varthabharthiಕರ್ನಾಟಕ

ಕಿರಿಯ ವೈದ್ಯರ ಮೇಲೆ ಹಲ್ಲೆ ಖಂಡಿಸಿ ನ.8ರಂದು ರಾಜ್ಯಾದ್ಯಂತ ಒಪಿಡಿ ಬಂದ್‌ಗೆ ಕರೆ

ವಾರ್ತಾ ಭಾರತಿ : 7 Nov, 2019

ಬೆಂಗಳೂರು, ನ.7: ಕರವೇ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರ ಧರಣಿ ಮುಂದುವರಿದಿದೆ. ನಾಳೆ (ನ.8)ಯಿಂದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದು, ರಾಜ್ಯಾದ್ಯಂತ ಒಪಿಡಿ ಬಂದ್ ಮಾಡಿ ಹೋರಾಟಕ್ಕೆ ಕರೆ ನೀಡಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ. ನಾಳೆ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ರಾಜ್ಯಾದ್ಯಂತ ಎಲ್ಲ ಖಾಸಗಿ ಆಸ್ಪತ್ರೆಯ ಒಪಿಡಿ ಬಂದ್ ಮಾಡಿ ಧರಣಿ ನಡೆಸುವಂತೆ ಮನವಿ ಮಾಡಲಾಗಿದೆ.

ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ, ಕ್ರಮ ಕೈಗೊಳ್ಳದಿದ್ದಲ್ಲಿ ದೇಶದಾದ್ಯಂತ ಹೊರ ರೋಗಿ ಚಿಕಿತ್ಸೆಯನ್ನು ನಿಲ್ಲಿಸಿ, ವ್ಯಾಪಕ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ರಾಜ್ಯ ಐಎಂಎ ಕಾರ್ಯದರ್ಶಿ ಡಾ.ಶ್ರೀನಿವಾಸ್ ಹೇಳಿದ್ದು, ರೋಗಿಗಳಿಗೆ ತುರ್ತು ಚಿಕಿತ್ಸೆ ಬೇಕಾದಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.

ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಖಾಸಗಿ ಕ್ಲಿನಿಕ್ ವೈದ್ಯರು ಪಾಲ್ಗೊಂಡು ಬೆಂಬಲ ನೀಡಲಿದ್ದಾರೆ. ಅಲ್ಲದೆ, ರಾಜ್ಯದ ಎಲ್ಲ ಕ್ಲಿನಿಕ್‌ಗಳು, ಆಸ್ಪತ್ರೆಗಳು, ಸರಕಾರಿ ಮತ್ತು ಖಾಸಗಿ ವೈದ್ಯರು ಪ್ರತಿಭಟನೆಗೆ ಬೆಂಬಲಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ನಡೆಸುತ್ತಿರುವ ಮುಷ್ಕರದಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಸಾಕಷ್ಟು ಪರದಾಡುವಂತಾಗಿದೆ. ವೈದ್ಯರಿಗೆ ರಕ್ಷಣೆ ಕೊಡುವುದಾಗಿ ಸರಕಾರ ಭರವಸೆ ನೀಡಿದೆಯಾದರೂ, ಧರಣಿ ಹಿಂಪಡೆಯಲು ಮುಂದಾಗುತ್ತಿಲ್ಲ.

ದೃಷ್ಟಿ ಕಳೆದುಕೊಂಡವರಿಗೆ ನ್ಯಾಯ ಒದಗಿಸಲು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಆಗ ಕರವೇ ಕಾರ್ಯಕರ್ತರು ವೈದ್ಯರ ವಾಗ್ವಾದ ಇಂಗ್ಲಿಷ್, ಕನ್ನಡ ಹೋರಾಟದ ರೂಪ ಪಡೆದಿತ್ತು. ಅಲ್ಲದೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ವೈದ್ಯರು ದೂರಿದ್ದು, ಧರಣಿ ಮುಂದುವರೆಸುವ ಸೂಚನೆಗಳಿವೆ.

ರೋಗಿಗಳಿಗೆ ತೊಂದರೆಯಾಗುತ್ತಿರುವ ವಿಚಾರ ಪರಿಗಣಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬುಧವಾರ ಮನವಿ ಮಾಡಿದರೂ ವೈದ್ಯರು ಧರಣಿಯನ್ನು ಕೈಬಿಟ್ಟಿಲ್ಲ. ರಾಜ್ಯಾದ್ಯಂತ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಫಾನಾ ಮುಂತಾದ ಸಂಘಟನೆಗಳು ಬೆಂಬಲ ಸೂಚಿಸಿವೆ.

ವೈದ್ಯರ ಕಡ್ಡಾಯ ಹಾಜರಿಗೆ ಸೂಚನೆ
ವೈದ್ಯರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ನಾಳೆ(ಅ.8) ಹೊರರೋಗಿಗಳ ಚಿಕಿತ್ಸಾ ವಿಭಾಗ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕು. ವೈದ್ಯರು ಮತ್ತು ವೈದ್ಯಕೀಯ ಸಹಾಯಕರು (ಶುಕ್ರವಾರ) ರಜೆ ರದ್ದುಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)