿಮೆ ಮಟ್ಟಕ್ಕೆ ಇಳಿಸಿರುವುದರಿಂದ, ಕನ್ನಡಕ್ಕೆ ಕಂಟಕ ಎದುರಾಗಿದೆ. ಇಂತಹ ಹೊತ್ತಲ್ಲಿ ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಕನ್ನಡದ ಮೆರವಣಿಗೆ, ಜಾತ್ರೆ, ಹಬ್ಬಕ್ಕೆ ಕನ್ನಡಿಗರು ಸಿದ್ಧರಾಗುತ್ತಿದ್ದಾರೆ. ಕನ್ನಡದ ಅಸ್ಮಿತೆ ಮತ್ತು ಕನ್ನಡದ ಕಡೆಗಣನೆ- ಈ ವೈರುದ್ಧ್ಯಗಳ ಕುರಿತು ವಾರ್ತಾಭಾರತಿಯೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಕವಿ, ಚಿಂತಕರೂ ಆದ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರು ಮಾತನಾಡಿದ್ದಾರೆ.

ವಾರ್ತಾಭಾರತಿ: ಜಾಗತೀಕರಣದ ಪ್ರಭಾವ, ಇಂಗ್ಲಿಷ್ ವ್ಯಾಮೋಹ ಮತ್ತು ಬಲವಂತದ ಹಿಂದಿ ಹೇರಿಕೆಯ ಈ ಹೊತ್ತಲ್ಲಿ ಕನ್ನಡ ಕಳೆಗುಂದುತ್ತಿದೆ. ನೀವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು, ಕನ್ನಡ ಕಟ್ಟುವ ನಿಟ್ಟಿನಲ್ಲಿ ಪ್ರಾಧಿಕಾರದ ಪಾತ್ರವಿದೆಯೇ, ಅಗತ್ಯವಿದೆಯೇ?

ಎಸ್‍ಜಿಎಸ್: ಖಂಡಿತ ಇದೆ, ಕನ್ನಡದ ಸಂದರ್ಭದಲ್ಲಿ, ಕನ್ನಡ ಜನತೆಯ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಗತ್ಯವಿದೆ. ಔಚಿತ್ಯಪೂರ್ಣವಾಗಿದೆ. 1983ರ ಕನ್ನಡ ಕಾವಲು ಸಮಿತಿಯಿಂದ ಹಿಡಿದು ಇವತ್ತಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರೆಗೆ, ಹಂತ ಹಂತವಾಗಿ ಬದಲಾವಣೆ ಕಂಡಿದ್ದರೂ, ಕನ್ನಡದ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ, ಕಾರ್ಯಯೋಜನೆಗಳನ್ನು ರೂಪಿಸುವ ಮಾರ್ಗದಲ್ಲಿ ಪ್ರಾಧಿಕಾರದ ಅಗತ್ಯವಿದೆ. ಪ್ರಾಧಿಕಾರದ ಈ ಕೆಲಸ ಕಾರ್ಯಗಳಿಂದಾಗಿಯೇ ಕನ್ನಡದ ಮಟ್ಟಿಗೆ ಸಾಕಷ್ಟು ಬದಲಾವಣೆಗಳಾಗಿವೆ, ಬೆಳವಣಿಗೆಯೂ ಆಗಿದೆ. ಕನ್ನಡ ರಾಜ್ಯ ಭಾಷೆ ಆಗಿದ್ದರೂ, ಆಡಳಿತದಲ್ಲಿ, ಶಿಕ್ಷಣದಲ್ಲಿ ಕನ್ನಡದ ಅನುಷ್ಠಾನ ಆಗುವ ನಿಟ್ಟಿನಲ್ಲಿ ಅಧಿಕಾರಿಗಳ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಇದೆ. ಅಂತಹ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಒತ್ತಡ ಹೇರಬೇಕಾದ ಅಗತ್ಯವಿದೆ. ಕಾಲಕಾಲಕ್ಕೆ ಹೀಗೆ ಒತ್ತಡ ಹೇರಿ ಕೆಲಸ ಮಾಡಿಸಿದ್ದರಿಂದಲೇ ಕರ್ನಾಟಕದಲ್ಲಿ ಕನ್ನಡದ ಕೆಲಸಗಳಾಗಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಲ್ಲದಿದ್ದರೆ ಕನ್ನಡದ ಅನುಷ್ಠಾನ ಇಷ್ಟರಮಟ್ಟಿಗೆ ಆಗ್ತಿರಲಿಲ್ಲ. ಹೊರಗಿನಿಂದ ನಿಂತು ನೋಡಿದಾಗ ನನಗೂ ಇದು ನಾಮಕಾವಾಸ್ತೆ ಪ್ರಾಧಿಕಾರ ಅನ್ನಿಸಿತ್ತು. ಆದರೆ ಅದರ ಒಳಹೊಕ್ಕಾಗ ಅದರ ಅಗತ್ಯದ ಅರಿವಾಯಿತು.

ವಾರ್ತಾಭಾರತಿ: ನಿಮ್ಮ ಅಧಿಕಾರಾವಧಿಯಲ್ಲಿ ಆದ ಕನ್ನಡದ ಕೆಲಸಗಳೇನು, ಅವು ನಿಮಗೆ ತೃಪ್ತಿ ತಂದಿವೆಯೇ?

ಎಸ್‍ಜಿಎಸ್: ಅಧ್ಯಕ್ಷನಾಗಿ ಎರಡೂವರೆ ವರ್ಷಗಳ ಅವಧಿಯ ಕೆಲಸದಲ್ಲಿ, ಖಂಡಿತ ನನಗೆ ತೃಪ್ತಿ ಇದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರುವ ಮುಂಚೆ, ವಾರ್ಷಿಕ 13 ಕೋಟಿ ಅನುದಾನವಿತ್ತು. ಮೊದಲಿಗೆ 6.5 ಕೋಟಿಗೆ, ನಂತರ 4.5 ಕೋಟಿಗೆ ಉದ್ದೇಶಪೂರ್ವಕವಾಗಿಯೇ ಇಳಿಸಿದೆ. ಕನ್ನಡದ ಕೆಲಸಕ್ಕೆ ಇಷ್ಟು ಹಣದ ಅಗತ್ಯವಿಲ್ಲ ಅನ್ನಿಸಿತು, ಇಳಿಸಿದೆ. ನುಡಿಜಾತ್ರೆ ಮಾಡುವ ಅಗತ್ಯವಿಲ್ಲ ಅನ್ನಿಸಿತು, ಕೈಬಿಟ್ಟೆ. ನನ್ನ ಮತ್ತು ಪ್ರಾಧಿಕಾರದ ಮೊದಲ ಆದ್ಯತೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಕನ್ನಡ ಅನುಷ್ಠಾನ ಹಾಗೂ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಡುವುದು. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳಾಗಿವೆ. ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಓದಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಬಹುಮಾನ ನೀಡಿ ಗೌರವಿಸುವ ಕೆಲಸವನ್ನು ಹಿಂದಿನ ಅಧ್ಯಕ್ಷರುಗಳು ಮಾಡಿದ್ದನ್ನು ಮುಂದುವರೆಸಲಾಗಿದೆ. 

ನನ್ನ ಅವಧಿಯಲ್ಲಿ, 26 ಜಿಲ್ಲೆಗಳಿಗೆ ಭೇಟಿ ಮಾಡಿ, ಜಿಲ್ಲಾಡಳಿತವನ್ನು ಪರಿಶೀಲನೆಗೊಳಪಡಿಸಿದೆ. ಅದರಲ್ಲೂ ಕನ್ನಡ ತಂತ್ರಾಂಶ ಬಂದ ನಂತರವೂ, ಇಲಾಖೆಗಳ ವೆಬ್ ಸೈಟ್ ನಿಂದ ಹಿಡಿದು ಎಲ್ಲದರಲ್ಲಿಯೂ ಕನ್ನಡವನ್ನು ಕಡೆಗಣಿಸಲಾಗಿತ್ತು. ಈಗ ಪ್ರತಿ ಇಲಾಖೆಯ ವೆಬ್ ಸೈಟ್ನಲ್ಲಿ ಹಾಗೂ ನಾಮಫಲಕದಲ್ಲಿ ಕನ್ನಡ ಕಾಣುವಂತಾಗಿದೆ. ವೈದ್ಯಕೀಯ, ಇಂಜಿನಿಯರಿಂಗ್, ಕೃಷಿಯಂತಹ ಉನ್ನತ ಶಿಕ್ಷಣದಲ್ಲಿ ಕನ್ನಡದ ವಿಭಾಗವೇ ಕಳೆದುಹೋಗಿತ್ತು. ನಿರ್ಲಕ್ಷಕ್ಕೊಳಗಾಗಿತ್ತು. ಈಗ ಅಲ್ಲೆಲ್ಲ ಕನ್ನಡ ಚಾಲ್ತಿಗೆ ಬಂದಿದೆ. ಹಾಗೆಯೇ ಪಿ.ಎಚ್.ಡಿಗಳನ್ನೂ ಕನ್ನಡದಲ್ಲಿಯೇ ಮಾಡುವಂತೆ ನೋಡಿಕೊಳ್ಳಲಾಗಿದೆ. ಇನ್ನು ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ, ಪ್ರಾಧಿಕಾರದ ವತಿಯಿಂದ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಒಂದು ಸಮಿತಿ ರಚಿಸಿ, ಕ್ಷೇತ್ರ ಅಧ್ಯಯನ ನಡೆಸಿ, 21 ಶಿಫಾರಸುಗಳನ್ನೊಳಗೊಂಡ ವರದಿಯೊಂದನ್ನು ಸರಕಾರಕ್ಕೆ ನೀಡಲಾಯಿತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸರಕಾರ ಆಸಕ್ತಿ ತೋರಲಿಲ್ಲ. ಇನ್ನು ಖಾಸಗಿ ಶಾಲೆಗಳಲ್ಲಿ, ಕನ್ನಡವನ್ನು ಪ್ರಥಮ ಭಾಷೆಯಾಗಿ, ದ್ವಿತೀಯ ಭಾಷೆಯಾಗಿ ಮಕ್ಕಳಿಗೆ ಬೋಧಿಸುವ, ಸರಕಾರ ರೂಪಿಸಿದ ಪಠ್ಯಗಳನ್ನೇ ಬೋಧಿಸುವ ಸರಕಾರಿ ಆದೇಶವನ್ನೇ ಅಧಿಕಾರಿಗಳು ಕಡೆಗಣಿಸಿದ್ದರು. ಅದನ್ನು ಪ್ರಶ್ನಿಸಿದೆ, ಆನಂತರ ಅದು ಸರಕಾರಿ ಆದೇಶವಾಗಿ ಬಂತು. ಆದರೂ, ಈಗಲೂ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ತೃತೀಯ ಭಾಷೆಯಾಗಿಯೇ ಕಡೆಗಣಿಸಲಾಗುತ್ತಿದೆ. 13 ವರ್ಷಗಳ ಹಿಂದೆಯೇ ತಮಿಳುನಾಡು ಸರಕಾರ ಇದನ್ನು ಮಾಡಿದೆ, ತಮಿಳು ಭಾಷೆ ಉಳಿದಿದೆ. ಈ ಪದ್ಧತಿಯನ್ನೇ ಕೇರಳವೂ ಅಳವಡಿಸಿಕೊಂಡಿದೆ. ಕರ್ನಾಟಕದಲ್ಲಿ ಮಾತ್ರ ಖಾಸಗಿಯವರದೇ ಆಟ.

ನಮ್ಮ ಮೆಟ್ರೋದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡುವಂತೆ ಒತ್ತಾಯಿಸಿ, ಎಲ್ಲೆಡೆ ಕನ್ನಡ ಫಲಕಗಳಿರುವಂತೆ ಮಾಡಿದ್ದೇವೆ. ವಿಧಾನಸೌಧ, ವಿಕಾಸಸೌಧದಲ್ಲಿ ಮಂತ್ರಿಗಳ, ಅಧಿಕಾರಿಗಳ ನಾಮಫಲಕವನ್ನು ಕನ್ನಡದಲ್ಲಿರುವಂತೆ ನೋಡಿಕೊಂಡಿದ್ದೇವೆ. ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್‍ನ ಲಿಫ್ಟ್‍ನಲ್ಲಿ ಈಗ ನೀವು ಕನ್ನಡದ ಹಾಡು, ಕನ್ನಡದ ಸ್ವಾಗತ ಕೇಳಬಹುದು. ದೆಹಲಿ ಕನ್ನಡ ಭವನದಲ್ಲಿ ಕನ್ನಡದ ನಾಮಫಲಕ ಅಳವಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಬಳಕೆ ಇದೆ, ಕನ್ನಡದಲ್ಲಿ ಪ್ರಕಟನೆ ಹೊರಬೀಳುತ್ತಿದೆ. ಕೇಂದ್ರ ಸರಕಾರದ ಸ್ವಾಮ್ಯದ ರೈಲ್ವೆ, ಬ್ಯಾಂಕ್‍ಗಳಲ್ಲಿ ಕನ್ನಡ ಬಳಸುವಂತೆ ನೋಟಿಸ್ ನೀಡಿದ್ದೇವೆ.

ವಾರ್ತಾಭಾರತಿ: ಇಷ್ಟಾದರೂ, ಕನ್ನಡ ಅನ್ನದ ಭಾಷೆಯಾಗಿ ಉಳಿದಿಲ್ಲ ಎಂಬ ಅಭಿಪ್ರಾಯವಿದೆಯಲ್ಲ?
ಎಸ್‍ಜಿಎಸ್: ಇದು ಭ್ರಮೆ. ಇವತ್ತಿಗೂ ಕೂಡ ಜಗದ್ವಿಖ್ಯಾತರೆಲ್ಲ ಮಾತೃಭಾಷೆಯಲ್ಲಿಯೇ ಸಾಧನೆ ಮಾಡಿದವರು. ಕನ್ನಡದ ಎಂಟು ಜ್ಞಾನಪೀಠಗಳ ಮಾತೃಭಾಷೆಯೂ ಕನ್ನಡವೇ. ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ, ಸಮೃದ್ಧತೆ ಅಂತೇನಾದರೂ ಬಂದಿದ್ದರೆ, ಅದು ಕೂಡ ಕನ್ನಡ ಮಾತನಾಡುವ ಜನರಿಂದಲೇ. ಅವರ ಆಲೋಚನೆ, ಕಲ್ಪನೆ, ಚಿಂತನೆ, ಭಾವಶ್ರೀಮಂತಿಕೆಗಳೆಲ್ಲ ಬಂದದ್ದು ಮಾತೃಭಾಷೆಯಿಂದಲೇ. ಇದಕ್ಕೊಂದು ಉದಾಹರಣೆ ಹೇಳ್ತೀನಿ, ಅದನ್ನು ಕೆಲವರು ಕ್ಲೀಷೆ ಎನ್ನಬಹುದು, ಇರಲಿ. ಅರವಿಂದರು ಜನಿಸಿದ್ದು ಕೊಲ್ಕತ್ತಾದಲ್ಲಾದರೂ, ಅವರ ಮನೆಭಾಷೆ ಇಂಗ್ಲಿಷ್, ಅವರು ಬೆಳೆದದ್ದು ಇಂಗ್ಲೆಂಡಿನಲ್ಲಿ, ಹಾಗಾಗಿ ಅವರ ಪರಿಸರದ ಭಾಷೆ- ಮಾತೃಭಾಷೆ ಇಂಗ್ಲಿಷ್ ಆಯಿತು. 21 ವರ್ಷಗಳ ನಂತರ ಭಾರತಕ್ಕೆ ಬಂದರು. ಸಂಸ್ಕೃತ ಕಲಿತರು. ಆದರೂ ಅವರು ಮಹತ್ವದ ಕೃತಿ ‘ಸಾವಿತ್ರಿ’ ರಚಿಸಿದ್ದು ಇಂಗ್ಲಿಷ್ ಭಾಷೆಯಲ್ಲಿಯೇ.

ಇವತ್ತು ಮಕ್ಕಳನ್ನು ಕಾನ್ವೆಂಟ್‍ಗೆ ಕಳಿಸಿ ಇಂಗ್ಲಿಷ್ ಕಲಿಸುತ್ತಿರುವ ಪೋಷಕರ ಭಾಷೆ ಇಂಗ್ಲಿಷ್ ಅಲ್ಲ. ಅವರ ಸಂಖ್ಯೆ ಶೇ. 5ರಷ್ಟೂ ಇಲ್ಲ. ಇಂಗ್ಲಿಷ್ ಕಲಿತ ಮಕ್ಕಳಿಗೂ ಉದ್ಯೋಗ ಸಿಗುತ್ತಿಲ್ಲ. ಇಂಗ್ಲಿಷ್ ಕೂಡ ಅನ್ನದ ಭಾಷೆಯಾಗಿ ಉಳಿದಿಲ್ಲ. ಜರ್ಮನಿ, ಜಪಾನ್ ದೇಶಗಳೆ ಇಂಗ್ಲಿಷ್ ಬಿಟ್ಟಿರುವಾಗ, ನಮಗೇಕೆ ಅದು ಸಾಧ್ಯವಾಗುವುದಿಲ್ಲ. ನಾನು ಇಂಗ್ಲಿಷ್ ವಿರೋಧಿಯಲ್ಲ. ಒಂದು ಭಾಷೆಯಾಗಿ ಕಲಿಸಿ, ಆದರೆ ಮಾಧ್ಯಮವಾಗಲ್ಲ. 

ವಾರ್ತಾಭಾರತಿ: ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸರೋಜಿನಿ ಮಹಿಷಿ ವರದಿ ಏಕೆ ಅನುಷ್ಠಾನವಾಗದೆ ಉಳಿದಿದೆ?
ಎಸ್‍ಜಿಎಸ್:
ಡಾ.ಸರೋಜಿನಿ ಮಹಿಷಿ ವರದಿಯು ಸ್ಥಳೀಯರಿಗೆ ಉದ್ಯೋಗ ಎಂಬುದಕ್ಕೆ ತಾತ್ವಿಕ ನೆಲೆಯನ್ನು ಒದಗಿಸಿತು. ಆದರೆ ಅದು ಇಂದಿಗೂ, 35 ವರ್ಷಗಳ ನಂತರವೂ ಆದರ್ಶವಾಗಿಯೇ ಉಳಿದಿದೆ. ಅದನ್ನು ಕಾನೂನಾತ್ಮಕವಾಗಿ ಅನುಷ್ಠಾನಕ್ಕೆ ತಂದಿದ್ದರೆ, ಅದಕ್ಕೆ ನೆಲೆ-ಬೆಲೆ ಬರುತ್ತಿತ್ತು, ತರಲಿಲ್ಲ. ಜೊತೆಗೆ ಮೂಲ ವರದಿ ರೂಪಿತವಾದ ಸಂದರ್ಭಕ್ಕೂ ಇವತ್ತಿಗೂ ಸಾಕಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಆ ವರದಿಯೂ ಕೆಲವೊಂದು ಅಂಶಗಳನ್ನು ಒಳಗೊಳ್ಳುವುದರಿಂದ ಪರಿಷ್ಕರಣೆಗೊಳಪಡಬೇಕಾಗಿತ್ತು. ಆದ್ದರಿಂದ, 2017ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪುನರ್ ಪರಿಶೀಲನಾ ಸಮಿತಿ ರಚಿಸಿ, ಪರಿಷ್ಕೃತ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಅದರಲ್ಲಿ ಮೂರು ಮುಖ್ಯ ಭಾಗಗಳನ್ನಾಗಿ ಮಾಡಲಾಯಿತು. ರಾಜ್ಯ ಸರಕಾರ ನೇರವಾಗಿ ಅನುಷ್ಠಾನಗೊಳಿಸಬಹುದಾದ ಅಂಶಗಳು; ಕೇಂದ್ರ ಸರಕಾರ ಅನುಷ್ಠಾನಗೊಳಿಸಬೇಕಿರುವ ಅಂಶಗಳು ಮತ್ತು ಈಗಾಗಲೇ ಅನುಷ್ಠಾನವಾಗಿರುವ ಸಲಹೆಗಳನ್ನು ಇಂದಿನ ಕಾಲಮಾನಕ್ಕೆ ಹೊಂದುವಂತೆ ಬದಲಿಸುವ, ಕೈ ಬಿಡುವ ಅಂಶಗಳು. ಇದು ಶಾಸನಸಭೆಯಲ್ಲಿ ಮಂಡನೆಯಾಗಿ, ಚರ್ಚೆಯಾಗಿ ಅನುಷ್ಠಾನಕ್ಕೆ ಬರಬೇಕಾಗಿತ್ತು. ಬಂದರೆ ಕನ್ನಡಿಗರಿಗೆ ಖಂಡಿತ ಅನುಕೂಲವಾಗುತ್ತದೆ. ಆದರೆ ಬರಲಿಲ್ಲವೆನ್ನುವುದು ಬೇಸರದ ಸಂಗತಿ, ಇದು ನಮ್ಮ ಕಾಲದಲ್ಲಿ ಆಯಿತಲ್ಲ ಎಂಬುದು ಸಮಾಧಾನ, ಅಷ್ಟೆ.

ವಾರ್ತಾಭಾರತಿ: ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಅನ್ನುತ್ತಾರೆ, ಆದರೆ ಕನ್ನಡ ತಂತ್ರಾಂಶದ ಅಭಿವೃದ್ಧಿ, ಅಳವಡಿಕೆ ಮತ್ತು ಬಳಕೆ ಏಕೆ ಹಿಂದೆ ಬಿದ್ದಿದೆ?
ಎಸ್‍ಜಿಎಸ್: ಹೌದು, ಇದಕ್ಕೂ ರಾಜಕಾರಣಿಗಳ, ಅಧಿಕಾರಿಗಳ, ಐಟಿ-ಬಿಟಿ ಕ್ಷೇತ್ರಗಳ ದಿಗ್ಗಜರ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ತಂತ್ರಾಂಶಕ್ಕೆ ಸಂಬಂಧಪಟ್ಟಂತೆ ಸುಮ್ಮನೆ ಕೂತಿಲ್ಲ. ಕರ್ನಾಟಕ ಸರಕಾರದ ಜಾಲತಾಣಗಳಲ್ಲಿ ಕನ್ನಡದ ಅನುಷ್ಠಾನ ಆಗಲು; ಕನ್ನಡ ನಾಡಿನಲ್ಲಿ ಕನ್ನಡದ ವಾತಾವರಣ ಮೂಡಿಸಲು ಜಾಲತಾಣಗಳಲ್ಲಿ ಕನ್ನಡದ ಬಳಕೆ ಇಂದಿನ ಅಗತ್ಯ ಎಂಬುದನ್ನು ಮನಗಂಡು ನಾಲ್ಕು ಜನ ತಂತ್ರಜ್ಞರ ಸಮಿತಿಯೊಂದನ್ನು ಪ್ರಾಧಿಕಾರ ರಚಿಸಿತು. ಕನ್ನಡದ ಬಳಕೆಯನ್ನೇ ಕೇಂದ್ರವಾಗಿರಿಸಿ, ಇ-ಆಡಳಿತ ಇಲಾಖೆಯೊಂದಿಗೆ ಚರ್ಚಿಸಿ ತಂತ್ರಜ್ಞರ ಸಮಿತಿ ವರದಿ ತಯಾರಿಸಿತು. ಈ ವರದಿ ಕರ್ನಾಟಕ ಸರಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆಗೆ ಕೆಲವು ಶಿಫಾರಸುಗಳನ್ನು ಮಾಡಿದೆ. ಅಧಿಕಾರಿಗಳ ಮಟ್ಟದಲ್ಲಿ ಇದು ಚಾಲ್ತಿಗೂ ಬಂದಿದೆ. ಅದರಲ್ಲೂ, ಇಂದಿನ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ವಿಜಯಭಾಸ್ಕರ್ ಅವರ ಕನ್ನಡದ ಬಗೆಗಿನ ಒಲವು, ನಿಲುವು ನಮ್ಮ ಉದ್ದೇಶಕ್ಕೆ ಪೂರಕವಾಗಿದ್ದು, ಕನ್ನಡದ ಅನುಷ್ಠಾನದ ಕಾರ್ಯ ಸರಾಗವಾಗಿದೆ. ವಿಜಯಭಾಸ್ಕರ್ ರಂತಹ ಉನ್ನತ ಅಧಿಕಾರಿಗಳು, ಕನ್ನಡವಿಲ್ಲದ ಕಡತಗಳನ್ನು ವಾಪಸ್ ಕಳಿಸುವ ದಿಟ್ಟತನ ತೋರಿದ್ದು, ಸರಕಾರಿ ಕಡತಗಳಲ್ಲಿ ಕನ್ನಡ ಕಡ್ಡಾಯಕ್ಕೆ ಒತ್ತಾಸೆಯಾಗಿ ನಿಂತಿರುವುದು, ನಿಜಕ್ಕೂ ಶ್ಲಾಘನೀಯ.  

ಈ ಹಿಂದೆ, ಆಡಳಿತದಲ್ಲಿ ಕನ್ನಡ ಕಡ್ಡಾಯ ಜಾರಿಯಾದಾಗ, ಕಚೇರಿ ಕೈಪಿಡಿ ರೂಪಿಸುವಾಗ ಕೆಲ ಪಂಡಿತರು ಅನಗತ್ಯವಾಗಿ ಕೆಲವು ಸಂಸ್ಕøತ ಮತ್ತು ಹಿಂದಿ ಪದಗಳನ್ನು ತುರುಕಿದ್ದು, ಕನ್ನಡಕ್ಕೆ ಹಿನ್ನಡೆಯಾಯಿತು. ಉದಾ: ಆರಕ್ಷಕ, ಅಭಿಯಂತರ, ಉಗಿಬಂಡಿ.. ಇವಾವೂ ಜನಬಳಕೆಯ ಭಾಷೆಯಲ್ಲ. ಇದು ಜನರಾಡುವ ಭಾಷೆಗೆ ವಿರುದ್ಧವಾಗಿ, ಹೇರಿಕೆಯಂತೆ ಕಂಡು ಆಡಳಿತದಲ್ಲಿ ಕನ್ನಡ ಬಳಕೆಗೆ ಹಿನ್ನಡೆಯಾಯಿತು. ಆದರೆ ನಾವು, ಈಗ ಪ್ರಾಧಿಕಾರದ ವತಿಯಿಂದ ಕನ್ನಡ ತಂತ್ರಾಂಶ ರೂಪಿಸುವಾಗ ಇದೇ ಸವಾಲು ಎದುರಾಯಿತು, ಇಂತಹ ಕೆಲವು ಅಪದ್ಧಗಳು ನುಸುಳುವುದರ ಬಗ್ಗೆ ಎಚ್ಚರ ವಹಿಸಿದೆವು. ಉದಾ: ಜಂಗಮವಾಣಿ ಬದಲಿಗೆ ಮೊಬೈಲï ಎಂದು ಬಳಸುವಂತೆ, ತಂತ್ರಾಂಶದಲ್ಲೂ ಅದನ್ನೆ ಬಳಕೆ ಮಾಡಲಾಗಿದೆ. ಮೌಸ್ ಎನ್ನುವುದನ್ನು ಇಲಿ ಅನ್ನಲಾಗುವುದಿಲ್ಲ, ವಾಟ್ಸ್‍ಆ್ಯಪ್ ಅಂದರೆ ಇವತ್ತು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂಥದ್ದು, ಇದನ್ನೆಲ್ಲ ಹಾಗೆಯೇ ಬಳಸಿಕೊಳ್ಳಲಾಗಿದೆ. ಕೆಲವು ಪಂಡಿತರು ಮಾಡಿದ ತೊಡಕುಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಧಿಕಾರ ಕಾರ್ಯಾಗಾರಗಳನ್ನು ಆಯೋಜಿಸಿ ಸರಿಪಡಿಸುವ ಕೆಲಸ ಮಾಡಿದೆ.

ವಾರ್ತಾಭಾರತಿ: ಕನ್ನಡ ಕಳೆದುಹೋಗುವ ಸ್ಥಿತಿಗೆ ಯಾರು ಕಾರಣರು?
ಎಸ್‍ಜಿಎಸ್: ಮೊದಲನೆದಾಗಿ ನಾನು ಹೊಣೆಗಾರರನ್ನಾಗಿ ಮಾಡೋದು ಕನ್ನಡಿಗರನ್ನೇ. ಕನ್ನಡ ಭಾಷೆಯ ಬಗೆಗಿರುವ ಕೀಳರಿಮೆ ಇದೆಯಲ್ಲ, ಅದನ್ನು ಕಳೆದುಕೊಳ್ಳದ ಹೊರತು ಕನ್ನಡಕ್ಕೆ ಉದ್ಧಾರವಿಲ್ಲ. 2500 ವರ್ಷಗಳ ಇತಿಹಾಸವಿರುವ ಭಾಷೆ ಕನ್ನಡ. ಜಗತ್ತಿನಲ್ಲಿ ಇವತ್ತು ಮೆರೆಯುತ್ತಿರುವ ಹಲವು ಭಾಷೆಗಳು ಕಣ್ಣು ಬಿಡುವುದಕ್ಕೂ ಮುನ್ನವೇ ಕನ್ನಡ ಭಾಷೆಯಲ್ಲಿ ನಮ್ಮ ಪಂಪ, ರನ್ನ ಬರೆದಿದ್ದರು. ಗಜಶಾಸ್ತ್ರ, ಅಶ್ವಶಾಸ್ತ್ರ, ದರ್ಶನಶಾಸ್ತ್ರ, ತತ್ವಮೀಮಾಂಸೆ, ಕಾವ್ಯ ಮೀಮಾಂಸೆ ಇಂಥ ಜ್ಞಾನಶಾಖೆಗಳು, ದೊಡ್ಡ ದೊಡ್ಡ ಗ್ರಂಥಗಳಿರುವ  ಜೀವಂತ ಭಾಷೆ ಕನ್ನಡ. ಇಷ್ಟೆಲ್ಲ ಕನ್ನಡ ಭಾಷೆಯ ಬಗ್ಗೆ ಹಿರಿಮೆ-ಗರಿಮೆಗಳಿದ್ದರೂ, ಕನ್ನಡದ ನಂತರ ಹುಟ್ಟಿದ ಇಂಗ್ಲಿಷ್ ಹೇಗೆ ವಿಶ್ವವ್ಯಾಪಿ ಭಾಷೆಯಾಯಿತು ಅಂದರೆ, ಅವರಿಗಿರುವ ಭಾಷಾಭಿಮಾನ, ಭಾಷೆಯನ್ನು ಬಳಸುವ-ಬೆಳೆಸುವ ಬಗೆಗಿರುವ ಪ್ರೀತಿ. ಇವತ್ತು ನಿಜವಾಗಿಯೂ ಕನ್ನಡವನ್ನು ಬೆಳೆಸುತ್ತಿರುವವರು ಸಾಮಾನ್ಯರು. ಆದರೆ ವಿದ್ಯಾವಂತರು, ಅಕ್ಷರ ಬಲ್ಲಂತ ಕನ್ನಡಿಗರೆ ಕನ್ನಡ ಭಾಷೆಗೆ ತೊಡಕಾಗಿರುವುದು. ಭಾಷೆಯ ಕೊರತೆಯೋ ಅಥವಾ ಜನತೆಯ ಇಚ್ಛಾಶಕ್ತಿಯ ಕೊರತೆಯೋ- ಗಂಭೀರವಾಗಿ ಯೋಚಿಸಬೇಕಾಗಿದೆ.

ಇತ್ತೀಚಿನ ವರ್ಷಗಳಲ್ಲಿ, 2014ರಿಂದೀಚೆಗೆ ಎಲ್ಲ ದೇಶಭಾಷೆಗಳು ಆತಂಕವನ್ನು ಎದುರಿಸುತ್ತಿವೆ. ಸ್ಥಳೀಯ ಭಾಷೆಗಳಿಗೆ ಆದ್ಯತೆ ಇಲ್ಲವಾಗಿದೆ. ರಾಜ್ಯಭಾಷೆಗಳನ್ನು ಮೂಲೆಗೆ ಸರಿಸಲಾಗಿದೆ. ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆ. ಬ್ಯಾಂಕುಗಳಲ್ಲಿ, ಕೇಂದ್ರಾಡಳಿತ ಕಚೇರಿಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗ ಇಲ್ಲವಾಗಿದೆ. ನಮ್ಮದು ಒಕ್ಕೂಟ ವ್ಯವಸ್ಥೆ, ವಲಸೆಯನ್ನು ಸ್ವಾಗತಿಸೋಣ. ಆದರೆ ಅವೈಜ್ಞಾನಿಕ ವಲಸೆ ಆಗಕೂಡದು. ಸರೋಜಿನಿ ಮಹಿಷಿ ವರದಿ ಪ್ರಕಾರ ಎ ಗ್ರೂಪ್‍ನಲ್ಲಿ ಶೇ.65 ಸ್ಥಳೀಯರಿಗೆ, 35 ಹೊರಗಿನವರಿಗೆ. ಬಿ ಗ್ರೂಪ್‍ನಲ್ಲಿ ಶೇ.80 ಸ್ಥಳೀಯರಿಗೆ, 20 ಹೊರಗಿನವರಿಗೆ; ಸಿ ಆ್ಯಂಡ್ ಡಿ ಗ್ರೂಪ್‍ನಲ್ಲಿ ಆಯಾಯ ರಾಜ್ಯದವರಿಗೇ ಎನ್ನುವ ನಿಯಮವಿತ್ತು. ಆದರೆ ಪಾಲನೆಯಾಗಲಿಲ್ಲ. ಸಿ ಅಂಡ್ ಡಿ ಗ್ರೂಪ್ ಕೆಲಸಗಳೂ ಸ್ಥಳೀಯರಿಗೆ ಸಿಗುತ್ತಿಲ್ಲ. ಇದಕ್ಕೆ ನಾನು ನೇರವಾಗಿ ನಮ್ಮಿಂದ ಚುನಾಯಿತರಾಗಿ ಹೋದ ಸಂಸದರನ್ನು ಹೊಣೆಗಾರರನ್ನಾಗಿ ಮಾಡಲು ಇಚ್ಛಿಸುತ್ತೇನೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸಂಸತ್ತಿನಲ್ಲಿ ಸಮರ್ಥವಾಗಿ ಪ್ರಶ್ನೆ ಮಾಡುವ ಮೂಲಕ, ಕನ್ನಡಕ್ಕೆ ನ್ಯಾಯ ಒದಗಿಸಿಕೊಡುವ ಮೂಲಕ, ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ನಮ್ಮ ಸಂಸದರು ತಮ್ಮ ಜವಾಬ್ದಾರಿಯರಿತು ಕೆಲಸ ಮಾಡಬೇಕು. ಈ ಬಗ್ಗೆ ನಾನು ವೈಯಕ್ತಿಕವಾಗಿ ಸಂಸದರಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ.

ವಾರ್ತಾಭಾರತಿ: ಕನ್ನಡ ಶಾಸ್ತ್ರೀಯ ಸ್ಥಾನಮಾನ ಎಲ್ಲಿಗೆ ಬಂದಿದೆ?
ಎಸ್‍ಜಿಎಸ್: ಇದಕ್ಕೂ ನಾನು ನೇರವಾಗಿ ಹೊಣೆಗಾರರನ್ನಾಗಿ ಮಾಡುವುದು ನಮ್ಮ ಸಂಸದರನ್ನೆ. 2008ರಲ್ಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತ್ತಾದರೂ, ಸಿಕ್ಕಿಬಿಡ್ತು ಅಂತೇಳಿ ಕೈ ತೊಳೆದುಕೊಂಡು ಕೂರುವಂತಿಲ್ಲ. ನಾಮಕಾವಸ್ಥೆಗೆ ಸಿಕ್ಕಿದೆ. ತಮಿಳುನಾಡು ಅದರ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಹಾಕಿಕೊಂಡಿರುವ ಆಸಕ್ತಿ ಮತ್ತು ವಿಸ್ತರಣೆಗಳಿವೆಯಲ್ಲ, ಆ ಬಗ್ಗೆ ನಾವಿನ್ನೂ ಯೋಚಿಸಿಯೇ ಇಲ್ಲ. ಜೊತೆಗೆ ತಾತ್ಕಾಲಿಕವಾಗಿ ನಮ್ಮ ಶಾಸ್ತ್ರೀಯ ವಿಭಾಗ, ಮೈಸೂರಿನ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್‍ನಲ್ಲಿದೆ. ಈಗ ಆ ಸಂಸ್ಥೆಯ ನಿರ್ದೇಶಕ, ಇದನ್ನು ಹೊರಕ್ಕೆ ಹೋಗಲು, ವಿಸ್ತರಿಸಿಕೊಳ್ಳಲು ಬಿಡುತ್ತಿಲ್ಲ. ಮೊದಲು ಕನ್ನಡ ಶಾಸ್ತ್ರೀಯ ವಿಭಾಗ ಸಿಐಐಎಲ್ ನಿಂದ ಹೊರಬರಬೇಕು. ಆಗದಿದ್ದರೆ, ಆ ನಿರ್ದೇಶಕನನ್ನೇ ಹೊರಗಿಡಬೇಕು. ಈ ಕೆಲಸವನ್ನು ಮೈಸೂರಿನ ಸಂಸದರು ಮುಂದೆ ನಿಂತು ಮಾಡಬೇಕು. ಹಾಗೆಯೇ ಕ್ಲರ್ಕ್ ರೀತಿಯ ಪ್ರಾಜೆಕ್ಟ್ ಡೈರೆಕ್ಟರ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಅವರಿಗೆ ಆ ಸ್ಥಾನಮಾನದ ಅರಿವಿಲ್ಲ, ಕನ್ನಡ ಶಾಸ್ತ್ರೀಯ ಸ್ಥಾನಮಾನದ ತಿಳಿವಿಲ್ಲ. ತಮಿಳು ಶಾಸ್ತ್ರೀಯ ಸ್ಥಾನಮಾನಕ್ಕೆ ವರ್ಷಕ್ಕೆ 30 ಕೋಟಿ ಬಿಡುಗಡೆಯಾದ ಅನುದಾನಕ್ಕೆ ಹೋಲಿಸಿಕೊಂಡರೆ, ಕನ್ನಡಕ್ಕೆ ಸಿಕ್ಕಿರುವ 5 ಕೋಟಿ, ಏನೇನೂ ಅಲ್ಲ. ಈ 5 ಕೋಟಿಯನ್ನೂ ಬಳಸಿಕೊಳ್ಳಲಾಗಿಲ್ಲ. ಅಲ್ಲಿರುವವರಿಗೆ ಶಾಸ್ತ್ರೀಯ ಭಾಷೆಯ ಬಗ್ಗೆ ಸಂಪೂರ್ಣ ತಿಳುವಳಿಕೆ ಇರಬೇಕು. ಆಡಳಿತಾತ್ಮಕವಾಗಿಯೂ ಒಂದು ವಿಷನ್ ಇಟ್ಟುಕೊಂಡಿರಬೇಕು. ಈ ನಿಟ್ಟಿನಲ್ಲಿ ಅರ್ಥಪೂರ್ಣ ಅನುಷ್ಠಾನ ಆಗಿಲ್ಲ. ಈಗ ಮೈಸೂರಿನಲ್ಲಿಯೇ, ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿಯೇ, ವಯಸ್ಕರ ಶಿಕ್ಷಣಕ್ಕೆ ಸೇರಿದ ದೊಡ್ಡ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಅಣಿಯಾಗುತ್ತಿದೆ. ಇನ್ನುಮುಂದಾದರೂ ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಕೇಂದ್ರ-ರಾಜ್ಯ ಸರಕಾರ ಮುಕ್ತ ಸಹಕಾರ ನೀಡಿ, ಅನುದಾನ ಕೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ವಿಜೃಂಭಿಸುವಂತಾಗಲಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)