varthabharthi


ಕ್ರೀಡೆ

ಮರಡೋನಾ

ನಾನು ಆರೋಗ್ಯವಾಗಿದ್ದೇನೆ

ವಾರ್ತಾ ಭಾರತಿ : 6 Nov, 2019

ಬ್ಯೂನಸ್ ಐರಿಸ್, ನ.5: ಫುಟ್ಬಾಲ್ ದಂತಕತೆ, ಅರ್ಜೆಂಟೀನಾ ತಂಡದ ಮಾಜಿ ನಾಯಕ ಡಿಯಾಗೋ ಮರಡೋನಾ ತೀವ್ರ ಅಸ್ವಸ್ಥರಾಗಿದ್ದು ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಮರಡೋನಾ ನಿರಾಕರಿಸಿದ್ದಾರೆ. ನಾನು ಸಾಯುತ್ತಿಲ್ಲ, ಆರೋಗ್ಯವಾಗಿಯೇ ಇದ್ದೇನೆ. ಅರ್ಜೆಂಟೀನಾದ ಫುಟ್ಬಾಲ್ ಕ್ಲಬ್ ಜಿಮ್ನಾಶಿಯಾದ ಪ್ರಧಾನ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು 59 ವರ್ಷದ ಮರಡೋನಾ ಟ್ವೀಟ್ ಮಾಡಿದ್ದಾರೆ. ಮರಡೋನಾರ ಕಿರಿಯ ಪುತ್ರಿ ಜಿಯಾನಿನಾ ಇನ್‌ಸ್ಟ್ರಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ‘‘ಅವರು ನನ್ನ ತಂದೆಯ ಅರಿವಿಗೆ ಬಾರದಂತೆ ಅವರನ್ನು ಒಳಗಿಂದ ಒಳಗೇ ಕೊಲ್ಲುತ್ತಿದ್ದಾರೆ. ತಂದೆಯ ಒಳಿತಿಗಾಗಿ ಪ್ರಾರ್ಥಿಸಿ ಎಂದು ಬರೆದಿದ್ದರು. ಇದು ವೈರಲ್ ಆದ ಬಳಿಕ ಮರಡೋನಾ ಅಸ್ವಸ್ಥರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಜಿಮ್ನಾಶಿಯಾ ತಂಡದ ನೀರಸ ಪ್ರದರ್ಶನಕ್ಕೆ ಸಂಬಂಧಿಸಿ ಕೆಲವು ಮಾಧ್ಯಮಗಳಲ್ಲಿ ಮರಡೋನಾ ಕುರಿತು ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಿಯಾನಿನಾ ಈ ಸಂದೇಶ ಕಳಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ನಾನು ಈಗಲೂ ಕೆಲಸ ಮಾಡುತ್ತಿರುವುದರಿಂದ ಶಾಂತವಾಗಿ ನಿದ್ರಿಸುತ್ತಿದ್ದೇನೆ. ನನ್ನ ಪುತ್ರಿ ಜಿಯಾನಿನಾ ಹಾಗೇಕೆ ಮಾಡಿದಳೋ ತಿಳಿಯುತ್ತಿಲ್ಲ. ವ್ಯಕ್ತಿಗಳು ವೃದ್ಧರಾಗುತ್ತಾ ಹೋದಂತೆ ಅವರ ಕುರಿತ ಕಾಳಜಿಯೂ ಹೆಚ್ಚುತ್ತದೆ. ಬಹುಷಃ ಈ ಕಾಳಜಿಯಿಂದಲೇ ಆಕೆ ಸಂದೇಶ ರವಾನಿಸಿರಬಹುದು ಎಂದು ಮರಡೋನಾ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)