varthabharthi

ಕ್ರೀಡೆ

ಎರಡನೇ ಟ್ವೆಂಟಿ-20

ಪಾಕ್ ವಿರುದ್ದ ಆಸಿಸ್‌ಗೆ ಸುಲಭದ ಜಯ

ವಾರ್ತಾ ಭಾರತಿ : 6 Nov, 2019

ಕ್ಯಾನ್ಬೆರಾ, ನ.5:ಮಾಸ್ಟರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಆಕರ್ಷಕ 80 ರನ್‌ಗಳ ನೆರವಿನಲ್ಲಿ ಆಸ್ಟ್ರೇಲಿಯ ಇಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

 ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟ್ವೆಂಟಿ -20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸರಣಿಯ ಅಂತಿಮ ಪಂದ್ಯ ಶುಕ್ರವಾರ ಪರ್ತ್‌ನಲ್ಲಿ ನಡೆಯಲಿದೆ.

        ಪಾಕಿಸ್ತಾನ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟದಲ್ಲಿ 150 ರನ್ ಗಳಿಸಿತ್ತು. ನಾಯಕ ಬಾಬರ್ ಅಝಮ್ (50) ಸತತ ಎರಡನೇ ಬಾರಿ ಅರ್ಧಶತಕವನ್ನು ದಾಖಲಿಸಿದರು. ಇಫ್ತಿಕರ್ ಅಹ್ಮದ್ 62 ರನ್ ಗಳಿಸಿದರು.

 ಗೆಲುವಿಗೆ 151 ರನ್ ಗಳಿಸಬೇಕಾದ ಆಸ್ಟ್ರೇಲಿಯ ಇನ್ನೂ 9 ಎಸೆತಗಳನ್ನು ಬಾಕಿ ಉಳಿಸಿ 3 ವಿಕೆಟ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.

    36 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ನೆರವಿನಲ್ಲಿ ಸ್ಮಿತ್ ಅರ್ಧಶತಕ ದಾಖಲಿಸಿದರು. ಅವರು 51 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 80 ರನ್ ಗಳಿಸಿ ಔಟಾಗದೆ ಉಳಿದರು. ಆರಂಭಿಕ ಬ್ಯಾಟ್ಸ್ ಮನ್‌ಗಳಾದ ಡೇವಿಡ್ ವಾರ್ನರ್ 20 ರನ್ ಮತ್ತು ನಾಯಕ ಆ್ಯರೊನ್ ಫಿಂಚ್ 17 ರನ್ ಗಳಿಸಿ ಔಟಾದರು. 5.5 ಓವರ್‌ಗಳಲ್ಲಿ 48ಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಕ್ಕೆ ಮೂರನೇ ವಿಕೆಟ್‌ಗೆ ಸ್ಮಿತ್ ಮತ್ತು ಬೆನ್ ಮೆಕ್‌ಡರ್ಮೆಟ್ 58 ರನ್‌ಗಳ ಜೊತೆಯಾಟ ನೀಡಿದರು. ಮೆಕ್‌ಡರ್ವೆಟ್ 21 ರನ್ ಗಳಿಸಿ ಔಟಾದರು. ಬಳಿಕ ಅಸ್ಟನ್ ಟರ್ನರ್ ಅವರು ಸ್ಮಿತ್‌ಗೆ ಸಾಥ್ ನೀಡಿದರು. ಟರ್ನರ್ ಔಟಾಗದೆ 8 ರನ್ ಗಳಿಸಿದರು. ಮುಹಮ್ಮದ್ ಇರ್ಫಾನ್, ಇವಾದ್ ವಸೀಮ್ ಮತ್ತು ಮುಹಮ್ಮದ್ ಆಮಿರ್ ತಲಾ 1 ವಿಕೆಟ್ ಹಂಚಿಕೊಂಡರು.

 ಪಾಕಿಸ್ತಾನ 150/6: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 150 ರನ್ ಗಳಿಸಿತ್ತು. ನಾಯಕ ಬಾಬರ್ ಅಝಮ್ ಮತ್ತು ಇಫ್ತಿಕಾರ್ ಅಹ್ಮದ್ ಅರ್ಧಶತಕ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿತ್ತು. ಫಾಕರ್ ಝಮಾನ್(2), ಹಾರಿಸ್ ಸೊಹೈಲ್ (6) ಆಸಿಫ್ ಅಲಿ(4) ವಿಫಲರಾದರು. ಮುಹಮ್ಮದ್ ರಿಝ್ವೆನ್(14) ಮತ್ತು ಇಮಾದ್ ವಸೀಮ್(11)ಎರಡಂಕೆಯ ಕೊಡುಗೆ ನೀಡಿದರು. ಆಸ್ಟ್ರೇಲಿಯದ ಅಸ್ಟನ್ ಅಗರ್ 23ಕ್ಕೆ 2, ಕೇನ್ ರಿಚರ್ಡ್ಸನ್ ಮತ್ತು ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಪಡೆದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)