varthabharthi


ಸಿನಿಮಾ

ಹೌಸ್‌ಫುಲ್ ನಲ್ಲಿ ಅಕ್ಷಯ್ ದಾಖಲೆ

ವಾರ್ತಾ ಭಾರತಿ : 3 Nov, 2019

ಬಾಲಿವುಡ್‌ನ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ತನ್ನ ಚಿತ್ರಬದುಕಿನ ಗೆಲುವಿನ ಕಿರೀಟಕ್ಕೆ ಈಗ ಇನ್ನೊಂದು ಗರಿ ಸೇರ್ಪಡೆಗೊಂಡಿದೆ. ಒಂದರ ಹಿಂದೆ ಒಂದರಂತೆ ಸತತವಾಗಿ ಶತಕೋಟಿ ಕ್ಲಬ್‌ಗೆಸೇರ್ಪಡೆಗೊಂಡ 5 ಚಿತ್ರಗಳ ನಾಯಕನೆಂಬ ದಾಖಲೆಯನ್ನು ಅಕ್ಷಯ್ ತನ್ನದಾಗಿಸಿಕೊಂಡಿದ್ದಾರೆ. ಹೌದು. ಕಳೆದ ವಾರ ತೆರೆಕಂಡ ಅಕ್ಷಯ್ ಅಭಿನಯದ ‘ಹೌಸ್‌ಫುಲ್ 4’ ನಾಲ್ಕು ದಿನಗಳಲ್ಲಿ 100 ಕೋಟಿ ರೂ. ಬಾಚಿಕೊಂಡಿದೆ. ಪಕ್ಕಾ ಕಾಮಿಡಿ ಮನರಂಜನೆಯಿಂದ ಕೂಡಿದ ‘ಹೌಸ್‌ಫುಲ್ 4’ ಬಿಡುಗಡೆಗೊಂಡ ಥಿಯೇಟರ್‌ಗಳೆಲ್ಲಾ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ.

ಈ ವರ್ಷ ಬಿಡುಗಡೆಯಾದ ಅಕ್ಷಯ್ ಅಭಿನಯದ ಚಿತ್ರಗಳಾದ ಕೇಸರಿ, ಮಿಶನ್ ಮಂಗಲ್ ಹಾಗೂ ಈಗ ಹೌಸ್‌ಫುಲ್ 4 ಸೆಂಚುರಿ ಕ್ಲಬ್‌ಗೆ ಸೇರ್ಪಡೆಗೊಂಡಿತ್ತು. ಕಳೆದ ವರ್ಷ ಅವರು ನಟಿಸಿದ ಚಿತ್ರಗಳಾದ 2.0 ಹಾಗೂ ಗೋಲ್ಡ್ ಕೂಡಾ ನೂರು ಕೋಟಿ ರೂ.ಗಳಿಸಿದ್ದವು.

ಹೌಸ್‌ಫುಲ್ 4 ಬಗ್ಗೆ ವಿಮರ್ಶಕರಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಮಾತ್ರ ಈ ಹಾಸ್ಯಮಯ ಚಿತ್ರಕ್ಕೆ ಭರ್ಜರಿಯಾದ ಸ್ವಾಗತವನ್ನು ನೀಡಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಜಾದಿನಗಳಿದ್ದುದು, ಚಿತ್ರವು ದಾಖಲೆಯ ಗಳಿಕೆಯನ್ನು ಕಾಣಲು ಅನುಕೂಲವಾಯಿತು.

ಫರ್ಹಾದ್ ಸಾಮ್ಜಿ ನಿರ್ದೇಶನದ ಹೌಸ್‌ಫುಲ್ 4ನಲ್ಲಿ ಜನಪ್ರಿಯ ನಟ,ನಟಿಯರ ಭರ್ಜರಿ ತಾರಾಗಣವೇ ಇದೆ. ಅಕ್ಷಯ್‌ಕುಮಾರ್ ಜೊತೆಗೆ ಕೃತಿ ಸನೂನ್, ರಿತೇಶ್ ದೇಶ್‌ಮುಖ್, ಕೃತಿ ಖರಬಂದಾ, ಬಾಬ್ಬಿ ಡಿಯೋಲ್, ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೌಸ್‌ಫುಲ್ ಸರಣಿಯ ಹಿಂದಿನ ಚಿತ್ರಗಳು ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸನ್ನು ಕಂಡಿವೆ. ಅಂದಹಾಗೆ ಕಳೆದ ವಾರ ಬಿಡುಗಡೆಯಾದ ರಾಜ್‌ಕುಮಾರ್ ರಾವ್ ನಿರ್ದೇಶನದ ‘ಮೇಡ್ ಇನ್ ಚೀನಾ’ ಹಾಗೂ ತಾಪ್ಸಿ ಪನ್ನು-ಭೂಮಿ ಪೆಡ್ನೇಕರ್ ಅಭಿನಯದ ‘ಸಾಂಡ್ ಕಿ ಆಂಖ್’ ಚಿತ್ರಗಳ ಪ್ರಬಲ ಪೈಪೋಟಿಯ ನಡುವೆಯೂ ಹೌಸ್‌ಫುಲ್ 4 ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)