varthabharthi


ಅಂತಾರಾಷ್ಟ್ರೀಯ

ಜಗತ್ತನ್ನು ಉನ್ನತ ಮಾರ್ಗದಲ್ಲಿ ಒಯ್ಯಲಿರುವ ಭಾರತೀಯ ಮೌಲ್ಯಗಳು: ಥಾಯ್ಲೆಂಡ್‌ನಲ್ಲಿ ಮೋದಿ

ವಾರ್ತಾ ಭಾರತಿ : 2 Nov, 2019

ಬ್ಯಾಂಕಾಕ್, ನ. 2: ಮುಂದಿನ ವರ್ಷಗಳಲ್ಲಿ ಭಾರತೀಯ ಮೌಲ್ಯಗಳು ಜಗತ್ತನ್ನು ಉನ್ನತ ಮಾರ್ಗದಲ್ಲಿ ಒಯ್ಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಥಾಯ್ಲೆಂಡ್ ಪ್ರವಾಸದ ಮೊದಲ ದಿನವಾದ ಶನಿವಾರ ‘ಸ್ವಸ್ದೀ ಪಿಎಂ ಮೋದಿ’ ಎಂಬ ಭಾರತೀಯರೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೇಳಿದರು.

‘‘ಇದು ಥಾಯ್ಲೆಂಡ್‌ಗೆ ನನ್ನ ಮೊದಲ ಅಧಿಕೃತ ಭೇಟಿಯಾಗಿದೆ. ಇಲ್ಲಿ ನಾನು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯತೆಯನ್ನು ಅನುಭವಿಸುತ್ತಿದ್ದೇನೆ. ಇಡೀ ಜಗತ್ತು ಭಾರತದೊಂದಿಗೆ ದೀಪಾವಳಿ ಆಚರಿಸಿದೆ. ಇಲ್ಲಿ ಕೂಡಾ ಅದನ್ನು ನಾನು ನೋಡುತ್ತಿದ್ದೇನೆ’’ ಎಂದು ಮೋದಿ ನುಡಿದರು. ಭಾರತ ಮತ್ತು ಥಾಯ್ಲೆಂಡ್ ನಡುವಿನ ಪ್ರಬಲ ಬಾಂಧವ್ಯವನ್ನು ಪ್ರಸ್ತಾಪಿಸಿದ ಅವರು, ರಾಣಿ ಮಹಾ ಚಕ್ರಿ ಸಿರಿನ್‌ಡೋರ್ನ್ ಕೂಡ ಸಂಸ್ಕೃತ ವಿದ್ವಾಂಸೆಯಾಗಿದ್ದಾರೆ ಹಾಗೂ ಭಾರತದೊಂದಿಗೆ ಗಾಢ ಸಂಪರ್ಕ ಹೊಂದಿದ್ದಾರೆ ಎಂದರು.

ಭಾರತದ ಈಶಾನ್ಯ ವಲಯವನ್ನು ಆಗ್ನೇಯ ಏಶ್ಯದ ಹೆಬ್ಬಾಗಿಲನ್ನಾಗಿ ಮಾಡುವ ಮೂಲಕ, ಭಾರತ-ಥಾಯ್ಲೆಂಡ್ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ನನ್ನ ಸರಕಾರ ಬಯಸಿದೆ ಎಂದು ಮೋದಿ ತಿಳಿಸಿದರು.

‘‘ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ ಆರಂಭಗೊಂಡ ಬಳಿಕ, ನಮ್ಮ ಎರಡು ದೇಶಗಳ ನಡುವೆ ತಡೆಯಿಲ್ಲದ ಸಂಪರ್ಕ ಏರ್ಪಡುತ್ತದೆ. ನೀವೆಲ್ಲರೂ ಈ ಕತೆಯ ಭಾಗವಾಗುತ್ತೀರಿ ಎನ್ನುವುದಕ್ಕೆ ನನಗೆ ಸಂತೋಷವಾಗುತ್ತದೆ’’ ಎಂದರು.

ಶನಿವಾರ ಬ್ಯಾಂಕಾಕ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯನ್ನು ಥಾಯ್ಲೆಂಡ್ ಅಧಿಕಾರಿಗಳು ಸ್ವಾಗತಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)