ಮಹಾರಾಷ್ಟ್ರದ ಸಿಎಂ ಫಡ್ನವೀಸ್ ರಾಜೀನಾಮೆ
ಮುಂಬೈ, ನ.9: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಶುಕ್ರವಾರ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಹಾಗೂ ಅದರ ಜೊತೆಗಾರ ಪಕ್ಷವಾದ ಶಿವಸೇನೆ ಜೊತೆಗೂಡಿ ಸರಕಾರ ರಚಿಸುವ ಸಾಧ್ಯತೆ ಇನ್ನೂ ಕಂಡುಬರದಿರುವ ಹಿನ್ನೆಲೆಯಲ್ಲಿ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸರಕಾರ ರಚನೆಗೆ ಮಧ್ಯರಾತ್ರಿಯ ಅಂತಿಮಗಡು ಮುಕ್ತಾಯಗೊಳ್ಳುವುದಕ್ಕೆ ಕೆಲವು ತಾಸುಗಳ ಮೊದಲೇ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಫಡ್ನವೀಸ್ ರಾಜೀನಾಮೆ ಪತ್ರವನ್ನು ಹಸ್ತಾತರಿಸಿದ್ದಾರೆ.
ರಾಜ್ಯ ವಿಧಾನಸಭೆಯ ಅವಧಿಯು ನಾಳೆ ಮುಗಿಯಲಿರುವುದರಿಂದ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಅಧಿಕವಾಗಿದೆಯೆಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಬಹುಮತವನ್ನು ಪಡೆದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕಾಗಿ ಉಭಯ ಪಕ್ಷಗಳ ನಡುವೆ ಕಿತ್ತಾಟವು ಉಂಟಾಗಿದೆ.
ಐದು ವರ್ಷಗಳ ಅಧಿಕಾರಾವಧಿಯಲ್ಲಿ ಉಭಯಪಕ್ಷಗಳ ನಡುವೆ ಮುಖ್ಯಮಂತ್ರಿ ಹುದ್ದೆ ಸೇರಿದಂತೆ 50:50 ಸೂತ್ರದಲ್ಲಿ ಅಧಿಕಾರವನ್ನು ಹಂಚಿಕೊಳ್ಳಲು ಏರ್ಪಟ್ಟಿದ್ದ ಒಪ್ಪಂದವನ್ನು ಶಿವಸೇನೆಯು ಬಿಜೆಪಿಗೆ ನೆನಪಿಸಿತ್ತು.