varthabharthi


ವೈವಿಧ್ಯ

ಚರಿತ್ರೆ ರಚನೆ ಮತ್ತು ವಸ್ತು ನಿಷ್ಠತೆ

ವಾರ್ತಾ ಭಾರತಿ : 4 Nov, 2019
ಬಾರ್ಕೂರು ಉದಯ, ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ

ಚಾರಿತ್ರಿಕ ಘಟನೆಗಳನ್ನು ಮರು ನಿರೂಪಣೆಗೆ ಒಳಪಡಿಸುವಾಗ ಇತಿಹಾಸಕಾರ ಪೂರ್ವಗೃಹ ಪೀಡಿತನಾಗಿರಬಾರದು, ದಾಖಲೆಗಳನ್ನು ತಿರುಚಿ ಅರ್ದ ಸತ್ಯವನ್ನು ಪೂರ್ಣ ಸತ್ಯವೆಂದು ಸಮರ್ಥಿಸುವುದು, ಘಟನೆಯನ್ನು ಇನ್ಯಾವುದೋ ಕಾರಣಕ್ಕೆ ವೈಭವೀಕರಿಸಿ ಕಪೋಲ ಕಲ್ಪಿತವಾದುದೆಂದು ವಾದಿಸುವುದು ಇತಿಹಾಸ ರಚನಾ ಪರಂಪರೆಗೆ ವಿರುದ್ಧವಾದುದು.

ಚಾರಿತ್ರಿಕ ಸತ್ಯ ಎಂದರೇನು? ಖ್ಯಾತ ಇತಿಹಾಸಕಾರರಾದ ಜೆಪ್ರಿ ಎಲ್ಟನ್ ಮತ್ತು ಇ.ಎಚ್.ಕಾರ್‌ರವರಿಗೆ ಚಾರಿತ್ರಿಕ ಸತ್ಯವೆಂಬುದು ಗತದಲ್ಲಿ ನಡೆದಿರುವ ಘಟನೆಯಾಗಿದ್ದು, ಆ ಘಟನೆ ಬಿಟ್ಟು ಹೋದ ಆಧಾರಗಳನ್ನು ಬಳಸಿ ವರ್ತಮಾನ ಕಾಲದಲ್ಲಿ ಇತಿಹಾಸಕಾರ ಆ ಘಟನೆಯನ್ನು ಮರು ನಿರೂಪಣೆಗೆ ಒಳಪಡಿಸಿ ಎಲ್ಲರಿಗೂ ಒಪ್ಪಿಗೆಯಾಗುವ ಸಂಕಥನವನ್ನು ಮಾಡುತ್ತಾನೆ ಎಂದು ದೃಢೀಕರಿಸುತ್ತಾರೆ. ಅವರ ಪ್ರಕಾರ ಈ ಬಗೆಯ ಕಾರ್ಯಯೋಜನೆಯಲ್ಲಿ ಯಶಸ್ವಿಯಾಗಿ ತೊಡಗಿಸಿಕೊಳ್ಳುವಾಗ ಇತಿಹಾಸಕಾರ ತನ್ನಲ್ಲಿರುವ ಎಲ್ಲಾ ಪೂರ್ವಗೃಹಗಳನ್ನು ದೂರವಿಟ್ಟು ನಿರ್ಲಿಪ್ತವಾಗಿ ದಾಖಲೆಗಳನ್ನು ತೆರೆದ ಮನಸ್ಸಿನಿಂದ ಓದುವ ಪ್ರವೃತ್ತಿ ಅನುಸರಿಸಬೇಕು ಎಂದು ಅವರು ಹೇಳುತ್ತಾರೆ. ಸೈದ್ಧಾಂತಿಕ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾದ ಇತಿಹಾಸಕಾರ ಎಂದೂ ಚಾರಿತ್ರಿಕ ಘಟನೆಯ ಕುರಿತು ವಸ್ತುನಿಷ್ಠವಾದ ಕಥನವನ್ನು ನಿರೂಪಿಸಲು ಸಾಧ್ಯವಾಗುವುದಿಲ್ಲವೆಂದು ಎಲ್ಟನ್ ವಾದಿಸುತ್ತಾರೆ. ಅವರ ಪ್ರಕಾರ ಗತದಲ್ಲಿ ನಡೆದಿರುವ ಘಟನೆಯು ಬಿಟ್ಟು ಹೋದ ದಾಖಲೆಯನ್ನು ಇತಿಹಾಸಕಾರ ಓದುವಾಗ, ಆ ಕಾಲಕ್ಕೆ ಸೀಮಿತಗೊಳಿಸಿ ಅಂದಿನ ಪರಿಸರಕ್ಕೆ ಅನುಗುಣವಾಗಿ ತನ್ನ ನಿರ್ಣಯವನ್ನು ಮಂಡಿಸಬೇಕು. ಘಟನೆ ಎಂದೋ ನಡೆದಿರುತ್ತದೆ, ಅದನ್ನು ವರ್ತಮಾನ ಕಾಲದಲ್ಲಿ ಪುನಃ ಮಂಡನೆ/ಅನುಭವಿಸಲು ಅಸಾಧ್ಯವಾದುದಾಗಿದ್ದು, ಇತಿಹಾಸಕಾರ ಆ ಘಟನೆ ಕುರಿತು ಬರೆಯುವಾಗ ವರ್ತಮಾನ ಕಾಲದ ಪರಿಸರಕ್ಕೆ ಸಂಬಂಧಿಸಿ ಮಾತನಾಡುವುದು ಚರಿತ್ರೆರಚನಾ ಪರಂಪರೆಗೆ ವಿರುದ್ಧವಾದುದೆಂದು ವಾದಿಸುತ್ತಾರೆ ಎಲ್ಟನ್. ಹಾಗಾಗಿ, ಇತಿಹಾಸಕಾರನ ಪ್ರಶ್ನೆಗಳು ವರ್ತಮಾನದ ಕಾಲದಲ್ಲಿ ಪ್ರಚಲಿತವಿರುವ ಸಿದ್ಧಾಂತಗಳು ಮತ್ತು ಚಿಂತನೆಗಳ ಪ್ರಭಾವದಿಂದಲ್ಲ ಬದಲಾಗಿ ಚಾರಿತ್ರಿಕ ದಾಖಲೆಗಳಲ್ಲಿ ಅಡಕವಾಗಿರುವ ಮಾಹಿತಿ ಕಣಜಗಳಿಂದ ಎಂದು ಎಲ್ಟನ್ ಮತ್ತು ಇ.ಎಚ್.ಕಾರ್ ಸಮರ್ಥಿಸುತ್ತಾರೆ. ಅಂದರೆ, ಚಾರಿತ್ರಿಕ ಘಟನೆಗಳನ್ನು ಮರು ನಿರೂಪಣೆಗೆ ಒಳಪಡಿಸುವಾಗ ಇತಿಹಾಸಕಾರ ಪೂರ್ವಗೃಹ ಪೀಡಿತನಾಗಿರಬಾರದು, ದಾಖಲೆಗಳನ್ನು ತಿರುಚಿ ಅಧರ್ ಸತ್ಯವನ್ನು ಪೂರ್ಣ ಸತ್ಯವೆಂದು ಸಮರ್ಥಿಸುವುದು, ಘಟನೆಯನ್ನು ಇನ್ಯಾವುದೋ ಕಾರಣಕ್ಕೆ ವೈಭವೀಕರಿಸಿ ಕಪೋಲ ಕಲ್ಪಿತವಾದುದೆಂದು ವಾದಿಸುವುದು ಇತಿಹಾಸ ರಚನಾ ಪರಂಪರೆಗೆ ವಿರುದ್ಧವಾದುದೆಂಬುದನ್ನು ಈ ಕೆಳಗಿನ ಒಂದು ದೃಷ್ಠಾಂತವನ್ನು ಉದಾಹರಣೆಯಾಗಿ ವಿಶ್ಲೇಷಿಸಲಾಗಿದೆ.

ಜನವರಿ, 11ನೇ ತಾರೀಕು 2000ರಂದು ಲಂಡನ್‌ನ ಉಚ್ಚನ್ಯಾಯಾಲಯ ಒಂದು ಮೊಕದ್ದಮೆಯನ್ನು ತನಿಖೆಗೆ ಕೈಗೆತ್ತಿಕೊಳ್ಳುತ್ತದೆ. ಈ ಮೊಕದ್ದಮೆಯ ಪ್ರತಿವಾದಿ ಸ್ಥಾನದಲ್ಲಿ ಇದ್ದವರು ಅಮೇರಿಕದ ಶೈಕ್ಷಣಿಕ ವಲಯದಲ್ಲಿ ಗುರುತಿಸಿಕೊಂಡ ಖ್ಯಾತ ಇತಿಹಾಸಗಾರ್ತಿ ದೇಬೋರಾ ಲಿಪ್‌ಸ್ಟಡ್ ಮತ್ತು ಅವರು ಬರೆದ ಡಿನೈಯಿಂಗ್ ದಿ ಹೋಲೋಕೊಸ್ಟ್‌ಃ ದಿ ಗ್ರೋಯಿಂಗ್ ಅಸಾಲ್ಟ್ ಆನ್ ಟ್ರುತ್ ಎಂಡ್ ಮೆಮೊರಿ ಎಂಬ ಉದ್ಗ್ರಂಥವನ್ನು ಪ್ರಕಟಿಸಿರುವ ಪೆಂಗ್ವಿನ್ ಬುಕ್ಸ್ ಪ್ರಕಾಶಕರು. ಈ ಮೊಕದ್ದಮೆಯ ಪಿರ್ಯಾದಿದಾರರು ಬ್ರಿಟಿಷ್ ಬರಹಗಾರ ಹಾಗೂ ಪತ್ರಕರ್ತ ಡೇವಿಡ್ ಇರ್ವಿಂಗ್. ಇವರು, ಎರಡನೇ ಜಾಗತಿಕ ಯುದ್ಧವನ್ನು ಕೇಂದ್ರೀಕರಿಸಿದ ಅನೇಕ ಚಾರಿತ್ರಿಕ ಘಟನೆಗಳನ್ನು ಒಳಗೊಂಡು, ಜರ್ಮನಿಯ ಹಿಟ್ಲರ್ ಯಹೂದಿ ಹಿಂಸಾಚಾರದ ಕುರಿತು ಸರಿ ಸುಮಾರು 4ಂ ಕೃತಿಗಳನ್ನು ಪ್ರಕಟಿಸಿದ್ದರು. ತಾನೊಬ್ಬ ನಿಷ್ಠಾವಂತ ಹಾಗೂ ವಸ್ತುನಿಷ್ಠ ವಿದ್ವಾಂಸವೆಂದು ಶೈಕ್ಷಣಿಕ ವಲಯದಲ್ಲಿ ಪರಿಚಯಿಸಿಕೊಂಡಿದ್ದ ಪತ್ರಕರ್ತರು. ಆದರೆ, ಅಮೇರಿಕ ಇತಿಹಾಸಗಾರ್ತಿ 1993ರಲ್ಲಿ ಬರೆದ ಸಂಶೋಧನಾ ಕೃತಿಯಲ್ಲಿ ಡೇವಿಡ್ ಇರ್ವಿಂಗ್‌ರವರು ಹಿಟ್ಲರ್ ಯಹೂದಿ ಹತ್ಯಾಕಾಂಡ ಮಾಡಿಯೇ ಇಲ್ಲ ಎಂದು ಹಿಟ್ಲರ್‌ನನ್ನು ಸಮರ್ಥಿಸಿ ಇತಿಹಾಸಕ್ಕೆ ಅಪಚಾರ ಮಾಡಿದ್ದಾರೆ ಎಂದು ತಮ್ಮ ಸಂಶೋಧನೆಯಲ್ಲಿ ನನ್ನನ್ನು ಅಪರಾದಿ ಎಂದು ಘೋಷಿಸಿದ್ದಾರೆ ಎಂದು ಆರೋಪ ಪಟ್ಟಿ ಸಲ್ಲಿಸಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಲಂಡನ್ ಉಚ್ಚ ನ್ಯಾಯಾಲಯವನ್ನು ಆಗ್ರಹಿಸುತ್ತಾರೆ. ಅಲ್ಲದೆ, ದೆಬೊರಾ ಲಿಪ್‌ಸ್ಟಡ್ ಹೇಳುವಂತೆ ನಾನು ಹಿಟ್ಲರ್‌ನ ಯಹೂದಿ ಹಿಂಸಾಚಾರವನ್ನು ಸಂಪೂರ್ಣಾವಾಗಿ ತಿರಸ್ಕರಿಸಿ ಇತಿಹಾಸಕ್ಕೆ ಅಪಚಾರ ಮಾಡಿಲ್ಲ. ನಾನೊಬ್ಬ ಪ್ರಬುದ್ಧ ವಿದ್ವಾಂಸ ಹಾಗೂ ಬರಹಗಾರನಾಗಿದ್ದು, ಸಾಮಾನ್ಯವಾಗಿ ತಪ್ಪು ಮಾಡುವ ಎಲ್ಲಾ ಬರಹಗಾರರ ಹಾಗೆ ನಾನೂ ಒಬ್ಬನಾಗಿದ್ದು, ನಾನು ಅಪರಾಧಿ ಅಲ್ಲವೆಂದು ಡೇವಿಡ್‌ಇರ್ವಿಂಗ್ ವಾದಿಸುತ್ತಾರೆ.

 ಆ ಕಾರಣಕ್ಕಾಗಿ, ಈ ಮೊಕದ್ದಮೆಯ ಮೂಲಕ ನ್ಯಾಯಾ ಲಕ್ಕೆ ಬಂದ ತನಿಖೆಯಲ್ಲಿ ಪ್ರಶ್ನೆ ಮೂಡಿರುವುದು ಒಬ್ಬ ಶ್ರೇಷ್ಠ ಇತಿಹಾಸಗಾರ್ತಿಯ ವ್ಯಕ್ತಿತ್ವಕ್ಕೆ ಕಳಂಕ ತಂದಿರುವ ವಿಚಾರ ಹಾಗೂ ಅವರ ಕೃತಿಯನ್ನು ಪ್ರಕಟಿಸಿರುವ ಪ್ರಕಾಶನ ಸಂಸ್ಥೆಗೆ ಆಗಿರುವ ಅವಮಾನ ತುಂಬಾ ಗಂಭೀರವಾದುದ್ದು. ವಾಸ್ತವದಲ್ಲಿ ಹೇಳುವುದಾದರೆ ಶೈಕ್ಷಣಿಕ ಸ್ಥಾನಗಳಲ್ಲಿ-ವಾಕ್ ಸ್ವಾತಂತ್ರ್ಯ ಎಲ್ಲರ ಹಕ್ಕು. ಹಾಗೇನೆ, ಯಾವುದೇ ಒಪ್ಪಿತ ಅಭಿಪ್ರಾಯವನ್ನು ಸೂಕ್ತವಾದ ವೇದಿಕೆಯಲ್ಲಿ ಪ್ರಶ್ನಿಸುವ ಸ್ವಾತಂತ್ರ ಇರುತ್ತದೆ. ಬೌದ್ಧಿಕ ಹಾಗೂ ರಾಜಕೀಯ ಚಟುವಟಿಕೆಗಳ ನಡುವಿನ ಸಂಬಂಧವನ್ನು ಪ್ರಶ್ನಿಸಬಹುದು. ಜೊತೆಗೆ, ಯಹೂದಿ ಹತ್ಯಾಕಾಂಡದ ಚಾರಿತ್ರಿಕ ಖಚಿತತೆ, ಚರಿತ್ರೆ ಬರವಣಿಗೆ, ಚರಿತ್ರೆಯ ಸ್ವರೂಪ ಇತ್ಯಾದಿ-ವಿಚಾರಗಳು ಮಾಧ್ಯಮ ಸ್ನೇಹಿ ಚೌಕಟ್ಟಿನೊಳಗೆ ತೀರ್ಮಾನಿಸುವ ವಿಚಾರಗಳು ನ್ಯಾಯಾಧೀಶರಾದ ಚಾರ್ಲ್ಸ್ ಗ್ರೇ ಅವರ ಜವಾಬ್ದಾರಿ. ಇಲ್ಲಿ ಚಾರಿತ್ರಿಕ ಹಾಗೂ ನ್ಯಾಯ ಸಂಬಂಧಿ ಆಧಾರಗಳಿಗೆ ಸೀಮಿತಗೊಳಿಸಿ ಪೂರ್ವಾಗ್ರಹ ಪೀಡಿತ ನಿರ್ಧಾರಗಳನ್ನು ತೆಗೆದುಕೊಳ್ಳಬಾರದೆಂಬುದು ನ್ಯಾಯಾಧೀಶರ ನಿರ್ಣಯ. ಜೊತೆಗೆ ತನಿಖೆಗೆ ಬಂದ ವಿಚಾರದ ತೀವೃತೆಯ ಕುರಿತು ಅವರಿಗೆ ಸ್ಪಷ್ಟನೆ ಇತ್ತು. ಪತ್ರಕರ್ತ ಡಿ.ಡಿ.ಗುಟ್ಟೇನ್ ಪ್ಲಾನ್ ಈ ಕೇಸಿನ ಕುರಿತು ಒಂದು ವರದಿಯಲ್ಲಿ ದಿ ಹೊಲೋಕೋಸ್ಟ್ ಆನ್ ಟ್ರಾಯಲ್ ಎಂಬ ಶಿರ್ಷಿಕೆಯಡಿಯಲ್ಲಿ ನೀಡುತ್ತಾರೆ. ಖ್ಯಾತ ಇತಿಹಾಸಗಾರ ರಿಚಾರ್ಡ್ ಇವಾನ್ಸ್ ಈ ಕೇಸಿನ ಕುರಿತು ಸತ್ಯಾಸತ್ಯಗಳನ್ನು ಟೆಲ್ಲಿಂಗ್ ಲೈಯ್ಸಾ ಎಬ್‌ಟ್ ಹಿಟ್ಲರ್: ದಿ ಹೋಲೋ ಕೋಸ್ಟ್, ಹಿಸ್ಟರಿ ಎಂಡ್ ದಿ ಡೆವಿಡ್ ಇರ್ವಿಂಗ್ ಟ್ರಾಯಲ್ ಎಂಬ ಶೀರ್ಷಿಕೆಯಲ್ಲಿ ತನ್ನ ವರದಿಯನ್ನು ನೀಡುತ್ತಾರೆ. ರಿಚಾರ್ಡ್ ಇವಾನ್ಸ್ ಅವರು ಈ ಕೇಸಿನ ತನಿಖೆ ಸಮಯದಲ್ಲಿ ನ್ಯಾಯಾಲ ಯದಲ್ಲಿ ಹಾಜರಿದ್ದು, ಸಾಕ್ಷಿದಾರರು ಆಗಿರುತ್ತಾರೆ. ಅದಕ್ಕಾಗಿ, ಇತಿಹಾಸ ತಜ್ಞರ ನೆಲೆಯಲ್ಲಿ ನೀಡುವ ವರದಿಯಲ್ಲಿ ಮೊದಲ ಅಧ್ಯಾಯಕ್ಕೆ ರಿಚಾರ್ಡ್ ಇವಾನ್ಸ್ ಹಿಸ್ಟರಿ ಆನ್ ಟ್ರಾಯಲ್ ಎಂದು ಹೆಸರಿಟ್ಟಿದ್ದರು.

          ನ್ಯಾಯಾಧೀಶರು ತಾನು ನೀಡುವ ತೀರ್ಮಾನವು ಒಂದು ಅರ್ಥದಲ್ಲಿ ಭ್ರಮೆ ಆಗಬಾರದು ಎಂಬ ನಂಬಿಕೆಯಲ್ಲಿ ಇದ್ದರು. ಏಕೆಂದರೆ, ಚರಿತ್ರೆಕಥನ ರಚನೆ ಹಾಗೂ ಚರಿತ್ರೆ ಬರವಣಿಗೆ ಕ್ರಮದಲ್ಲಿ ಚರಿತ್ರೆಯ ಮೂಲ ಸ್ವರೂಪ ಹಾಗೂ ಉದ್ದೇಶಗಳಿಗೆ ಅಪಚಾರವಾಗಬಾರದೆಂಬ ಆಶಯ ಇತಿಹಾಸಕಾರನಿಗೆ ಇರುತ್ತದೆ. ಜೊತೆಗೆ, ಇತಿಹಾಸಕಾರ ಯಾವ ಸಂದರ್ಭದಲ್ಲಿ ಚರಿತ್ರೆ ಕುರಿತು ಬರೆಯುತ್ತಾನೆ ಆ ಸಂದರ್ಭಕ್ಕೆ ಅನುಗುಣವಾಗಿ ಚರಿತ್ರೆ ನಿರೂಪಣೆ ಮಾಡುತ್ತಾನೆ. ಇಲ್ಲಿ ಲಿಪ್‌ಸ್ಟಡ್ ಮತ್ತು ಇರ್ವಿಂಗ್ ಇಬ್ಬರೂ ಕೂಡಾ ಒಂದೇ ಧ್ವನಿಯಲ್ಲಿ ತಮ್ಮ ಆಶಯಗಳನ್ನು, ಕರ್ತವ್ಯಗಳನ್ನು ಮತ್ತು ಇತಿಹಾಸಕಾರ ಪಾಲಿಸುವ ವಿಧಾನಗಳನ್ನು ಪಾಲಿಸಬೇಕಿತ್ತು. ಅದು ಖ್ಯಾತ ಇತಿಹಾಸಕಾರ ಲಿಯೊಪೋರ್ಡ್ ರಾಂಕೆ ಪರಿಚಯಿಸಿರುವ ಇತಿಹಾಸರಚನಾ ಪರಂಪರೆ. ಆದರೆ, ಇಲ್ಲಿ ನ್ಯಾಯಾಧೀಶರ ಚಾರ್ಲ್ಸ್‌ಗೆ ತನಿಖೆ ನಡೆಸಿ ಇರ್ವಿಂಗ್ ವಿರುದ್ಧದ ತೀರ್ಮಾನ ನೀಡುತ್ತಾರೆ. ಒಂದನೆಯದಾಗಿ, ನ್ಯಾಯಾಧೀಶರ ಪ್ರಕಾರ ಇರ್ವಿಂಗ್ ಇತಿಹಾಸಕಾರನು ಪಾಲಿಸುವ ಭದ್ದತೆ, ಕರ್ತವ್ಯ ನಿಷ್ಠೆಯನ್ನು ಹಿಟ್ಲರ್‌ನು ಯಹೂದಿ ಹತ್ಯಾಕಾಂಡದ ಕುರಿತು ಬರೆಯುವಾಗ ಪಾಲಿಸಿಲ್ಲ. ಎರಡನೆಯದು, ಇತಿಹಾಸ ರಚನಾ ಪರಂಪರೆಯಲ್ಲಿ ರಾಂಕೆ ಪ್ರತಿಪಾಧಿಸುವ ವಸ್ತುನಿಷ್ಠತೆ, ಪೂರ್ವಗ್ರಹವಿಲ್ಲದೆ, ಚರಿತ್ರೆಯಲ್ಲಿ ನಡೆದಿರುವ ಘಟನೆಯನ್ನು ಮರುನಿರೂಪಣೆಗೆ ಒಳಪಡಿಸುವಾಗ ನಡೆದ ಘಟನೆಯನ್ನು ಯಥಾವತ್ತಾಗಿ ಮರು ಮಂಡನೆ ಮಾಡುವ ಪ್ರವೃತ್ತಿಯನ್ನು ಹೊಂದಿರಬೇಕು. ಕಪೋಲ ಕಲ್ಪಿತ ತೀರ್ಮಾನ ನೀಡಿದರೆ, ಚರಿತ್ರೆಗೆ ಮಾಡುವ ಅಪಚಾರವೆಂದು ಮತ್ತು ರಾಂಕೆಯ ಪರಂಪರೆಗೆ ಅವಮಾನ ಮಾಡುವುದಾಗುತ್ತದೆಂದು ನ್ಯಾಯಧೀಶರು ತೀರ್ಮಾನಿಸಿ ಇರ್ವಿಂಗ್ ವಿರುದ್ಧ ನಿರ್ಧಾರವನ್ನು ಪ್ರಕಟಿಸುತ್ತಾರೆ.

  ಈ ಲೇಖನದ ಮೂಲಭೂತ ಉದ್ದೇಶವೇನೆಂದರೆ, ಚರಿತ್ರೆ ಬರವಣಿಗೆ ಪರಂಪರೆಯಲ್ಲಿ ಲಿಯೋಪೋರ್ಡ್ ವಾನ್ ರಾಂಕೆಯ ಇತಿಹಾಸ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಅನುಸರಿಸಬೇಕಾದ ಬದ್ಧತೆ, ಕರ್ತವ್ಯ ಮತ್ತು ವಿಧಾನಗಳ ಮೂಲಕ ಚರಿತ್ರೆಕಥನ ರಚನೆ ಹೇಗೆ ಚಾಲ್ತಿಗೆ ಬಂತು ಎಂಬುದು. ರಿಚಾರ್ಡ್ ಇವಾನ್ಸ್ ಇಂಗ್ಲೆಂಡ್‌ನ ಪತ್ರಕರ್ತ ಇರ್ವಿಂಗ್‌ನ ಶೈಕ್ಷಣಿಕ ಸಾಮರ್ಥ್ಯವನ್ನು ತೀರ್ವವಾಗಿ ಟೀಕಿಸುತ್ತಾ ಚರಿತ್ರೆರಚನಾ ಪರಂಪರೆಯಲ್ಲಿ ರಾಂಕೆಯ ಬಳುವಳಿ ಮತ್ತು ಪ್ರಭಾವವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಲಿಪ್‌ಸ್ಟ್‌ಡ್-ಇರ್ವಿಂಗ್ ಪ್ರಕರಣದಲ್ಲಿ ಮಾಡುತ್ತಾರೆ. ರೀಚಾರ್ಡ್ ಇವಾನ್ಸ್ ಅವರು 1997ರಲ್ಲಿ ಪ್ರಕಟಿಸಿರುವ ಇನ್ ಡಿಪೆನ್ಸ್ ಆಫ್ ಹಿಸ್ಟರಿ ಎಂಬ ಸಂಶೋಧನಾತ್ಮಕ ಕೃತಿಯಿಂದ ಶೈಕ್ಷಣಿಕ ವಲಯದಲ್ಲಿ ಮಾನ್ಯತೆ ಪಡೆದ ಇತಿಹಾಸಕಾರನಾಗಿದ್ದು. ಚರಿತ್ರೆರಚನೆಯಲ್ಲಿ ವಸ್ತು ನಿಷ್ಠತೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿರುವರು. ಅವರ ಪ್ರಕಾರ ನಿಜವಾದ ಇತಿಹಾಸ ಪತ್ರಾಗಾರದ ಬಾಗಿಲಿನಿಂದ ಆರಂಭವಾಗಬೇಕು. ಅಂದರೆ, ಚರಿತ್ರೆರಚನೆಗೆ ಬೇಕಾಗುವ ಆಕರಗಳು ಪತ್ರಾಗಾರದಲ್ಲಿ ಸಂಗ್ರಹಿಸಿರುವ ಚಾರಿತ್ರಿಕ ದಾಖಲೆಗಳಲ್ಲಿ ಅಡಗಿದ್ದು, ಗತದ ಕುರಿತು ಇತಿಹಾಸಕಾರ ಪಡೆಯುವ ಜ್ಞಾನವು ಅವುಗಳನ್ನು ಆಧರಿಸಿರುತ್ತವೆ.

     ಆದರೆ, ಇರ್ವಿಂಗ್ ಅವರು ಹಿಟ್ಲರ್ ಮತ್ತು ಯಹೂದಿ ಹತ್ಯಾಕಾಂಡವನ್ನು ಕುರಿತು ನೀಡಿರುವ ವಾದಗಳು ಚಾರಿತ್ರಿಕ ಆಧಾರಗಳನ್ನು ಆಧರಿಸಿದ, ಕಪೋಲ ಕಲ್ಪಿತವಾದದ್ದು. ಏಕೆಂದರೆ, ಇರ್ವಿಂಗ್ ಅವರು ಮೂಲಭೂತವಾದ ಹಾಗೂ ಬಲಪಂಥೀಯ ಚಿಂತನೆಗಳ ಪ್ರಭಾವಕ್ಕೊಳಗಾಗಿ ಚರಿತ್ರೆ ಕಟ್ಟುವ ವಿಚಾರದಲ್ಲಿ ಅರ್ಧ ಸತ್ಯವನ್ನು ಪೂರ್ಣ ಸತ್ಯವೆಂದು ಪ್ರತಿಪಾಧಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ ಕೃತಿಗಳಲ್ಲಿ ನೀಡುವ ಆಡಿ ಟಿಪ್ಪಣಿಗಳು ಮೂಲ ಆಧಾರಗಳಿಗೆ ಹೊಂದಾಣಿಕೆ ಆಗುವುದಿಲ್ಲ. ಜೊತೆಗೆ, ನೀಡುವ ಸಮಜಯಾಸಿಗಳು ಕೂಡ ಅಸ್ಪಷ್ಟವಾಗಿವೆ ಎಂದು ರಿಚಾರ್ಡ್ ಇವಾನ್ಸ್ ತಮ್ಮ ವರದಿಯಲ್ಲಿ ಉಲ್ಲೇಖ ಮಾಡುತ್ತಾರೆ. ಇದು ಇತಿಹಾಸರಚನಾ ಪರಂಪರೆಗೆ ಮಾಡಿರುವ ಅಪಚಾರ ಹಾಗೂ ರಾಂಕೆಯವರು ಸೂಚಿಸಿರುವ ಚರಿತ್ರೆರಚನಾ ವಿಧಾನಗಳಿಗೆ ವಿರುದ್ಧವಾದವು ಎಂದು ದೃಢೀಕರಿಸುತ್ತಾರೆ.

      ಆದರೆ, ದೆಬೋರಾ ಲಿಪಸ್ಟ್‌ಡ್‌ಒಬ್ಬ ವಸ್ತುನಿಷ್ಟ ಇತಿಹಾಸಗಾರ್ತಿ ಯಾಗಿದ್ದು, ತಮ್ಮ ಸಂಶೋಧನಾ ಕೃತಿಯಲ್ಲಿ ರಾಂಕೆಯವರು ಸೂಚಿಸುರುವ ಚರಿತ್ರೆರಚನಾ ವಿಧಾನ ಮತ್ತು ಪರಂಪರೆಯನ್ನು ತಮ್ಮ ವಿಶ್ಲೇಷಣೆಯಲ್ಲಿ ಅಳವಡಿಸಿಕೊಂಡಿರುತ್ತಾರೆ. ಸಂಶೋಧನಾ ಕೃತಿ ರಚನೆಯ ಮೊದಲು ಜರ್ಮನಿಯ ಹಿಟ್ಲರ್‌ಯಹೂದಿ ಹತ್ಯಾಕಾಂಡದ ಕುರಿತಾದ ಎಲ್ಲಾ ಚಾರಿತ್ರಿಕ ದಾಖಲೆಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿದ್ದಾರೆ. ಯುರೋಪ್ ಮತ್ತು ಅಮೇರಿಕದಲ್ಲಿರುವ ಎಲ್ಲಾ ಪತ್ರಾಗಾರಗಳಲ್ಲಿ ಸಂಗ್ರಹಿಸಿಟ್ಟಿರುವ ದಾಖಲೆಗಳನ್ನು ಸಂಗ್ರಹಿಸಿ ಚರಿತ್ರೆಯ ವಿಧಾನಗಳನ್ನು ಅನುಸರಿಸಿ ಪರಾಮರ್ಶನ ಮಾಡಿ ವಸ್ತು ನಿಷ್ಟವಾದ ವಿವರಣೆಯನ್ನು ಕೊಟ್ಟಿದ್ದಾರೆ. ರಾಂಕೆ ಹೇಳುವಂತೆ ಚರಿತ್ರೆ ಎಂದರೆ ಗತದಲ್ಲಿ ನಡೆದಿರುವ ಘಟನೆಯಾಗಿದ್ದು, ಆ ಘಟನೆ ಬಿಟ್ಟು ಹೋದ ಪಳೆಯುಳಿಕೆಗಳನ್ನು ಆಧರಿಸಿ ಆ ಘಟನೆಯನ್ನು ಯಥಾವತ್ತಾಗಿ ಮರುಮಂಡನೆ ಮಾಡುವ ಕ್ರಮವನ್ನೇ ಲಿಪ್‌ಸ್ಟಡ್ ಮಾಡಿದ್ದಾರೆ. ಯಾವುದೇ ಪೂರ್ವಾಗ್ರಹವಿಲ್ಲದೆ, ಯಾವುದೇ ಸಮಕಾಲೀನ ಸೈದ್ಧಾಂತಿಕ ಚಿಂತನೆಗಳ ಪ್ರಭಾವಕ್ಕೆ ಒಳಗಾಗದೇ ವಸ್ತುನಿಷ್ಠತೆಯನ್ನು ಕಾಪಾಡಿಕೊಂಡು ಎಲ್ಲರಿಗೂ ಒಪ್ಪಿಗೆಯಾಗುವ ಚರಿತ್ರೆಕಥನವನ್ನು ಯಹೂದಿ ಹತ್ಯಾಕಾಂಡದ ಕುರಿತಾಗಿ ವಿಶ್ಲೇಷಿಸಿದ್ದಾರೆ ಎಂದು ರಿಚಾರ್ಡ್ ಇವಾನ್ಸ್ ತನ್ನ ವರದಿಯಲ್ಲಿ ಹೇಳುತ್ತಾರೆ. ರಿಚಾರ್ಡ್ ಇವಾನ್ಸ್ ನೀಡಿರುವ ವರದಿಯನ್ನು ಒಪ್ಪಿಕೊಂಡ ನ್ಯಾಯಾಲಯ ಡೇವಿಡ್ ಇರ್ವಿಂಗ್‌ರವರು ಅಮೇರಿಕ ಇತಿಹಾಸಗಾರ್ತಿ ಡೆಬೊರಾ ಲಿಪ್‌ಸ್ಟಡ್ ವಿರುದ್ಧ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸುತ್ತದೆ. ಅಲ್ಲದೇ ಗತದಲ್ಲಿ ನಡೆದಿರುವ ಘಟನೆಯನ್ನು ಯಾವುದೇ ಪೂರ್ವಗೃಹ ಪೀಡಿತ ತೀರ್ಮಾನವಾಗಬಾರದೆಂದು ಚರಿತ್ರೆರಚನೆಯಲ್ಲಿ ವಸ್ತುನಿಷ್ಠತೆಯನ್ನು ಕಾಯ್ದುಕೊಳ್ಳುವ ಇತಿಹಾಸಕಾರರ ಜವಾಬ್ದಾರಿಯನ್ನು ದೃಢೀಕರಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)