ಕಿರಿಯ ವೈದ್ಯರ ಮುಷ್ಕರ ಆರನೇ ದಿನಕ್ಕೆ: ಬೇಡಿಕೆ ಈಡೇರಿಸದಿದ್ದಲ್ಲಿ ಒಪಿಡಿ ಬಂದ್ ಕರೆ ಸಾಧ್ಯತೆ
ಬೆಂಗಳೂರು, ನ.6: ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಬೆಂಗಳೂರು ವೈದ್ಯಕೀಯ ವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರ ಸಂಘದಿಂದ ನಡೆಯುತ್ತಿರುವ ಮುಷ್ಕರ 6ನೆ ದಿನಕ್ಕೆ ಕಾಲಿಟ್ಟಿದೆ.
ರಾಜ್ಯ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಲು ಮುಂದಾಗಬೇಕು. ಇಲ್ಲದಿದ್ದರೆ, ಶುಕ್ರವಾರದಿಂದ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘವು ಹೇಳಿದೆ.
ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ವಿವಿಧ ಸಂಘ-ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು ಬೆಂಬಲ ವ್ಯಕ್ತಪಡಿಸಿವೆ. ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಭಾಗಿಯಾಗಿದ್ದು ಮಹದಾಯಿ ಹೋರಾಟಗಾರರು ವೈದ್ಯರಿಗೆ ಬೆಂಬಲ ಘೋಷಣೆ ಮಾಡಿದ್ದು, ವೈದ್ಯರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಮಂಗಳವಾರ ರಾಜ್ಯದ ಕೆಲವೆಡೆ ವೈದ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿ ಮಿಂಟೋ ಆಸ್ಪತ್ರೆಯ ವೈದ್ಯರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಮಿಂಟೋ ಆವರಣದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ವೈದ್ಯರು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಮುಂದಿನ ಎರಡು-ಮೂರು ದಿನಗಳಲ್ಲಿ ಬೇಡಿಕೆ ಈಡೇರಿಸಲಿಲ್ಲ ಎಂದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಎಲ್ಲ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗವನ್ನು ಮುಚ್ಚಿ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರ ರಕ್ಷಣೆಗೆ ಸರಕಾರ ಬದ್ಧ: ರಾಜ್ಯ ಸರಕಾರವು ವೈದ್ಯರ ರಕ್ಷಣೆಗೆ ಬದ್ಧವಾಗಿದೆ. ಕರ್ತವ್ಯ ನಿರತ ವೈದ್ಯರು ಭಯಪಡುವ ಅಗತ್ಯವಿಲ್ಲ. ಸರಕಾರ ಎಲ್ಲ ರೀತಿಯ ರಕ್ಷಣೆ ನೀಡಲಿದೆ. ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರು ತಮ್ಮ ಧರಣಿಯನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.
ಯಾವುದೇ ಸಂಘ ಸಂಸ್ಥೆಗಳು ವೈದ್ಯರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ. ವೈದ್ಯರು ಒತ್ತಡದಲ್ಲಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯರಿಂದ ತಪ್ಪಾಗಿದ್ದರೆ ಅದನ್ನು ಗಮನಕ್ಕೆ ತರಲು ಬೇರೆ ವಿಧಾನಗಳಿವೆ. ಹಲ್ಲೆ ಮಾಡುವುದು ತಪ್ಪು. ವೈದ್ಯರಿಂದ ತಪ್ಪಾಗಿದ್ದರೆ ಸರಕಾರದ ಗಮನಕ್ಕೆ ತನ್ನಿ, ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಮುಷ್ಕರ ಕೈಬಿಡಿ: ಸ್ಥಳಕ್ಕಾಗಮಿಸಿದ್ದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್, ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾನೂನಿನ ಪ್ರಕಾರ ತಪ್ಪು ಮಾಡಿದವರನ್ನು ಶಿಕ್ಷಿಸುತ್ತೇವೆ. ನಿಮ್ಮ ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದಾರೆ.