varthabharthiಕರಾವಳಿ

ರಾಜ್ಯದ ಎ ದರ್ಜೆಯ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ: ವಧುವಿಗೆ 8 ಗ್ರಾಂ ಚಿನ್ನ, 10 ಸಾವಿರ ರೂ, ವರನಿಗೆ 5ಸಾವಿರ ರೂ.

ವಾರ್ತಾ ಭಾರತಿ : 8 Nov, 2019

ಮಂಗಳೂರು, ನ.8: ರಾಜ್ಯದ ಎ ದರ್ಜೆಯ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲು ಕ್ರಮಗಳಾಗುತ್ತಿದ್ದು, ಸರಕಾರ ವಧುವಿಗೆ 8 ಗ್ರಾಂ ಚಿನ್ನ (ಸುಮಾರು 40,000 ರೂ. ಮೌಲ್ಯದ್ದು) ಹಾಗೂ ದಾರೆಸೀರೆಗಾಗಿ 10,000 ರೂ. ಹಾಗೂ ವರನಿಗೆ ವಸ್ತ್ರಕ್ಕಾಗಿ 5,000ರೂ. ಒದಗಿಸಲಿದೆ ಎಂದು ಮುಜರಾಯಿ ಖಾತೆ ಸಚಿವರೂ ಆಗಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿಂದು ಸರಕಾರದ 100 ದಿನಗಳ ಸಾಧನಾ ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. 

ರಾಜ್ಯದಲ್ಲಿ 191 ಎ ದರ್ಜೆಯ ದೇವಸ್ಥಾನಗಳಿದ್ದು, ಅದರಲ್ಲಿ 100 ದೇವಸ್ಥಾನಗಳಲ್ಲಿ ಆಯ್ದುಕೊಂಡು ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು. ರಾಜ್ಯದಲ್ಲಿ 2500 ಮೀನುಗಾರಿಕಾ ಮನೆಗಳ ನಿರ್ಮಾಣದ ಪ್ರಸ್ತಾವನೆ ಮಂಡಿಸಲಾ ಗಿದೆ. ಕೆಎಫ್‌ಡಿಸಿ ಮೂಲಕ ಮನೆಗಳ ವಿತರಣೆ ನಡೆಯಲಿದ್ದು, ಶಾಸಕರು ಆಯ್ಕೆ ನಡೆಸಲಿದ್ದಾರೆ ಎಂದವರು ಹೇಳಿದರು.

ರಾಜ್ಯದ 23,000 ಮಹಿಳೆಯರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಗುಂಪು ಸಾಲ (50000 ರೂ.ವರೆಗೆ) ಒಟ್ಟು 63 ಕೋಟಿ ರೂ. ಮನ್ನಾ ಮಾಡಲು ಸೂಚಿಸಲಾಗಿದೆ. 2017-18 ಹಾಗು 2018-19ನೆ ಸಾಲಿನ ಸಾಲವನ್ನು ವಸೂಲು ಮಾಡದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೂಚನೆ ನೀಡಲು ತಿಳಿಸಲಾಗಿದೆ. ಅಕ್ರಮ ಬಿಪಿಎಲ್ ಕಾರ್ಡ್ ಕುರಿತಂತೆ ದಂಡ ಹಾಕುವ ಪ್ರಕ್ರಿಯೆಗೆ ತಡೆ ಹಿಡಿಯಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.

ದೇವರ ಹೆಸರಿನಲ್ಲಿ ಬಾರ್, ವೆನ್‌ಶಾಪ್‌ಗಳ ಕುರಿತಂತೆ ಟಿಪ್ಪಣಿ ಸಂಗ್ರಹ

ರಾಜ್ಯದ ಅನೇಕ ಕಡೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ವೈನ್ ಶಾಪ್‌ಗಳಿಗೆ ದೇವರ ಹೆಸರನ್ನಿಟ್ಟಿರುವ ಬಗ್ಗೆ ಧಾರ್ಮಿಕ ಇಲಾಖೆಯ ಸಭೆಯ ಸಂದರ್ಭ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಆ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಟಿಪ್ಪಣಿ ನೀಡುವಂತೆ ಸೂಚಿಸಲಾಗಿದೆ. ಚರ್ಚೆಗೆ ಪ್ರಜಾಪ್ರಭುತ್ವದಲ್ಲಿ ನಿಷೇಧವಿಲ್ಲ. ಚರ್ಚೆಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)