varthabharthi


ಕ್ರೀಡೆ

ಫಿಫಾ ಸೌಹಾರ್ದ ಫುಟ್ಬಾಲ್ ಪಂದ್ಯ

ಭಾರತ-ವಿಯೆಟ್ನಾಂ ಪಂದ್ಯ ಡ್ರಾ

ವಾರ್ತಾ ಭಾರತಿ : 7 Nov, 2019

ಹನೊಯ್, ನ.6: ಭಾರತೀಯ ಮಹಿಳಾ ಫುಟ್ಬಾಲ್ ತಂಡ ಬುಧವಾರ ನಡೆದ ಎರಡನೇ ಫಿಫಾ ಅಂತರ್‌ರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿದೆ. ನ್ಯಾಶನಲ್ ಟ್ರೈನಿಂಗ್ ಸೆಂಟರ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಥೈ ಥಿ ಥಾವೊ 39ನೇ ನಿಮಿಷದಲ್ಲಿ ವಿಯೆಟ್ನಾಂಗೆ 1-0 ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ದದ 57ನೇ ನಿಮಿಷದಲ್ಲಿ ಗೋಲು ಗಳಿಸಿದ ರಂಜನಾ ಚಾನು ವಿಯೆಟ್ನಾಂಗೆ ತಿರುಗೇಟು ನೀಡಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.

ಭಾರತ ಮೊದಲ ಅಂತರ್‌ರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು 0-3 ಗೋಲುಗಳ ಅಂತರದಿಂದ ಸೋತಿತ್ತು. ಪ್ರವಾಸಿ ಭಾರತ ತಂಡದ ಡಾಂಗ್‌ಮೈ ಗ್ರೇಸ್ ವಿಯೆಟ್ನಾಂ ರಕ್ಷಣಾಕೋಟೆಯನ್ನು ಭೇದಿಸಿ ಗೋಲು ಗಳಿಸಲು ಯತ್ನಿಸಿದರು. ಆದರೆ, ಗೋಲು ವೈಡ್ ಆದ ಕಾರಣ ಭಾರತದ ಪ್ರಯತ್ನ ವ್ಯರ್ಥವಾಯಿತು.

  ಆ ನಂತರ ಭಾರತದ ಗೋಲ್‌ಕೀಪರ್ ಅದಿತಿ ಚೌಹಾಣ್ ಎದುರಾಳಿ ವಿಯೆಟ್ನಾಂಗೆ ಗೋಲು ನಿರಾಕರಿಸುವ ಮೂಲಕ ಪ್ರತಿ ದಾಳಿ ಸಂಘಟಿಸಿದರು. ಭಾರತ ಫ್ರೀಕಿಕ್‌ನಲ್ಲಿ ಗೋಲು ಗಳಿಸಲು ಯತ್ನಿಸಿತು. ಆದರೆ, ಸ್ಟ್ರೈಕರ್ ಬಾಲಾ ದೇವಿ ಪ್ರಯತ್ನ ಗುರಿ ತಲುಪಲಿಲ್ಲ. ಮೊದಲಾರ್ಧ ಕೊನೆಗೊಳ್ಳಲು ಆರು ನಿಮಿಷ ಬಾಕಿ ಇರುವಾಗ ಥೈ ಥಿ ಥಾವೊ ವಿಯೆಟ್ನಾಂಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಈ ಮೂಲಕ ಭಾರತದ ಸ್ಟ್ರೈಕರ್‌ಗಳಿಗೆ ಪರೀಕ್ಷೆ ಒಡ್ಡಿದರು.

ವಿಯೆಟ್ನಾಂ ಗೋಲ್‌ಕೀಪರ್ ಎರಡು ಬಾರಿ ನಿರ್ಣಾಯಕ ಗೋಲನ್ನು ನಿರಾಕರಿಸುವ ಮೂಲಕ ಭಾರತಕ್ಕೆ ನಿರಾಸೆಗೊಳಿಸಿದರು. ನಾಯಕಿ ಆಶಾಲತಾದೇವಿ ನೆರವಿನಿಂದ ರಂಜನಾ 57ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು 1-1 ಅಂತರದಿಂದ ಡ್ರಾ ಸಾಧಿಸಲು ನೆರವಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)