varthabharthi

ನಿಮ್ಮ ಅಂಕಣ

ಶೃಂಗೇರಿಯ ನೈಜ ಘಟನೆಯನ್ನೂ ಅವರು ನೆನಪಿಸಿಕೊಳ್ಳಬೇಕಿತ್ತು

ವಾರ್ತಾ ಭಾರತಿ : 31 Oct, 2019
-ಲಿಂಗರಾಜ ರಾವ್, ಕೆ. ಆರ್. ಮೊಹಲ್ಲಾ, ಮೈಸೂರು

  ಮಾನ್ಯರೇ,

ಎರಡು ಶತಮಾನಗಳ ಹಿಂದೆ ನರಕ ಚತುರ್ದಶಿಯಂದು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 800 ಜನ ಐಯ್ಯಂಗಾರ್ ಸಮುದಾಯದವರನ್ನು ಟಿಪ್ಪು ಸುಲ್ತಾನನ ಸೈನಿಕರು ಕೊಂದಿದ್ದರಿಂದ ಮೇಲುಕೋಟೆ ಬ್ರಾಹ್ಮಣರು ಪ್ರತಿ ವರ್ಷ ದೀಪಾವಳಿಯಂದು ಕಪ್ಪುದಿನ ಆಚರಿಸುತ್ತಾರೆ, ಹಾಗಾಗಿ ತಾನೂ ಈ ವರ್ಷ ದೀಪಾವಳಿ ಆಚರಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಮೊನ್ನೆ ವಿವಾದಾತ್ಮಕ ಟ್ವೀಟ್ ಮಾಡಿದರು. ಆದರೆ ಟಿಪ್ಪುಆಡಳಿತದಲ್ಲಿ ಈ ರೀತಿಯ ಕರಾಳ ಘಟನೆ ನಡೆದ ಬಗ್ಗೆ ಯಾವುದೇ ನೈಜ ದಾಖಲೆ ಲಭ್ಯವಿಲ್ಲ. ಮೇಲಾಗಿ ಟಿಪ್ಪುಸುಲ್ತಾನನ ಸೈನಿಕರಲ್ಲಿ ಶೇ.80 ಸೈನಿಕರು ಹಿಂದೂಗಳಾಗಿದ್ದರು. ಅದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮರಾಠರೂ ಇದ್ದರು. ಒಂದು ವೇಳೆ ಈ ಘಟನೆ ನಿಜ ಆಗಿದ್ದರೂ ಹಿಂದೂಗಳೇ ಹಿಂದೂಗಳನ್ನು ಕೊಂದಿದ್ದು ನಿಜ ತಾನೇ. ಅಷ್ಟೇ ಅಲ್ಲ, ಟಿಪ್ಪುವಿನ ಆಡಳಿತ ಕಾಲದಲ್ಲಿಯೇ ಕರ್ನಾಟಕದ ಇತಿಹಾಸದಲ್ಲಿ ಮರಾಠರ ಇನ್ನೊಂದು ಕರಾಳ ಕೃತ್ಯದ ದಾಖಲೆ ಇದೆ. 1796ರಲ್ಲಿ ದೀಪಾವಳಿಯ ದಿನವೇ ಇಸ್ವಿ ಅಚ್ಚ ಶೈವ ಚಿತ್ಪಾವಣ್ ಬ್ರಾಹ್ಮಣನಾದ 2ನೇ ಬಾಜಿರಾವ್ ಪೇಶ್ವೆಯು ಆದಿ ಶಂಕರರಿಂದಲೇ ಸ್ಥಾಪಿಸಲ್ಪಟ್ಟ ನಮ್ಮ ಶೃಂಗೇರಿ ಶಾರದಾ ಮಠದ ಮೇಲೆ ದಾಳಿ ಮಾಡಿದ್ದನು. ಆಗ ಬಾಜಿರಾವ್ ಪೇಶ್ವೆಯ ಮರಾಠಾ ಸೈನಿಕರು ಶೃಂಗೇರಿ ಮಠದ ಸಂಪತ್ತನ್ನು ಲೂಟಿ ಮಾಡುವಾಗ ವಿರೋಧಿಸಿದ ಶೃಂಗೇರಿಯ ನೂರಾರು ಬ್ರಾಹ್ಮಣರನ್ನು ಪೇಶ್ವೆಯ ಸೈನಿಕರು ಕೊಂದರು ಮತ್ತು ಶೃಂಗೇರಿ ಮಠದಲ್ಲಿದ್ದ ಅಗಾಧ ಸಂಪತ್ತನ್ನು 50 ಕುದುರೆ ಗಾಡಿಗಳಲ್ಲಿ ಹೇರಿ ತನ್ನ ರಾಜಧಾನಿ ಪುಣೆಗೆ ಕೊಂಡು ಹೋದರು. ಅಲ್ಲಿ ಅಷ್ಟೊಂದು ಬೃಹತ್ ಪ್ರಮಾಣದ ಸಂಪತ್ತು ಇತ್ತಂತೆ. ಆದರೆ ನಂತರ ಆ ಶೃಂಗೇರಿ ಮಠವನ್ನು ರಿಪೇರಿ ಮಾಡಿಸಿ ಪೇಶ್ವೆ ಲೂಟಿ ಮಾಡಿದಷ್ಟು ಮೊತ್ತದ ಸಂಪತ್ತನ್ನು ಶೃಂಗೇರಿ ಮಠಕ್ಕೆ ತುಂಬಿಸಿ ಕೊಟ್ಟಿದ್ದು ಟಿಪ್ಪುಸುಲ್ತಾನ್ ಎಂದು ಶೃಂಗೇರಿ ಮಠದಲ್ಲಿಯೇ ಲಿಖಿತ ದಾಖಲೆ ಇದೆ. ಮೇಲುಕೋಟೆಯ ಕಾಲ್ಪನಿಕ ಘಟನೆಯ ಜೊತೆ ಶೃಂಗೇರಿ ನೈಜ ಘಟನೆಯನ್ನೂ ಡಿಸಿಎಂ ಅಶ್ವತ್ಥ ನಾರಾಯಣರು ದೀಪಾವಳಿಯಂದು ನೆನಪಿಸಿಕೊಂಡಿದ್ದರೆ ಅವರ ಇತಿಹಾಸದ ಜ್ಞಾನವನ್ನು ಹಾಗೂ ನ್ಯಾಯಪರತೆಯನ್ನು ಒಪ್ಪಿಕೊಳ್ಳಬಹುದಿತ್ತು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)