varthabharthi

ಕ್ರೀಡೆ

ಪಾಕಿಸ್ತಾನ ವಿರುದ್ಧ ಕೊನೆಯ ಟ್ವೆಂಟಿ-20

ಪ್ಯಾಟ್ ಕಮಿನ್ಸ್ ಗೆ ವಿಶ್ರಾಂತಿ

ವಾರ್ತಾ ಭಾರತಿ : 7 Nov, 2019

ಪರ್ತ್, ನ.6: ಆಸ್ಟ್ರೇಲಿಯದ ಬಲಗೈ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಿಂದ ವಿಶ್ರಾಂತಿ ಪಡೆಯಲಿದ್ದಾರೆ.

 ಕಮಿನ್ಸ್ ಆಸ್ಟ್ರೇಲಿಯ ಕ್ರಿಕೆಟ್ ತಂಡದೊಂದಿಗೆ ಕ್ಯಾನ್‌ಬೆರ್ರಾದಿಂದ ಪರ್ತ್‌ಗೆ ತೆರಳದೆ, ಸಿಡ್ನಿಗೆ ತೆರಳಲಿದ್ದಾರೆ ಎಂದು ಕ್ರಿಕೆಟ್‌ಡಾಟ್‌ಕಾಮ್.ಎಯು ವರದಿ ಮಾಡಿದೆ. ಮಂಗಳವಾರ ನಡೆದ 2ನೇ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು. ‘‘ನಾವು ಬಹಳಷ್ಟು ಕ್ರಿಕೆಟ್ ಆಡಲಿದ್ದೇವೆ. ಅವರು(ಕಮಿನ್ಸ್)ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಪರ್ತ್‌ಗೆ ದೀರ್ಘ ಪ್ರಯಾಣ ಬೆಳೆಸುವ ಬದಲು ಸಿಡ್ನಿಯಲ್ಲಿ ಉಳಿಯಲಿರುವ ಕಮಿನ್ಸ್ ಟೆಸ್ಟ್ ಸರಣಿಗೆ ಸಜ್ಜಾಗಲಿದ್ದಾರೆ’’ ಎಂದು ಆಸ್ಟ್ರೇಲಿಯದ ಕೋಚ್ ಜಸ್ಟಿನ್ ಲ್ಯಾಂಗರ್ ಬುಧವಾರ ತಿಳಿಸಿದ್ದಾರೆ. ಕಮಿನ್ಸ್ ಸೋಮವಾರ ಎಸ್‌ಸಿಜಿಯಲ್ಲಿ ನಡೆಯಲಿರುವ ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ ಶೀಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ಪರ ಆಡುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ರಾಷ್ಟ್ರೀಯ ತಂಡದ ಇತರ ಆಟಗಾರರಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ನಥಾನ್ ಲಿಯೊನ್, ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಡಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)