varthabharthi

ಅನುಗಾಲ

ಬದುಕಿನ ನ್ಯಾಯನಿರ್ಣಯಗಳು

ವಾರ್ತಾ ಭಾರತಿ : 6 Nov, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನಮ್ಮ ಬಹುದೊಡ್ಡ ವೈಚಿತ್ರ್ಯವೆಂದರೆ ಕುರುಕ್ಷೇತ್ರ ನಡೆಯುವ ನೆಲವನ್ನೂ ನಾವು ಧರ್ಮಕ್ಷೇತ್ರಗಳೆಂದು ಗುರುತಿಸುತ್ತೇವೆ. ಯಾರೇ ಅಳಿದರೂ ಯಾರೇ ಉಳಿದರೂ ಅದು ಧರ್ಮದ ಗೆಲುವೆಂದು ಪಾಠ ಹೇಳುತ್ತೇವೆ. ಪರ-ವಿರೋಧಗಳ ಸಾಲು ಎಷ್ಟು ದೊಡ್ಡದಿದೆಯೆಂದರೆ ಅದನ್ನು ಇತ್ಯರ್ಥಗೊಳಿಸಲು ಇನ್ನೊಂದು ವ್ಯಾಖ್ಯಾನ ಬೇಕು. ಆದ್ದರಿಂದ ನ್ಯಾಯಾಲಯಗಳು ಎಲ್ಲೇ ಇರಲಿ, ಎಷ್ಟೇ ದೊಡ್ಡದಿರಲಿ, ಅವು ನೀಡಿದ್ದು ನ್ಯಾಯವೆಂದು ಅಂದಂದಿನ, ಆಗಿನ ವರ್ತಮಾನವಷ್ಟೇ ಗುರುತುಹಾಕಬಹುದಷ್ಟೇ ಹೊರತು ಅದು ಶಾಶ್ವತದ ಸಮಾಧಾನವನ್ನು ನೀಡಲಾರದು.


ನವೆಂಬರ್ 2019ರಲ್ಲಿ ದೇಶದ ರಾಜಕಾರಣದ ಮೇಲೆ ಮಾತ್ರವಲ್ಲ, ಪ್ರಜೆಗಳ ಬದುಕಿನ ಮೇಲೆ ಮತ್ತು ಒಟ್ಟಾರೆ ಭಾರತದ ಹೊಸ ಲಕ್ಷಣಗಳ ಮೇಲೆ ಭಾರೀ ಪ್ರಭಾವ ಬೀರಬಲ್ಲ ಕೆಲವು ತೀರ್ಪುಗಳನ್ನು ಸರ್ವೋಚ್ಚ ನ್ಯಾಯಾಲಯವು ನೀಡಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಗೊಗೊಯಿಯವರು ಈ ತಿಂಗಳಿನಲ್ಲಿ ನಿವೃತ್ತಿಹೊಂದಿ ಅನಂತರ ನ್ಯಾಯಮೂರ್ತಿ ಗೋಡ್ಬೋಲೆಯವರು ಮುಂದಿನ ಸುಮಾರು ಒಂದೂ ಚಿಲ್ಲರೆ ವರ್ಷ ಆ ಸ್ಥಾನವನ್ನು ಅಲಂಕರಿಸಲಿದ್ದಾರೆ. ನಿವೃತ್ತಿಯ ಅಂಚಿನಲ್ಲಿ ಈಗಿನ ಮುಖ್ಯನ್ಯಾಯಮೂರ್ತಿಯವರು ಇಷ್ಟೊಂದು ಸಂಖ್ಯೆಯ ಮತ್ತು ಮಹತ್ವದ ತೀರ್ಪುಗಳನ್ನು ನೀಡುವುದರ ಹಿನ್ನೆಲೆ ಅರ್ಥವಾಗುತ್ತಿಲ್ಲ.

ಪ್ರಾಯಃ ಈ ಪ್ರಕರಣಗಳ ಹೊರೆ ಸರ್ವೋಚ್ಚ ನ್ಯಾಯಾಲಯವನ್ನು ಬಹಳ ಕಾಲದಿಂದ ಬಳಲಿಸುತ್ತಿತ್ತು. ಈ ಹಿಂದೆ ಬಂದು ಹೋದ ಅನೇಕ ನ್ಯಾಯಮೂರ್ತಿಗಳು ತ್ವರಿತ ಇತ್ಯರ್ಥಗಳ ಕ್ರಾಂತಿಯ ಮಾತನ್ನು ಆಡಿ ಕೆಲವು ಹೆಜ್ಜೆಗಳನ್ನು ಕ್ರಮಿಸಿದರಾದರೂ ಅವರ ಮಾತುಗಳು ಸಂಚಲನವನ್ನು ಸೃಷ್ಟಿಸಿದಂತೆ ಕಂಡವೇ ಹೊರತು ವಾಸ್ತವದಲ್ಲಿ ಬಿಂಬಿತವಾಗಲೇ ಇಲ್ಲ. ದೇಶದ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಸ್ಥಾನಗಳು ಪೂರ್ಣವಾಗಿ ತುಂಬಲೇ ಇಲ್ಲ. ಇದರಿಂದಾಗಿ ಪ್ರಕರಣಗಳ ಸಂಖ್ಯಾ ಬಾಹುಳ್ಯ ಹಾಗೆಯೇ ಉಳಿದು ಬಂದಿದೆ. ಆದ್ದರಿಂದ ಈ ಜವಾಬ್ದಾರಿ ಕುಂಟುನೆಪದ ಮೂಲಕ ಜಾರಿಕೊಳ್ಳುವುದು ಬೇಡವೆಂದ ಅವರ ಧೋರಣೆಯಾದಲ್ಲಿ ಅದೊಂದು ಸ್ವಾಗತಾರ್ಹ ಸಾಹಸವಾಗಬಲ್ಲುದು. ನಮ್ಮ ಮೂಲಗಳನ್ನು ನಾವು ಮುಂದಿನವರಿಗೆ ಉಳಿಸಿಹೋಗುವುದು ದಕ್ಷತೆ. ಆದರೆ ನಮ್ಮ ಸಾಲಗಳನ್ನು, ಋಣಗಳನ್ನು ಹಸ್ತಾಂತರಿಸುವುದು ನಮ್ಮ ಕಾಲಕ್ಕೂ ಬದುಕಿಗೂ ದೇಶಕ್ಕೂ ಮಾಡುವ ಅನ್ಯಾಯ. ಸದ್ಯ ನಮ್ಮ ಮುಖ್ಯ ನ್ಯಾಯಮೂರ್ತಿಗಳು ಯಾವುದೇ ತೀರ್ಪಿಗೆ ಕಾರಣರಾಗಿರಲಿ, ಕಳೆದ ಸುಮಾರು ಏಳು ದಶಕಗಳಿಂದ ಬೆಳೆದು ಬಂದ ರಾಮಾಯಣವು ಅವರ ಕರ್ತವ್ಯಾವಧಿಯಲ್ಲಿ ಮಂಗಳವನ್ನು ಕಾಣುತ್ತದೆಯೆಂಬುದೇ ಒಂದು ಭವ್ಯ ಬೆಳವಣಿಗೆ. ಅದರೊಂದಿಗೆ ದೇಶ ನಿಡಿದುಸಿರೆಳೆಯಬಹುದು. ಹೊಸ ಯುಗ ಬರಬಹುದೆಂದು ನಿರೀಕ್ಷಿಸೋಣ.

ಜನರಿಗೆ ನ್ಯಾಯಾಲಯಗಳ ಮೇಲಿನ ನಂಬಿಕೆ ನಶಿಸುತ್ತ ಬಂದಿರುವುದು ಎಲ್ಲ ಪ್ರಾಜ್ಞರಿಗೂ ತಿಳಿದ ವಿಚಾರವೇ. ಈ ವಿಚಾರವನ್ನು ಸರ್ವೋಚ್ಚ ನ್ಯಾಯಮೂರ್ತಿಗಳು ತಿಳಿಯದವರೇನಲ್ಲ. ನ್ಯಾಯಾಂಗದ ಮತ್ತು ನ್ಯಾಯಾಲಯಗಳ ಮೇಲಣ ಭರವಸೆ ಮತ್ತು ನಂಬಿಕೆಯು ಕುಂಠಿತವಾದರೆ ಅದು ಪ್ರಜಾಪ್ರಭುತ್ವವನ್ನೇ ಅಲುಗಿಸಬಲ್ಲುದು ಎಂಬುದು ಅವರಿಗೂ ತಿಳಿದಿದೆ. ಆದರೆ ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳ ಪಾತ್ರ, ಭೂಮಿಕೆ ಬಹಳಷ್ಟಿರುವುದರಿಂದ ತನ್ನೆಲ್ಲ ನ್ಯಾಯನಿರ್ವಹಣೆಯ ಸಾಹಸಮಯಬದುಕಿನಲ್ಲೂ ನ್ಯಾಯಾಂಗ ಅಸಹಾಯಕತನದಿಂದ ಕೈಚೆಲ್ಲಿ ಕುಳಿತಂತೆ ಕಾಣುವುದು ಸಹಜವೇ ಆಗಿದೆ. ಒಬ್ಬ ಸರ್ವೋಚ್ಚ/ಉಚ್ಚ ನ್ಯಾಯಮೂರ್ತಿಯ ಆಯ್ಕೆಯಲ್ಲಿ ಮಾತ್ರವಲ್ಲ, ಸರಳವಾಗಿರಬೇಕಾದ ವರ್ಗಾವಣೆಯಲ್ಲೂ ಸರಕಾರದ ಒಪ್ಪಿಗೆ ಬೇಕಾಗಿರುವುದರಿಂದ ತೀರ್ಪುಗಳ ಹೊರತಾಗಿ ಸರ್ವೋಚ್ಚ ನ್ಯಾಯಾಲಯವೂ ಸರ್ವತಂತ್ರವೂ ಅಲ್ಲ; ಸ್ವತಂತ್ರವೂ ಅಲ್ಲವೆಂಬುದು ಮೇಲ್ನೋಟಕ್ಕೇ ಕಾಣುತ್ತದೆ. ಈ ಕಾರ್ಯವನ್ನು ನ್ಯಾಯಾಂಗದ ಪಾಡಿಗೆ ಬಿಡುವುದರ ಬದಲು ಪ್ರತಿಯೊಂದು ಸರಕಾರವೂ ತಾನು ಈ ವ್ಯವಹಾರ-ವಹಿವಾಟುಗಳಲ್ಲಿ ಹೇಗೆ ಮೇಲ್ಗೈ ಸಾಧಿಸಬಹುದು ಎಂಬ ಚಿಲ್ಲರೆ ರಾಜಕಾರಣವನ್ನು ಮಾಡುವುದನ್ನು ಕಳೆದ ಅನೇಕ ದಶಕಗಳಿಂದ ನೋಡುತ್ತಲೇ ಬಂದಿದ್ದೇವೆ. ಭಾರತದ ಸಂವಿಧಾನದಲ್ಲಿ ಈ ಭಿನ್ನ ಅಂಗಗಳು ಜನಹಿತಕ್ಕಾಗಿ ಪರಸ್ಪರ ಕೈಜೋಡಿಸಿ ಕೆಲಸಮಾಡಬೇಕಾಗಿದ್ದರೂ ಅವು ಕೈಕೈಮಿಲಾಯಿಸುವುದೇ ಹೆಚ್ಚಾಗಿದೆ. ಅನರ್ಹರೆಂಬ ಪದ ರಾಜಕಾರಣಿಗಳಿಗೆ ಈಗಷ್ಟೇ ಬಂದಿದ್ದರೂ ಅಂತಹ ಮಾದರಿಗಳ ಅಸ್ತಿತ್ವವು ಬಹಳಕಾಲದಿಂದಲೇ ಇದೆ. ಯಾವ ದೇಶದಲ್ಲಿ ಮತದಾನವೆಂಬುದು ಜನರ ಬುದ್ಧಿಮತ್ತೆಯ ಪ್ರತಿಫಲನವಾಗಿಲ್ಲವೋ ಮತ್ತು ಜನರು ಭೌತಿಕವಾಗಿ ಪ್ರೌಢರಾಗಿ ಬೌದ್ಧಿಕವಾಗಿ ಅಪ್ರಾಪ್ತರಾಗಿರುತ್ತಾರೋ ಅಲ್ಲಿ ಇಂತಹ ವಿಪರ್ಯಾಸಗಳು ಪ್ರಕೃತಿದತ್ತವೆಂಬಲ್ಲಿಗೆ ಸುಮ್ಮನಿರಬೇಕಾಗುತ್ತದೆ.

ದೇಶದ ಸರ್ವೋಚ್ಚ ಮಾತ್ರವಲ್ಲ, ಉಚ್ಚ ಮತ್ತು ಅಧೀನ ನ್ಯಾಯಾಲಯಗಳಲ್ಲೂ ಬಹಳಷ್ಟು ಪ್ರಕರಣಗಳು ತಮ್ಮ ಆಯುಷ್ಯದ ಅಂತ್ಯವನ್ನು ಕಾಯುತ್ತ ಕುಳಿತಿವೆ. ಇವಕ್ಕೆ ಹತ್ತಾರು ಕಾರಣಗಳನ್ನು ನೀಡಬಹುದು. ಇವು ನೆಪಗಳ ಹಂತವನ್ನು ದಾಟಿ ಕಾರಣಗಳಾಗುವುದು ನಮ್ಮ ಪ್ರಜಾತಂತ್ರದ ಸೋಜಿಗವೇ ಸರಿ. ಮೂಲತಃ ಭಾರತದ ನ್ಯಾಯಪದ್ಧತಿಯು ಪ್ರಕ್ರಿಯೆಗಳ ಸಂತೆ. ಪ್ರತಿಯೊಂದಕ್ಕೂ ವಿಧಿವಿಧಾನಗಳ ಸರಕುಗಳ, ಸುಂಕದ ಕಟ್ಟೆಗಳ ತೊಡಕು. ಒಂದು ಚಿಕ್ಕ ಉದಾಹರಣೆಯನ್ನು ನೀಡಬಹುದಾದರೆ ನಮ್ಮ ಸಿವಿಲ್ ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಿಸುವುದು ವಕೀಲರೆಂಬ ವೃತ್ತಿಪರರ ಹೊರತಾಗಿ ಜನಸಾಮಾನ್ಯರಿಂದ ಸಾಧ್ಯವಿಲ್ಲ. ಅರ್ಜಿಯ ನಮೂನೆ, ಪ್ರಮಾಣಪತ್ರ, ನಿಗದಿತ ನಮೂನೆಯ ಅಡವಳಿಕೆ ಇವೆಲ್ಲ ಮಕ್ಕಳಾಗಲು ಆಲದ ಮರಕ್ಕೆ ಸುತ್ತಿ ಪೂಜೆಮಾಡುವ ನಮ್ಮ ಪಾರಂಪರಿಕ ನೀತಿನಿಧಾನಗಳಂತಿವೆ. ಕ್ರಿಮಿನಲ್ ಅಪರಾಧಗಳ ಆರೋಪ ಹೊತ್ತ ಮನುಷ್ಯನೊಬ್ಬ ಅದನ್ನು ಎದುರಿಸುವುದು ಹೇಗೆಂದು ತಿಳಿಯದೆ ತನ್ನ ತಪ್ಪಿಗೆ ಮೀರಿದ ಶಿಕ್ಷೆಯನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಅನುಭವಿಸಬೇಕಾಗಿದೆ.

ಇಲ್ಲಿ ಮನುಷ್ಯನ ಸಾಮಾನ್ಯ ಜ್ಞಾನವಾಗಲೀ ಔಪಚಾರಿಕ ಶಿಕ್ಷಣವಾಗಲೀ ನೆರವಿಗೆ ಬರುವುದೇ ಇಲ್ಲ. ಎಲ್ಲವೂ ನಮ್ಮ ಪುರೋಹಿತರ ಮಂತ್ರ-ತಂತ್ರಜ್ಞಾನದಂತೆ ನೋಟಕರನ್ನು ಮಾತ್ರವಲ್ಲ, ತಾನೇ ವಸ್ತುವಾಗುವ ದುರದೃಷ್ಟವಂತನನ್ನೂ ಕಾಡುತ್ತದೆ. (ಇಂತಹ ನೂರೆಂಟು ಸಂಗತಿಗಳನ್ನು ಉದಾಹರಿಸಬಹುದು.) ನ್ಯಾಯಾಲಯಗಳು ಗೌರವದ ವಾತಾವರಣವನ್ನು ಸೃಷ್ಟಿಸಬೇಕೆಂಬ ಮಾತಿನ ಕುರಿತು ವಿವಾದವಿರಲಿಕ್ಕಿಲ್ಲ. ಆದರೆ ಅವು ಇದಕ್ಕಿಂತ ಹೆಚ್ಚಾಗಿ ಭಯವನ್ನು ಸೃಷ್ಟಿಸುತ್ತವೆ. ಮಿಲಿಟರಿಯ ಶಿಸ್ತಿಗಿಂತ ವಿಭಿನ್ನವಾದ ಮತ್ತು ವಿಚಿತ್ರವಾದ ಕೃತಕಶಿಸ್ತಿನ ಶೈಲಿಯನ್ನು ನ್ಯಾಯಾಲಯಗಳಲ್ಲಿ ಕಾಣಬಹುದು. ಇದು ಸರಿಯೆಂದು ಅನ್ನಿಸುವುದು ನ್ಯಾಯಾಲಯಗಳಲ್ಲಿ, ಶಕ್ತ ನ್ಯಾಯಾಧೀಶರೊಬ್ಬರೆದುರಲ್ಲಿ ದುರಹಂಕಾರಿ, ಭ್ರಷ್ಟ ಜನರು ಅದರಲ್ಲೂ ವಿಶೇಷವಾಗಿ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು ಅಸಹಾಯಕರಾಗಿ ಅಂಗಲಾಚಿ ನಿಂತಾಗಲೇ. ದೇವರ ಭಯವೇ ಜ್ಞಾನದ ಆರಂಭವೆಂಬ ಮಾತಿದೆ. (ಇದರ ಸತ್ಯಾಸತ್ಯತೆಯ ಚರ್ಚೆ ಇಲ್ಲಿ ಅಪ್ರಸ್ತುತ.) ಆದರೆ ನ್ಯಾಯಾಲಯಗಳ ಕುರಿತ ಭಯವು ಭಯದಲ್ಲೇ ಆರಂಭವಾಗಿ ಭಯದಲ್ಲೇ ಅಂತ್ಯವಾಗುವುದು ಸತ್ಯ. ಕಾಫ್ಕಾನ ‘ಟ್ರಯಲ್’ (ವಿಚಾರಣೆ) ಎಂಬ ಕಾದಂಬರಿಯಲ್ಲಿ ನ್ಯಾಯದಾನದ ವಿಪರ್ಯಾಸವನ್ನು ಕಾಣಬಹುದು. ವಸ್ತುಸ್ಥಿತಿ ಅಸಂಗತವಾದಾಗ, ಕೃತಿಯೂ ಅಸಂಗತವಾಗುವುದು ಸಹಜವೇ.

ಇವನ್ನು ಸಾಮಾನ್ಯ ನಾಗರಿಕ ಮಾತ್ರವಲ್ಲ, ವಕೀಲ ವೃತ್ತಿಯನ್ನು ಕೈಗೊಂಡ ಅರ್ಹ ಪದವೀಧರರೂ ಅರ್ಥಮಾಡಿಕೊಳ್ಳಬೇಕಾದರೆ ವರ್ಷಗಳೇ ಬೇಕು. ಇವನ್ನು ಸರಳೀಕರಿಸಬೇಕೆಂಬುದು ಎಲ್ಲರ ಅಹವಾಲಾದರೂ ಇದನ್ನು ಸಾಧ್ಯಗೊಳಿಸುವುದು ಹೇಗೆಂಬುದು (ಶಿಕ್ಷಣ ನೀತಿಯಂತೆ!) ಇನ್ನೂ ಇತ್ಯರ್ಥವಾಗಿಲ್ಲ. ಪ್ರಜಾತಂತ್ರದ ಪ್ರತಿಯೊಂದೂ ಶಿಷ್ಟಾಚಾರ ಮತ್ತು ಕಾಟಾಚಾರಗಳು ಅಲೆಗಳ, ತೆರೆಗಳ ಅಬ್ಬರ ಮತ್ತು ಉಬ್ಬರಗಳಲ್ಲಿ ಸಂಚರಿಸುವುದರಿಂದ ಅವುಗಳ ಅಂತರ್ಜಲವೇ ಸಾಮಾನ್ಯರಿಗೆ ದಕ್ಕದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಳೆದ ಒಂದೆರಡು ದಶಕಗಳಿಂದ ಉಚಿತ ಕಾನೂನು ನೆರವು, ಹಾಗೆಯೇ ರಾಜಿ ಪಂಚಾಯಿತಿಗಳ ವಿಧಾನ ಮತ್ತು ಜನತಾ ನ್ಯಾಯಾಲಯಗಳು ದಟ್ಟವಾಗಿ ಬೆಳೆೆದರೂ ಅವುಗಳು ಇಚ್ಛಿತ ಫಲಪ್ರಾಪ್ತಿಯನ್ನು ಕಂಡಿಲ್ಲ. ಮಾತಿಗಿಂತ ಉಗುಳೇ ಜಾಸ್ತಿಯಾದಂತಿದೆ. ಅಂಕಿ-ಸಂಖ್ಯೆಗಳ ನಮ್ಮ ಸಾಮಾಜಿಕ ಹೊಣೆಯಲ್ಲಿ ಎಲ್ಲವು ಪ್ರಾಯೋಗಿಕವಾಗಿ ಬರುತ್ತಿವೆಯೇ ಹೊರತು ಸಿದ್ಧಿ-ಸಾಧನೆಗಳ ಗೂಡಾಗಿ ಪರಿವರ್ತನೆಯಾಗುತ್ತಿಲ್ಲ. ಅತ್ಯಂತ ಪ್ರಾಥಮಿಕ ಹಂತದ ಈ ಸಂಸ್ಥೆಗಳಲ್ಲೂ ವೇದಿಕೆಯ ಅಲಂಕಾರ, ಸ್ವಾಗತ, ಉದ್ಘಾಟನೆ, ಅಧ್ಯಕ್ಷತೆ, ಧನ್ಯವಾದ ಮುಂತಾದ ಬೆಲೆಬಾಳುವ ಅರ್ಥಹೀನ ಪ್ರಚಾರತಂತ್ರಗಳು ಹೆಚ್ಚು ಸಮಯವನ್ನೂ ಜಾಗವನ್ನು, ಸಂಪನ್ಮೂಲಗಳನ್ನು ಆವರಿಸುತ್ತವೆಯಾದ್ದರಿಂದ ನೈಜ ಫಲಾನುಭವಿಗಳನ್ನು ಗುರುತಿಸುವುದನ್ನು, ಅವರಿಗೆ ಅರ್ಥಪೂರ್ಣ ಸಹಾಯವನ್ನು ಕೊಡಿಸುವುದು ಮರೀಚಿಕೆಯಾಗುತ್ತಲೇ ಬಂದಿದೆ.

ಭಾರತದ ನ್ಯಾಯದಾನ ಪದ್ಧತಿಯು ವಿಶ್ವದಲ್ಲೇ ಅತ್ಯಂತ ನಿಧಾನದ್ದು ಎಂಬುದನ್ನು ಸಾಬೀತು ಪಡಿಸಬೇಕಾದ ಅಗತ್ಯವಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಅಯೋಧ್ಯೆಯ ಪ್ರಕರಣವೊಂದೇ ಸಾಕು; ಇನ್ನಿತರ ದೀರ್ಘಾವಧಿ ಬದುಕುವ ಪ್ರಕರಣಗಳನ್ನು ಎಲ್ಲ ರಾಜ್ಯಗಳಲ್ಲೂ ಅಧೀನ ನ್ಯಾಯಾಲಯಗಳಲ್ಲೂ ಕಾಣಬಹುದು. ಸದ್ಯ ಇಂತಹ ರಣರಂಗದಲ್ಲಿ ನಡೆಯುವ ವೈಪರೀತ್ಯಗಳ ಪಟ್ಟಿ ಎಷ್ಟೇ ಬೆಳೆದರೂ ಅವನ್ನು ಅನಿವಾರ್ಯವೆಂದು ಸ್ವೀಕರಿಸಲೇಬೇಕಾದ ಸ್ಥಿತಿ-ಗತಿಗಳಲ್ಲಿ ಭಾರತದ ನಾಗರಿಕನಿದ್ದಾನೆ. ನಮ್ಮ ಬಹುದೊಡ್ಡ ವೈಚಿತ್ರ್ಯವೆಂದರೆ ಕುರುಕ್ಷೇತ್ರ ನಡೆಯುವ ನೆಲವನ್ನೂ ನಾವು ಧರ್ಮಕ್ಷೇತ್ರಗಳೆಂದು ಗುರುತಿಸುತ್ತೇವೆ. ಯಾರೇ ಅಳಿದರೂ ಯಾರೇ ಉಳಿದರೂ ಅದು ಧರ್ಮದ ಗೆಲುವೆಂದು ಪಾಠ ಹೇಳುತ್ತೇವೆ. ಪರ-ವಿರೋಧಗಳ ಸಾಲು ಎಷ್ಟು ದೊಡ್ಡದಿದೆಯೆಂದರೆ ಅದನ್ನು ಇತ್ಯರ್ಥಗೊಳಿಸಲು ಇನ್ನೊಂದು ವ್ಯಾಖ್ಯಾನ ಬೇಕು. ಆದ್ದರಿಂದ ನ್ಯಾಯಾಲಯಗಳು ಎಲ್ಲೇ ಇರಲಿ, ಎಷ್ಟೇ ದೊಡ್ಡದಿರಲಿ, ಅವು ನೀಡಿದ್ದು ನ್ಯಾಯವೆಂದು ಅಂದಂದಿನ, ಆಗಿನ ವರ್ತಮಾನವಷ್ಟೇ ಗುರುತುಹಾಕಬಹುದಷ್ಟೇ ಹೊರತು ಅದು ಶಾಶ್ವತದ ಸಮಾಧಾನವನ್ನು ನೀಡಲಾರದು.

ವೈಯಕ್ತಿಕ ವಿವಾದಗಳು ಮಾತ್ರವಲ್ಲ, ಸಾಮಾಜಿಕ ಪದ್ಧತಿಗಳನ್ನು, ಪರಂಪರೆಗಳನ್ನು ನಿರ್ಣಯಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳೇ ಕೆಲವೇ ವರ್ಷಗಳಲ್ಲಿ ಪಲ್ಲಟವಾಗಿರುವುದನ್ನು ಕಾಣಬಹುದು. (ಇದೇ ಒಂದು ಮಹಾಪ್ರಬಂಧಕ್ಕೆ ವಸ್ತುವಾಗಬಲ್ಲುದು!) ಇವಕ್ಕೆ ಐತಿಹಾಸಿಕ ಮಾತ್ರವಲ್ಲ ಸಾಮಾಜಿಕ ಕಾರಣಗಳನ್ನೂ ನೀಡಬಹುದು. ಯಾವುದು ಕೆಲವು ದಶಕಗಳ ಹಿಂದೆ ಅನೀತಿಯಾಗಿತ್ತೋ ಅದೀಗ ನೀತಿಯೆಂದು ಸ್ವೀಕೃತವಾಗಿದೆ. ಬಾಲ್ಯವಿವಾಹ, ಸತಿಸಹಗಮನ ಮುಂತಾದವುಗಳು ರದ್ದಾದಾಗ ಬಹುಜನರು ಸಂತೋಷಪಟ್ಟರೂ ಸಂಕಟಪಟ್ಟವರೂ ಇದ್ದರು. ಲೈಂಗಿಕದುರ್ಜನರಿಗೆ, ಸರಣಿಹಂತಕರಿಗೆ, ಭಯೋತ್ಪಾದಕರಿಗೆ ಮರಣದಂಡನೆಯಾದಾಗ ಬಲಿಪಶುಗಳಿಗೆ ಮಾನ/ಮರಣೋತ್ತರ ನ್ಯಾಯಸಿಕ್ಕಿತೆಂದು ಭಾವಿಸಿದಾಗ ಸಂತೋಷಕ್ಕಿಂತ ಹೆಚ್ಚಾಗಿ ಸಮಾಧಾನವಾಗುತ್ತದೆ. ಸಾವನ್ನು ನೀಡಲು ನಾವು ಯಾರು? ವ್ಯವಸ್ಥೆಗೆ ಅಂತಹ ಹಕ್ಕಿದೆಯೇ ಮುಂತಾದ ಚರ್ಚೆ ನಡೆದಾಗಲೂ ಇದೊಂದು ರೀತಿಯ ಕತೆಯ ಕೊನೆಗೆ ಆನಂತರ ಅವರು ಸುಖವಾಗಿ ಬಾಳಿದರು ಎಂಬ ಅಂತ್ಯದೊಂದಿಗೋ, ಸಿನೆಮಾನ್ಯಾಯವಾಗಿ ಖುಷಿಯಿಂದ ಶುಭಂ ಎಂದು ಹೊರಬರುವಂತೆಯೋ ಒಂದು ಅಧ್ಯಾಯದ ಸುಖಾಂತವೇ ಎಲ್ಲ ಸಮಸ್ಯೆಗಳ ಕೊನೆಯೆಂಬಂತೆ ನಿರಾಳವಾಗುತ್ತೇವೆ.

ಬಾಂಡ್ ಸಿನೆಮಾಗಳ ಹಾಗೆ, ಡ್ರಾಕುಲಾ ಸರಣಿಯ ಹಾಗೆ ಮತ್ತೊಂದು ವಿಪರ್ಯಾಸಕ್ಕೆ ಮನುಷ್ಯ ಸಿದ್ಧನಾಗಬೇಕಾಗುತ್ತದೆ. ಆತಂಕದಿಂದ ಕಾಯುವುದು, ಎದುರುನೋಡುವುದು ಬದುಕಿನ ಸಹಜ ಲಕ್ಷಣವಾಗುತ್ತದೆ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದು ಆಯಾಯ ವ್ಯಕ್ತಿಗಳ, ಆಯಾಯ ಕಾಲಘಟ್ಟದ ಸಾಮಾಜಿಕ ಹರಿಕಾರರ ಮನಸ್ಥಿತಿಯ ಮೇಲೆ ಮತ್ತು ಇನ್ನೂ ಹೆಚ್ಚಾಗಿ ಅವರ ಅನಿವಾರ್ಯ ತುರ್ತುಗಳ ಮೇಲೆ ನಿಂತಿದೆ. ಕ್ಲೀಷೆಯಾಗಿ ಉಳಿದ ಬದಲಾವಣೆಯೊಂದೇ ಶಾಶ್ವತ ಎಂಬ ಮಾತಿನೊಂದಿಗೆ ಈ ಎಲ್ಲ ಪಲ್ಲಟಗಳನ್ನು ತಾಳಿಕೊಳ್ಳಬಹುದು. ಸದ್ಯ ಮುಂಬರುವ ತೀರ್ಪುಗಳ ಕುರಿತು ಅಭಿಪ್ರಾಯ ನೀಡುವುದು ನನ್ನ ಉದ್ದೇಶವೇ ಅಲ್ಲ. ಅಯೋಧ್ಯೆಯ ವಿವಾದ ನ್ಯಾಯಾಲಯಗಳ ಮುಂದಂತೂ ಶಾಶ್ವತವಾಗಿ ಪರಿಹಾರವಾಗುತ್ತದೆಯೆಂದು ನಂಬಬಹುದು. ಅಲ್ಲೂ ಪುನಿರ್ವಿಮರ್ಶೆ ಎಂಬ ಅಪವಾದದ ಡೊಂಕುಬಾಲವೊಂದು ಉಳಿದಿರುತ್ತದೆ. ಶಬರಿಮಲೆಯ ಮಹಿಳಾಪ್ರವೇಶದ ಕುರಿತ ಪುನರ್ವಿಮರ್ಶೆಯ ತೀರ್ಪೂ ಬರಲಿದೆ. ಕರ್ನಾಟಕದ ಅನರ್ಹ ಶಾಸಕರ ಪ್ರಕರಣದ ಹಾಗೆ ಇನ್ನೂ ಕೆಲವು ತೀರ್ಪುಗಳು ಬರಲಿವೆ.

ಆದರೆ ಈ ತೀರ್ಪುಗಳು ಎಲ್ಲರಿಗೂ ಸಮಾಧಾನ ನೀಡಬಹುದೇ? ಸಂಶಯ. ತೀರ್ಪುಗಳೇ ಅನೇಕಬಾರಿ ಒಮ್ಮತದ್ದಾಗಿರುವುದಿಲ್ಲ. ಅನೇಕ ಬಾರಿ ಒಮ್ಮೆ ವ್ಯಕ್ತವಾದ ಭಿನ್ನಮತವು ಅಲ್ಪಮತದ್ದಾಗಿದ್ದರೂ ಮುಂದೊಂದು ಬಾರಿ ಬಹುಮತವಾಗುವುದನ್ನು ಅಲ್ಲಗಳೆಯುವಂತಿಲ್ಲ. ಕೊನೆಗೂ ಸಮಾಜದ ಇಚ್ಛಾಶಕ್ತಿಯನ್ನು ಯಾವ ನ್ಯಾಯಾಲಯದ ತೀರ್ಪು ಕೂಡಾ ಎದುರಿಸಲಾರದೆಂಬುದನ್ನು ಇತಿಹಾಸ ಗೀರು ಎಳೆದು ತೋರಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)