varthabharthi


ವಿಶೇಷ-ವರದಿಗಳು

ಯಡಿಯೂರಪ್ಪರಿಗೆ ಟಿಪ್ಪು ಪತ್ರ

ವಾರ್ತಾ ಭಾರತಿ : 2 Nov, 2019
ಕೆ. ಪಿ. ಸುರೇಶ್ ಕಂಜರ್ಪಣೆ

ಕರ್ನಾಟಕದ ಬಾದಶಹರಾದ ಯಡಿಯೂರಪ್ಪನವರಿಗೆ ಮೈಸೂರು ಎಕ್ಸ್ ಸುಲ್ತಾನರಾದ ಟಿಪ್ಪುಸುಲ್ತಾನರು ಬರೆದ ಲಿಖಿತ ಪತ್ರವು

ಅದಾಗಿ ಪರಮದಯಾಳು ದೇವರು ನಿಮ್ಮನ್ನು ಶತ್ರುಗಳಿಂದ ರಕ್ಷಿಸಲಿ. ನಾವು ಶಿವಾಯ್ ಆಳಿದ ದೇಶಕ್ಕಿಂತ ವಿಸ್ತಾರವೂ ಸಂಪನ್ನವೂ ಆದ ದೇಶವನ್ನು ನೀವು ಆಳುತ್ತಿರುವುದು ನಮಗೆ ಸಂತೋಷದ ಸಂಗತಿಯೇ ಆಗಿದೆ.

ಈ ಪತ್ರದ ಉದ್ದೇಶವೆಂದರೆ ನೀವು ಮೆಹರ್ ಬಾನಿ ಮಾಡಿ ನಾವು ನಮ್ಮ ಇಜ್ಜತಿ ಆಳ್ವಿಕೆ ಕಾಲದಲ್ಲಿ ಮಾಡಿದ್ದ ಕೆಲವು ಕೆಲಸಗಳನ್ನು ಮುಂದುವರಿಸಿ ಆಚಂದ್ರಾರ್ಕವಾಗಿ ಉಳಿಸೋ ಹಾಗೆ ಮಾಡಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ.

ಈ ಪ್ರಕಾರ

1.ನಾವು ಕರ್ನಾಟಕದ ಜಾನುವಾರು ತಳಿಯಾದ ಅಮೃತ ಮಹಲ್ ಎಂಬ ಬಲು ಪಸಂದ್ ಜಾತಿ ಬೆಳೆಸಲುವರೇ ಅಮೃತಮಹಲ್ ಕಾವಲ್ ಎಂಬ ಗೋಚಾರ ಜಮೀನು ಅಲ್ಲಲ್ಲಿ ಬಿಟ್ಟಿದ್ದು ಅದು ಪರಭಾರೆಯಾಗ್ತಿರೋ ಸಂಗತಿ ನಮಗೆ ಭಾಳ ಖೇದ ತಂದಿರುತ್ತಿದ್ದು ತಾವು ವಿಶೇಷ ಮಮಕಾರ ತೋರಿಸಿ ಅವುಗಳನ್ನು ಸಂರಕ್ಷಿಸಿ ನಮಗೆ ಪ್ರಿಯವಾಗಿದ್ದ ಅಮೃತಮಹಲ್ ಜಾನುವಾರುಗಳ ಸಂತತಿ ಬೆಳೆಸಿ ದೇವರಕೃಪೆಗೆ ಪಾತ್ರರಾಗಬೇಕು.

2. ನಮ್ಮ ಗುರುಗಳಾದ ಶೃಂಗೇರಿ ಮಹಾಸ್ವಾಮಿಯವರಿಗೆ ಸಲಾಂ ಹೇಳಿ, ನಾವುಗಳು ಕೇಳಿದಂತೆ ತಾವೂ ಅವರ ಆಶೀರ್ವಾದ ಪಡೆದು ಸನ್ನಡತೆಯಲ್ಲಿ ಆಳ್ವಿಕೆ ಮಾಡಬೇಕು

3. ಚನ್ನಪಟ್ಟಣಾದಿಯಾಗಿ ನಮ್ಮ ರಾಜ್ಯದ ಗುರ್ತು ಬಾಂಧು ಸಮೇತ ಹಲವು ಪ್ರಾಂತಗಳಲ್ಲಿ ನಾವು ಕೈಗಾರಿಕೆ ಸ್ಥಾಪನೆಗೆ ಸಹಾಯ ಮಾಡಿದ್ದು ತಾವು ಅದನ್ನು ಊರ್ಜಿತಮಾಡಬೇಕಾಗಿ ಮೊಕ್ತಾ ಒತ್ತಾಯ ಮಾಡುತ್ತಿದ್ದೇವೆ.

4. ಬಳ್ಳಾರಿಯಲ್ಲಿ ನಾವು ಬಲು ಖಾಯಸ್ಸು ಪಟ್ಟು ಕೋಟೆ ಊರ್ಜಿತ ಮಾಡಿದ್ದು ಈಗ ಅಲ್ಲಿ ಕಬ್ಬಿಣದ ಅದಿರು ಕದ್ದು ಸಾಗಿಸೋದು ನಡೆದು ಬಾದಶಾಹ ಖಜಾನೆಗೆ ಭಾರೀ ಲುಕ್ಸಾನು ಆಗಿತ್ತೆಂದು ಕೇಳಲ್ಪಟ್ಟಿತು. ತಾವು ನಮ್ಮಂತೇ ಈ ದುಷ್ಟ ಲೂಟಿಕೋರರನ್ನು ನಿಷ್ಕರುಣೆಯಿಂದ ಶಿಕ್ಷಿಸಿ ಸರ್ವಶಕ್ತ ಭಗವಂತನ ಕೃಪೆಗೆ ಪಾತ್ರರಾಗಬೇಕು.

5. ಅದಾಗಿ ನಾವು ಮೈಸೂರು ಹುಲಿ ಅಂತ ನಮ್ಮ ಪರಮಶತ್ರುಗಳಾದ ಪರಂಗಿ ಬ್ರಿಟಿಷರು(ಸರ್ವಋಶಕ್ತ ದೇವರು ಅವರನ್ನು ನಾಶ ಮಾಡಲಿ) ಕರೆಯುತ್ತಾ ಇದ್ದುದು ಸರಿಯಷ್ಟೇ. ಈಗ ಮೈಸೂರಲ್ಲಿ ಸಿಂಹ ಇದೆಯೆಂಬ ವರ್ತಮಾನ ನಮ್ಮಗಳಿಗೆ ಬರಲಾಗಿ, ಮೈಸೂರಿನಲ್ಲಿ ಸಿಂಹ ಇರಲಿಲ್ಲಾ.. ಜಾಸೂ ವರದಿಪ್ರಕಾರ ಅಲ್ಲಿರೋ ಸಿಂಹಗಳೆಲ್ಲಾ ಸರ್ಕಸ್‌ನಿಂದ ಬಂದಿರೋದು. ಆದ್ದರಿಂದ ತಾವು ಈ ಕ್ಷಣದಿಂದಲೇ ಸಿಂಹವನ್ನು ಬೋನಿಗೆ ತಳ್ಳಿ ಮೈಸೂರು ಹುಲಿ ಎಂಬ ಬಿರುದನ್ನು ತಾವು ಧಾರಣ ಮಾಡಲು ನಮ್ಮ ಅಭ್ಯಂತರ ಇರುವುದಿಲ್ಲಾ..

6. ಯಾಕೆಂದರೆ ತಾವು ನಮ್ಮಂತೆಯೇ ವೇಶಭೂಷಣ ಮಾಡಿಕೊಂಡು ಫೋಟೋ ತೆಗೆಸಿ ನಮಗೆ ಹುಕುಂ ಮರ್ಯಾದಿ ಕೊಟ್ಟಿರುವುದು ನಮಗೆ ಮನ್ ಪಸಂದ್ ಆಗಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)