varthabharthi


ಸಂಪಾದಕೀಯ

ಕರ್ತಾರ್‌ಪುರ ಕಾರಿಡಾರ್: ಪಾಕಿಸ್ತಾನದ ಕುತ್ಸಿತ ಬುದ್ಧಿ

ವಾರ್ತಾ ಭಾರತಿ : 6 Nov, 2019

ಇನ್ನೆರಡು ದಿನಗಳಲ್ಲಿ ಉದ್ಘಾಟನೆಗೊಳ್ಳಲಿರುವ ಕರ್ತಾರ್‌ಪುರ ಕಾರಿಡಾರ್ ಹಲವು ಕಾರಣಗಳಿಂದ ಮಹತ್ವಪೂರ್ಣವಾಗಿದೆ. ಇದು ಕೇವಲ ಗುರುನಾನಕ್ ಅಥವಾ ಸಿಖ್ಖರ ನಂಬಿಕೆಗೆ ಸಂಬಂಧ ಪಟ್ಟ ವಿಷಯವಲ್ಲ. ಮನುಷ್ಯ ದೇಶವನ್ನು ಒಡೆಯಬಹುದು ಆದರೆ ಮನಸ್ಸನ್ನು ಒಡೆಯುವುದು ಅಷ್ಟು ಸುಲಭವಿಲ್ಲ ಎನ್ನುವುದನ್ನು ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಪಾಕಿಸ್ತಾನ-ಭಾರತದ ನಾಯಕರಿಗೆ ಕೂಗಿ ಹೇಳುತ್ತಿದೆ. ಪಾಕಿಸ್ತಾನ ಭಾರತದಿಂದ ಬೇರೆಯಾದಾಕ್ಷಣ, ಅಲ್ಲಿರುವ ಗುರು ನಾನಕ್ ಸಾಹೇಬರ ನೆನಪುಗಳನ್ನು ಅಳಿಸಿ ಹಾಕುವುದಕ್ಕೆ ಸಾಧ್ಯವಿಲ್ಲ . ಉಭಯ ದೇಶಗಳ ನಡುವೆ ಶಾಂತಿಯ ಮಾತುಕತೆಯ ಬಾಗಿಲು ಒಂದೊಂದಾಗಿ ಮುಚ್ಚುತ್ತಿರುವ ಇಂದಿನ ದಿನಗಳಲ್ಲಿ, ಕರ್ತಾರ್‌ಪುರ ಕಾರಿಡಾರ್, ಗುರುನಾನಕರು ತೆರೆದುಕೊಟ್ಟ ಶಾಂತಿಯ ಹೆಬ್ಬಾಗಿಲಾಗಿದೆ. ‘ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಸಂಘರ್ಷ, ಬಿಕ್ಕಟ್ಟನ್ನು ನಿವಾರಿಸಲು ಕರ್ತಾರ್‌ಪುರ ಮಾದರಿ ನೆರವಾಗಬಹುದು’ ಎನ್ನುವ ಮನಮೋಹನ್ ಸಿಂಗ್ ಮಾತುಗಳು ಈ ನಿಟ್ಟಿನಲ್ಲಿ ಅರ್ಥಪೂರ್ಣವಾಗಿದೆ. ಗುರುನಾನಕರ ಧಾರ್ಮಿಕ ಸಹಿಷ್ಣುತೆ ಇಂದು ಉಭಯ ದೇಶಗಳಿಗೂ ಮಾದರಿಯಾಗಬೇಕಾಗಿದೆ. ದುರದೃಷ್ಟವಶಾತ್ ಕಾರಿಡಾರ್ ಉದ್ಘಾಟನೆಗೆ ಎರಡು ದಿನ ಇರುವಂತೆಯೇ ಪಾಕಿಸ್ತಾನದ ಕ್ರಮವೊಂದು ಗುರುನಾನಕರ ತತ್ವ, ಸಿದ್ಧಾಂತಗಳಿಗೆ ಮಸಿ ಬಳಿದಿದೆ. ಈ ಕಾರ್ಯಕ್ರಮವನ್ನು ಭಾರತ ವಿರೋಧಿ ರಾಜಕೀಯಕ್ಕೆ ಬಳಸುವುದಕ್ಕೆ ಪಾಕಿಸ್ತಾನ ಹೊರಟಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

   ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗೆ ಪೂರ್ವಭಾವಿಯಾಗಿ ಇದಕ್ಕೆ ಪ್ರಚಾರ ನೀಡಲು ಪಾಕಿಸ್ತಾನದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ವೀಡಿಯೊ ತುಣುಕೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗುರುದ್ವಾರಕ್ಕೆ ಈ ಹಿಂದೆ ಭೇಟಿ ನೀಡಿದ್ದ ಸಿಖ್ ಗಣ್ಯರನ್ನು ತೋರಿಸಲಾಗಿದೆ. ಈ ವೀಡಿಯೊ ತುಣುಕಿನಲ್ಲಿ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು, ಉಗ್ರವಾದಿಗಳೂ ಆಗಿರುವ ಭಿಂದ್ರನ್‌ವಾಲೆ, ಮೇಜರ್ ಜನರಲ್ ಶಬೇಗ್ ಸಿಂಗ್ ಮತ್ತು ಅಮ್ರಿತ್ ಸಿಂಗ್ ಖಾಲ್ಸಾರ ಪೋಸ್ಟರ್‌ಗಳನ್ನೂ ಹಾಕಲಾಗಿದೆ. ಒಂದು ರೀತಿಯಲ್ಲಿ ಪಾಕಿಸ್ತಾನ ಉದ್ದೇಶಪೂರ್ವಕವಾಗಿಯೇ ಮೊಸರಿನಲ್ಲಿ ಕಲ್ಲುಗಳನ್ನು ಬೆರಕೆ ಮಾಡಿದೆ. ಇದೊಂದು ರಾಜಕೀಯ ಕುತ್ಸಿತತನವೂ ಹೌದು. ಭಾರತಕ್ಕೆ ಇರಿಸುಮುರಿಸು ಉಂಟು ಮಾಡುವುದೇ ಇದರ ಮುಖ್ಯ ಗುರಿ. ಭಿಂದ್ರನ್‌ವಾಲೆ ಯಾವ ಕಾರಣಕ್ಕೂ ಪಂಜಾಬನ್ನು ಪ್ರತಿನಿಧಿಸುವುದಿಲ್ಲ. ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲ ಹಲವು ನಾಯಕರು ಪಂಜಾಬ್‌ನಲ್ಲಿದ್ದಾರೆ.

ಆದರೆ ಭಿಂದ್ರನ್‌ವಾಲೆ ಮತ್ತು ಆತನ ಸಹೋದ್ಯೋಗಿಗಳು ಯಾಕೆ ಪಾಕಿಸ್ತಾನಕ್ಕೆ ಮುಖ್ಯ ಎನಿಸಿದರು? ಅವರು ಪಂಜಾಬ್‌ಗೆ ನೀಡಿದ ಕೊಡುಗೆಯಾದರೂ ಏನು? ಭಾರತದಿಂದ ಪಂಜಾಬನ್ನು ಸ್ವತಂತ್ರಗೊಳಿಸುವುದಕ್ಕಾಗಿ ಹಿಂಸಾ ಹೋರಾಟಕ್ಕೆ ಇಳಿದ ನಾಯಕರು ಪಾಕಿಸ್ತಾನಕ್ಕೆ ಯಾವ ರೀತಿಯಲ್ಲಿ ಮಾದರಿಯಾಗುತ್ತಾರೆ? ಅವರ ಹೋರಾಟ ಇಡೀ ಪಂಜಾಬನ್ನು ತಲ್ಲಣಗೊಳಿಸಿತ್ತು ಮಾತ್ರವಲ್ಲ, ಅಂತಿಮವಾಗಿ ಅದು ಭಾರತದ ಅಂದಿನ ಪ್ರಧಾನಿ ಇಂದಿರಾಗಾಂಧಿಯನ್ನೇ ಬಲಿ ತೆಗೆದುಕೊಂಡಿತು. ಆಪರೇಷನ್ ಬ್ಲೂ ಸ್ಟಾರ್ ತಪ್ಪೋ ಸರಿಯೋ, ಆದರೆ ಭಿಂದ್ರನ್‌ವಾಲೆಯ ಹಿಂಸಾ ಹೋರಾಟವನ್ನು ಅದಕ್ಕಾಗಿ ಸಮರ್ಥಿಸುವುದಕ್ಕೆ ಸಾಧ್ಯವಿಲ್ಲ. ಎರಡು ದೇಶವನ್ನು ಭಾವನಾತ್ಮಕವಾಗಿ ಬೆಸೆಯುವ ಉದ್ದೇಶದಿಂದ ಕರ್ತಾರ್‌ಪುರ ಕಾರಿಡಾರ್ ನಿರ್ಮಾಣವಾಗಿರುವಾಗ, ಭಿಂದ್ರನ್‌ವಾಲೆಯ ಪ್ರಸ್ತಾಪ ಆ ಉದ್ದೇಶಕ್ಕೆ ಧಕ್ಕೆ ತರುತ್ತದೆ ಎನ್ನುವುದು ಪಾಕಿಸ್ತಾನಕ್ಕೆ ಗೊತ್ತಿಲಿಲ್ಲವೇ? ಭಾರತ-ಪಾಕಿಸ್ತಾನದ ನಡುವೆ ಇರುವ ಏಕೈಕ ಭರವಸೆಯಾಗಿರುವ ಕರ್ತಾರ್‌ಪುರ ಕಾರಿಡಾರ್‌ಗೆ ಈ ಮೂಲಕ ಸಣ್ಣದೊಂದು ಕಳಂಕವನ್ನು ಪಾಕಿಸ್ತಾನ ಉದ್ದೇಶಪೂರ್ವಕವಾಗಿಯೇ ಎಸಗಿದೆ.

ಪಾಕಿಸ್ತಾನದ ಈ ಕ್ರಮವನ್ನು ಪಂಜಾಬ್ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ. ಕರ್ತಾರ್‌ಪುರ ಕಾರಿಡಾರ್‌ನ ಕುರಿತಂತೆ ಈ ಹಿಂದೆ ಹಲವು ನಾಯಕರು ತಮ್ಮ ಕೆಲವು ಅನುಮಾನ, ಭೀತಿಗಳನ್ನು ವ್ಯಕ್ತಪಡಿಸಿದ್ದರು. ಮುಖ್ಯವಾಗಿ, ಈ ಕಾರಿಡಾರನ್ನು ಬಳಸಿಕೊಂಡು ಪಂಜಾಬ್‌ನಲ್ಲಿ ಮತ್ತೆ ಪ್ರತ್ಯೇಕತಾ ವಾದಾವನ್ನು ಬಿತ್ತಲು ಪಾಕಿಸ್ತಾನ ಹವಣಿಸಬಹುದು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದರು. ಇವರ ಅನುಮಾನಗಳಿಗೆ ಹಲವು ನಾಯಕರು ಜೊತೆಯಾಗಿದ್ದರು. ಆದರೆ ಸಿಖ್ಖರ ಭಾವನೆಗಳನ್ನು ಗೌರವಿಸಿ ಕಾರಿಡಾರ್‌ನ್ನು ಭಾರತವು ಸ್ವಾಗತಿಸಿತ್ತು. ಇದೀಗ ಪಾಕಿಸ್ತಾನ ತುಣುಕು ವೀಡಿಯೊ ಮೂಲಕ ಮಾಡಿದ ಕುತ್ಸಿತತನ, ಅನುಮಾನಗಳಿಗೆ ಪುಷ್ಟಿಯನ್ನು ನೀಡಿದೆ. ಅನಗತ್ಯವಾಗಿ ಕಾರಿಡಾರ್ ಬಗ್ಗೆ ಆಕ್ಷೇಪಗಳನ್ನು ಎತ್ತಲು ಕಾರಣ ಸಿಕ್ಕಿದಂತಾಗಿದೆ. ಆದರೂ ಇದನ್ನೇ ಮುಂದಿಟ್ಟು ವಿವಾದ ಬೆಳೆಯದಂತೆ ನೋಡಿಕೊಳ್ಳುವುದು ಉಭಯ ದೇಶಗಳ ಹೊಣೆಗಾರಿಕೆಯಾಗಿದೆ. ಈಗಾಗಲೇ ಪಾಕಿಸ್ತಾನದಲ್ಲಿ ಹಲವು ಮಹತ್ವದ ಹಿಂದೂ ದೇವಾಲಯಗಳಿವೆ. ಹಾಗೆಯೇ ಭಾರತದಲ್ಲಿ ಮುಸ್ಲಿಮರ ಹಲವು ಧಾರ್ಮಿಕ ಸ್ಥಳಗಳಿವೆ. ಯಾವ ಧರ್ಮದ ಆಧಾರದಲ್ಲಿ ಪಾಕಿಸ್ತಾನ ಮತ್ತು ಭಾರತವನ್ನು ಒಡೆಯಲಾಯಿತೋ ಅದೇ ಧರ್ಮವನ್ನು ಮುಂದಿಟ್ಟುಕೊಂಡು ಉಭಯ ದೇಶಗಳನ್ನು ಬೆಸೆಯುವ ಕಾರ್ಯ ನಡೆಯಬೇಕು. ಸಾಂಸ್ಕೃತಿಕ ಕೊಡುಕೊಳ್ಳುವಿಕೆಯಿಂದ ಇದು ಖಂಡಿತಾ ಸಾಧ್ಯ. ಈ ಮಹತ್ ಉದ್ದೇಶಕ್ಕೆ ವೀಡಿಯೊ ತುಣುಕೊಂದು ಅಡ್ಡಿಯಾಗಿ ನಿಲ್ಲಬಾರದು.

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಈ ಕ್ರಮವನ್ನು ಖಂಡಿಸುವ ನೈತಿಕತೆ ಭಾರತಕ್ಕೂ ಇಲ್ಲವಾಗಿದೆ. ಒಂದೆಡೆ ಭಿಂದ್ರನ್ ವಾಲೆ ಸೇರಿದಂತೆ ಖಾಲಿಸ್ತಾನಿಗಳನ್ನು ಖಂಡಿಸುವ ಭಾರತ, ಮಗದೊಂದೆಡೆ ಮಹಾತ್ಮಾಗಾಂಧಿಯ ಕೊಲೆಯ ಆರೋಪಿಗಳಲ್ಲಿ ಪ್ರಮುಖರಾಗಿದ್ದ ವ್ಯಕ್ತಿಗೆ ಭಾರತ ರತ್ನವನ್ನು ನೀಡಲು ಮುಂದಾಗಿದೆ. ನಾಥೂರಾಂಗೋಡ್ಸೆಯನ್ನು ದೇಶಪ್ರೇಮಿ ಎಂದು ಬಹಿರಂಗವಾಗಿ ಕೊಂಡಾಡುವ ಜನರನ್ನು ತನ್ನ ಮಡಿಲಲ್ಲಿಟ್ಟು ಮುದ್ದಾಡುತ್ತಿದೆ. ಇಂದು ನಾಥೂರಾಂ ಪರವಾಗಿ ಬಹಿರಂಗವಾಗಿಯೇ ಜಯಘೋಷಗಳನ್ನು ಮಾಡಿದರೂ ಅವರ ವಿರುದ್ಧ ಸರಕಾರ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಮಾಲೇಗಾಂವ್ ಸ್ಫೋಟದ ಪ್ರಮುಖ ಆರೋಪಿ ಎಂದು ಗುರುತಿಸಿಕೊಂಡ ಶಂಕಿತ ಭಯೋತ್ಪಾದಕಿಯೊಬ್ಬಳಿಗೆ ಟಿಕೆಟ್ ನೀಡಿ ಆಕೆಯನ್ನು ಸಂಸತ್‌ನಲ್ಲಿ ತಂದು ಕುಳ್ಳಿರಿಸಿದೆ. ಸ್ವತಃ ಉಗ್ರವಾದಿಗಳನ್ನು ಮಡಿಲಲ್ಲಿ ಇಟ್ಟುಕೊಂಡು, ಇತರರು ಉಗ್ರವಾದಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ದೂರುವುದರಲ್ಲಿ ಯಾವ ನೈತಿಕತೆಯಿದೆ. ಗೋಡ್ಸೆ, ಸಾವರ್ಕರ್‌ರನ್ನು ಕೆಲವರು ತಮ್ಮ ಎದೆಯಲ್ಲಿಟ್ಟುಕೊಳ್ಳುವುದು ದೇಶಪ್ರೇಮದ ಸಂಕೇತವಾದರೆ, ಕಾಶ್ಮೀರದ ಕೆಲವು ದಾರಿ ತಪ್ಪಿದ ಜನರು ಅಫ್ಝಲ್‌ಗುರುವನ್ನು, ಸಿಖ್ಖರು ಭಿಂದ್ರನ್‌ವಾಲೆಯನ್ನು ಎದೆಯಲ್ಲಿಟ್ಟುಕೊಂಡರೆ ಅದು ಹೇಗೆ ದೇಶ ವಿರೋಧಿಯಾಗುತ್ತದೆ? ಮೊತ್ತ ಮೊದಲು ಕೇಂದ್ರ ಸರಕಾರ ಉಗ್ರವಾದಿಗಳ ಕುರಿತ ತನ್ನ ದ್ವಂದ್ವ ನಿಲುವಿನಿಂದ ಹಿಂದೆ ಸರಿಯಬೇಕು. ಆಗ ಮಾತ್ರ, ಪಾಕಿಸ್ತಾನದ ಕುತ್ಸಿತ ವರ್ತನೆಗಳನ್ನು ಸ್ಪಷ್ಟ ಧ್ವನಿಯಲ್ಲಿ ಪ್ರತಿಭಟಿಸುವ, ಖಂಡಿಸುವ ಶಕ್ತಿಯನ್ನು ತನ್ನದಾಗಿಸಿಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)