varthabharthiಕರ್ನಾಟಕ

ಸರಕಾರದಿಂದಲೇ ವಸತಿ ಶಾಲಾ ಕಟ್ಟಡ ನಿರ್ಮಾಣ: ಸಚಿವ ಬಿ.ಶ್ರೀರಾಮುಲು

ವಾರ್ತಾ ಭಾರತಿ : 7 Nov, 2019

ಬೆಂಗಳೂರು, ನ. 6: ವಸತಿ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಕ್ರೈಸ್ಟ್ ಸಂಸ್ಥೆ ಬದಲಿಗೆ ರಾಜ್ಯ ಸರಕಾರದಿಂದಲೇ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಕ್ರೈಸ್ಟ್ ಸಂಸ್ಥೆ ವಸತಿ ಶಾಲಾ ಕಟ್ಟಡ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ. ಹೀಗಾಗಿ ಸಮಸ್ಯೆ ಎದುರಾಗಿದೆ.

ಐದು ವರ್ಷಗಳಿಂದ ಬಾಕಿ ಇರುವ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಕ್ರೈಸ್ಟ್ ಸಂಸ್ಥೆಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಶಾಲಾ ಕಟ್ಟಡ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. 150 ಕಟ್ಟಡಗಳ ಕಾಮಗಾರಿ ಕ್ರೈಸ್ಟ್ ಸಂಸ್ಥೆಗೆ ನೀಡಲಾಗಿದೆ. ಶೇ. 50ರಷ್ಟು ಮಾತ್ರ ಕಾಮಗಾರಿ ಆಗಿದೆ ಎಂದು ವಿವರ ನೀಡಿದರು.

ವಸತಿ ಶಾಲಾ ಕಟ್ಟಡಗಳನ್ನು ತ್ವರಿತಗತಿ ನಿರ್ಮಾಣಕ್ಕೆ ಕ್ರೈಸ್ಟ್ ಸಂಸ್ಥೆ ಬದಲಿಗೆ ಪರ್ಯಾಯ ಸಂಸ್ಥೆಗೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, ಸರಕಾರದಿಂದಲೇ ವಸತಿ ಶಾಲಾ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಗುಣಮಟ್ಟದ ಆಹಾರ: ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ವಸತಿ ಹಾಗೂ ಗುಣಮಟ್ಟದ ಆಹಾರ ಪೂರೈಕೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇಲಾಖೆಯಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 1,363 ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ಇಲ್ಲ. ಹೀಗಾಗಿ ಸ್ವಂತ ಕಟ್ಟ ನಿರ್ಮಾಣ ಸಂಬಂಧ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

‘ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಖಂಡನೀಯ. ಹಲ್ಲೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಆಸ್ಪತ್ರೆಗಳ ವೈದ್ಯರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ವೈದ್ಯರ ಭದ್ರತೆ ಸಂಬಂಧ ಸಿಎಂ ಹಾಗೂ ಗೃಹ ಸಚಿವರೊಂದಿಗೆ ಚರ್ಚೆ ಮಾಡಲಾಗುವುದು. ಈಗಾಗಲೇ ವೈದ್ಯರ ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಲಾಗಿದೆ’
-ಬಿ.ಶ್ರೀರಾಮುಲು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)