varthabharthi

ನಿಮ್ಮ ಅಂಕಣ

ರಾಜ್ಯದ ಖಜಾನೆ ಆಡಳಿತ ಪಕ್ಷದ ಸ್ವತ್ತಲ್ಲ...!

ವಾರ್ತಾ ಭಾರತಿ : 8 Nov, 2019
-ಕೆ.ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಕಳೆದ ಕೆಲವು ದಶಕಗಳಿಂದ, ರಾಜ್ಯದಲ್ಲಿ ಆಡಳಿತಕ್ಕೆ ಬರುವ ಪಕ್ಷದ ಶಾಸಕರಿಗೆ ಮತ್ತು ಅವರನ್ನು ಬೆಂಬಲಿಸುವ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಆ ಶಾಸಕರ ಕ್ಷೇತ್ರಕ್ಕೆ ಕೊಡುವಂತಹ ಕೆಟ್ಟ ಸಂಪ್ರದಾಯ ಆರಂಭವಾಗಿದೆ. ಎಲ್ಲಾ ಸರಕಾರಗಳು ರಾಜ್ಯದ ಖಜಾನೆಯನ್ನು ತಮ್ಮ ಪಕ್ಷದ ಆಸ್ತಿ ಎಂಬ ರೀತಿಯಲ್ಲಿ ಹಂಚಿಕೆಯನ್ನು ಮಾಡುತ್ತಿದ್ದಾರೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ ನಾಗರಿಕರು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕಟ್ಟುವ ತೆರಿಗೆ ಹಣದಿಂದ ರಾಜ್ಯದ ಖಜಾನೆ ತುಂಬುತ್ತದೆ. ಕೇವಲ ಆಡಳಿತ ಪಕ್ಷದ ಅಥವಾ ಅವರ ಬೆಂಬಲಿತ ಕ್ಷೇತ್ರದವರಿಂದ ಮಾತ್ರವೇ ರಾಜ್ಯದ ಖಜಾನೆ ತುಂಬುವುದಿಲ್ಲ. 224 ವಿಧಾನಸಭಾ ಕ್ಷೇತ್ರಗಳು ಸಮಾನವಾಗಿ ಅಭಿವೃದ್ಧಿಯಾದಾಗ, ಎಲ್ಲಾ ಜನರಿಗೆ ನ್ಯಾಯ ದೊರೆಯುತ್ತದೆ. ಸರಕಾರವೆಂದರೆ ಒಂದು ತಾಯಿಯ ಸಮಾನ. ರಾಜ್ಯದ ಜನತೆ ಅವರ ಮಕ್ಕಳ ಸಮಾನ. ಮಕ್ಕಳನ್ನು ಪೋಷಿಸುವಲ್ಲಿ ಯಾವುದೇ ತಾಯಿಯು ತಾರತಮ್ಯ ಮಾಡುವುದಿಲ್ಲ. ಆದರೆ ಈ ಸರಕಾರಗಳಿಗೆ ಯಾವುದೇ ರೀತಿಯ ಮಾನದಂಡವಿಲ್ಲದೆ ಅನುದಾನವನ್ನು ಹಂಚುತ್ತಾರೆ. ಸ್ವಾತಂತ್ರ್ಯ ದೊರೆತು ಹಲವು ದಶಕಗಳ ನಂತರವೂ ಸಹ ರಸ್ತೆ ಕಾಣದ, ಬಸ್ ಸೌಲಭ್ಯವಿಲ್ಲದ, ಆಸ್ಪತ್ರೆ ಸೌಕರ್ಯವಿಲ್ಲದ, ಶಾಲಾ ಕಾಲೇಜುಗಳ ವ್ಯವಸ್ಥೆ ಇಲ್ಲದ, ಕುಡಿಯುವ ನೀರಿನ ಅನುಕೂಲವೇ ಇಲ್ಲದ, ನೀರಾವರಿ ಯೋಜನೆಗಳಿಲ್ಲದ, ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳು ಇನ್ನೂ ನಮ್ಮಲ್ಲಿ ಉಳಿದುಕೊಂಡಿದೆ. ಡಾ. ನಂಜುಂಡಪ್ಪರವರ ವರದಿಯೂ ಬಂತು. ರಾಜ್ಯದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷವಾದ ಸೌಲಭ್ಯವನ್ನು ನೀಡುವ ಕಾರ್ಯಕ್ರಮಗಳು ಅದರಲ್ಲಿ ಅಡಕವಾಗಿತ್ತು. ವರ್ಷದಿಂದ ವರ್ಷಕ್ಕೆ ನಂಜುಂಡಪ್ಪವರದಿಯ ಅನುಷ್ಠಾನವನ್ನು ನಿರ್ಲಕ್ಷಿಸಲಾಗುತ್ತಿದೆ. ಒಂದು ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರೆ ಕೇವಲ ಆಡಳಿತ ಪಕ್ಷಗಳಿರಬೇಕು ಎನ್ನುವುದಾದರೆ 224 ವಿಧಾನಸಭಾ ಕ್ಷೇತ್ರಗಳನ್ನು ಒಂದೇ ಪಕ್ಷಕ್ಕೆ ಸೀಮಿತ ಮಾಡಿಬಿಡಿ. ಆಗ ಎಲ್ಲ ಕ್ಷೇತ್ರಗಳಿಗೂ ನ್ಯಾಯ ಸಿಗಬಹುದು.

ಪಕ್ಷಾಂತರ ಮಾಡುವವರು ಅಭಿವೃದ್ಧಿಗಾಗಿ ಎಂಬ ಹೊಸ ವ್ಯಾಖ್ಯಾನವನ್ನು ಮಾಡುತ್ತಿದ್ದಾರೆ. ಇಲ್ಲಿ ಯಾರ ಅಭಿವೃದ್ಧಿ ಎಂಬ ಪ್ರಶ್ನೆ ಕಾಡುತ್ತಿದೆ. ಅಭಿವೃದ್ಧಿಯಾಗಲು ಆಡಳಿತ ಪಕ್ಷವೇ ಬೇಕು ಎನ್ನುವುದಾದರೆ, ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಆಡಳಿತ ಪಕ್ಷದಲ್ಲಿದ್ದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎನ್ನುವುದಾದರೆ ಕಳೆದ ಹಲವಾರು ವಿಧಾನಸಭಾ ಚುನಾವಣೆಗಳಲ್ಲಿ ಬಹಳಷ್ಟು ಕ್ಷೇತ್ರಗಳು ಹಲವಾರು ಬಾರಿ ಆಡಳಿತ ಪಕ್ಷದ ಸದಸ್ಯರಿಂದಲೇ ತುಂಬಿತ್ತು. ಹಾಗಿದ್ದ ಮೇಲೆ ಅಂತಹ ಕ್ಷೇತ್ರಗಳು ಇನ್ನೂ ಏಕೆ ಅಭಿವೃದ್ಧಿಯಾಗಿಲ್ಲ.?

ಕ್ಷೇತ್ರಗಳಿಗೆ ಅನುದಾನವನ್ನು ಹಂಚುವ ವಿಚಾರದಲ್ಲಿ ಒಂದು ನಿರ್ದಿಷ್ಟವಾದ ಮಾನದಂಡವಿರದಿದ್ದರೆ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎನ್ನುವ ರಾಜ್ಯ ಸರಕಾರದ ಧೋರಣೆ ತೆರಿಗೆ ಪಾವತಿಸುವ ಜನರಿಗೆ ಮಾಡುವ ವಂಚನೆಯಾಗುತ್ತದೆ. ಯಾವುದೇ ಒಂದು ಶಾಶ್ವತವಾದ ನಿರ್ದಿಷ್ಟವಾದ ಯೋಜನೆಗಳಿಗೆ ಅನುದಾನವನ್ನು ನೀಡುವ ಸಂದರ್ಭದಲ್ಲಿ ಅವುಗಳಿಂದ ಎಷ್ಟು ಜನರಿಂದ ಅನುಕೂಲವಾಗುತ್ತದೆ? ಅವುಗಳ ಆದ್ಯತೆಗಳೇನಿದೆ? ಅದು ಅವಶ್ಯಕತೆಯೋ, ಅನಿವಾರ್ಯವೂ? ಎಂಬ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ತಮ್ಮನ್ನು ಬೆಂಬಲಿಸಿದ ಮಾತ್ರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ನೀಡುವುದಾದರೆ, ಖಜಾನೆಯನ್ನು ನಿಮ್ಮ ಪಕ್ಷದ ಆಸ್ತಿ ಎಂದು ಘೋಷಿಸಿಕೊಂಡುಬಿಡಿ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ನ್ಯಾಯಾಲಯಗಳಲ್ಲಿ ಸಲ್ಲಿಸಿ ಅನುದಾನ ಹಂಚಿಕೆಯಲ್ಲಿನ ತಾರತಮ್ಯವನ್ನು ಸರಿಪಡಿಸಲು ಇದು ಸಕಾಲವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)