varthabharthi


ವಿಶೇಷ-ವರದಿಗಳು

ದಿಲ್ಲಿ ಸರಕಾರ ಜಾರಿಗೆ ತಂದ ‘ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ’ ದ ಮೇಲೆ ಒಂದು ಪಕ್ಷಿ ನೋಟ - ಭಾಗ - 2

ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ: ಶಿಕ್ಷಣ ರಂಗದ ಸುಧಾರಣೆಯೋ? ಅಥವಾ ವಿದ್ಯಾರ್ಥಿಗಳಿಗೆ ಭಾರವೋ?

ವಾರ್ತಾ ಭಾರತಿ : 6 Nov, 2019
ತಲ್ಹ ಇಸ್ಮಾಯಿಲ್ ಬೆಂಗ್ರೆ, ಸಂಶೋಧಕರು, ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್, ಹೊಸದಿಲ್ಲಿ

ಇದನ್ನು ಹೊರೆಯಾಗಿ ಕಾಣುವವರು ಪರಿಸರದ ಬಗ್ಗೆ ಪಠ್ಯಕ್ರಮದ ಪರಿಚಯ, ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳು, ಎನ್‌ಸಿಸಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕೂಡ ಹೊರೆಯಾಗಿ ಕಾಣಬಹುದು, ಈ ರೀತಿ ಎಲ್ಲ ರಚನಾತ್ಮಕ ಬದಲಾವಣೆಗಳನ್ನು ತಪ್ಪಾಗಿ ಕಂಡರೆ ದೊಡ್ಡ ತಪ್ಪಾದೀತು. ಸಿಬಿಎಸ್‌ಇ ಅಧೀನದಲ್ಲಿರುವ ಶಾಲೆಗಳ 11ನೇ ಮತ್ತು 12ನೇ ತರಗತಿಯಲ್ಲಿ ‘ಉದ್ಯಮಶೀಲ ಮನಸ್ಥಿತಿ’ ಪಠ್ಯಕ್ರಮವು ಅಸ್ತಿತ್ವದಲ್ಲಿದೆ, ಆದ್ದರಿಂದ ಸಿಬಿಎಸ್‌ಇ ಶಾಲೆಗಳಿಂದ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹೆಚ್ಚು ಸಮರ್ಥ ಮತ್ತು ಹೆಚ್ಚು ಅಪ್ಡೇಟೆಡ್ ಎಂದು ಪರಿಗಣಿಸಲ್ಪಡುತ್ತಾರೆ. ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ ಪರಿಚಯಿಸುತ್ತಿರುವುದರಿಂದಾಗಿ ಉಂಟಾಗಿರುವ ಆತಂಕವೆಂದರೆ ಅದು ಮಕ್ಕಳ ಡ್ರಾಪ್ ಔಟ್ ದರವನ್ನು ಹೆಚ್ಚಿಸಲಿದೆಯೇ? ಎನ್ನುವುದು. ಏಕೆಂದರೆ ದಿಲ್ಲಿಯ ಶಾಲಾ ಶಿಕ್ಷಣದಲ್ಲಿ ಡ್ರಾಪ್‌ಔಟ್ ದರಗಳು ಈಗಾಗಲೇ ಹೆಚ್ಚಾಗಿದ್ದು, ಇದು ಹಿರಿಯ ಮಾಧ್ಯಮಿಕದಲ್ಲಿ ಶೇ.21 ಮತ್ತು ದ್ವಿತೀಯ ಮಾಧ್ಯಮಿಕದಲ್ಲಿ ಹಂತಗಳಲ್ಲಿ ಶೇ.11ರಷ್ಟಿದೆ. ಆದ್ದರಿಂದ ಈ ಪಠ್ಯಕ್ರಮವನ್ನು ಪರಿಚಯಿಸುವುದರಿಂದ ಮುಂದಿನ ದಿನಗಳಲ್ಲಿ ಡ್ರಾಪ್ ಔಟ್ ದರಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದೇ? ಇನ್ನೂ ಈ ವಾದದ ಹಿಂದಿನ ತರ್ಕವೇನೆಂದರೆ, ಆರ್ಥಿಕವಾಗಿ ದುರ್ಬಲ ವಿಭಾಗದ ಮಕ್ಕಳು ತಮ್ಮ ಕೌಶಲ್ಯಗಳ ಆಧಾರದ ಮೇಲೆ ಕೆಲವು ಸೂಕ್ತವಾದ ಉದ್ಯೋಗಗಳನ್ನು ಕಂಡುಕೊಳ್ಳಬಹುದು, ಅದು ಅವರು ತಮ್ಮ ತರಗತಿಗಳನ್ನು ತೊರೆದು ತಾತ್ಕಾಲಿಕ ಉದ್ಯೋಗದ ಕಡೆ ಆಕರ್ಷಿತರಾಗಿ, ಶಾಲೆಗಳಿಂದ ಹೊರಗುಳಿಯುವಂತೆ ಮಾಡುತ್ತದೆ.

ಆದರೆ ಈ ವಾದದ ತರ್ಕ ಸ್ವತಃ ದಿಲ್ಲಿ ಶಾಲೆಗಳಲ್ಲಿ ಪರಿಚಯಿಸಲಾದ ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮದ ಕುರಿತು ಸಾಕಷ್ಟು ಅರಿವಿನ ಕೊರತೆಯನ್ನು ತೋರಿಸುತ್ತದೆ. ಈ ಪಠ್ಯಕ್ರಮವನ್ನು ಪರಿಚಯಿಸುವ ಮುಖ್ಯ ಉದ್ದೇಶ ಉದ್ಯಮಶೀಲ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು, ಅದು ಒಬ್ಬ ಉದ್ಯೋಗಿಗಿಂತ ಉದ್ಯೋಗದಾತರಾಗಲು ಪ್ರೇರೇಪಿಸುತ್ತದೆ. ಪ್ರಸ್ತುತ ಪಠ್ಯಕ್ರಮವು ಉದ್ಯೋಗ ಆಧಾರಿತ ಕೌಶಲ್ಯ ಸೆಟ್ ಅಭಿವೃದ್ಧಿ ಕಾರ್ಯಕ್ರಮಕ್ಕಿಂತ ಉದ್ಯಮಶೀಲ ಕೌಶಲ್ಯದ ಬಗ್ಗೆ ಕೆಲವು ಮೂಲಭೂತ ಸೈದ್ಧಾಂತಿಕ ಜ್ಞಾನವನ್ನು ನೀಡುತ್ತದೆ.

 ಇನ್ನೂ, ಖಂಡಿತವಾಗಿಯೂ ಇದರ ಸೈದ್ಧಾಂತಿಕ ಭಾಗವಾಗಿರುವ ‘ಆತ್ಮವಿಶ್ವಾಸ, ಸೃಜನಶೀಲತೆ, ಟೀಮ್ ವರ್ಕ್ ಮತ್ತು ರಿಸ್ಕ್ ತೆಗೆದುಕೊಳ್ಳುವಂತಹ ಜೀವನ ಕೌಶಲ್ಯಗಳ ಕೆಲವು ಪ್ರಮುಖ ಅಂಶಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ. ಈ ಪಠ್ಯಕ್ರಮದ ಉದ್ದೇಶವು ವಿದ್ಯಾರ್ಥಿಗಳನ್ನು ಭವಿಷ್ಯದ ಉದ್ಯಮಿಗಳನ್ನಾಗಿ ಪರಿವರ್ತಿಸುವುದು. ಇದರಿಂದಾಗಿ, ಕೆಲವು ವಿದ್ಯಾರ್ಥಿಗಳು ಇತರ ಯಾವುದೇ ವಿಷಯಗಳಿಗಿಂತ ಕೌಶಲ್ಯಗಳ ಕಲಿಕೆಯನ್ನು ಕಲಿಯುವುದರಲ್ಲಿ ಹೆಚ್ಚು ಆಸಕ್ತಿಕರವಾಗಿ ಕಾಣುವ ಸಾಧ್ಯತೆಯಿದೆ. ಇಂತಹ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗುವ ಬದಲು ನಿಯಮಿತವಾಗಿ ತರಗತಿಗೆ ಹಾಜರಾಗಲು ಸಾಧ್ಯತೆಗಳಿವೆ.

ಅತೀ ವೇಗವಾಗಿ ಬದಲಾಗುತ್ತಿರುವ ಪ್ರಪಂಚದೊಂದಿಗೆ ಅಪ್ ಡೇಟ್ ಆಗಿರುವುದು:

  ಸಾಂಪ್ರದಾಯಿಕ ಪಠ್ಯಕ್ರಮವನ್ನು ನವೀಕರಿಸದಿದ್ದರೆ ಪ್ರಸಕ್ತ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದಲ್ಲಿ ನಿಭಾಯಿಸಲು ಸಾಧ್ಯವಾಗದ ಬಿಕ್ಕಟ್ಟಿನ ಸಂಕೀರ್ಣ ಪರಿಸ್ಥಿತಿಯನ್ನು ನಾವು ಎದುರಿಸುತ್ತೇವೆ. ಕೆಲವು ಅಧ್ಯಯನಗಳು ಸೂಚಿಸುವ ಪ್ರಕಾರ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇಂದಿನ ನಿರುದ್ಯೋಗವು, ಪ್ರಸಕ್ತ ಇಂಜಿನಿಯರಿಂಗ್ ಪಠ್ಯಕ್ರಮದ ಕೊಡುಗೆಯಾಗಿದೆ ಎಂದರೆ ತಪ್ಪಾಗಲಾರದು.

ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಸುಧಾರಿತ ನೈಪುಣ್ಯ ಶಿಕ್ಷಣ ಕಲಿಸುವುದು ದೇಶದ ಶಿಕ್ಷಣ ಇಲಾಖೆಯ ಪ್ರಮುಖ ಸವಾಲು.

 ಆದ್ದರಿಂದ ಈ ಪ್ರಕ್ರಿಯೆಯಲ್ಲಿ, ಅಗತ್ಯ ಸುಧಾರಣೆಗಳೊಂದಿಗೆ ಪಠ್ಯಕ್ರಮವನ್ನು ನವೀಕರಿಸುವುದು ಮತ್ತು ಅದಕ್ಕೆ ತಕ್ಕಂತೆ ಸಮಯ ಹಾಗೂ ಸ್ಕಿಲ್ ಶಿಕ್ಷಣಕ್ಕೆ ಬೇಕಾಗಿರುವ ಇತರ ಆವಶ್ಯಕತೆಗಳನ್ನು ಪೂರೈಸುವುದು, ಈ ನಿಟ್ಟಿನಲ್ಲಿ ದೇಶದ ಶಿಕ್ಷಣ ಇಲಾಖೆಯು ದೇಶದ ಭವಿಷ್ಯವನ್ನು ಮುಂದಿಟ್ಟುಕೊಂಡು ಸರಿಯಾದ ರೋಡ್ ಮ್ಯಾಪ್ ತಯಾರಿಸಬೇಕು.

ಆರ್ಥಿಕ ಮತ್ತು ಡೆಮೊಗ್ರಾಫಿಕ್ ಪರಿಸ್ಥಿತಿ:

 ದೇಶವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿನ ನೌಕರರ ಅಕಾಲಿಕ ವಜಾಗೊಳಿಸುವಿಕೆಯ ಸಮಸ್ಯೆ ಇರುವಾಗಲೂ, ದಿಲ್ಲಿ ಸರಕಾರದ ‘ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ’ವನ್ನು ಸರಕಾರಿ ಶಾಲೆಗಳಲ್ಲಿ ಪರಿಚಯಿಸುವ ಕ್ರಮವನ್ನು ಉತ್ತಮ ನಡೆ ಎನ್ನಬೇಕಾಗುತ್ತದೆ. ಆದರೆ ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮವನ್ನು ನಿಯಮಿತವಾಗಿ ಪರಿಶೀಲಿಸುವ ಮತ್ತು ನವೀಕರಿಸುವ ಆವಶ್ಯಕತೆಯಿದೆ. ಹಾಗಾದರೆ ಮಾತ್ರ ಅದು ಹೆಚ್ಚು ಪರಿಣಾಮಕಾರಿಯಾದೀತು. ವಿದ್ಯಾರ್ಥಿಗಳಿಗೆ ಆಸಕ್ತಿದಾಯಕ ಮತ್ತು ಪ್ರಸಕ್ತ ಸನ್ನಿವೇಶಕ್ಕೆ ಪ್ರಸ್ತುತವಾಗಿಡುವಂತೆ ಗಮನಹರಿಸಬೇಕಾಗಿದೆ ಎನ್ನುವುದರಲ್ಲಿ ಎರಡು ಮಾತ್ತಿಲ್ಲ.

ಶಾಲಾ ಸಮಯದ ಸಮಸ್ಯೆಗಳು:

ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ ಪರಿಚಯಿಸಿದರೆ, ಈ ದಿನಗಳಲ್ಲಿ ಶಾಲೆಗಳಲ್ಲಿ ಈಗಾಗಲೇ ಅನೇಕ ಪ್ರಮುಖ ವಿಷಯಗಳು ಮತ್ತು ಭಾಷೆಗಳನ್ನು ಕಲಿಸಲಾಗುತ್ತಿರುವುದರಿಂದ, ನಿಗದಿತ ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಕಲಿಸಲು ಸಮಯದ ಕೊರತೆ ಇದೆ ಎಂದು ಕೆಲವು ಶಿಕ್ಷಕರು ದೂರುತಿದ್ದಾರೆ. ಏಕೆಂದರೆ ಪ್ರಸ್ತುತ, ಪ್ರತಿ ವಿಷಯಕ್ಕೆ ಶಾಲೆಗಳಲ್ಲಿ ನಿಗದಿಪಡಿಸಿದ ಸಮಯ ಕೇವಲ 45 ನಿಮಿಷಗಳು ಮಾತ್ರ. ಆದ್ದರಿಂದ ಈ ಹೊಸ ವಿಷಯವನ್ನು ಪರಿಚಯಿಸಿದರೆ ಇತರ ಪ್ರಮುಖ ವಿಷಯಗಳಿಗೆ ಕಡಿಮೆ ಸಮಯ ನಿಗದಿಪಡಿಸಬೇಕಾಗಬಹುದು.

ಉದ್ಯಮಶೀಲ ಪಠ್ಯಕ್ರಮವನ್ನು ಕಲಿಸಲು ಸಮಯದ ಅಭಾವದ ಬಗ್ಗೆ ಇರುವ ಸಮಸ್ಯೆಯನ್ನು ಸರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ, ಪಿಟಿಎ (ರಕ್ಷಕರ ಶಿಕ್ಷಕರ ಸಂಘ) ಶಾಲಾ ಆಡಳಿತ ಮತ್ತು ಶಿಕ್ಷಣ ಅಧಿಕಾರಿಗಳು ಸಮಾಲೋಚನಾ ಸಭೆಯನ್ನು ನಡೆಸಿ, ಸಮರ್ಪಕವಾದ ತೀರ್ಮಾನ ಕೈಗೊಳ್ಳಬೇಕಾಗಿದೆಯೇ ಹೊರತು, ಶಾಲೆಗಳಲ್ಲಿ ಉದ್ಯಮಶೀಲಯ ಪಠ್ಯಕ್ರಮವನ್ನು ಪರಿಚಯಿಸದೆ ದೂರವಿಡುವುದು ಸರಿಯಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಸಿಬಿಎಸ್‌ಇ ಶಾಲೆಗಳ ಅನುಭವವು ಹೆಚ್ಚು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಈಗಿನ ಕರ್ನಾಟಕ ರಾಜ್ಯ ಸರಕಾರವು ದಿಲ್ಲಿ ಸರಕಾರದ ಅಧೀನದಲ್ಲಿರುವ ಶಾಲೆಗಳಲ್ಲಿ ನಡೆಯುತ್ತಿರುವ ಹೊಸ ಬದಲಾವಣೆಗಳನ್ನು ಅತೀ ಸೂಕ್ಷ್ಮವಾಗಿ ಗಮನಿಸಿ, ರಾಜ್ಯದ ಸರಕಾರಿ ಶಾಲೆಗಳನ್ನು ಕೂಡಾ ಭರವಸೆಯ ಆಶಾಕಿರಣದಂತೆ ರೂಪಿಸುವ ಅವಶ್ಯಕತೆ ಇದೆೆ. ಉತ್ತಮ ಕಲಿಕಾ ಕೌಶಲ್ಯವನ್ನು ಹೊಂದಿರುವ ಮಕ್ಕಳು ಉತ್ತಮ ಸಮಾಜವನ್ನು ಕಟ್ಟುವರು. ಆದ್ದರಿಂದ ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ಪರಾಮರ್ಶೆ ನಡೆಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)