varthabharthiಕರ್ನಾಟಕ

ಆರ್‌ಸಿಇಪಿ ಒಪ್ಪಂದ ಕೈಬಿಟ್ಟಿದ್ದರಿಂದ 25ಲಕ್ಷ ರೈತರು ನಿರಾಳ: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್

ವಾರ್ತಾ ಭಾರತಿ : 6 Nov, 2019

ಬೆಂಗಳೂರು, ನ. 6: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ(ಆರ್‌ಸಿಇಪಿ)ಕ್ಕೆ ಸಹಿ ಹಾಕುವುದಕ್ಕೆ ಭಾರತ ದೇಶ ಹಿಂದೆ ಸರಿದಿದ್ದು, ಇದರಿಂದ ರಾಜ್ಯದ ಇಪ್ಪತ್ತೈದು ಲಕ್ಷ ರೈತರು ನಿರಾಳರಾಗಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಆರ್‌ಸಿಇಪಿ ಅಡಿಯಲ್ಲಿ ಯಾವುದೇ ಹೈನುಗಾರಿಕೆ ಉತ್ಪನ್ನಗಳ ಆಮದನ್ನು ಅನುಮತಿಸುವುದು ದೇಶದ ಡೈರಿ ಉದ್ಯಮ ಮತ್ತು ಇಡೀ ಕೃಷಿ ಸಮುದಾಯಕ್ಕೆ ಸವಾಲಾಗುವ ಸಾಧ್ಯತೆಯಿರುವ ಬಗ್ಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯುಶ್ ಗೋಯಲ್ಗೆ ಪತ್ರ ಬರೆದು, ಮನವರಿಕೆ ಮಾಡಿಕೊಡಲಾಗಿತ್ತು ಎಂದು ತಿಳಿಸಿದ್ದಾರೆ.

ಕರ್ನಾಟಕ ಹಾಲು ಸಂಗ್ರಹಣೆಯಲ್ಲಿ ದೇಶದಲ್ಲಿ 2ನೆ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 23,569 ಹಳ್ಳಿಗಳಲ್ಲಿ ಹಾಲನ್ನು ಸಂಗ್ರಹಿಸುತ್ತಿದ್ದು, 16,229 ಹಾಲು ಉತ್ಪಾದಕ ಸಹಕಾರ ಸಂಘಗಳು ನೋಂದಣಿಯಾಗಿವೆ. ಆ ಪೈಕಿ 4,302 ಮಹಿಳಾ ಸಂಘಗಳು ಕಾರ್ಯನಿವಹಿಸುತ್ತಿವೆ. ಒಟ್ಟು 25ಲಕ್ಷ ರೈತರು ರಾಜ್ಯದಲ್ಲಿ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರತಿನಿತ್ಯ 77.22ಲಕ್ಷ ಕೆ.ಜಿ ಹಾಲು ಸಂಗ್ರಹಣೆ ಆಗುತ್ತಿದ್ದು, ನಿತ್ಯ 19.88 ಕೋಟಿ ರೂ.ಹಣ ರೈತರಿಗೆ ಪಾವತಿಯಾಗುತ್ತಿದೆ. 2018-19ರಲ್ಲಿ 14,446 ಕೋಟಿ ರೂ.ಗಳ ವಹಿವಾಟನ್ನು ಕೆಎಂಎಫ್ ನಡೆಸಿದೆ ಎಂದಿರುವ ಪ್ರಭು ಚವ್ಹಾಣ್, ಒಪ್ಪಂದದಿಂದ ಹಿಂದೆ ಸರಿದಿದ್ದು, ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)