varthabharthi


ವಿಶೇಷ-ವರದಿಗಳು

"ಆರೆಸ್ಸೆಸ್ ಕೋಮು ಸಂಘರ್ಷ ತ್ಯಜಿಸಿ, ಭಾರತೀಯ ಸಂವಿಧಾನವನ್ನು ಗೌರವಿಸಲಿ"

ಮುಸ್ಲಿಮರು ಭಾರತದಿಂದ ತೊಲಗಬೇಕು ಎನ್ನುವವರು ಸಿಟ್ಟಿನಿಂದ ಹುಚ್ಚರಾದವರು: ಸರ್ದಾರ್ ವಲ್ಲಭಭಾಯಿ ಪಟೇಲ್

ವಾರ್ತಾ ಭಾರತಿ : 31 Oct, 2019

'ಫಾರ್ ಎ ಯುನೈಟೆಡ್ ಇಂಡಿಯಾ- ಸರ್ದಾರ್ ಪಟೇಲ್ ರ ಭಾಷಣಗಳು 1947-1950'ರ ಆಯ್ದ ಭಾಗಗಳ ಕನ್ನಡ ಅನುವಾದ ಈ ಕೆಳಗಿದೆ. ತಮ್ಮ ಭಾಷಣಗಳಲ್ಲಿ ದೇಶದ ವಿಭಜನೆ, ಮುಸ್ಲಿಂ ದ್ವೇಷ, ಆರೆಸ್ಸೆಸ್ ಬಗ್ಗೆ ಸರ್ದಾರ್ ಪಟೇಲರು ಅಭಿಪ್ರಾಯ ವ್ಯಕ್ತಪಡಿಸಿದ್ದು ಅದರ ಕನ್ನಡ ಅನುವಾದ ಇದಾಗಿದೆ.

"ಮುಸ್ಲಿಮರನ್ನು ಭಾರತದಿಂದ ತೊಲಗಿಸಬೇಕು ಎಂದು ಜನರು ಬೊಬ್ಬೆಯಿಡುತ್ತಿರುವುದನ್ನು ನಾವು ಈಗಷ್ಟೇ ಕೇಳಿದ್ದೇವೆ. ಹಾಗೆ ಮಾಡುತ್ತಿರುವವರು ಸಿಟ್ಟಿನಿಂದ ಹುಚ್ಚರಾಗಿದ್ದಾರೆ. ಸಿಟ್ಟಿನಿಂದ ಹುಚ್ಚರಾದವರಿಗಿಂತ ಬುದ್ಧಿಭ್ರಮಣೆಗೊಳಗಾದವರೇ ಮೇಲು. ಅವರಿಗೆ ಚಿಕಿತ್ಸೆ ನೀಡಬಹುದು ಮತ್ತು ಬಹುಶಃ ಗುಣಪಡಿಸಲೂಬಹುದು. ಆದರೆ ಸಿಟ್ಟಿನಲ್ಲಿ ಹುಚ್ಚರಾದವರು ತಮ್ಮ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿರುತ್ತಾರೆ. ಅಲ್ಪಸಂಖ್ಯೆಯಲ್ಲಿರುವ ಮುಸ್ಲಿಮರನ್ನು ದೇಶದಿಂದ ಹೊರಗಟ್ಟುವುದರಿಂದ ತಾವು ಗಳಿಸುವುದೇನೂ ಇಲ್ಲ ಎನ್ನುವುದು ಈ ಜನರಿಗೆ ಅರ್ಥವಾಗುವುದಿಲ್ಲ".

"ಇದೇ ವೇಳೆ ತಮ್ಮ ಪ್ರೀತಿಪಾತ್ರರನ್ನು ಮತ್ತು ತಮ್ಮ ಸೊತ್ತುಗಳನ್ನು ಕಳೆದುಕೊಂಡಿರುವ ಈ ಜನರ ಬಗ್ಗೆಯೂ ನಮಗೆ ಸಹಾನುಭೂತಿ ಇರಬೇಕು. ನಾನು ಈಗಷ್ಟೇ ರಾಜಕೋಟ್‌ ನಿಂದ ಬಂದಿದ್ದೇನೆ. ತಮ್ಮದೆಲ್ಲವನ್ನೂ ಕಳೆದುಕೊಂಡಿರುವ ಸಾವಿರಾರು ಜನರು ಕಾಠಿಯಾವಾಡಕ್ಕೆ ಬರುತ್ತಿದ್ದಾರೆ. ಸಿಟ್ಟು ಅವರ ಹೃದಯಗಳನ್ನು ಆಳುತ್ತಿದೆ ಮತ್ತು ಅವರ ಮನಸ್ಸುಗಳನ್ನು ತಿರುಗಿಸುತ್ತಿದೆ. ಆದರೆ ನಾವು ಇವೆಲ್ಲವನ್ನು ಸಹಿಸಬೇಕು. ಇದೇ ವೇಳೆ, ನಾವು ಎಲ್ಲಿಯವರೆಗೆ ಸರಕಾರದಲ್ಲಿ ಇರುತ್ತೇವೆಯೋ ಅಲ್ಲಿಯವರೆಗೆ ನಾವು ಆಡಳಿತವನ್ನು ನಡೆಸಬೇಕು. ಧರ್ಮ, ಜಾತಿ ಅಥವಾ ಜನಾಂಗವನ್ನು ಪರಿಗಣಿಸದೆ ಇಡೀ ದೇಶದ ಜನರ ವಿಶ್ವಸ್ತರಾಗಿ ನಾವು ಕಾರ್ಯ ನಿರ್ವಹಿಸದಿದ್ದರೆ ನಾವು ಈಗ ಇರುವ ಸ್ಥಾನದಲ್ಲಿ ಇರಲು ಅರ್ಹರಲ್ಲ. ಇಂತಹ ಬೊಬ್ಬೆಗಳು ನನಗೆ ಚಿಂತೆ ಮತ್ತು ನೋವನ್ನುಂಟು ಮಾಡುತ್ತಿವೆ. ನಾವು ಆಡಳಿತ ನಡೆಸಲು ಯೋಗ್ಯರಲ್ಲ ಎಂದು ವಿಶ್ವದ ಮುಂದೆ ನಾವು ಒಪ್ಪಿಕೊಳ್ಳಲಿದ್ದೇವೆಯೇ ಎಂದು ಮುಕ್ತವಾಗಿ ನನ್ನನ್ನೇ ಪ್ರಶ್ನಿಸಿಕೊಳ್ಳುತ್ತೇನೆ".

"ಆದರೂ, ಕಳೆದ ಹಲವಾರು ಶತಮಾನಗಳಲ್ಲಿ ಯಾವುದೇ ಸಮಯಕ್ಕೆ ಹೋಲಿಸಿದರೆ ಇಂದು ಭಾರತವನ್ನು ಹೆಚ್ಚು ಏಕತ್ರಗೊಳಿಸುವ ಮೂಲಕ ನಾವು ಏನನ್ನೋ ಸಾಧಿಸಿದ್ದೇವೆ ಎಂಬ ಸತ್ಯದತ್ತ ನಾವು ಕುರುಡರಾಗಿರುವಂತಿಲ್ಲ. ನಾವು ಇನ್ನೂ ಏಕತ್ರಗೊಳ್ಳಬೇಕು. ಆದರೆ ಅದಕ್ಕೆ ದೃಢವಾದ ಪ್ರಯತ್ನದ ಅಗತ್ಯವಿದೆ. ಇಂತಹ ಸಂಘಟಿತ ಭಾರತದಲ್ಲಿ ತಾವೂ ಇತರರಷ್ಟೇ ಸುರಕ್ಷಿತರಾಗಿದ್ದೇವೆ ಎಂದು ಮುಸ್ಲಿಮರು ಭಾವಿಸುವಂತಾಗಬೇಕು. ಇದಕ್ಕಾಗಿ ಮುಸ್ಲಿಮರೂ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಅವರು ತಮಗೆ ಬೋಧಿಸಲಾಗಿರುವ ದ್ವಿ-ರಾಷ್ಟ್ರ ಸಿದ್ಧಾಂತವನ್ನು ಮರೆಯಬೇಕು. ಪಾಕಿಸ್ತಾನವು ತನ್ನ ಮರ್ಜಿಯಂತೆ ಬದುಕುವ ಮತ್ತು ಭಾರತವು ತನ್ನದೇ ದಾರಿಯಲ್ಲಿ ಸಾಗುವ ವಾತಾವರಣವನ್ನು ನಾವು ಸೃಷ್ಟಿಸಬೇಕಿದೆ. ದೇಶದ ನಾಯಕ ಜವಾಹರಲಾಲ್ ನೆಹರು ಅವರು ಕಳೆದ ಕೆಲವು ತಿಂಗಳಲ್ಲಿ 10 ವರ್ಷ ಹೆಚ್ಚು ವಯಸ್ಸಾದವರಂತೆ ಕಾಣುತ್ತಿದ್ದಾರೆ. ಅವರು ಚಿಂತಿತರಾಗಿದ್ದಾರೆ ಮತ್ತು ದುಃಖಿತರಾಗಿದ್ದಾರೆ. ಏನಾಗುತ್ತಿದೆಯೋ ಅದರ ಬಗ್ಗೆ ಚಿಂತನೆ ಮಾಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ".

ವಿಭಜನೆಯ ಕುರಿತಂತೆ

"ನಾನು ಮತ್ತು ನನ್ನ ಸಹೋದ್ಯೋಗಿಗಳು ದೇಶದ ವಿಭಜನೆಗೆ ಒಪ್ಪಿಕೊಂಡಿದ್ದು ಭೀತಿ ಅಥವಾ ಸೋಲಿನ ಭಾವನೆಯಿಂದಲ್ಲ. ದೇಶದಲ್ಲಿಯ ಪ್ರಚಲಿತ ಸ್ಥಿತಿಯಲ್ಲಿ ಈಗಿನ ರೂಪದಲ್ಲಿ ವಿಭಜನೆಯು ಸಾಧ್ಯವಿದ್ದ ಅತ್ಯುತ್ತಮ ಮಾರ್ಗವಾಗಿತ್ತು ಮತ್ತು ಈ ಬಗ್ಗೆ ನನಗೆ ಯಾವುದೇ ಸಂಕಟವಾಗುತ್ತಿಲ್ಲ. ದೇಶದ ವಿಭಜನೆಗಾಗಿ ಕಾಂಗ್ರೆಸಿನ ಹೊಣೆಗಾರಿಕೆಯನ್ನು ದೂರ ಮಾಡಲು ನಾನು ಯತ್ನಿಸುವುದಿಲ್ಲ. ವ್ಯಾಪಕ ಚರ್ಚೆಗಳ ನಂತರವೇ ನಾವು ಈ ಅಂತಿಮ ಹೆಜ್ಜೆಯನ್ನಿರಿಸಿದ್ದೆವು".

"ವಿಭಜನೆಯನ್ನು ನಾನು ಮೊದಲು ತೀವ್ರವಾಗಿ ವಿರೋಧಿಸಿದ್ದೆ,ಆದರೂ ಭಾರತವನ್ನು ಏಕತ್ರವಾಗಿರಿಸಲು ಅದನ್ನೀಗ ವಿಭಜಿಸಬೇಕು ಎನ್ನುವುದು ನನಗೆ ಮನದಟ್ಟಾಗಿದ್ದರಿಂದ ನಾನು ಅದಕ್ಕೆ ಒಪ್ಪಿಕೊಂಡಿದ್ದೆ. ಮೂರನೇ ಪಕ್ಷ ಅಂದರೆ ಬ್ರಿಟಿಷ್ ಅಧಿಕಾರದ ನಿರ್ಮೂಲನವು ಈ ಅಸಹನೀಯ ಸ್ಥಿತಿಯಿಂದ ಹೊರಬರಲು ಏಕೈಕ ಮಾರ್ಗವಾಗಿದೆ ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡಿತ್ತು. ಬ್ರಿಟಿಷರೇನೋ ತಾವು 1948, ಜೂನ್ ವೇಳೆಗೆ ಭಾರತವನ್ನು ತೊರೆಯುವುದಾಗಿ ಘೋಷಿಸಿದ್ದರು. ಆದರೆ ಆ ಅವಧಿ ದೀರ್ಘವಾಗಿತ್ತು. ಅಲ್ಲದೆ ಪ್ರಾಂತ್ಯಗಳಲ್ಲಿಯ ಅಧಿಕಾರಿಗಳಿಗೆ ತಾವು ಅಧಿಕಾರವನ್ನು ಹಸ್ತಾಂತರಿಸುವುದಾಗಿ ಭರವಸೆಯ ಅವರ ಹೇಳೀಕೆಯು ಅಸ್ಸಾಂ, ಪಂಜಾಬ ಮತ್ತು ಗಡಿನಾಡಿನಲ್ಲಿನ ಸಂಪುಟಗಳನ್ನು ಪದಚ್ಯುತಗೊಳಿಸುವ ತೀವ್ರ ಪ್ರಯತ್ನಗಳಿಗೆ ನಾಂದಿ ಹಾಡಿತ್ತು. ಲೀಗ್ ಪಂಜಾಬಿನಲ್ಲಿ ಯಶಸ್ವಿಯಾಗಿತ್ತು. ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಮತ್ತು ಅಮಾಯಕ ಜನರ ಹತ್ಯೆಗಳನ್ನು ತಡೆಯಲು ಕಾಂಗ್ರೆಸ್ ದೇಶದ ವಿಭಜನೆಗೆ ಒಪ್ಪಿಕೊಳ್ಳಲು ನಿರ್ಧರಿಸಿತು ಮತ್ತು ಪಂಜಾಬ್ ಹಾಗೂ ಬಂಗಾಳಗಳ ವಿಭಜನೆಗೆ ಆಗ್ರಹಿಸಿತ್ತು. ಇದು ಲೀಗ್‌ ನ ಬೆದರಿಕೆಗಳಿಗೆ ಶರಣಾಗತಿ ಅಥವಾ ತುಷ್ಟೀಕರಣ ನೀತಿಯಾಗಿರಲಿಲ್ಲ".

ಕಮ್ಯುನಿಸ್ಟರು ಮತ್ತು ಆರೆಸ್ಸೆಸ್ ಕುರಿತು

"ಈ ಕಮ್ಯುನಿಸ್ಟರೇಕೆ ಹೈದರಾಬಾದ್‌ನಲ್ಲಿ ತೊಂದರೆಯನ್ನು ಸೃಷ್ಟಿಸುತ್ತಿದ್ದಾರೆ?, ಅವರು ಬೆಳೆದಿದ್ದು ಹೇಗೆ? ಕಮ್ಯುನಿಸ್ಟ್‌ರಿಗೆ ನನ್ನ ಮನವಿ ವ್ಯರ್ಥವಾಗಬಹುದು, ಏಕೆಂದರೆ ಅವರು ಯಾರನ್ನೂ ಕೇಳುವುದಿಲ್ಲ. ಅವರು ಹಿಂಸೆಯನ್ನು ತ್ಯಜಿಸಿದರೆ ಮತ್ತು ವಿದೇಶಗಳಿಂದ ಸ್ಫೂರ್ತಿ ಪಡೆಯುವುದನ್ನು ನಿಲ್ಲಿಸಿದರೆ ಎಲ್ಲ ಕಮ್ಯುನಿಸ್ಟರನ್ನು ಕಾಂಗ್ರೆಸ್‌ ನಲ್ಲಿ ಸೇರಿಸಿಕೊಳ್ಳಲು, ಹಿಂದಿನದನ್ನು ಮರೆಯಲು ಮತ್ತು ಅವರಿಗೆ ಬಾಗಿಲುಗಳನ್ನು ಮುಕ್ತವಾಗಿರಿಸಲು ನಾನು ಸಿದ್ಧನಿದ್ದೇನೆ ಎಂದು ಹಿಂದಿನ ಸಲ ಜೈಲಿನಿಂದ ಬಿಡುಗಡೆಗೊಂಡ ತಕ್ಷಣ ನಾವು ಅವರಿಗೆ ತಿಳಿಸಿದ್ದೆ".

"ಇದು ನಾವು ನಿಭಾಯಿಸಬೇಕಿರುವ ಜನರ ಒಂದು ವರ್ಗವಾದರೆ ಇನ್ನೊಂದು ವರ್ಗ ಆರೆಸ್ಸೆಸ್ ಆಗಿದೆ. ನಿಮ್ಮ ಯೋಜನೆಗಳನ್ನು ಬದಲಿಸಿ, ಗೌಪ್ಯತೆಯನ್ನು ಬಿಡಿ, ಕೋಮು ಸಂಘರ್ಷವನ್ನು ತ್ಯಜಿಸಿ, ಭಾರತೀಯ ಸಂವಿಧಾನವನ್ನು ಗೌರವಿಸಿ, ರಾಷ್ಟ್ರಧ್ವಜಕ್ಕೆ ನಿಮ್ಮ ನಿಷ್ಠೆಯನ್ನು ತೋರಿಸಿ ಮತ್ತು ನಾವು ನಿಮ್ಮ ಮಾತುಗಳಲ್ಲಿ ವಿಶ್ವಾಸವಿರಿಸಬಹುದು ಎಂದು ನಾವು ನಂಬುವಂತೆ ಮಾಡಿ ಎಂದು ನಾನು ಅವರಿಗೆ ಬಹಿರಂಗವಾಗಿ ಕೊಡುಗೆಯನ್ನು ನೀಡಿದ್ದೆ. ಹೇಳುವುದೊಂದು,ಮಾಡುವುದೊಂದು ಎನ್ನುವ ಆಟ ನಡೆಯುವುದಿಲ್ಲ".

"ಮನೆಯು ಬೆಂಕಿಯಲ್ಲಿ ಸುಟ್ಟುಹೋಗದಂತೆ ನೋಡಿಕೊಳ್ಳುವ ಸಲುವಾಗಿ ನಾವು ಅವರಿಗೆ ಬೆಂಕಿಯೊಡನೆ ಆಟವಾಡಲು ಅವಕಾಶ ನೀಡುವುದಿಲ್ಲ.ಯುವಜನರು ಹಿಂಸಾಚಾರ ಮತ್ತು ವಿನಾಶಕಾರಿ ಕೃತ್ಯಗಳಲ್ಲಿ ತೊಡಗಿಕೊಳ್ಳಲು ಅವಕಾಶ ನೀಡುವುದು, ನಮ್ಮ ನೆರೆ ರಾಷ್ಟ್ರಗಳು ಕಲಿತ ಪಾಠಗಳನ್ನು ನಮ್ಮ ಮೇಲೆ ವ್ಯರ್ಥಗೊಳಿಸಲು ಬಿಡುವುದು ಅಪರಾಧವಾಗುತ್ತದೆ. ಹೀಗೆಂದು ನಾನು ಆರೆಸ್ಸೆಸ್ ಮತ್ತು ಕಮ್ಯುನಿಸ್ಟರಿಗೆ ಹೇಳಿದ್ದೇನೆ".

ಕೃಪೆ: www.deccanherald.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)