varthabharthi


ಬೆಂಗಳೂರು

ನ.10ರಂದು ಸಂಭ್ರಮದ ಮೀಲಾದುನ್ನಬಿ ಆಚರಣೆ: ಅಫ್ಸರ್ ಬೇಗ್

ವಾರ್ತಾ ಭಾರತಿ : 6 Nov, 2019

ಬೆಂಗಳೂರು, ನ.6: ಮರ್ಕಝಿ ಮೀಲಾದ್ ಓ ಸೀರತ್ ಕಮಿಟಿ, ಸುನ್ನಿ ಜಮೀಅತ್ ಆಲ್ ಕರ್ನಾಟಕ, ಮರ್ಕಝಿ ಜುಲೂಸ್-ಎ-ಮುಹಮ್ಮದಿ ಕಮಿಟಿ ವತಿಯಿಂದ ನ.10ರಂದು ಸಂಜೆ 5.30ಕ್ಕೆ ನಗರದ ವೈಎಂಸಿಎ ಮೈದಾನದಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಿಸಲಾಗುತ್ತಿದೆ ಎಂದು ಜುಲೂಸ್-ಎ-ಮುಹಮ್ಮದಿ ಕಮಿಟಿಯ ಪ್ರತಿನಿಧಿ ಅಫ್ಸರ್‌ಬೇಗ್ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಲಾಲ್ ಮಸೀದಿಯ ಅಧ್ಯಕ್ಷ ಅಮೀರ್‌ಜಾನ್ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಮೌಲಾನ ಮುಹಮ್ಮದ್ ಝುಲ್ಫಿಖಾರ್ ರಝಾ ನೂರಿ ಹಾಗೂ ವೌಲಾನ ಸಯ್ಯದ್ ಮುಹಮ್ಮದ್ ನೂರಾನಿ ಮಿಯಾ ಅಶ್ರಫಿ, ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಚರಿತ್ರೆ ಕುರಿತು ಪ್ರವಚನ ನೀಡಲಿದ್ದಾರೆ ಎಂದರು.

ನಗರದ ಪ್ರಮುಖ ಪ್ರದೇಶಗಳಿಂದ ಮೀಲಾದುನ್ನಬಿ ಅಂಗವಾಗಿ ಮೆರವಣಿಗೆಗಳು ನಡೆಯಲಿದ್ದು, ವೈಎಂಸಿಎ ಮೈದಾನದಲ್ಲಿ ಸೇರಲಿವೆ. ಯಾವುದೇ ಕಾರಣಕ್ಕೂ ಮೆರವಣಿಗೆಯಲ್ಲಿ ಬ್ಯಾಂಡ್, ಡಿ.ಜೆ. ಸಂಗೀತವನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರವಾದಿಯ ಗೌರವಾರ್ಥ ನಡೆಯುವ ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಚಾತುರ್ಯಗಳಾಗದಂತೆ ಎಚ್ಚರಿಕೆ ವಹಿಸುವಂತೆ ಮೆರವಣಿಗೆಯ ಆಯೋಜಕರಿಗೆ ಸೂಚನೆ ನೀಡಲಾಗಿದೆ ಎಂದು ಅಫ್ಸರ್ ಬೇಗ್ ತಿಳಿಸಿದರು.

ನ.10ಕ್ಕೆ ಮುಂಚಿತವಾಗಿ ಸುಪ್ರೀಂಕೋರ್ಟ್‌ನಿಂದ ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಂದಲ್ಲಿ, ನಾವು ಅದನ್ನು ಸ್ವಾಗತಿಸುತ್ತೇವೆ. ಯಾರೂ ಕೂಡ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸಗಳಿಗೆ ಕೈ ಹಾಕಬಾರದು ಎಂದು ಅವರು ಮನವಿ ಮಾಡಿದರು.

ಮೀಲಾದುನ್ನಬಿಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಮಡೂರಾವ್, ಮಾಜಿ ಸಚಿವರಾದ ತನ್ವೀರ್ ಸೇಠ್, ಝಮೀರ್ ಅಹ್ಮದ್‌ಖಾನ್, ರೋಷನ್ ಬೇಗ್, ಸಂಸದ ಡಾ.ಸಯ್ಯದ್ ನಾಸಿರ್ ಹುಸೇನ್, ಕೇಂದ್ರದ ಮಾಜಿ ಸಚಿವ ರಹ್ಮಾನ್ ಖಾನ್, ಶಾಸಕರಾದ ಎನ್.ಎ.ಹಾರೀಸ್, ಉದಯ್ ಬಿ.ಗರುಡಾಚಾರ್, ವಿಧಾನಪರಿಷತ್ ಸದಸ್ಯ ರಾದ ಸಿ.ಎಂ.ಇಬ್ರಾಹೀಂ, ನಸೀರ್ ಅಹ್ಮದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಉಬೇದುಲ್ಲಾ ಶರೀಫ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅಫ್ಸರ್ ಬೇಗ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)