varthabharthi


ನಿಮ್ಮ ಅಂಕಣ

ದುಡಿಯುವ ಕೈಗಳಿಗೆ ಕೆಲಸ ಸಿಗಲಿ

ವಾರ್ತಾ ಭಾರತಿ : 30 Oct, 2019
ಗೌತಮಿ ಎಂ., ಕೋಟಿಗಾನಹಳ್ಳಿ,

ಮಾನ್ಯರೇ,

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಶಿಕ್ಷಣವಂತರಾಗುವುದು ಸಂತಸದ ವಿಚಾರವೇ ಆದರೂ ವಿದ್ಯಾಭ್ಯಾಸಕ್ಕೆ ತಕ್ಕದಾದ ವೃತ್ತಿಗಳು ಸಿಗದಿರುವುದು ನೋವಿನ ಸಂಗತಿ.
ಯುವ ಜನತೆ ಒಂದು ರಾಷ್ಟ್ರದ ಪ್ರಬಲ ಶಕ್ತಿ. ಯುವಕರಿಗೆ ಸರಿಯಾದ ನೌಕರಿಗಳು ಸಿಗದಿದ್ದರಿಂದಾಗಿ ಬೇಸತ್ತು ಅಡ್ಡದಾರಿ ಹಿಡಿಯುತ್ತಿದ್ದಾರೆ. ಇನ್ನೂ ಕೆಲವರು ವಿಧಿ ಇಲ್ಲದೆ ಮನಸ್ಸಿಲ್ಲದ ಮನಸ್ಸಲ್ಲಿ ಯಾವುದೋ ಸಣ್ಣಪುಟ್ಟ ನೌಕರಿ ಮಾಡುತ್ತಿದ್ದಾರೆ.
ಕೆಲವು ಸ್ನಾತಕೋತ್ತರ ಪದವೀಧರರು, ರ್ಯಾಂಕ್ ಪಡೆದವರು ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕ ಕೆಲಸ ಸಿಗದೆ, ಕೆರೆಯ ಹೂಳೆತ್ತುವ ಕೂಲಿ ಕೆಲಸ, ಮತ್ತಿತರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಒಂದಿಷ್ಟು ಮಂದಿಗೆ ಅತಿಥಿ ಉಪನ್ಯಾಸಕರ ಹುದ್ದೆ ಸಿಕ್ಕಿದ್ದರೂ ಅದರಲ್ಲಿ ದೊರೆತ ವರಮಾನ ಅಷ್ಟಕ್ಕಷ್ಟೆ. ಅದಕ್ಕಿಂತಲೂ ಕೂಲಿ ಕೆಲಸವೇ ವಾಸಿ. ಇವೆಲ್ಲ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರೂ ಉದ್ಯೋಗ ಸಿಗದೆ ಎಷ್ಟು ನಿರಾಶರಾಗಿದ್ದರೆ ಎನ್ನುವುದು ಸೂಚಿಸುತ್ತದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಮೀಕ್ಷೆಯ ಪ್ರಕಾರ 2013-14ರಲ್ಲಿ ನಿರುದ್ಯೋಗ ಪ್ರಮಾಣವು ಶೇ 4.9ರಷ್ಟಿತ್ತು. ಆದರೆ, 2017-18ರಲ್ಲಿ ಇದು ಶೇ.6.1ಕ್ಕೆ ಏರಿಕೆಯಾಗಿ, 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ ತಲುಪಿದೆ.

ಆಳುವವರು ಈ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಬೇಕಿತ್ತು. ಆದರೆ ಅಳುವವರಿಗೆ ಇದು ಆದ್ಯತೆಯ ಸಂಗತಿಯಾಗಿ ಕಾಣುತ್ತಿಲ್ಲ ಎನ್ನುವುದು ನಮ್ಮ ದುರದೃಷ್ಟ. ದೇಶದಲ್ಲಿ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿ ಮಾಡುವ ಎಂಟು ಕ್ಷೇತ್ರಗಳಿವೆ. ಬಟ್ಟೆ ಗಿರಣಿ, ಚರ್ಮೋದ್ಯಮ, ಲೋಹ, ಅಟೊಮೊಬೈಲ್, ಹರಳು ಮತ್ತು ಆಭರಣ, ಸಾರಿಗೆ, ಮಾಹಿತಿ ತಂತ್ರಜ್ಞಾನ ಮತ್ತು ಕೈಮಗ್ಗ ಉದ್ಯಮಗಳು ಉದ್ಯೋಗ ಸೃಷ್ಟಿಗೆ ಹೆಸರು ಪಡೆದಿವೆ. ಈ ಎಂಟು ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. 2016-18ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡರು ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸುಸ್ಥಿರ ಉದ್ಯೋಗ ಕೇಂದ್ರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಪ್ರತೀ ವರ್ಷ ದೇಶದಲ್ಲಿ 1.2 ಕೋಟಿಯಷ್ಟು ಹೆಚ್ಚುವರಿ ಜನ ದುಡಿತಕ್ಕೆ ಸಿದ್ದರಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಹೋಲಿಸಿದರೆ ಹೊಸ ಉದ್ಯೋಗಗಳ ಸೃಷ್ಟಿಯ ಪ್ರಮಾಣ ತೀರಾ ಕಡಿಮೆ. ಉದ್ಯೋಗಸೃಷ್ಟಿಯಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಪರಿಸ್ಥಿತಿ ಅಷ್ಟೇನೋ ಆಶಾದಾಯಕವಾಗಿಲ್ಲ. 2020ರ ವೇಳೆಗೆ ಜಾಗತಿಕ ಐ.ಟಿ. ಕ್ಷೇತ್ರದಲ್ಲಿ ಒಟ್ಟು 20 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜು ಇದೆ. ಇದರಲ್ಲಿ ಭಾರತದ ಪಾಲು ಶೇಕಡಾ 13 ಮಾತ್ರ. ಆದರೆ ಉದ್ಯೋಗ ಕಡಿತವಾಗುವ ಪರಿಸ್ಥಿತಿ, ನಿರುದ್ಯೋಗದ ತೀವ್ರತೆಯನ್ನು ಹೆಚ್ಚಿಸಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡಲು ವಿಫಲವಾದ ಯಾವ ಸಮಾಜವೂ ಅಪರಾಧ ಮತ್ತು ಅರಾಜಕತೆಯ ದುಃಸ್ಥಿತಿ ಯಿಂದ ಪಾರಾದ ನಿದರ್ಶನವಿಲ್ಲ. ಸರಕಾರಗಳು ಇನ್ನಾದರೂ ಉದ್ಯೋಗಸೃಷ್ಟಿಯ ಹೊಸ ಕ್ಷೇತ್ರಗಳತ್ತ ತುರ್ತು ಗಮನ ಹರಿಸಬೇಕಾದ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)