varthabharthi


ಸಂಪಾದಕೀಯ

ಆರ್‌ಸಿಇಪಿ ಒಪ್ಪಂದ: ಸದಾ ಎಚ್ಚರ ಅಗತ್ಯ

ವಾರ್ತಾ ಭಾರತಿ : 6 Nov, 2019

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ(ಆರ್‌ಸಿಇಪಿ) ಸಹಿ ಹಾಕದಿರುವ ಭಾರತದ ತೀರ್ಮಾನ ಸದ್ಯದ ಮಟ್ಟಿಗೆ ಸ್ವಾಗತಾರ್ಹವಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದ್ದರೆ ಭಾರತದ ಒಕ್ಕಲುತನ, ಹೈನುಗಾರಿಕೆ, ಸಣ್ಣ ಉದ್ದಿಮೆಗಳಿಗೆ ಎಂದೆಂದೂ ಚೇತರಿಸಲಾಗದ ಪೆಟ್ಟು ಬೀಳುತ್ತಿತ್ತು. ಅಂತಲೇ ದೇಶವ್ಯಾಪಿ ರೈತರು, ಕಾರ್ಮಿಕರು ಬೀದಿಗಿಳಿದು ಹೋರಾಟವನ್ನು ಆರಂಭಿಸಿದ್ದರು. ಈ ಒಪ್ಪಂದದಲ್ಲಿ ಏನಿದೆ, ಇದರ ಪರಿಣಾಮವೇನು ಎಂಬ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇರಲಿಲ್ಲ. ಅತ್ಯಂತ ರಹಸ್ಯವಾಗಿ ಈ ಒಪ್ಪಂದಕ್ಕೆ ಸಹಿ ಹಾಕುವ ಸಿದ್ಧತೆ ನಡೆದಿತ್ತು. ಸುಮಾರು ಹದಿನೈದು ದೇಶಗಳು ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿದ್ದರೂ ಭಾರತ ಸರಕಾರ ದೇಶದ ಜನರ ಆಗ್ರಹಕ್ಕೆ ಮಣಿದು ಸಹಿ ಹಾಕದಿರುವ ನಿರ್ಧಾರ ಸೂಕ್ತವಾಗಿದೆ.

ಈಗೇನೋ ರೈತಾಪಿ ವರ್ಗದ ಒತ್ತಾಯಕ್ಕೆ ಮಣಿದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದರೂ ಸಂಪೂರ್ಣ ವಾಗಿ ತಿರಸ್ಕರಿಸಿಲ್ಲ. ಮುಂದಿನ ವರ್ಷಗಳಲ್ಲಿ ತರಾತುರಿಯಲ್ಲಿ ಸಹಿ ಹಾಕಬಹುದು. ಹಾಗಾಗಿಯೇ ಈ ಅಪಾಯಕಾರಿ ಒಪ್ಪಂದದ ಬಗ್ಗೆ ಜನತೆ ಸದಾ ಎಚ್ಚರವಾಗಿರುವುದು ಅಗತ್ಯವಾಗಿದೆ.

ಆರ್‌ಸಿಇಪಿ ಒಪ್ಪಂದದ ಬಗ್ಗೆ 2012ರಲ್ಲೇ ಚರ್ಚೆಗಳು ಶುರುವಾಗಿವೆ. ಈವರೆಗೆ ವಿವಿಧ ದೇಶಗಳಲ್ಲಿ 26 ಸಭೆಗಳು ನಡೆದಿವೆ. ಈ ಒಪ್ಪಂದದ ಪರಿಣಾಮವಾಗಿ ಏಶ್ಯದ 16 ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ, ವಹಿವಾಟಿಗೆ ದ್ವಾರ ಮುಕ್ತಗೊಳಿಸಿದಂತಾಗು ತ್ತದೆ. ಆಗ ವಿದೇಶದ ವಸ್ತುಗಳು ಭಾರತದ ಮಾರುಕಟ್ಟೆಗೆ ತೆರಿಗೆ ರಹಿತವಾಗಿ ಬರುವುದರಿಂದ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಕುಸಿದು ರೈತರಿಗೆ ಮುಖ್ಯವಾಗಿ ಹೈನುಗಾರಿಕೆಗೆ ಚೇತರಿಸಲಾಗದ ಪೆಟ್ಟು ಬೀಳುತ್ತಿತ್ತು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆಗಳು ನಡೆದಿದ್ದರೂ ರೈತರಿಗೆ ಹಾಗೂ ಭಾರತದ ಉತ್ಪಾದಕರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

1995ರಲ್ಲಿ ಭಾರತ ವಿಶ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ ಜಾಗತೀಕರಣಕ್ಕೆ ತೆರೆದುಕೊಂಡಿತು. ಆ ನಂತರ ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಹಿಂದೆಂದೂ ಕಂಡರಿಯದ ಪರಿಣಾಮ ಉಂಟಾಯಿತು. ಅದರ ಪರಿಣಾಮವನ್ನು ದೇಶ ಈಗಲೂ ಅನುಭವಿಸುತ್ತಿದೆ.

ಜಾಗತಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತ ಆವರೆಗೆ ಅನುಸರಿಸಿಕೊಂಡು ಬಂದಿದ್ದ ಮಿಶ್ರ ಆರ್ಥಿಕ ನೀತಿಗೆ ಎಳ್ಳು ನೀರು ಬಿಟ್ಟಿತು. ಬಂಡವಾಳಶಾಹಿ ಆರ್ಥಿಕ ನೀತಿಗೆ ಶರಣಾಯಿತು. ಈ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮವಾಗಿ ನಮ್ಮ ದೇಶದಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಸಂಪರ್ಕ ಮುಂತಾದ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಿ ಒಂದಿಷ್ಟು ಮೇಲ್ನೋಟದ ಬೆಳವಣಿಗೆಗಳಾಗಿದ್ದು ನಿಜ. ಆದರೆ ಇನ್ನೊಂದೆಡೆ ಇದರ ದುಷ್ಪರಿಣಾಮಗಳೂ ಕೆಲ ಪ್ರತಿಕೂಲ ಬೆಳವಣಿಗೆಗಳಿಗೆ ಕಾರಣವಾದವು.

ಜಾಗತೀಕರಣದ ಆರ್ಥಿಕ ನೀತಿಯಿಂದ ಹಾಗೂ ನವ ಉದಾರೀಕರಣ ನೀತಿಯ ಪರಿಣಾಮವಾಗಿ ನಗರ ವ್ಯಾಪ್ತಿಯ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ವಿದ್ಯಾವಂತ ತರುಣರಿಗೆ ಉದ್ಯೋಗಾವಕಾಶಗಳು ದೊರೆತವು. ಆ ವರ್ಗದ ಕೊಳ್ಳುವ ಶಕ್ತಿ ಹೆಚ್ಚಾಗಿ ಕೊಳ್ಳುಬಾಕ ಸಂಸ್ಕೃತಿ ಬೆಳೆಯಿತು. ಆದರೆ ಇನ್ನೊಂದೆಡೆ ದೇಶದ ಗ್ರಾಮೀಣ ಪ್ರದೇಶ ಮತ್ತು ಅಸಂಘಟಿತ ವಲಯಗಳು ನಿರ್ಲಕ್ಷಿಸಲ್ಪಟ್ಟವು. ಅರಣ್ಯ, ಕೈಗಾರಿಕೆ, ಪರಿಸರ ಹಾಗೂ ಕಾರ್ಮಿಕ ನೀತಿಗಳಲ್ಲಿ ಮಹತ್ತರ ಬದಲಾವಣೆಗಳಾದವು. ಈ ಮುಕ್ತ ಆರ್ಥಿಕ ನೀತಿಯ ಪರಿಣಾಮವಾಗಿ ಲಂಗು ಲಗಾಮಿಲ್ಲದ ಗಣಿಗಾರಿಕೆ, ಜಲ ಮೂಲಗಳ ನಾಶ, ಪರಿಸರ ಅಸಮತೋಲನ ಹೆಚ್ಚಾಗಿ ಜನಸಾಮಾನ್ಯರು ಬವಣೆ ಪಡುವಂತಾಯಿತು.

 ವಿಶ್ವ ವ್ಯಾಪಾರ ಒಪ್ಪಂದದ ನಂತರ ಭಾರತದ ರಫ್ತು ವ್ಯವಹಾರ ಅಭಿವೃದ್ಧಿಯಾಗಲಿಲ್ಲ. ಈಗ ಪ್ರಸ್ತಾಪವಾಗಿರುವ ಆರ್‌ಸಿಇಪಿ ಒಪ್ಪಂದದ ನಂತರವೂ ನಮ್ಮ ದೇಶ ಆರ್‌ಸಿಇಪಿ ವ್ಯಾಪ್ತಿಯ ಏಶ್ಯದ ದೇಶಗಳ ಜೊತೆಗಿನ ವ್ಯವಹಾರ ಕೇವಲ ಆಮದಿಗೆ ಸೀಮಿತವಾಗಿ ಉಳಿಯಲಿದೆ. ಹಾಗಾಗಿಯೇ ರಹಸ್ಯವಾಗಿ ನಡೆದ ಈ ಒಪ್ಪಂದದ ಮಾತುಕತೆಗಳ ಬಗ್ಗೆ ಸಹಜವಾಗಿ ಜನಸಾಮಾನ್ಯರಿಗೆ, ಉತ್ಪಾದಕ ವಲಯಗಳಿಗೆ ಆತಂಕ ಉಂಟಾಗಿತ್ತು.

 ಆರ್‌ಸಿಇಪಿ ಒಪ್ಪಂದದ ಹಿಂದೆ ಚೀನಾದ ಹಿತಾಸಕ್ತಿ ಅಡಗಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದ್ದರೆ ಚೀನಾದ ಅಗ್ಗದ ವಸ್ತುಗಳು ಭಾರತದ ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಲಿದ್ದವು. ಕಡಿಮೆ ದರದ ಹಾಲು, ಬೆಣ್ಣೆ , ತುಪ್ಪಮುಂತಾದ ಹೈನುಗಾರಿಕೆ ಪದಾರ್ಥಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಅವಕಾಶ ದೊರಕುತ್ತಿತ್ತು. ಈ ಅಂಶಗಳೇ ಭಾರತದ ರೈತರು ಹಾಗೂ ಉತ್ಪಾದಕರಿಗೆ ಆತಂಕವನ್ನು ಉಂಟು ಮಾಡಿದ್ದವು. ಹೀಗಾಗಿ ಈ ಒಪ್ಪಂದಕ್ಕೆ ಸಹಿ ಹಾಕಲು ಭಾರತ ಸದ್ಯಕ್ಕೆ ನಿರಾಕರಿಸಿದ್ದರೂ ಮುಂದೆ ಹಾಕುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಭಾರತದ ಕಾರ್ಪೊರೇಟ್ ವಲಯ ಈ ಒಪ್ಪಂದದ ಬಗ್ಗೆ ಆಸಕ್ತಿ ಹೊಂದಿದೆ. ದೇಶದ ಅಭಿವೃದ್ಧಿಗೆ ಈ ಒಪ್ಪಂದ ಅಗತ್ಯವೆಂದು ವಾಣಿಜ್ಯೋದ್ಯಮ ಮಂಡಳಿ ಹೇಳಿದೆ. ಹಾಗಾಗಿ ದೇಶದ ಜನರ ತಲೆಯ ಮೇಲೆ ಆರ್‌ಸಿಇಪಿ ತೂಗುಗತ್ತಿ ತೂಗುತ್ತಲೇ ಇದೆ.

ಜಾಗತೀಕರಣದ ನೀತಿಯ ದುಷ್ಪರಿಣಾಮವನ್ನು ಭಾರತದ ರೈತ ಕಾರ್ಮಿಕರು, ಸಣ್ಣಪುಟ್ಟ ಉದ್ಯಮಿಗಳು ಈಗಾಗಲೇ ಅನುಭವಿಸುತ್ತಿದ್ದಾರೆ. ಈ ಆರ್‌ಸಿಇಪಿ ಒಪ್ಪಂದ ಅದಕ್ಕಿಂತ ಅಪಾಯಕಾರಿಯಾಗಿದೆ. ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಎಲ್ಲವನ್ನೂ ಕಳೆದುಕೊಂಡು ಅಸಮಾನತೆ, ಅಸ್ಥಿರತೆ ಹಾಗೂ ಆರ್ಥಿಕ ಹಿಂಜರಿತಗಳನ್ನು ಬಳುವಳಿಯಾಗಿ ಪಡೆದ ಭಾರತ ಮುಂದೆಯೂ ಈ ಒಪ್ಪಂದಕ್ಕೆ ಸಹಿ ಹಾಕಬಾರದು. ಸಹಿ ಹಾಕುವಂತೆ ಈ ಕೂಟದ ದೇಶಗಳಿಂದ ಒತ್ತಡ ಬರಬಹುದು. ಆದರೆ ಅದಕ್ಕೆ ಮಣಿಯಬಾರದು. ಅತ್ಯಂತ ರಹಸ್ಯವಾಗಿ ನಡೆದ ಈ ಒಪ್ಪಂದದ ಮಾತುಕತೆಗಳ ಬಗ್ಗೆ ಚರ್ಚೆ ಮಾಡುವ ಅವಕಾಶ ಭಾರತೀಯ ಸಂಸತ್ತಿಗೂ ಇಲ್ಲ. ವಿದೇಶಿ ವಸ್ತುಗಳಿಗೆ ನಮ್ಮ ಮಾರುಕಟ್ಟೆಯನ್ನು ಮುಕ್ತವಾಗಿ ಇಡುವುದು ಬೇಡ. ನಮ್ಮ ಉತ್ಪನ್ನಗಳ ಗುಣ ಮಟ್ಟ ಹೆಚ್ಚಿಸಿ ನಮ್ಮ ಗ್ರಾಹಕರಿಗೆ ತಲುಪಿಸುವ ಮೂಲಕ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳೋಣ. ನಮ್ಮ ಸರಕಾರ ಈ ಒಪ್ಪಂದಕ್ಕೆ ಯಾವ ಸಂದರ್ಭದಲ್ಲೂ ಎಂತಹ ಒತ್ತಡದ ಪರಿಸ್ಥಿತಿಯಲ್ಲೂ ಸಹಿ ಹಾಕದಂತೆ ಎಚ್ಚರದಿಂದ ಕಾವಲು ನಡೆಸೋಣ. ರೈತ, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಬುದ್ಧಿಜೀವಿಗಳು ಈ ಒಪ್ಪಂದದ ಅಪಾಯದ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)