varthabharthi


ವಿಶೇಷ-ವರದಿಗಳು

► ವಿಶೇಷ ಸಂದರ್ಶನ

ಪಾರದರ್ಶಕ ಚುನಾವಣೆ ನಡೆಯಬೇಕಿದ್ದರೆ ಇವಿಎಂ ಬೇಡ: ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜೈವೀರ್ ಶೇರ್ಗಿಲ್

ವಾರ್ತಾ ಭಾರತಿ : 6 Nov, 2019
ಪುಷ್ಪರಾಜ್ ಬಿ.ಎನ್.

ಮಂಗಳೂರು, ನ.6:ಅಖಿಲ ಭಾರತ ಕಾಂಗ್ರೆಸ್ ಪಕ್ಷದ ವಕ್ತಾರ ಜೈವೀರ್ ಶೇರ್ಗಿಲ್ ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಾರ್ತಾಭಾರತಿ ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ದೇಶದಲ್ಲಿ ಎರಡನೆ ಅತೀ ದೊಡ್ಡ ಪಕ್ಷ ನಿಮ್ಮದು. ಇವಿಎಂನ್ನು ತಿರುಚಲು ಸಾಧ್ಯವಿದೆ ಎನ್ನುವುದು ಸಾಬೀತಾಗಿರುವಾಗ ಕಾಂಗ್ರೆಸ್ ಏಕೆ ಅದನ್ನು ನಿಷೇಧಿಸಲು ಆಗ್ರಹಿಸುತ್ತಿಲ್ಲ?

ಜೈವೀರ್: ಕಾಂಗ್ರೆಸ್ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಬಯಸುತ್ತದೆ. ಜರ್ಮನಿ ಸೇರಿದಂತೆ ವಿದೇಶಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಮತ್ತೆ ಮತಪತ್ರದ ಮೂಲಕ ಚುನಾವಣೆ ನಡೆಯುತ್ತಿದೆ. ಹಾಗೆಯೇ ಭಾರತದಲ್ಲಿ ಚುನಾವಣಾ ಆಯೋಗ ಮತ್ತೆ ಮತಪತ್ರದ ಮೂಲಕ ಚುನಾವಣೆ ನಡೆಸಬೇಕಾಗಿದೆ. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿಯಲ್ಲಿ ವರ್ತಿಸಬಾರದು. ಪಾರದರ್ಶಕ ಚುನಾವಣೆ ನಡೆಯಬೇಕಿದ್ದರೆ ಇವಿಎಂ ಬೇಡ.

►ವಾರ್ತಾಭಾರತಿ: ಸದ್ಯದ ಪರಿಸ್ಥಿತಿಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಶಕ್ತವಾಗಿಲ್ಲ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ...

ಜೈವೀರ್ ಶೇರ್ಗಿಲ್: ದೇಶದ ಮತದಾರರು ಸ್ಪಷ್ಟವಾದ ಸಂದೇಶವನ್ನು ನಮಗೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಪುನರ್ ಸಂಘಟನೆಯಾಗಬೇಕಾಗಿದೆ. ಹೊಸ ಚೈತನ್ಯದ ಜೊತೆ ಮತ್ತೆ ಕೆಲಸ ಮಾಡಬೇಕಾಗಿದೆ. ಭಾರತೀಯ ಜನತಾ ಪಾರ್ಟಿಗೆ ಸೂಕ್ತ ತಿರುಗೇಟು ನೀಡಲು ಮತ್ತು ಸೂಕ್ತ ಪರ್ಯಾಯವಾಗುವುದಕ್ಕಾಗಿ ಕಾಂಗ್ರೆಸ್ ಪಕ್ಷವು ತನ್ನ ಕಾರ್ಯತಂತ್ರವನ್ನು ಬದಲಿಸಬೇಕಿದೆ, ಮತ್ತೊಮ್ಮೆ ಶಕ್ತಿಯುತವಾಗಬೇಕಿದೆ ಮತ್ತು ಮರುಸುಧಾರಣೆಗೊಳ್ಳಬೇಕಿದೆ. 2014 ಮತ್ತು 2019 ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವದಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ ಎನ್ನುವುದನ್ನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ ಕಾಂಗ್ರೆಸ್ ಮುಂದಿನ ಚುನಾವಣೆಗಳನ್ನು ಸಂಘಟಿತವಾಗಿ ಎದುರಿಸಿದರೆ ಖಂಡಿತವಾಗಿ ಬಿಜೆಪಿಯನ್ನು ಪರಾಭವಗೊಳಿಸಬಹುದು ಎನ್ನುವುದಕ್ಕೆ ರಾಜಸ್ಥಾನ ಮಧ್ಯಪ್ರದೇಶ, ಛತ್ತೀಸ್‌ಗಡದ ಚುನಾವಣೆಗಳ ಗೆಲುವು ಮತ್ತು ಹರ್ಯಾಣ ಚುನಾವಣೆಯ ಸಕಾರಾತ್ಮಕ ಫಲಿತಾಂಶವೇ ಉದಾಹರಣೆ.

ಮಹಾರಾಷ್ಟ್ರ, ಹರ್ಯಾಣ ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿದ್ದು ಜನರೇ ಕೈಹಿಡಿದಿದ್ದರಿಂದಲೇ ಹೊರತು ಪಕ್ಷದ ನಾಯಕತ್ವದಿಂದಾಗಿ ಅಲ್ಲ ಎಂಬ ಮಾತಿದೆ...

ಜೈವೀರ್ ಶೇರ್ಗಿಲ್: ಬಿಜೆಪಿಯ ಆರ್ಥಿಕ ನೀತಿಗಳ ಬಗ್ಗೆ ಜನರಿಗಿರುವ ಅಸಮಾಧಾನ, ಅತೃಪ್ತಿಯನ್ನು ಮಹಾರಾಷ್ಟ್ರ ಮತ್ತು ಹರ್ಯಾಣದ ಚುನಾವಣೆಗಳು ಪ್ರತಿಬಿಂಬಿಸಿದೆ. ಚುನಾವಣೆಗೆ 20 ದಿನಗಳಿಗಿಂತ ಮೊದಲೇ ಹರ್ಯಾಣದ ನಾಯಕತ್ವವನ್ನು ಹೂಡಾ ಅವರಿಗೆ ನೀಡಬೇಕಿತ್ತು. ಮಹಾರಾಷ್ಟ್ರ, ಹರ್ಯಾಣದಲ್ಲಿ ಜನರು ಬೆಲೆ ಏರಿಕೆ ಪ್ರಮುಖ ಸಮಸ್ಯೆಯಾಗಿ ಪರಿಗಣಿಸಿದ್ದಾರೆ. ಬಿಜೆಪಿಯ 370 ವಿಧಿಯ ಬಗ್ಗೆ ನಡೆದ ಪ್ರಚಾರಕ್ಕಿಂತ ಮುಖ್ಯವಾಗಿ ಪೆಟ್ರೋಲ್ ಬೆಲೆ ಲೀಟರ್‌ಗೆ 70 ರೂ.ಗೆ ಏರಿಕೆಯಾಗಿರುವುದನ್ನು ಜನರು ಪ್ರಮುಖ ವಿಷಯವಾಗಿ ಪರಿಗಣಿಸಿದ್ದಾರೆ ಎನ್ನುವುದಕ್ಕೆ ಉದಾಹರಣೆಯಾಗಿದೆ ಈ ರಾಜ್ಯಗಳ ಚುನಾವಣೆಗಳ ಫಲಿತಾಂಶ.

ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿ ಮಿಲಿಟರಿ ರೀತಿಯಲ್ಲಿ ಮುನ್ನುಗ್ಗುತ್ತಿದ್ದರೆ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕತ್ವವೇ ಇಲ್ಲ. ಪಕ್ಷದ ಕಾರ್ಯಕರ್ತರ ಮನೋಬಲವೂ ದುರ್ಬಲವಾಗಿದೆ.

ಜೈವೀರ್: ಖಂಡಿತವಾಗಿಯೂ ನಾನು ಈಗ ಹೇಳಿದಂತೆ ಕಾಂಗ್ರೆಸ್ ತನ್ನ ಸಂರಚನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಪುನಾರಚನೆಯಾಗಬೇಕಾಗಿದೆ. ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ತುಂಬುವುದಕ್ಕಾಗಿ ಸ್ಥಳೀಯ ನಾಯಕತ್ವಕ್ಕೆ, ರಾಜ್ಯ ನಾಯಕತ್ವಕ್ಕೆ ಮಹತ್ವ ನೀಡಬೇಕಾಗಿದೆ. ಉತ್ತರದಾಯಿತ್ವದ ವಿಚಾರದಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾಗಿದ್ದಾರೆ. ಕಾಂಗ್ರೆಸ್ ಪ್ರಜಾಪ್ರಭುತ್ವ ನೆಲೆಯ ಪಕ್ಷವಾಗಿದ್ದು, ತನ್ನ ಸಂವಿಧಾನದ ಪ್ರಕಾರ ಶೀಘ್ರ ಚುನಾವಣೆ ನಡೆಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ.

ರಾಹುಲ್ ಗಾಂಧಿ ಇನ್ನೂ ಪೂರ್ಣಾವಧಿ ರಾಜಕಾರಣಿಯಲ್ಲ ಎನ್ನುವ ಭಾವನೆಯಿದೆ. ಈ ಬಗ್ಗೆ ಏನು ಹೇಳ್ತೀರಿ?

ಜೈವೀರ್: ಛತ್ತೀಸ್ ಗಡ, ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದಾಗ ಅವರನ್ನು ಪೂರ್ಣಾವಧಿಯ ರಾಜಕಾರಣಿ ಎಂದು ಹೊಗಳಲಾಯಿತು. 2019ರಲ್ಲಿ ಕಾಂಗ್ರೆಸ್ ಸೋತಾಗ ಅವರು ಪೂರ್ಣಾವಧಿಯ ರಾಜಕಾರಣಿಯಲ್ಲ ಎನ್ನಲಾಗುತ್ತಿದೆ. ರಾಹುಲ್ ಗಾಂಧಿಯವರ ವಿರುದ್ಧದ ಟೀಕೆಗಳು ಅವರ ವರ್ಚಸ್ಸನ್ನು ಕುಂದಿಸಲು ಮತ್ತು ಜನರ ದಿಕ್ಕುತಪ್ಪಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳಾಗಿವೆ. ರಾಹುಲ್ ಗಾಂಧಿಯವರು ಯಾವಾಗಲೂ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುವವರು. ಈಗಲೂ, ಅಂದರೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಅವರು ದೇಶದ ಆರ್ಥಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುತ್ತಿದ್ದಾರೆ.

ಸದ್ಯ ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆ ಏನು ?

ಜೈವೀರ್:  ದಿಲಿಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟವನ್ನು ಮತ್ತೆ ಹಾರಿಸುವುದು ಕಾಂಗ್ರೆಸ್‌ನ ಕಾರ್ಯತಂತ್ರ. ಕಾಂಗ್ರೆಸ್ ಮತ್ತೆ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕು. ಏಕೆಂದರೆ ಜನಸಂಖ್ಯೆಯ ಅತಿ ಹೆಚ್ಚಿನ ಪಾಲು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕಳೆದುಕೊಂಡ ರಾಜ್ಯಗಳನ್ನು ಮತ್ತೆ ಪಡೆಯುವುದು ಮತ್ತು 2024ಕ್ಕೆ ಮೋದಿ ಸರಕಾರಕ್ಕೆ ಬೈ ಬೈ ಹೇಳುವುದು ಕಾಂಗ್ರೆಸ್‌ನ ಕಾರ್ಯ ತಂತ್ರವಾಗಿದೆ.

ಬಿಜೆಪಿ ಮತ್ತು ಅದರ ಅತಿರೇಕದ ರಾಷ್ಟ್ರೀಯತೆಯ ಎದುರು ಕಾಂಗ್ರೆಸ್ ತನ್ನ ವಿಚಾರಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಏಕೆ ?

ಜೈವೀರ್: ಬಿಜೆಪಿಯು ಅತಿರೇಕದ ರಾಷ್ಟ್ರೀಯತೆಯ ಗುಳ್ಳೆ. ಆದರೆ ಈ ಗುಳ್ಳೆಗಳು ಒಡೆಯಲು ಆರಂಭಿಸಿದ್ದು, ಹರ್ಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳು ಇದಕ್ಕೆ ಜೀವಂತ ಉದಾಹರಣೆಗಳಾಗಿವೆ. ಬಿಜೆಪಿಯ ಸೂಡೋ ರಾಷ್ಟ್ರೀಯತೆಯನ್ನು, ಅತಿರೇಕದ ರಾಷ್ಟ್ರೀಯತೆಯನ್ನು ಕಾಂಗ್ರೆಸ್ ಸಮರ್ಥವಾಗಿ ಪ್ರಶ್ನಿಸಬೇಕಾಗಿದೆ. ಕಾಂಗ್ರೆಸ್ ಸ್ವಾತಂತ್ರ ಹೋರಾಟದ ಸಮಯದಿಂದ ಹಿಡಿದು ಇಂದಿನವರೆಗಿನ ತನ್ನ ಸಮೃದ್ಧವಾದ ಚರಿತ್ರೆಯನ್ನು ಜನರಿಗೆ ಪರಿಚಯಿಸಬೇಕಾಗಿದೆ. ಕಾಂಗ್ರೆಸ್ ಜನರ ನೈಜ ಸಮಸ್ಯೆಗಳಾದ ಆರ್ಥಿಕ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾಗಿದೆ. ಅತಿ ರಾಷ್ಟ್ರೀಯತೆಯನ್ನು ಹಿಡಿದುಕೊಂಡು ಬಿಜೆಪಿಯು ಆರ್ಥಿಕ ಸಮಸ್ಯೆಗಳನ್ನು ಹೈಜಾಕ್ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಕಾಂಗ್ರೆಸ್ ಜನರಿಗೆ ನೆನಪಿಸಬೇಕಾಗಿದೆ.

ಬಿಜೆಪಿ ತನ್ನ ವಿಚಾರ ಧಾರೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ರೀತಿಯ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಆದರೆ ಕಾಂಗ್ರೆಸ್ ತನ್ನ ವಿಚಾರ ಧಾರೆಗಳನ್ನು ವಿಸ್ತರಿಸಲು ಏನು ಮಾಡುತ್ತಿದೆ ?

ಜೈವೀರ್: ಕಾಲವು ಪರಿಸ್ಥಿತಿಯನ್ನು ಬದಲಿಸಬಹುದೇ ಹೊರತು, ನಿಮ್ಮಿಳಗಿನ ಭಾವನೆಗಳನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಕಾಂಗ್ರೆಸ್ ದೇಶದ ಗಾಳಿಯೊಂದಿಗೆ ಬದುಕಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಆ ಮೂಲಕ ಹೈಕಮಾಂಡ್‌ನಿಂದ ತಳಮಟ್ಟದವರೆಗೆ, ತಳಮಟ್ಟದಿಂದ ಪಕ್ಷದ ಹೈಕಮಾಂಡ್‌ವರೆಗೆ ಸಂವಹನವು ಸಾಧ್ಯವಾಗಬೇಕಿದೆ. ಕಾಂಗ್ರೆಸ್ ತನ್ನ ಬೂತ್‌ಗಳನ್ನು ಬಲಪಡಿಸಬೇಕಾಗಿದೆ. ಬೂತ್ ಮಟ್ಟದಲ್ಲಿ, ಪಂಚಾಯತ್ ಮಟ್ಟದಲ್ಲಿ ಮತದಾರರ ಸಂಪರ್ಕದಿಂದ ಪಕ್ಷವನ್ನು ಬಲಪಡಿಸಬೇಕಾಗಿದೆ.ನಾಯಕರು ಮತದಾರರೊಂದಿಗೆ ಸಂ ಪರ್ಕದಲ್ಲಿದ್ದಾರೆಯೇ ಎನ್ನುವುದನ್ನು ಗಮನಿಸುವು ದಕ್ಕಾಗಿ ಪರಿಣಾಮಕಾರಿ ಘಟಕವೊಂದು ಬೇಕಾಗಿದ್ದು, ಮತದಾರರ ನಿರೀಕ್ಷೆಗಳು ಹೈಕಮಾಂಡ್ ವರೆಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ.

ಕಾಂಗ್ರೆಸ್‌ನ ರಾಜ್ಯ ನಾಯಕರು ಇವಿಎಂ ಬಳಕೆಯ ವಿರುದ್ಧ ಮಾತನಾಡುತ್ತಿದ್ದಾರೆ.ಆದರೆ ಹೈಕಮಾಂಡ್ ಈ ಬಗ್ಗೆ ಮೌನವಹಿಸಿದೆ ? ಏಕೆ ? ಇವಿಎಂ ಬಳಕೆಯ ಬಗ್ಗೆ ಪಕ್ಷದ ನಿಲುವೇನು ?

ಜೈವೀರ್: ಇವಿಎಂ ಅನ್ನು ಸಂಶಯದೊಂದಿಗೆ ನೋಡಿರುವುದು ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿಯ ನಾಯಕತ್ವವೂ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಪ್ರಪ್ರಥಮವಾಗಿ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದ ವ್ಯಕ್ತಿಯೆಂದರೆ ಎಲ್.ಕೆ.ಆಡ್ವಾಣಿಯವರು. ಇವಿಎಂ ಲೋಪದ ಬಗ್ಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್. ನರಸಿಂಹರಾವ್ ಪುಸ್ತಕವನ್ನೇ ಬರೆದಿದ್ದಾರೆ. ಯಾವುದೇ ಪಕ್ಷವಾಗಲೀ, ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲಿ, ಇವಿಎಂಗಳಲ್ಲಿ ಪ್ರಜಾಪ್ರಭುತ್ವದ ನಂಬಿಕೆಯನ್ನು ಉಳಿಸಿಕೊಳ್ಳುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಇವಿಎಂ ಬಗ್ಗೆ ಮತದಾರರು ಸಂಶಯದೊಂದಿಗೆ ನೋಡುವಂತಾಗಬಾರದು. ರಾಜ್ಯದ ನಾಯಕತ್ವ ಮತ್ತು ಕಾಂಗ್ರೆಸ್ ಹೈಕಮಾಂಡ್ ಇವಿಎಂ ಬಗ್ಗೆ ಒಂದೇ ಅಭಿಪ್ರಾಯವನ್ನು ಹೊಂದಿದೆ. ನಾವು ಪಾರದರ್ಶಕ ಚುನಾವಣೆಯನ್ನು ಮತ್ತು ತಿರುಚಲಾಗದಂತಹ ಇವಿಎಂಗಳನ್ನು ಬಯಸುತ್ತೇವೆ. ವಿವಿಪ್ಯಾಟ್ ವೆರಿಫಿಕೇಶನ್‌ಗೆ ಬೇಕೆಂದು ಕಾಂಗ್ರೆಸ್ ರಾಜ್ಯ ನಾಯಕತ್ವ ಮತ್ತು ಹೈಕಮಾಂಡ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡದಲ್ಲಿ ನಾವು ಜಯಗಳಿಸಿದ್ದರೂ ವಿವಿಪ್ಯಾಟ್ ವೆರಿಫೇಕಶನ್ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಇವಿಎಂಗಳನ್ನು ಮೋದಿ ಸರಕಾರ ನಿಯಂತ್ರಿಸುವುದಕ್ಕೆ ಹರ್ಯಾಣ ಚುನಾವಣೆಯಲ್ಲಿ ಪರಾಭವಗೊಂಡ ಬಿಜೆಪಿ ಶಾಸಕನ ಮಾತುಗಳೇ ಸಾಕ್ಷಿಯಾಗಿದೆ. ನೀವು ಯಾವ ಬಟನ್ ಒತ್ತಿದ್ದರೂ ಮೋದಿಗೆ ಮತ ಬೀಳುತ್ತಿತ್ತು ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಸಿಂಗ್ ಹೇಳಿದ್ದರು. ಜನರು ತಮಗೆ ಬೆಂಬಲ ನೀಡುತ್ತಾರೆ ಎನ್ನುವುದಕ್ಕಿಂತಲೂ ಇವಿಎಂಗಳು ನಮ್ಮ ಬೆಂಬಲಕ್ಕಿದೆ ಎನ್ನುವ ಆತ್ಮವಿಶ್ವಾಸ ಇಂದು ಬಿಜೆಪಿಯ ಶಾಸಕರಿಗಿದೆ.

ಸ್ಥಳೀಯಾಡಳಿತ ಚುನಾವಣೆಗೆ ಪಕ್ಷದ ರಣತಂತ್ರವೇನು ?

ಜೈವೀರ್:  ಆಡಳಿತದ ಸಮಸ್ಯೆಗಳ ಆಧಾರದಲ್ಲಿ, ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಟ್ರಾಫಿಕ್, ಶುಚಿತ್ವ, ಸೌಲಭ್ಯಗಳು ವಿಚಾರದಲ್ಲಿ ಸ್ಥಳೀಯಾಡಳಿತ ಚುನಾವಣೆಯನ್ನು ಕಾಂಗ್ರೆಸ್ ಎದುರಿಸುತ್ತಿದೆ. ಸ್ಥಳೀಯ ಚುನಾವಣೆಯಲ್ಲೂ ಬಿಜೆಪಿ ಪಾಕಿಸ್ತಾನ ವಿಷಯದಲ್ಲಿ ಮಾತನಾಡಬಹುದು. ಆದರೆ ಕಾಂಗ್ರೆಸ್ ಮಂಗಳೂರಿನ ಜನರ ಹಿತಾಸಕ್ತಿಯ ವಿಚಾರದಲ್ಲಿ ಈ ಚುನಾವಣೆಯನ್ನು ಎದುರಿಸಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)