varthabharthi


ಬೆಂಗಳೂರು

ವೈದ್ಯರ ಮುಷ್ಕರ ಅಂತ್ಯ

ಕರ್ತವ್ಯ ನಿರತ ವೈದ್ಯರಿಗೆ ಅಡ್ಡಿಪಡಿಸಿದ ಆರೋಪ: ಕರವೇ ಕಾರ್ಯಕರ್ತರು ಶರಣು, ಬಿಡುಗಡೆ

ವಾರ್ತಾ ಭಾರತಿ : 8 Nov, 2019

ಬೆಂಗಳೂರು, ನ.8: ಕರ್ತವ್ಯನಿರತ ವೈದ್ಯರಿಗೆ ಅಡ್ಡಿಪಡಿಸಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರಿಗೆ ಶರಣಾಗಿ ಬಂಧನಕ್ಕೊಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ 13 ಕಾರ್ಯಕರ್ತರಿಗೆ 24ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಮಂದಿ ಮಿಂಟೋ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಸ್ಪತ್ರೆಯ ಸಂಶೋಧನ ವಿದ್ಯಾರ್ಥಿಗಳು ಶುಕ್ರವಾರ ರಾಜ್ಯಾದ್ಯಂತ ಒಪಿಡಿಗಳ ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ಆರೋಪ ಎದುರಿಸುತ್ತಿರುವ ಕರವೇ ಕಾರ್ಯಕರ್ತರೇ ಬೆಳಗ್ಗೆ ಖುದ್ದಾಗಿ ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ಹಾಜರಾದರು. 'ನಮ್ಮಿಂದ ಬಡ ರೋಗಿಗಳಿಗೆ ತೊಂದರೆಯಾಗಬಾರದು. ಜನರ ಹಿತಕ್ಕಾಗಿ ಪೊಲೀಸರಿಗೆ ಶರಣಾಗಲು ತೀರ್ಮಾನ ಮಾಡಿದ್ದೇವೆ. ಆದರೆ, ಕಣ್ಣು ಕಳೆದುಕೊಂಡ ಬಡರೋಗಿಗಳ ಪರವಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ತಿಳಿಸಿದ್ದಾರೆ. 

ವೈದ್ಯರ ಮುಷ್ಕರಕ್ಕೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ವೈದ್ಯರ ಮುಷ್ಕರದಿಂದ ಅನಗತ್ಯವಾಗಿ ರೋಗಿಗಳಿಗೆ ತೊಂದರೆಯಾಗುತ್ತಿದೆ. ನಾವು ಮಾನವೀಯ ದೃಷ್ಟಿಯಿಂದ ಪೊಲೀಸರಿಗೆ ಶರಣಾಗಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.

ಏನಿದು ಪ್ರಕರಣ: ಮಿಂಟೋ ಆಸ್ಪತ್ರೆಯಲ್ಲಿ ಕಳೆದ ಜುಲೈನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಸುಮಾರು 22 ರೋಗಿಗಳು ಕಣ್ಣು ಕಳೆದುಕೊಂಡಿದ್ದರು. ಇದಕ್ಕೆ ಕಾರಣರಾದವರ ಮೇಲೆ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ. ಹಾಗೂ ರೋಗಿಗಳಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲವೆಂದು ಆರೋಪಿಸಿ ಕರವೇ ಕಾರ್ಯಕರ್ತರು ಕಳೆದ ಆರು ದಿನಗಳ ಹಿಂದೆ ಮಿಂಟೋ ಆಸ್ಪತೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಇದರಿಂದ ನಮ್ಮ ಕರ್ತವ್ಯಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ಸಂಶೋಧನಾನಿರತ ವೈದ್ಯ ವಿದ್ಯಾರ್ಥಿಗಳು ಒಪಿಡಿ ಬಂದ್‌ಗೆ ಕರೆ ನೀಡಿದ್ದರು. 

ವೈದ್ಯರ ಮುಷ್ಕರ ಅಂತ್ಯ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿರುವ ಬೆನ್ನಲ್ಲೇ ಮಿಂಟೊ ಆಸ್ಪತ್ರೆಯ ಕಿರಿಯ ವೈದರು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.

ಕಿರಿಯ ವೈದ್ಯ ಸಂಘದ ಅಧ್ಯಕ್ಷ ಎಲ್.ಎನ್.ರೆಡ್ಡಿ ಮಾತನಾಡಿ, ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದಿನ ದಿನಗಳಲ್ಲಿ ವೈದ್ಯರಿಗೆ ತೊಂದರೆಯಾಗದಂತೆ ಭದ್ರತೆ ನೀಡಲಾಗುವುದು ಎಂದು ಸರಕಾರ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ಸು ಪಡೆದಿದ್ದೇವೆಂದು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)