varthabharthi


ಆರೋಗ್ಯ

ಅನಿಯಮಿತ ಹೃದಯಬಡಿತ: ಕಾರಣಗಳು ಮತ್ತು ಲಕ್ಷಣಗಳು

ವಾರ್ತಾ ಭಾರತಿ : 2 Nov, 2019

ಎರಿತ್ಮಿಯಾ ಅಥವಾ ಅನಿಯಮಿತ ಹೃದಯಬಡಿತವು ಸಾಮಾನ್ಯವಾಗಿದ್ದು,ಅದು ಎಲ್ಲಿಯವರೆಗೆ ಶರೀರದಲ್ಲಿ ರಕ್ತ ಸಂಚಾರದಲ್ಲಿ ಹಸ್ತಕ್ಷೇಪವನ್ನುಂಟು ಮಾಡುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅದು ರಕ್ತಸಂಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ಶ್ವಾಸಕೋಶಗಳು,ಮಿದುಳು ಮತ್ತು ಇತರ ಅಂಗಾಂಗಗಳಿಗೆ ಹಾನಿಗೆ ಕಾರಣವಾಗುತ್ತದೆ. ಎರಿತ್ಮಿಯಾಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ಮಾರಣಾಂತಿಕವೂ ಆಗಬಹುದು.

► ಕಾರಣಗಳು

ಎರಿತ್ಮಿಯಾ ಹೃದಯ ಬಡಿತದ ಲಯದ ಮೇಲೆ ಪರಿಣಾಮವನ್ನುಂಟು ಮಾಡುವ ಹೃದಯರೋಗವಾಗಿದೆ. ಹೃದಯ ಬಡಿತಗಳನ್ನು ನಿಯಂತ್ರಿಸುವ ವಿದ್ಯುತ್ ಪ್ರಚೋದನೆಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಹೃದಯ ಬಡಿತ ಅನಿಯಮಿತಗೊಳ್ಳುತ್ತದೆ ಮತ್ತು ಹೃದಯವು ಅತಿ ನಿಧಾನವಾಗಿ ಅಥವಾ ಅತಿ ವೇಗವಾಗಿ ಹೊಡೆದುಕೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ ಎರಿತ್ಮಿಯಾ ಮಿದುಳಿನ ಆಘಾತ ಅಥವಾ ಹೃದಯಘಾತಕ್ಕೆ ಕಾರಣವಾಗುತ್ತದೆ.

ಅಧಿಕ ರಕ್ತದೊತ್ತಡ, ಮಧುಮೇಹ, ಹೈಪರ್ ಥೈರಾಯ್ಡಿಸಂ, ಹೈಪೊ ಥೈರಾಯ್ಡಿಸಂ, ರಕ್ತ ಕಟ್ಟಿ ಹೃದಯ ಸ್ತಂಭನ, ಮಾದಕ ದ್ರವ್ಯಗಳ ಸೇವನೆ, ಮಾನಸಿಕ ಒತ್ತಡ, ಮದ್ಯಪಾನ, ಧೂಮ್ರಪಾನ, ಅತಿಯಾದ ಕೆಫೀನ್ ಸೇವನೆ, ಸ್ಲೀಪ್ ಆಪ್ನಿಯಾ, ಹಿಂದಿನ ಹೃದಯಾಘಾತದಿಂದ ಹೃದಯದ ಅಂಗಾಂಶಕ್ಕೆ ಹಾನಿ,ಪರಿಧಮನಿಯ ಕಾಯಿಲೆ,ಕೆಲವು ಔಷಧಿಗಳು ಮತ್ತು ಪೂರಕಗಳು ಇತ್ಯಾದಿಗಳು ಎರಿತ್ಮಿಯಾಕ್ಕೆ ಇತರ ಕಾರಣಗಳಾಗಿವೆ.

ಏಟ್ರಿಯಲ್ ಫೈಬ್ರಿಲೇಷನ್ ಅಥವಾ ಹೃತ್ಕರ್ಣದ ಕಂಪನ, ಬ್ರಾಡಿಕಾರ್ಡಿಯಾ(ಅತಿ ನಿಧಾನ ಹೃದಯ ಬಡಿತ), ಟಾಕಿಕಾರ್ಡಿಯಾ (ಅತಿ ವೇಗದ ಹೃದಯ ಬಡಿತ), ವೆಂಟ್ರಿಕ್ಯುಲರ್ ಫೈಬ್ರಿಲೇಷನ್ ಅಥವಾ ಕುಹರದ ಕಂಪನ ಮತ್ತು ಪ್ರಿಮ್ಯಾಚ್ಯೂರ್ ಕಾಂಟ್ರಾಕ್ಷನ್ ಅಥವಾ ಅಕಾಲಿಕ ಸಂಕೋಚನ ಇವು ಎರಿತ್ಮಿಯಾದ ವಿವಿಧ ರೂಪಗಳಾಗಿವೆ.

► ಲಕ್ಷಣಗಳು

ಕೆಲವರಲ್ಲಿ ಎರಿತ್ಮಿಯಾದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ, ಆದರೆ ಇಸಿಜಿಯಲ್ಲಿ ಅದನ್ನು ಪತ್ತೆ ಹಚ್ಚಬಹುದು. ಎರಿತ್ಮಿಯಾದಲ್ಲಿ ಐದು ವಿಧಗಳಿವೆಯಾದರೂ, ಹೃದಯ ಬಡಿತ ಸಂಕೋಚನಗಳು, ತಲೆ ಸುತ್ತುವಿಕೆ, ಉಸಿರಾಟದ ತೊಂದರೆ, ಎದೆನೋವು, ಬವಳಿ ಬರುವಿಕೆ, ನಿಶ್ಶಕ್ತಿ, ಗೊಂದಲ, ಏಕಾಗ್ರತೆಗೆ ತೊಂದರೆ, ವ್ಯಾಯಾಮ ಮಾಡುವಾಗ ಕಷ್ಟ, ಬಳಲಿಕೆ, ತಲೆ ಹಗುರವಾಗುವಿಕೆ, ಬೆವರುವಿಕೆ, ಎದೆ ಡವಗುಡುವುದು ಇವು ಪ್ರಮುಖ ಲಕ್ಷಣಗಳಾಗಿವೆ.

► ಎರಿತ್ಮಿಯಾದ ಅಪಾಯಗಳು

ಹೃದಯ ಬಡಿತವು ಅಸಹಜವಾಗಿದ್ದಾಗ ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಹೃದಯಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಇದು ರಕ್ತಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಹೀಗೆ ಹೆಪ್ಪುಗಟ್ಟಿದ ರಕ್ತವು ಹೃದಯದಿಂದ ಮಿದುಳಿಗೆ ಪ್ರಯಾಣಿಸಿದರೆ ಅದು ಅಪಧಮನಿಯಲ್ಲಿ ತಡೆಯನ್ನುಂಟು ಮಾಡುತ್ತದೆ. ಇದು ಆಮ್ಲಜನಕವು ಮಿದುಳನ್ನು ತಲುಪುವುದನ್ನು ತಡೆಯುತ್ತದೆ ಮತ್ತು ಆಘಾತವನ್ನುಂಟು ಮಾಡುತ್ತದೆ. ಏಟ್ರಿಯಲ್ ಫೈಬ್ರಿಲೇಷನ್ ಹೃದಯ ವೈಫಲ್ಯವನ್ನುಂಟು ಮಾಡಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)