ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್ ಕಬಳಿಸಿದ ನಿರ್ದೇಶ್ ಬೆಸೊಯಾ
ಕೋಲ್ಕತಾ, ನ.6: ಅಂಡರ್-16 ವಿಜಯ ಮರ್ಚಂಟ್ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮೇಘಾಲಯ ಪರ ಆಡಿದ ಆಫ್-ಸ್ಪಿನ್ನರ್ ನಿರ್ದೇಶ್ ಬೈಸೊಯಾ ಒಂದೇ ಇನಿಂಗ್ಸ್ ನಲ್ಲಿ ನಾಗಾಲ್ಯಾಂಡ್ನ ಎಲ್ಲ 10 ವಿಕೆಟ್ಗಳನ್ನು ಉರುಳಿಸಿ ಅಪರೂಪದ ಸಾಧನೆ ಮಾಡಿದರು. ಮೀರತ್ ಮೂಲದ ಬೈಸೊಯಾ ಮೇಘಾಲಯದ ಪರ ಅತಿಥಿ ಆಟಗಾರನಾಗಿ ಆಡಿದ್ದರು. ಬುಧವಾರ ನಡೆದ ಪಂದ್ಯದಲ್ಲಿ 21 ಓವರ್ಗಳಲ್ಲಿ 10 ಮೇಡನ್ ಸಹಿತ 51 ರನ್ ವೆಚ್ಚದಲ್ಲಿ 10 ವಿಕೆಟ್ಗಳನ್ನು ಉರುಳಿಸಿದ್ದರು. ಬೈಸೊಯಾ ದಾಳಿಗೆ ತತ್ತರಿಸಿದ್ದ ನಾಗಾಲ್ಯಾಂಡ್ ಮೊದಲ ದಿನದಾಟದಲ್ಲಿ ಕೇವಲ 113 ರನ್ಗೆ ಆಲೌಟಾಗಿತ್ತು.
ಅಂಡರ್-16 ವಿಜಯ ಮರ್ಚಂಟ್ ಟ್ರೋಫಿಯ ಎರಡನೇ ಋತುವಿನಲ್ಲಿ ಆಡುತ್ತಿರುವ ಬೈಸೊಯಾ 4 ಪಂದ್ಯಗಳಲ್ಲಿ 27 ವಿಕೆಟ್ಗಳನ್ನು ಉರುಳಿಸಿದ್ದಾರೆ. ಕಳೆದ ಬಾರಿ 6 ಪಂದ್ಯಗಳಲ್ಲಿ 33 ವಿಕೆಟ್ಗಳನ್ನು ಪಡೆದಿದ್ದರು.
ಬೈಸೊಯಾ ತನ್ನ ಅಮೋಘ ಬೌಲಿಂಗ್ನ ಮೂಲಕ 1999ರಲ್ಲಿ ದಿಲ್ಲಿ ಟೆಸ್ಟ್ನಲ್ಲಿ ಪಾಕಿಸ್ತಾನ ವಿರುದ್ಧ 74 ರನ್ಗೆ 10 ವಿಕೆಟ್ಗಳನ್ನು ಪಡೆದಿದ್ದ ಅನಿಲ್ ಕುಂಬ್ಳೆ ದಾಖಲೆಯನ್ನು ನೆನಪಿಸಿದರು.