varthabharthi


ಆರೋಗ್ಯ

ಹೃದ್ರೋಗದ ಕುರಿತು ಈ ಮಿಥ್ಯೆಗಳು ನಿಮ್ಮಲ್ಲಿದ್ದರೆ ಮೊದಲು ಅವುಗಳನ್ನು ಕಳಚಿಕೊಳ್ಳಿ

ವಾರ್ತಾ ಭಾರತಿ : 6 Nov, 2019

ನಮ್ಮ ಶರೀರದ ಅತ್ಯಂತ ಮುಖ್ಯ ಅಂಗಗಳಲ್ಲೊಂದಾಗಿರುವ ಹೃದಯವು ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡುತ್ತಲೇ ಇರುತ್ತದೆ. ಅದು ಶರೀರದಾದ್ಯಂತ ರಕ್ತವನ್ನು ಪಂಪ್ ಮಾಡುತ್ತದೆ,ಅಂಗಾಂಶಗಳಿಗ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಗೆ ಹಾಗೂ ಕಾರ್ಬನ್ ಡಯಾಕ್ಸೈಡ್ ಮತ್ತು ಇತರ ತ್ಯಾಜ್ಯಗಳ ನಿವಾರಣೆಗೆ ನೆರವಾಗುತ್ತದೆ. ಹೀಗಾಗಿ ಹೃದಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮಹತ್ವದ್ದಾಗಿದೆ. ಇಂತಹ ಹೃದಯದ ಕುರಿತು ಕೆಲವು ತಪ್ಪುಗ್ರಹಿಕೆಗಳು ಜನರಲ್ಲಿ ಬೇರೂರಿವೆ. ಇಲ್ಲಿವೆ ಅಂತಹ ಮಿಥ್ಯೆಗಳ ಹಿಂದಿನ ಸತ್ಯ......

►ಯುವ ಮಹಿಳೆಯರಿಗೆ ಹೃದ್ರೋಗಗಳಿಗೆ ತುತ್ತಾಗುವ ಅಪಾಯವಿಲ್ಲ

-ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ವರದಿಯಂತೆ ಹೃದ್ರೋಗವು ಎಲ್ಲ ವಯೋಮಾನಗಳ ಮಹಿಳೆಯರನ್ನು ಬಾಧಿಸುತ್ತದೆ ಮತ್ತು ವಿಶೇಷವಾಗಿ,ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುವ,ಧೂಮ್ರಪಾನ ಮಾಡುವ ಮಹಿಳೆಯರು ಹೃದ್ರೋಗಕ್ಕೆ ಗುರಿಯಾಗುವ ಶೇ.20ರಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇದರ ಜೊತೆಗೆ ನಿಂತ ನೀರಂತಿರುವ ಜೀವನಶೈಲಿಯಿದ್ದರೆ ಬದುಕಿನ ನಂತರದ ಹಂತದಲ್ಲಿ ಅಪಧಮನಿಗಳಲ್ಲಿ ಪಾಚಿ ಸಂಗ್ರಹಗೊಂಡು ರಕ್ತ ಪರಿಚಲನೆಗೆ ತಡೆಯುಂಟಾಗುವ ಮೂಲಕ ಹೃದ್ರೋಗಗಳಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು.

►ಮಹಿಳೆಯರಿಗಿಂತ ಪುರುಷರಲ್ಲಿ ಹೃದ್ರೋಗ ಹೆಚ್ಚು ಸಾಮಾನ್ಯ

-ಇದು ಇನ್ನೊಂದು ತಪ್ಪುಗ್ರಹಿಕೆ. ವಾಸ್ತವದಲ್ಲಿ ಹೃದ್ರೋಗ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. 65 ವರ್ಷಕ್ಕಿಂತ ಹೆಚ್ಚು ಪ್ರಾಯದ ಮಹಿಳೆಯರಲ್ಲಿ ಸಾವಿಗೆ ಹೃದ್ರೋಗ ಪ್ರಮುಖ ಕಾರಣವಾಗಿದೆ. 65 ವರ್ಷಗಳಿಗೆ ಮೇಲ್ಪಟ್ಟವರು ಹೃದಯಾಘಾತ,ಹೃದ್ರೋಗ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.

►ಮಧುಮೇಹಿಗಳು ಸೂಕ್ತ ಔಷಧಿಗಳನ್ನು ಸೇವಿಸುತ್ತಿದ್ದರೆ ಹೃದ್ರೋಗಕ್ಕೆ ಗುರಿಯಾಗುವುದಿಲ್ಲ

-ಮಧುಮೇಹಕ್ಕೆ ಔಷಧಿಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ ಮತ್ತು ದೃಷ್ಟಿನಾಶ,ನರಗಳಿಗೆ ಹಾನಿ,ಮೂತ್ರಪಿಂಡ ರೋಗ ಇತ್ಯಾದಿಗಳಂತಹ ಸಮಸ್ಯೆಗಳನ್ನು ತಡೆಯಬಹುದು. ಆದರೆ ಈ ಔಷಧಿಗಳು ಉರಿಯೂತಕ್ಕೊಳಗಾಗುವ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಲ್ಲ ದೊಡ್ಡ ರಕ್ತನಾಳಗಳ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ.

►ಕುಟುಂಬದಲ್ಲಿ ಹೃದ್ರೋಗದ ಇತಿಹಾಸವಿದ್ದರೆ ಅದು ನಿಮಗೂ ಬರುವುದನ್ನು ತಡೆಯಲು ಸಾಧ್ಯವಿಲ್ಲ

-ಕುಟುಂಬದಲ್ಲಿ ಹೃದ್ರೋಗದ ಇತಿಹಾಸವುಳ್ಳವರು ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ ನಿಜ,ಆದರೆ ಈ ಅಪಾಯವನ್ನು ಕೆಲಮಟ್ಟಿಗೆ ತಗ್ಗಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಹೆಚ್ಚಿನ ದೈಹಿಕ ಚಟುವಟಿಕೆ,ಹೃದಯಕ್ಕೆ ಆರೋಗ್ಯಕರವಾದ ಆಹಾರಗಳ ಸೇವನೆ,ಕೊಲೆಸ್ಟ್ರಾಲ್ ನಿಯಂತ್ರಣ,ರಕ್ತದೊತ್ತಡದ ಸೂಕ್ತ ನಿರ್ವಹಣೆ,ಧೂಮ್ರಪಾನ ವರ್ಜನೆ ಮತ್ತು ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ಇಂತಹ ಕ್ರಮಗಳಲ್ಲಿ ಸೇರಿವೆ.

►ಧೂಮ್ರಪಾನವನ್ನು ಬಿಟ್ಟರೂ ಹೃದ್ರೋಗದ ಅಪಾಯ ಕಡಿಮೆಯಾಗುವುದಿಲ್ಲ

-ಇದು ಇನ್ನೊಂದು ಅಪ್ಪಟ ಸುಳ್ಳು. ವ್ಯಕ್ತಿಯೋರ್ವ ಧೂಮ್ರಪಾನವನ್ನು ತ್ಯಜಿಸಿದ ಗಳಿಗೆಯಿಂದಲೇ ಆತನ ಆರೋಗ್ಯವು ಸುಧಾರಿಸತೊಡಗುತ್ತದೆ. ಧೂಮ್ರಪಾನವನ್ನು ನಿಲ್ಲಿಸಿದ ಒಂದು ವರ್ಷದ ಬಳಿಕ ಹೃದಯಾಘಾತದ ಅಪಾಯ ಶೇ.50ರಷ್ಟು ಕಡಿಮೆಯಾಗುತ್ತದೆ.

►ವಿಟಾಮಿನ್‌ಗಳು ಮತ್ತು ಪೂರಕಗಳ ಸೇವನೆಯಿಂದ ಹೃದ್ರೋಗಗಳನ್ನು ಕಡಿಮೆ ಮಾಡಬಹುದು

-ವಿಟಾಮಿನ್‌ಗಳು ಮತ್ತು ಪೂರಕಗಳ ಸೇವನೆಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಧೂಮ್ರಪಾನ ವರ್ಜನೆ,ಆರೋಗ್ಯಕರ ಆಹಾರ ಸೇವನೆ ಮತ್ತು ದೈಹಿಕ ಕ್ರಿಯಾಶೀಲತೆಯ ಉತ್ತಮ ಜೀವನಶೈಲಿಗೆ ಬದಲಾದರೆ ಮಾತ್ರ ಹೃದ್ರೋಗಗಳನ್ನು ತಡೆಯಬಹುದು ಎನ್ನುವುದು ತಿಳಿದಿರುವ ವಿಷಯವಾಗಿದೆ. ವಿಟಾಮಿನ್‌ಗಳು ಮತ್ತು ಪೂರಕಗಳು ಹೃದ್ರೋಗವನ್ನು ತಡೆಯುತ್ತವೆ ಎನ್ನುವುದನ್ನು ಸಮರ್ಥಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

►ನಿಮಗೆ ಹೃದ್ರೋಗವಿದ್ದರೆ ನೀವು ಸಾಧ್ಯವಿದ್ದಷ್ಟು ಕಡಿಮೆ ಕೊಬ್ಬು ಸೇವಿಸಬೇಕು

 -ಕಡಿಮೆ ಸ್ಯಾಚ್ಯುರೇಟೆಡ್ ಫ್ಯಾಟ್ ಹೊಂದಿರುವ ಆಹಾರಕ್ರಮವನ್ನು ಹೃದ್ರೋಗಿಗಳಿಗೆ ಶಿಫಾರಸು ಮಾಡಲಾಗುತ್ತದೆ. ಆದರೆ ಮೀನು,ಆಲಿವ್,ಅವಕಾಡೊ,ಬೀಜಗಳು ಮತ್ತು ಸಸ್ಯಜನ್ಯ ತೈಲಗಳಂತಹ ಆಹಾರಗಳಲ್ಲಿರುವ ಅನ್‌ಸ್ಯಾಚ್ಯುರೇಟೆಡ್ ಫ್ಯಾಟ್ ಹೃದಯಕ್ಕೆ ಲಾಭದಾಯಕವಾಗಿದೆ. ವಾರಕ್ಕೆರಡು ಬಾರಿ ಮೀನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.

►ನಿಮ್ಮಲ್ಲಿ ಹೃದ್ರೋಗದ ಯಾವುದೇ ಲಕ್ಷಣವಿಲ್ಲದಿದ್ದರೆ ನಿಮಗೆ ಹೃದ್ರೋಗವಿಲ್ಲ

=ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ವರದಿಯಂತೆ ಹೃದ್ರೋಗದಿಂದ ದಿಢೀರ್ ಸಾವನ್ನಪ್ಪುವ ಶೇ.64ರಷ್ಟು ಮಹಿಳೆಯರಲ್ಲಿ ಹೃದ್ರೋಗದ ಲಕ್ಷಣಗಳು ಕಾಣಿಸಿಕೊಂಡಿರುವುದಿಲ್ಲ,ಹೃದ್ರೋಗದ ಲಕ್ಷಣಗಳು ಪುರುಷರು ಮತ್ತು ಮಹಿಳೆಯರಲ್ಲಿ ಭಿನ್ನವಾಗಿರುವುದು ಇದಕ್ಕೆ ಕಾರಣ. ನಿಮಗೆ ಯಾವುದೇ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುತ್ತಿರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)