varthabharthiಕರ್ನಾಟಕ

ಗ್ರಾಮೀಣ ಪ್ರದೇಶದಲ್ಲಿ ಸೋಲಾರ್ ಬೀದಿ ದೀಪ ಅಳವಡಿಕೆ: ಸಚಿವ ಕೆ.ಎಸ್.ಈಶ್ವರಪ್ಪ

ವಾರ್ತಾ ಭಾರತಿ : 7 Nov, 2019

ಬೆಂಗಳೂರು, ನ. 6: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸೋಲಾರ್ ಆಧರಿತ ಬೀದಿ ದೀಪಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಬ್ಯಾಟರಿ ವ್ಯವಸ್ಥೆ ಇಲ್ಲದೆ ಸೋಲಾರ್ ಬೀದಿ ದೀಪ ಅಳವಡಿಸುವ ಸಂಬಂಧ 528 ಗ್ರಾಮ ಪಂಚಾಯತ್ ಅಧ್ಯಕ್ಷರ ಜೊತೆ ಚರ್ಚಿಸಲಾಗಿದೆ ಎಂದರು.

ಅಸಮರ್ಪಕ ವಿದ್ಯುತ್ ಪೂರೈಕೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸೋಲಾರ್ ದೀಪಗಳ ಅಳವಡಿಕೆ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಾಗುತ್ತಿದೆ ಎಂದು ಈಶ್ವರಪ್ಪ ವಿವರಿಸಿದರು.

ಮೋಡ ಬಿತ್ತನೆ ಟೆಂಡರ್ ರದ್ದು: ರಾಜ್ಯದಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಬೇಡ ಎನ್ನುವುದು ನನ್ನ ತೀರ್ಮಾನ. ಮೋಡ ಬಿತ್ತನೆ ಸಂಬಂಧ ಎರಡು ವರ್ಷಕ್ಕೆ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಸದ್ಯಕ್ಕೆ ಯಾವುದೇ ಕಾರಣಕ್ಕೂ ಮೋಡ ಬಿತ್ತನೆ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.

ರಾಜಕಾರಣಿಯೊಬ್ಬರ ಪುತ್ರನಿಗೆ ಮೋಡ ಬಿತ್ತನೆ ಗುತ್ತಿಗೆ ಟೆಂಡರ್ ನೀಡಿದ್ದಾರೆಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಜನತೆ ತೆರಿಗೆ ಹಣವನ್ನು ಯಾವುದೇ ಕಾರಣಕ್ಕೂ ಪೋಲು ಮಾಡಲು ಅವಕಾಶ ನೀಡುವುದಿಲ್ಲ. ಎರಡು ವರ್ಷ ಮೋಡ ಬಿತ್ತನೆ ಗುತ್ತಿಗೆ ಒಟ್ಟಿಗೆ ಏಕೆ ನೀಡಿದ್ದಾರೆಂಬ ಬಗ್ಗೆ ನನಗೆ ಗೊತ್ತಿಲ್ಲ.

ಮೋಡ ಬಿತ್ತನೆ ಸಂಬಂಧ ಸರಕಾರ ಹಾಗೂ ಖಾಸಗಿ ಸಂಸ್ಥೆಯೊಂದಿಗೆ ಯಾವ ರೀತಿಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಶೀಘ್ರವೇ ಮಾಹಿತಿ ಪಡೆದುಕೊಳ್ಳಲಿದ್ದೇನೆ. ಆದರೆ, ಯಾವುದೇ ಕಾರಣಕ್ಕೂ ಜನರ ತೆರಿಗೆ ಹಣವನ್ನು ದುರ್ಬಳಕೆ ಆಗಲು ಬಿಡುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)