varthabharthi


ರಾಷ್ಟ್ರೀಯ

ಆರೋಪ ನಿರಾಕರಿಸಿದ ಆಹಾರ ಸಚಿವ

ಜಾರ್ಖಂಡ್‌ನಲ್ಲಿ ಹಸಿವಿನಿಂದ ಮಹಿಳೆ ಸಾವು: ಆರೋಪ

ವಾರ್ತಾ ಭಾರತಿ : 7 Nov, 2019

ರಾಂಚಿ/ಗಿರಿಧ್,ನ.7: ತನ್ನ ಪತ್ನಿ ಹಸಿವಿನಿಂದ ಸಾವನ್ನಪ್ಪಿರುವುದಾಗಿ ಜಾರ್ಖಂಡ್‌ನ ಗಿರಿಧ್ ಜಿಲ್ಲೆಯ ಬಡ ಗ್ರಾಮಸ್ಥನೊಬ್ಬ ಆಪಾದಿಸಿದ್ದಾನೆ. ಆದರೆ ಜಾರ್ಖಂಡ್‌ನ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಸರಯೂ ರಾಯ್ ಅವರು, ಅದನ್ನು ಅಲ್ಲಗಳೆದಿದ್ದಾರೆ.

ಹಸಿವಿನಿಂದ ಸಾವನ್ನು ತಡೆಗಟ್ಟಲು ಸಮರ್ಪಕವಾದ ವಿಧಾನಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿವೆ ಎಂದು ಸಚಿವರು ಹೇಳಿದ್ದಾರೆ.

48 ವರ್ಷ ವಯಸ್ಸಿನ ತನ್ನ ಪತ್ನಿ ಸಾವಿತ್ರಿ ಮಂಗಳವಾರ ಹಸಿವಿನಿಂದ ಮೃತಪಟ್ಟಿ ದ್ದಾಳೆಂದು ಗಿರಿಧ್ ಜಿಲ್ಲೆಯ ಚಿರುದಿಹ್ ಗ್ರಾಮದ ರಮೇಶ್ ತುರಿ ಆಪಾದಿಸಿದ್ದಾರೆ.

ಆದರೆ ಸಾವಿತ್ರಿಯ ಸಾವು ಹಸಿವಿನಿಂದ ಸಂಭವಿಸಿದ್ದಲ್ಲವೆಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಸರಯೂ ರಾಯ್ ತಿಳಿಸಿದ್ದಾರೆ. ಪಡಿತರ ಕಾರ್ಡ್ ಇಲ್ಲದವರಿಗೂ ಸಹ ಅನ್ನಪೂರ್ಣ ಯೋಜನೆಯಡಿ ಪಡಿತರ ಆಹಾರವನ್ನು ಒದಗಿಸುವಂತಹ ಸಮರ್ಪಕ ಪದ್ಧತಿ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಧಾನ್ಯ ಬ್ಯಾಂಕ್ ಕೂಡಾ ಅಸ್ತಿತ್ವದಲ್ಲಿದ್ದು, ನೆರವು ಕೋರುವ ಕುಟುಂಬದ ಮುಖ್ಯಸ್ಥರಿಗೆ 10 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ ಎಂದವರು ತಿಳಿಸಿದರು.

ಹಸಿವಿನಿಂದ ಸಾವನ್ನಪ್ಪಿರುವ ವರದಿಯನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆಂದು ಅವರು ಹೇಳಿದ್ದಾರೆ. ಘಟನೆಯ ಕುರಿತಾದ ಮಾಧ್ಯಮಗಳ ವರದಿಯಲ್ಲಿ ಅಸ್ಪಷ್ಟತೆ ಇರುವುದಾಗಿ ಅವರು ಹೇಳಿದ್ದಾರೆ.

ಈ ಮಧ್ಯೆ ಜಿಲ್ಲಾಧಿಕಾರಿ ರಾಹುಲ್ ಕುಮಾರ್ ಸಿನ್ಹಾ ಅವರು ಸಾವಿತ್ರಿ ದೇವಿ ಹಸಿವಿನಿಂದ ಸಾವನ್ನಪ್ಪಿದ್ದಾರೆಂಬ ವರದಿಗಳನ್ನು ತಳ್ಳಿಹಾಕಿದ್ದಾರೆ.

 ಕುಟುಂಬದ ಎಲ್ಲಾ ಸದಸ್ಯರು ಆರೋಗ್ಯದಿಂದಿದ್ದಾರೆ ಮತ್ತು ಅವರ ಮನೆಯಲ್ಲಿ ಆಹಾರ ಸಾಮಾಗ್ರಿಗಳು ಕೂಡಾ ದೊರೆತಿವೆಯೆಂದು ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)