varthabharthi


ಕರ್ನಾಟಕ

ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಶಿವಮೊಗ್ಗದಲ್ಲಿ ನೂರಾರು ಮನೆಗಳು ಜಲಾವೃತ

ವಾರ್ತಾ ಭಾರತಿ : 7 Nov, 2019

ಶಿವಮೊಗ್ಗ, ನ. 7: ಕಳೆದೆರೆಡು ದಿನಗಳಿಂದ ಜಿಲ್ಲೆಯ ಹಲವೆಡೆ ಮತ್ತೆ ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಲಾರಂಭಿಸಿದೆ. ಇದರಿಂದ ಮತ್ತೆ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ.

ತಡರಾತ್ರಿ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾಗಿದೆ. ಆದರೆ ಶಿವಮೊಗ್ಗ ನಗರದ ವಿವಿಧೆಡೆ ಚರಂಡಿ, ರಾಜಕಾಲುವೆಗಳು ಉಕ್ಕಿ ಹರಿದು ತಗ್ಗು ಪ್ರದೇಶದಲ್ಲಿರುವ ಮನೆ, ರಸ್ತೆಗಳು ಜಲಾವೃತವಾದ ವರದಿಗಳು ಬಂದಿವೆ. 

ಅಸರ್ಮಪಕ ರಾಜಕಾಲುವೆಯಿಂದ ಬಾಪೂಜಿನಗರ ಹಾಗೂ ಟ್ಯಾಂಕ್‍ಮೊಹಲ್ಲಾ ಬಡಾವಣೆಗಳು, ಮತ್ತೆ ಮಳೆ ನೀರಿನಲ್ಲಿ ಜಲಾವೃತಗೊಂಡಿದ್ದವು. ತಗ್ಗು ಪ್ರದೇಶದಲ್ಲಿರುವ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ನಿದ್ರೆಯಿಲ್ಲದ ರಾತ್ರಿ ಕಳೆಯುವಂತಾಯಿತು. ತೀವ್ರ ತೊಂದರೆ ಎದುರಿಸುವಂತಾಯಿತು. ಮುಂಜಾನೆಯವರೆಗೂ ಮನೆಗಳಲ್ಲಿ ತುಂಬಿದ್ದ ನೀರು ಹೊರಹಾಕಲು ಹರಸಾಹಸ ನಡೆಸುವಂತಾಯಿತು ಎಂದು ತಿಳಿದು ಬಂದಿದೆ.

ಜಲಾವೃತ ಸ್ಥಿತಿ ಎದುರಾದರೂ ಸಕಾಲದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿ-ಸಿಬ್ಬಂದಿ ಸ್ಥಳಕ್ಕಾಗಮಿಸದೆ, ನಿರ್ಲಕ್ಷ್ಯ ವಹಿಸಿದ್ದಾರೆಂದು ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಆಯುಕ್ತ ಚಿದಾನಂದ ವಟಾರೆಯವರು ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಕಾಂಗ್ರೆಸ್ ಮುಖಂಡ, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್‍ರವರು ನಾಗರೀಕರ ನೆರವಿಗೆ ಧಾವಿಸಿದರು. ರಾತ್ರಿಯೇ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ, ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆಗೆ ಕ್ರಮಕೈಗೊಂಡರು. 

ಕಸಕಡ್ಡಿ ತುಂಬಿಕೊಂಡು ಸರಾಗವಾಗಿ ನೀರು ಹರಿದು ಹೋಗದಿರುವುದು ಮತ್ತು ಮನೆಗಳು ಜಲಾವೃತವಾಗುತ್ತಿದ್ದ ಕಾರಣದಿಂದ, ಈ ಸ್ಥಳದಲ್ಲಿದ್ದ ಕಿರಿದಾದ ಸೇತುವೆ ನೆಲಸಮಗೊಳಿಸಲಾಗಿತ್ತು. ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವುದಾಗಿ ಪಾಲಿಕೆ ತಿಳಿಸಿತ್ತು. ಇನ್ನೊಂದೆಡೆ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗಿತ್ತು. 

ಇತ್ತೀಚೆಗೆ ಮಳೆಯೂ ಕಡಿಮೆಯಾಗಿದ್ದರಿಂದ, ಹೊಸ ಸೇತುವೆ ನಿರ್ಮಿಸುವವರೆಗೂ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಲು ಬುಧವಾರಷ್ಟೆ ಈ ಸ್ಥಳದಲ್ಲಿ ಸಿಮೆಂಟ್ ಪೈಪ್ ಹಾಕಿ ಮುಚ್ಚಲಾಗಿತ್ತು. ನಾಗರಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ ತಡರಾತ್ರಿ ದಿಢೀರ್ ಬಿದ್ದ ಮಳೆಯಿಂದ, ಈ ಪೈಪ್‍ನಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವಾಗದೆ, ಮತ್ತೆ ಮನೆಗಳಿಗೆ ನೀರು ನುಗ್ಗಿತ್ತು.  

ಸಮುದ್ರ ತೀರ ಪ್ರದೇಶಗಳಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಚಂಡಮಾರುತದ ಕಾರಣದಿಂದ, ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಕೆಲ ದಿನಗಳವರೆಗೆ ಧಾರಾಕಾರ ವರ್ಷಧಾರೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆಯ ಮೂಲಗಳು ಮುನ್ನೆಚ್ಚರಿಕೆ ನೀಡಿವೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)