varthabharthi


ವಿಶೇಷ-ವರದಿಗಳು

ಇಂದು ಇಂದಿರಾ ಗಾಂಧಿ ಹತ್ಯೆಯಾದ ದಿನ

ಬಡವರ ಪಾಲಿನ ಇಂದಿರಮ್ಮ!

ವಾರ್ತಾ ಭಾರತಿ : 31 Oct, 2019
ಆರ್. ಎಂ. ಎಂ.

ಇಂದಿರಾಗಾಂಧಿಯ ಹೆಸರು ಹಳ್ಳಿಯ ವೃದ್ಧೆಗೂ ಗೊತ್ತಿತ್ತು. ದಲಿತರು, ಶೋಷಿತರ ಪಾಲಿಗೆ ಅವರು ಇಂದಿರಮ್ಮ ಆಗಿ ಇತಿಹಾಸದಲ್ಲಿ ದಾಖಲಾದರು. ಇಂದಿರಾಗಾಂಧಿಯ ಹತ್ಯೆಯಾದಾಗ ಇಡೀ ದೇಶ ತಾಯಿಯನ್ನು ಕಳೆದುಕೊಂಡಂತೆ ರೋದಿಸಿತು. ಇಂದಿರಾಗಾಂಧಿಯ ಸ್ಥಾನವನ್ನು ತುಂಬಬಲ್ಲ ಇನ್ನೊಬ್ಬ ಪ್ರಧಾನಿ ಮತ್ತೆ ಹುಟ್ಟಲೇ ಇಲ್ಲ.

ಅಕ್ಟೋಬರ್ 31! ತನ್ನದೇ ಅಂಗರಕ್ಷಕರ ಗುಂಡಿಗೆ ಇಂದಿರಾಗಾಂಧಿ ಬಲಿಯಾದ ದಿನ. ಬ್ಯಾಂಕ್ ರಾಷ್ಟ್ರೀಕರಣ, ಭೂಸುಧಾರಣೆಯಂತಹ ಜನಪರ ನೀತಿಯಿಂದ ಮೇಲ್ವರ್ಗದ ವಿರೋಧ ಕಟ್ಟಿಕೊಂಡ, ಪಾಕಿಸ್ತಾನಕ್ಕೆ ಸಮರ್ಥ ಉತ್ತರವನ್ನು ನೀಡಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಪ್ರಧಾನ ಪಾತ್ರವಹಿಸಿ ‘ಅಭಿನವ ದುರ್ಗೆ’ ಎಂದು ಸಂಘಪರಿವಾರದಿಂದ ಬಣ್ಣಿಸಲ್ಪಟ್ಟ, ತುರ್ತು ಪರಿಸ್ಥಿತಿಯ ಮೂಲಕ ಸರ್ವಾಧಿಕಾರಿಯೆಂಬ ಕಳಂಕ ಅಂಟಿಸಿಕೊಂಡ, ಸಿಖ್ ಉಗ್ರವಾದವನ್ನು ದಮನಿಸುವ ಕಾರ್ಯಯೋಜನೆಯಲ್ಲಿ ಯಶಸ್ವಿಯಾಗಿ, ಬಳಿಕ ಅದಕ್ಕಾಗಿಯೇ ತನ್ನ ಪ್ರಾಣವನ್ನು ಕೊಟ್ಟ ಇಂದಿರಾಗಾಂಧಿಯನ್ನು ಹೊರತು ಪಡಿಸಿ ಸ್ವಾತಂತ್ರೋತ್ತರ ಭಾರತವನ್ನು ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ವಿಜ್ಞಾನ, ತಂತ್ರಜ್ಞಾನ, ಕೃಷಿ ಸಹಿತ ಭಾರತದ ಸಾಮಾಜಿಕ ಆರ್ಥಿಕ ಬದಲಾವಣೆಗಳಲ್ಲಿ ಇಂದಿರಾಗಾಂಧಿಯ ಪಾತ್ರ ಮಹತ್ತರವಾದುದು. ಈ ದೇಶದ ವಿದೇಶ ನೀತಿ ಅತ್ಯಂತ ಸುಭದ್ರವಾಗಿದ್ದುದು ಕೂಡಾ ಇಂದಿರಾಗಾಂಧಿಯ ಕಾಲದಲ್ಲಿ. ಇಂದಿರಾಗಾಂಧಿಯ ಮೇಲೆ ಇರುವ ಎಲ್ಲ ಆರೋಪಗಳನ್ನು ಹೊರತು ಪಡಿಸಿ, ಇಂದಿರಾಗಾಂಧಿ ಈ ದೇಶಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು. ಇಂದು ಭಾರತ ಯಾವೆಲ್ಲ ಸಾಧನೆಗಳಿಗಾಗಿ ಸುದ್ದಿ ಮಾಡುತ್ತಿವೆಯೋ ಅವೆಲ್ಲದರ ಹಿಂದೆ ಇಂದಿರಾಗಾಂಧಿಯ ದೂರದೃಷ್ಟಿಯಿದೆ.

ನವೆಂಬರ್ 19, 1917ರಂದು ಜನಿಸಿದ ಶ್ರೀಮತಿ ಇಂದಿರಾ ಗಾಂಧಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಪುತ್ರಿ. ಅವರು ಸ್ವಿಟ್ಜರ್‌ಲ್ಯಾಂಡ್‌ನ ಎಕೊಲೆ ನವೊಲೆ, ಬೆಕ್ಸ್, ಜಿನೆವಾದ ಎಕೊಲೆ ಇಂಟರ್‌ನ್ಯಾಷನಲ್, ಪೂನಾ ಮತ್ತು ಮುಂಬೈಯ ಪ್ಯೂಪಿಲ್ಸ್ ಓನ್ ಸ್ಕೂಲ್, ಬ್ರಿಸ್ಟಾಲ್‌ನ ಬ್ಯಾಡ್ಮಿಂಟನ್ ಸ್ಕೂಲ್, ಶಾಂತಿನಿಕೇತನದ ವಿಶ್ವಭಾರತಿ, ಆಕ್ಸ್‌ಫರ್ಡ್‌ನ ಸೊಮರ್ವಿಲ್ಲೆ ಕಾಲೇಜ್ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿಧ್ಯಾಭ್ಯಾಸ ಪೂರೈಸಿದರು. ಅಂತರ್‌ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿ ಗೌರವಿಸಿದವು. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದ ಅವರು ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಉನ್ನತ ಶ್ರೇಣಿಯನ್ನು ಪಡೆದವರು.

ಶ್ರೀಮತಿ ಇಂದಿರಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿದವರು. ಅಸಹಕಾರ ಚಳವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಲು 1930ರಲ್ಲಿ ಅವರು ‘ಬಾಲ ಚರಕ ಸಂಘ’ವನ್ನು ಮತ್ತು ಮಕ್ಕಳ ‘ವಾನರ ಸೇನೆ’ಯನ್ನು ಸ್ಥಾಪಿಸಿದರು. 1942ರಲ್ಲಿ ಅವರನ್ನು ಬಂಧಿಸಲಾಯಿತು. 1947ರಲ್ಲಿ ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಇಂದಿರಾ ಅವರು ದಿಲ್ಲಿಯ ಕೋಮುಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದರು.

1942ರ ಮಾರ್ಚ್ 26ರಂದು ಇಂದಿರಾ ಫಿರೋಜ್ ಗಾಂಧಿ ಅವರನ್ನು ವಿವಾಹವಾದರು. ಬಳಿಕ ಇಬ್ಬರು ಗಂಡುಮಕ್ಕಳಿಗೆ ತಾಯಿಯಾದರು. 1955ರಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣೆ ಮತ್ತು ಕಾರ್ಯಕಾರಿಣಿ ಸಮಿತಿಗೆ ಸದಸ್ಯರಾದರು. 1958ರಲ್ಲಿ ಕಾಂಗ್ರೆಸ್‌ನ ಕೇಂದ್ರೀಯ ಸಂಸದೀಯ ಮಂಡಳಿಗೆ ಸದಸ್ಯೆಯಾಗಿ ನೇಮಕಗೊಂಡರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಏಕೀಕರಣ ಸಮಿತಿ ಅಧ್ಯಕ್ಷೆಯಾದರು. 1956ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆಯಾದರು. 1959ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆಯಾಗಿ 1960ರವರೆಗೆ ಸೇವೆ ಸಲ್ಲಿಸಿದರು. ಪುನಃ 1978ರಲ್ಲಿ ಇದೇ ಹುದ್ದೆಗೆ ನೇಮಕಗೊಂಡರು. ಅವರು ನೆಹರೂ ಪುತ್ರಿ ಎನ್ನುವ ಕಾರಣಕ್ಕಾಗಿ ಏಕಾಏಕಿ ಪ್ರಧಾನಮಂತ್ರಿಯಾದವರಲ್ಲ ಎನ್ನುವ ಅಂಶವನ್ನು ನಾವು ಗಮನಿಸಬೇಕಾಗಿದೆ. ಆರಂಭದಲ್ಲಿ ಅವರು ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ಬೆಳೆದರು. ಇದಾದ ಬಳಿಕವೂ ಅವರು ಸರಕಾರದಲ್ಲಿ ಯಾವುದೇ ಉನ್ನತ ಸ್ಥಾನವನ್ನು ಬಯಸಲಿಲ್ಲ. ಲಾಲ್‌ಬಹಾದ್ದೂರ್ ಶಾಸ್ತ್ರಿ ಒತ್ತಾಯಿಸಿದ ಬಳಿಕವೇ ಅವರು ನೇರವಾಗಿ ಸರಕಾರದೊಳಗೆ ಭಾಗಿಯಾದರು. 1964-1966ವರೆಗೆ ವಾರ್ತಾ ಮತ್ತು ಪ್ರಸಾರ ಸಚಿವೆಯಾಗಿದ್ದರು. ಜನವರಿ 1966ರಿಂದ ಮಾರ್ಚ್ 1977ರವರೆಗೆ ಭಾರತದ ಪ್ರಧಾನಮಂತ್ರಿಯಾಗಿ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸಿದರು. ಸೆಪ್ಟಂಬರ್ 1967ರಿಂದ ಮಾರ್ಚ್ 1977ರವರೆಗೆ ಪರಮಾಣು ಶಕ್ತಿ ಖಾತೆಯ ಸಚಿವೆಯಾಗಿದ್ದರು. ಸೆಪ್ಟೆಂಬರ್ 5, 1967ರಿಂದ ಫೆಬ್ರವರಿ 14, 1969ರವರೆಗೆ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಹೊಣೆಯನ್ನೂ ಹೊತ್ತರು. ಜೂನ್ 1970ರಿಂದ ನವೆಂಬರ್ 1973ರವರೆಗೆ ಗೃಹ ಸಚಿವಾಲಯದ ನೇತೃತ್ವವನ್ನು ಶ್ರೀಮತಿ ಇಂದಿರಾ ಗಾಂಧಿ ವಹಿಸಿಕೊಂಡಿದ್ದರು. ಜೂನ್ 1972ರಿಂದ 1977 ಮಾರ್ಚ್ ತಿಂಗಳವರೆಗೆ ಬಾಹ್ಯಾಕಾಶ ಖಾತೆಯ ಸಚಿವೆಯಾಗಿದ್ದರು. ಜನವರಿ 1980ರಿಂದ ಅವರು ಯೋಜನಾ ಆಯೋಗದ ಅಧ್ಯಕ್ಷೆಯಾಗಿದ್ದರು. ಜನವರಿ 14, 1980ಕ್ಕೆ ಮತ್ತೆ ಪ್ರಧಾನ ಮಂತ್ರಿಯಾದರು.

ಕಮಲಾ ನೆಹರೂ ಸ್ಮರಣಾರ್ಥ ಆಸ್ಪತ್ರೆ, ಗಾಂಧಿ ಸ್ಮಾರಕ್ ನಿಧಿ ಮತ್ತು ಕಸ್ತೂರ್ಬಾ ಮೆಮೋರಿಯಲ್ ಟ್ರಸ್ಟ್ ಹೀಗೆ ಹಲವಾರು ಸಂಸ್ಥೆಗಳ ಜತೆ ಇಂದಿರಾ ಗಾಂಧಿ ನಿಕಟ ಸಂಪರ್ಕ ಹೊಂದಿದ್ದರು. ಅವರು ಸ್ವರಾಜ್ ಭವನ ಟ್ರಸ್ಟ್ ನ ಅಧ್ಯಕ್ಷೆಯಾಗಿದ್ದರು. ಬಾಲ ಸಹಯೋಗ್, ಬಾಲ ಭವನ ಮಂಡಳಿ ಮತ್ತು ಮಕ್ಕಳ ರಾಷ್ಟ್ರೀಯ ಸಂಗ್ರಹಾಲಯದ ಜತೆಯೂ ಉತ್ತಮ ಸಂಬಂಧ ಹೊಂದಿದ್ದರು. ಶ್ರೀಮತಿ ಗಾಂಧಿ ಅವರು ಅಲಹಾಬಾದ್‌ನಲ್ಲಿ ಕಮಲಾ ನೆಹರೂ ವಿದ್ಯಾನಿಲಯವನ್ನು ಸ್ಥಾಪಿಸಿದರು. 1966-77 ಅವಧಿಯಲ್ಲಿ ಶ್ರೀಮತಿ ಗಾಂಧಿ, ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ನಾರ್ಥ್ ಈಸ್ಟರ್ನ್ ಯುನಿವರ್ಸಿಟಿಗಳಂತಹ ಬೃಹತ್ ಸಂಸ್ಥೆಗಳ ಜತೆ ಸಂಪರ್ಕ ಹೊಂದಿದ್ದರು. 1960-64ರ ಅವಧಿಯಲ್ಲಿ ಅವರು ದಿಲ್ಲಿ ವಿಶ್ವವಿದ್ಯಾನಿಲಯ ಕೋರ್ಟ್ ಮತ್ತು ಯುನೆಸ್ಕೋದ ಭಾರತೀಯ ನಿಯೋಗದ ಸದಸ್ಯೆಯಾಗಿದ್ದರು. ಇದೇ ಅವಧಿಯಲ್ಲಿ ಯುನೆಸ್ಕೋದ ಕಾರ್ಯನಿರ್ವಹಣಾ ಮಂಡಳಿಯ ಸದಸ್ಯೆಯಾಗಿದ್ದರು. 1962ರಲ್ಲಿ ರಾಷ್ಟ್ರೀಯ ರಕ್ಷಣಾ ಮಂಡಳಿಯ ಸದಸ್ಯೆಯಾದರು. ಸಂಗೀತ ಮತ್ತು ನಾಟಕ ಅಕಾಡಮಿ, ರಾಷ್ಟ್ರೀಯ ಏಕೀಕರಣ ಸಮಿತಿ, ಹಿಮಾಲಯ ಪರ್ವತಾರೋಹಣ ಸಂಸ್ಥೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಹಾಗೂ ಜವಾಹರ ಲಾಲ್ ನೆಹರೂ ಸ್ಮರಣಾರ್ಥ ನಿಧಿ ಇವುಗಳ ಜತೆ ನಿಕಟ ಸಂಬಂಧ ಹೊಂದಿದ್ದರು.

ಆಗಸ್ಟ್ 1964ರಿಂದ ಫೆಬ್ರವರಿ 1967ರವರಗೆ ಇಂದಿರಾ ಗಾಂಧಿ ಅವರು ರಾಜ್ಯಸಭೆಯ ಸದಸ್ಯೆಯಾಗಿದ್ದರು. ನಾಲ್ಕು, ಐದು ಮತ್ತು ಆರನೆಯ ಅಧಿವೇಶನಗಳ ವೇಳೆಯಲ್ಲಿ ಅವರು ಲೋಕಸಭಾ ಸದಸ್ಯೆಯಾಗಿದ್ದರು. ಜನವರಿ 1980ರಲ್ಲಿ ಏಳನೆಯ ಲೋಕಸಭೆಗೆ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಆಂಧ್ರ ಪ್ರದೇಶದ ಮೇಡಕ್‌ನಿಂದ ಚುನಾಯಿತರಾದರು. ಅವರು ಮೇಡಕ್ ಸ್ಥಾನವನ್ನು ಉಳಿಸಿಕೊಂಡು ರಾಯ್ ಬರೇಲಿಯ ಸ್ಥಾನವನ್ನು ಬಿಟ್ಟುಕೊಟ್ಟರು. 1967ರಿಂದ 1977ರ ಅವಧಿಯಲ್ಲಿ ಇಂದಿರಾ ಗಾಂಧಿ ಅವರನ್ನು ಕಾಂಗ್ರೆಸ್ ಸಂಸದೀಯ ಸಮಿತಿಯ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಯಿತು. 1980ರ ಜನವರಿಯಲ್ಲಿ ಮತ್ತೆ ಅದೇ ಸ್ಥಾನಕ್ಕೆ ಅವರು ಆಯ್ಕೆಯಾದರು.

ಶ್ರೀಮತಿ ಇಂದಿರಾ ಗಾಂಧಿ ಅವರ ಹಿರಿಮೆಯ ಕಿರೀಟಕ್ಕೆ ಹಲವಾರು ಸಾಧನೆಗಳ ಗರಿಗಳಿದ್ದವು. ಅವರು 1972ರ ಸಾಲಿನ ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ. ಬಾಂಗ್ಲಾದೇಶದ ವಿಮೋಚನೆಗಾಗಿ ಮೆಕ್ಸಿಕನ್ ಅಕಾಡೆಮಿ ಪ್ರಶಸ್ತಿ ಅದೇ ವರ್ಷ ಲಭ್ಯವಾಗಿತ್ತು. 1973ರಲ್ಲಿ ಎಫ್‌ಎಒನ ದ್ವಿತೀಯ ವಾರ್ಷಿಕ ಪದಕ, 1976ರರಲ್ಲಿ ನಗರಿ ಪ್ರಚಾರಿಣಿ ಸಭಾ ಕೊಡಮಾಡುವ ಸಾಹಿತ್ಯ ವಾಚಸ್ಪತಿ (ಹಿಂದಿ) ಪ್ರಶಸ್ತಿ, 1953ರಲ್ಲಿ ಅಮೆರಿಕದ ಮದರ್ಸ್ ಅವಾರ್ಡ್, ರಾಜನೀತಿಯಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಇಟೆಲಿಯ ಐಸ್ಲೆಬೆಲ್ಲಾ ಡಿ ಎಸ್ಟೆ ಪ್ರಶಸ್ತಿ, ಯಾಲೆ ವಿಶ್ವವಿದ್ಯಾನಿಲಯದ ಹೌಲ್ಯಾಂಡ್ ಮೆಮೋರಿಯಲ್ ಪ್ರಶಸ್ತಿ ಲಭಿಸಿದವು. ಫ್ರೆಂಚ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪೀನಿಯನ್ ಕೈಗೊಂಡ ಸಮೀಕ್ಷೆಗಳ ಪ್ರಕಾರ ಅವರು 1967 ಮತ್ತು 1968 ಎರಡು ವರ್ಷಗಳಲ್ಲಿ ನಿರಂತರವಾಗಿ ಫ್ರೆಂಚರ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ಮಹಿಳೆ ಎಂಬ ವಿಷಯವನ್ನು ತಿಳಿಸಿತು. 1971ರಲ್ಲಿ ಅಮೆರಿಕದಲ್ಲಿ ನಡೆದ ವಿಶೇಷ ಗ್ಯಾಲಪ್ ಸಮೀಕ್ಷೆ ಪ್ರಕಾರ ಅವರು ಪ್ರಪಂಚದಲ್ಲೇ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ವ್ಯಕ್ತಿ. ಪ್ರಾಣಿಗಳ ರಕ್ಷಣೆಗಾಗಿ 1971ರಲ್ಲಿ ಅಂರ್ಜೆಟಿನಾ ಸೊಸೈಟಿ ಅವರಿಗೆ ಗೌರವ ಡಿಪ್ಲೊಮಾ ಪ್ರದಾನ ಮಾಡಿತು.

ಎರಡು ತಪ್ಪುಗಳು:

ಇಂದಿರಾಗಾಂಧಿಯ ರಾಜಕೀಯ ಬದುಕಿನಲ್ಲಿ ಸಂಭವಿಸಿದ ಎರಡು ತಪ್ಪುಗಳಲ್ಲಿ ಮೊದಲನೆಯದು, ತುರ್ತುಪರಿಸ್ಥಿತಿ. ಎರಡನೆಯದು ಆಪರೇಷನ್ ಬ್ಲೂಸ್ಟಾರ್. ಇಂದಿರಾ ಅವರ ವೈಯಕ್ತಿಕ ರಾಜಕೀಯ ಬದುಕಿಗೆ ಇದು ಅಗತ್ಯವಿತ್ತು. ಆದರೆ ಅದು ಅವರಿಗೆ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ವ್ಯಕ್ತಿತ್ವವನ್ನೂ ಅಂಟಿಸಿದವು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹಲವು ಕ್ರಮಗಳನ್ನು ಟೀಕಿಸಿದವರು ಅನೇಕರು. ಆದರೆ ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣದಂತಹ ಅವರ ಜನಪರ ಕಾರ್ಯಕ್ರಮಗಳನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಪಂಜಾಬ್‌ನಲ್ಲಿ ಉಗ್ರವಾದ ಬೆಳೆಯುತ್ತಿರುವಾಗ ಆರಂಭದಲ್ಲಿ ಆ ಕುರಿತಂತೆ ಇಂದಿರಾ ಮೃದುವಾಗಿದ್ದರು ಎನ್ನುವ ಆರೋಪವಿದೆ. ಅಂತಿಮವಾಗಿ ಬ್ಲೂಸ್ಟಾರ್ ಕಾರ್ಯಾಚರಣೆ ಪಂಜಾಬ್‌ನ ಎದೆಯ ಮೇಲಿನ ಆರದ ಗಾಯವಾಗಿಯೇ ಉಳಿಯಿತು. ಆದರೆ ದೇಶದ ಹಿತಾಸಕ್ತಿಗೆ ಅದು ಅನಿವಾರ್ಯ ಎಂದು ಕಂಡಾಗ, ತನ್ನ ಪ್ರಾಣವನ್ನು ಒತ್ತೆಯಿಟ್ಟು ಅದಕ್ಕೆ ಅನುಮತಿ ನೀಡಿದರು. ಇದು ಅಂತಿಮವಾಗಿ ತನ್ನನ್ನು ಬಲಿತೆಗೆದುಕೊಳ್ಳುತ್ತದೆ ಎನ್ನುವುದು ಅವರಿಗೆ ಸ್ಪಷ್ಟವಿತ್ತು. ಮತ್ತು ಅದಕ್ಕಾಗಿ ನಾನು ಸಿದ್ಧನಾಗಿದ್ದೇನೆ ಎನ್ನುವುದನ್ನು ಅವರು ಬಹಿರಂಗವಾಗಿ ಘೋಷಿಸಿದ್ದರು. ಒಂದು ಗಮನಾರ್ಹವಾದ ಸಂದೇಶ ಅವರ ಸಾವಿನಲ್ಲಿದೆ. ಬ್ಲೂಸ್ಟಾರ್ ಕಾರ್ಯಾಚರಣೆಯ ಬಳಿಕವೂ ಅವರು ತಮ್ಮ ಸಿಖ್ ಅಂಗರಕ್ಷಕರನ್ನು ಬದಲಿಸಿಕೊಳ್ಳಲಿಲ್ಲ. ಅದು ಅವರು ಈ ಜಾತ್ಯತೀತ ಸ್ವರೂಪದ ಕುರಿತಂತೆ ಇಟ್ಟ ನಂಬಿಕೆ. ಸಿಕ್ಖರ ಕುರಿತಂತೆ ಪ್ರಧಾನಿಯಾಗಿ ತಾನು ಅನುಮಾನ, ಶಂಕೆಯನ್ನು ಹೊಂದಬಾರದು ಎನ್ನುವ ವಿಶಾಲವಾದ ಮನಸ್ಥಿತಿ ಅವರಿಗಿತ್ತು. ಯಾಕೆಂದರೆ, ಆಗ ಇಡೀ ದೇಶ ಸಿಕ್ಖರನ್ನು ಅನುಮಾದಿಂದ, ಶಂಕೆಯಿಂದ ನೋಡುತ್ತಿತ್ತು. ಇಂತಹ ಕಾಲದಲ್ಲಿ ಯಾವುದೇ ರಾಜಕಾರಣಿ ಸಿಕ್ಖರನ್ನು ಅಂಗರಕ್ಷಕರನ್ನಾಗಿ ಇಟ್ಟುಕೊಳ್ಳುವ ಎದೆಗಾರಿಕೆಯನ್ನು ಪ್ರದರ್ಶಿಸುತ್ತಿರಲಿಲ್ಲ. ಇಂದಿರಾಗಾಂಧಿ ಈ ದೇಶದ ಕುರಿತಂತೆ, ಇಲ್ಲಿ ಅಲ್ಪಸಂಖ್ಯಾತರ ಕುರಿತಂತೆ ಇಟ್ಟುಕೊಂಡ ಭರವಸೆಗೆ ಇದು ಸಾಕ್ಷಿ. ಒಂದು ವೇಳೆ ಆ ಭರವಸೆ ಹುಸಿಯಾದರೂ ಸರಿ, ಅದರಿಂದ ಹಿಂದೆ ಸರಿಯುವುದಿಲ್ಲ ಎಂದು ನಿರ್ಧರಿಸಿದ್ದರು. ಕಟ್ಟ ಕಡೆಗೆ ಅದರ ನಂಬಿಕೆಯೇ ಅವರನ್ನು ಬಲಿತೆಗೆದುಕೊಂಡಿತು. ಆದರೆ ಆ ನಂಬಿಕೆಗಾಗಿ ಎಂದೂ ಇಂದಿರಾಗಾಂಧಿ ಪಶ್ಚಾತ್ತಾಪ ಪಡಲಾರರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)