varthabharthi

ಬೆಂಗಳೂರು

ಮೂರು ತಿಂಗಳಲ್ಲಿ ಬನಶಂಕರಿ ಸ್ಕೈವಾಕ್ ಸಾರ್ವಜನಿಕರ ಬಳಕೆಗೆ ಲಭ್ಯ: ಸಂಸದ ತೇಜಸ್ವಿ ಸೂರ್ಯ

ವಾರ್ತಾ ಭಾರತಿ : 8 Nov, 2019

ಬೆಂಗಳೂರು, ನ.8: ನಗರದ ಬನಶಂಕರಿ ಬಸ್ ನಿಲ್ದಾಣದ ಬಳಿ ಉಂಟಾಗಿರುವ ಸಂಚಾರ ದಟ್ಟಣೆ ನಿವಾರಿಸಲು ಸ್ಕೈವಾಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಈ ಕಾಮಗಾರಿ ಮೂರು ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಬನಶಂಕರಿ ಬಸ್ ನಿಲ್ದಾಣದಲ್ಲಿನ ಸಂಚಾರ ದಟ್ಟಣೆಯ ಬಗ್ಗೆ ಬಿಬಿಎಂಪಿ, ಸಂಚಾರ ಮತ್ತು ಹಿರಿಯ ಅಧಿಕಾರಿಗಳ ಜತೆ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಬನಶಂಕರಿ ಬಸ್ ನಿಲ್ದಾಣದಲ್ಲಿ ದಟ್ಟಣೆಯಿಂದ ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ನಲುಗಿ ಹೋಗಿದ್ದಾರೆ. ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣದ ನಡುವೆ ಸ್ಕೈವಾಕ್ ನಿರ್ಮಿಸಿದರೆ ಇದಕ್ಕೆ ಪರಿಹಾರ ಕಲ್ಪಿಸಲು ಸಾಧ್ಯ ಎಂದರು.

ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ಮಧ್ಯೆ ನೇರವಾಗಿ ಸ್ಕೈವಾಕ್ ನಿರ್ಮಾಣ ಮಾಡಿದಲ್ಲಿ ಪ್ರಯಾಣಿಕರಿಗೆ ಪ್ರಯೋಜನವಾಗಲಿದ್ದು, ಈ ಕೂಡಲೇ ಕಾಮಗಾರಿ ಆರಂಭಿಸಿ ಮುಂದಿನ ಮೂರು ತಿಂಗಳ ಒಳಗಾಗಿ ಸಾರ್ವಜನಿಕ ಸೇವೆಗೆ ಮುಕ್ತವಾಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಅಮಾನತು ಎಚ್ಚರಿಕೆ: ಸ್ಕೈವಾಕ್ ನಿರ್ಮಾಣಕ್ಕೆ ಅನಗತ್ಯ ವಿಳಂಬ ಮಾಡುವ ಮೂಲಕ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಸಿದರು.

ಬನಶಂಕರಿ ಬಸ್ ನಿಲ್ದಾಣದಲ್ಲಿನ ವೆುಟ್ರೋ ಹಾಗೂ ಬಸ್ ನಿಲ್ದಾಣದ ನಡುವೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಸ್ಕೈವಾಕ್ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಇದೊಂದು ಪ್ರಯೋಗಿಕ ಯೋಜನೆಯಾಗಿ ರೂಪುಗೊಳ್ಳಲಿದೆ ಎಂದು ಅಶೋಕ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)