varthabharthi

ಕ್ರೀಡೆ

2ನೇ ಏಕದಿನ: ಮೂರು ಪಂದ್ಯಗಳ ಸರಣಿ 1-1 ಸಮಬಲ

ವಿಂಡೀಸ್ ನ್ನು ಮಣಿಸಿದ ಭಾರತದ ವನಿತೆಯರು

ವಾರ್ತಾ ಭಾರತಿ : 5 Nov, 2019

  ಆ್ಯಂಟಿಗುವಾ, ನ.4: ಪೂನಮ್ ರಾವತ್ (77) ಅವರ ಆಕರ್ಷಕ ಅರ್ಧಶತಕ ಮತ್ತು ಶಿಸ್ತುಬದ್ಧ ಬೌಲಿಂಗ್ ನೆರವಿನಲ್ಲಿ ಭಾರತದ ವನಿತೆಯರ ತಂಡ ಇಲ್ಲಿ ನಡೆದ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 53 ರನ್‌ಗಳ ಭರ್ಜರಿ ಜಯ ಗಳಿಸಿದೆ.

 ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 1-1 ಸಮಬಲ ಸಾಧಿಸಿದೆ.

   ಮೊದಲ ಏಕದಿನ ಪಂದ್ಯದಲ್ಲಿ 1 ರನ್ ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ತಿರುಗೇಟು ನೀಡಿರುವ ಭಾರತ ಉತ್ತಮ ಪ್ರದರ್ಶನ ನೀಡಿ ಗೆಲುವಿನ ದಡ ಸೇರಿದೆ.

  ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಆರಂಭ ಕಳಪೆಯಾಗಿತ್ತು. ಆರಂಭಿಕ ಬ್ಯಾಟ್ಸ್‌ವುಮೆನ್‌ಗಳಾದ ಜೆಮಿಮಾ ರೊಡ್ರಿಗಸ್ (0) ಮತ್ತು ಪ್ರಿಯಾ ಪುನಿಯಾ (5) ಅವರು ಬಹಳ ಬೇಗನೆ ವಿಕೆಟ್‌ಗಳನ್ನು ಕಳೆದುಕೊಂಡಿದ್ದರು.

  ಪೂನಮ್ ರಾವತ್ ಮತ್ತು ನಾಯಕಿ ಮಿಥಾಲಿ ರಾಜ್ (40) ಜೊತೆಯಾಗಿ 19.5 ಓವರ್‌ಗಳಲ್ಲಿ 66 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ತಂಡವನ್ನು ಆಧರಿಸಿದರು.

28.5ನೇ ಓವರ್‌ನಲ್ಲಿ ಶೆನೆಟಾ ಗ್ರಿಮಂಡ್ ಅವರು ಮಿಥಾಲಿ ರಾಜ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಹರ್ಮನ್‌ಪ್ರೀತ್ ಕೌರ್ ಅವರು ತೆರವಾದ ಜಾಗಕ್ಕೆ ಬಂದರು. ರಾವತ್ ಮತ್ತು ಹರ್ಮನ್‌ಪ್ರೀತ್ ಜೊತೆಯಾಗಿ ನಾಲ್ಕನೇ ವಿಕೆಟ್‌ಗೆ 93 ರನ್ ಜಮೆ ಮಾಡಿದರು, ಆದರೆ ಬೌಂಡರಿ ಮೂಲಕ ರನ್ ಕಬಳಿಸುವುದಕ್ಕೆ ಕಷ್ಟದ ಸನ್ನಿವೇಶ ಎದುರಾದ ಹಿನ್ನೆಲೆಯಲ್ಲಿ ಇಬ್ಬರೂ ಒಂಟಿ ರನ್‌ಗಳನ್ನು ಸೇರಿಸುತ್ತಾ ತಂಡದ ಸ್ಕೋರ್‌ನ್ನು ನಿಧಾನವಾಗಿ ಏರಿಸಿದರು.ಭಾರತ ತನ್ನ ಇನಿಂಗ್ಸ್‌ನಲ್ಲಿ ಒಟ್ಟು 12 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿತ್ತು. ಹರ್ಮನ್‌ಪ್ರೀತ್ ಕೌರ್ ಅರ್ಧ ಶತಕ ಗಳಿಸಲು ಮುನ್ನುಗ್ಗುತ್ತಿದ್ದಾಗ ಅಫಿ ಫ್ಲೆಚರ್ ಅವರ ಅರ್ಧಶತಕದ ಕನಸನ್ನು ಪೂರ್ಣಗೊಳಿಸಲು ಅವಕಾಶ ನೀಡದೆ ಪೆವಿಲಿಯನ್‌ಗೆ ಅಟ್ಟಿದರು.ಅವರು 46 ರನ್ (52ಎ, 4ಬೌ) ಗಳಿಸಿದರು. ಕೌರ್ ನಿರ್ಗಮಿಸಿದಾಗ ಭಾರತ 46.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 178ರನ್ ಗಳಿಸಿತ್ತು.ಪೂನಮ್ ರಾವತ್‌ಗೆ ದೀಪ್ತಿ ಶರ್ಮಾ ಜೊತೆಯಾದರು. ತಂಡದ ಖಾತೆಗೆ ಇನ್ನು ಎರಡು ರನ್ ಸೇರುವಷ್ಟರಲ್ಲಿ ರಾವತ್ ಅವರನ್ನು ಭಾರತ ಕಳೆದುಕೊಂಡಿತು.

   ದೀಪ್ತಿ ಶರ್ಮಾ 5 ರನ್ ಗಳಿಸಿ ಔಟಾದರು. ತಾನಿಯಾ ಭಾಟಿಯಾ ಔಟಾಗದೆ 9ರನ್ ಮತ್ತು ಜುಲಾನ್ ಗೋಸ್ವಾಮಿ ಔಟಾಗದೆ 1 ರನ್ ಸೇರಿಸಿದರು. ವಿಂಡೀಸ್‌ನ ಆಲಿಯಾ ಅಲ್ಲೆನ್ 38ಕ್ಕೆ 2, ಅಫಿ ಫ್ಲೆಚೆರ್ 32ಕ್ಕೆ 2, ಶಬಿಕಾ ಗಜ್‌ನಬಿ ಮತ್ತು ಶೆನೆಟಾ ಗ್ರೊಮೊಂಡ್ ತಲಾ 1 ವಿಕೆಟ್ ಪಡೆದರು.

ಗೆಲುವಿಗೆ 192 ರನ್‌ಗಳ ಸವಾಲನ್ನು ಪಡೆದ ವೆಸ್ಟ್‌ಇಂಡೀಸ್ ತಂಡ ಭಾರತದ ಸಂಘಟಿತ ದಾಳಿಗೆ ಸಿಲುಕಿ 47.2 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟಾಗಿದೆ. ಭಾರತದ ಬೌಲರ್‌ಗಳಾದ ದೀಪ್ತಿ ಶರ್ಮಾ(25ಕ್ಕೆ 2), ಪೂನಮ್ ಯಾದವ್(26ಕ್ಕೆ 2), ರಾಜೇಶ್ವರಿ ಗಾಯಕ್‌ವಾಡ್ (27ಕ್ಕೆ 2), ಜುಲಾನ್ ಗೋಸ್ವಾಮಿ (24ಕ್ಕೆ 1) ಮತ್ತು ಶಿಖಾ ಪಾಂಡೆ(19ಕ್ಕೆ 1) ವಿಂಡೀಸ್‌ನ ಆಟಗಾರ್ತಿಯರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು. ವೆಸ್ಟ್ ಇಂಡೀಸ್‌ನ ಅನಾ ಕಿಂಗ್ (6) ಬೇಗನೆ ಔಟಾದರು. ಎರಡನೇ ವಿಕೆಟ್‌ಗೆ ಶೆಮೈನ್ ಕ್ಯಾಂಪ್ಬೆಲ್ಲೆ ಮತ್ತು ಸ್ಟೆಫಾನಿ ಟೇಲರ್ 68 ರನ್‌ಗಳ ಜೊತೆಯಾಟ ನೀಡಿದರು. ನತಾಶಾ ಮೆಕ್ಲೀನ್ (15) ಗಾಯಗೊಂಡು ನಿವೃತ್ತರಾದರು, 90ಕ್ಕೆ 3 ವಿಕೆಟ್ ಕಳೆದುಕೊಂಡ ವಿಂಡೀಸ್ ಈ ಮೊತ್ತಕ್ಕೆ 48 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಶೆಮೈನ್ ಕ್ಯಾಂಪ್ಬೆಲ್ಲೆ (39) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಸ್ಟೆಫಾನಿ ಟೇಲರ್(20), ಆಲಿಯಾ ಅಲ್ಲೆನ್ (16), ಅಫಿ ಫ್ಲೆಚೆರ್(14) ಎರಡಂಕೆಯ ಸ್ಕೋರ್ ದಾಖಲಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)