varthabharthi


ರಾಷ್ಟ್ರೀಯ

ಕರ್ತಾರ್‌ಪುರ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮ: ಪಾಕ್ ಪ್ರಯಾಣಕ್ಕೆ ಅನುಮತಿ ಕೋರಿದ ಸಿಧು

ವಾರ್ತಾ ಭಾರತಿ : 7 Nov, 2019

 ಹೊಸದಿಲ್ಲಿ,ನ.7: ಪಾಕಿಸ್ತಾನದಲ್ಲಿ ಶುಕ್ರವಾರ ನಡೆಯಲಿರುವ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತನಗೆ ಅನುಮತಿ ನೀಡಬೇಕೆಂದು ಕೋರಿ ಪಂಜಾಬ್‌ನ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಬರೆದಿರುವ ಮೂರನೆ ಪತ್ರವನ್ನು ಕೂಡಾ ಕೇಂದ್ರ ವಿದೇಶಾಂಗ ಸಚಿವಾಲಯ ಬದಿಗೊತ್ತಿದೆ.

 ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಯಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಗಳನ್ನು ನಡೆಸುವ ಸಂದರ್ಭದಲ್ಲಿ ವೈಯಕ್ತಿಕ ನೆಲೆಯಲ್ಲಿ ಪ್ರಯಾಣಿಸುವವರ ಮೇಲೆ ಗಮನಹರಿಸಲು ತನಗೆ ಸಾಧ್ಯವಿಲ್ಲವೆಂದು ಅದು ಹೇಳಿದೆ.

 ನವೆಂಬರ್ 9ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಸಿಧು ಅವರು ಈವರೆಗೆ ವಿದೇಶಾಂಗ ಸಚಿವಾಲಯಕ್ಕೆ ಮೂರು ಬಾರಿ ಪತ್ರಗಳನ್ನು ಬರೆದಿದ್ದಾರೆ. ತನ್ನ ಕೋರಿಕೆಗೆ ಉತ್ತರ ದೊರೆಯದೆ ಇರುವುದರಿಂದ ತನ್ನ ಪ್ರಯಾಣದ ಯೋಜನೆಗಳಿಗೆ ಹಿನ್ನಡೆಯಾಗಿರುವುದಾಗಿ ಅವರು ತಿಳಿಸಿದ್ದರು.

 ಈ ಮಧ್ಯೆ ಪಾಕಿಸ್ತಾನದ ಅಧಿಕಾರಿಗಳು ನವಜೋತ್ ಸಿಂಗ್ ಸಿಧು ಅವರಿಗೆ ಈಗಾಗಲೇ ಪಾಕ್ ಪ್ರವಾಸಕ್ಕೆ ವೀಸಾವನ್ನು ಒದಗಿಸಿದ್ದಾರೆ. ಬಾಬಾ ಗುರುನಾನಕ್ ಅವರ ಪವಿತ್ರ ಮಂದಿರದ ಸಂದರ್ಶನಕ್ಕಾಗಿ ಭಾರತೀಯ ರಾಜಕಾರಣಿ ನವಜೋತ್‌ಸಿಂಗ್ ಸಿಧು ಅವರಿಗೆ ಪಾಕಿಸ್ತಾನವು ವೀಸಾ ನೀಡಿದೆ’’ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಸಲ್ ಅವರು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

        ಪಂಜಾಬ್‌ನ ಗುರುದಾಸಪುರದ ದೇರಾ ಬಾಬಾ ನಾನಕ್ ಮಂದಿರ ಹಾಗೂ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ನಡುವೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭವು ಶನಿವಾರದಂದು ಉಭಯ ದೇಶಗಳ ಎರಡೂ ಕಡೆಗಳಲ್ಲಿ ನಡೆಯಲಿದೆ.

  ಭಾರತದ ಕಡೆಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಕಡೆಯಿಂದ ಇಮ್ರಾನ್ ಖಾನ್ ಅವರು ಕರ್ತಾರ್‌ಪುರ ಕಾರಿಡಾರ್ ಉದ್ಘಾಟಿಸಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)