varthabharthi


ವಿಶೇಷ-ವರದಿಗಳು

ನಾಳೆ ಶಂಕರ್‌ ನಾಗ್ ಜನ್ಮದಿನ

ಬಣ್ಣದ ಲೋಕದ ಮಿಂಚಿನ ಓಟ ಶಂಕರ್‌ ನಾಗ್

ವಾರ್ತಾ ಭಾರತಿ : 8 Nov, 2019
ಮುಸಾಫಿರ್

ಇಂದಿಗೂ ಬೆಂಗಳೂರಿನ ಆಟೋಚಾಲಕರು ತಮ್ಮ ಆಟೋಗಳ ಹಿಂದೆ ಶಂಕರ್‌ನಾಗ್ ಭಾವಚಿತ್ರ ಹಾಕಿಕೊಳ್ಳುತ್ತಾರೆ ಎಂದರೆ, ಅದುವೇ ಅವರ ಜನಪ್ರಿಯತೆಯನ್ನು ಹೇಳುತ್ತದೆ. 

ಕನ್ನಡ ಸಿನೆಮಾಗಳಿಗೆ ಹತ್ತು ಹಲವು ಸಾಧ್ಯತೆಗಳನ್ನು ನೀಡಿದ ಶಂಕರ್ ನಾಗ್‌ರದು ಮಿಂಚಿನ ಓಟ. ಅದು ಕೊನೆಯಾದದ್ದು ‘ಆ್ಯಕ್ಸಿಡೆಂಟ್’ ಮೂಲಕ. ಇಂದಿಗೂ ಚಿತ್ರರಂಗ ಶಂಕರ್‌ನಾಗ್‌ರನ್ನು ಮಿಂಚಿನ ಓಟ, ಆ್ಯಕ್ಸಿಡೆಂಟ್ ಚಿತ್ರಗಳ ಮೂಲಕವೇ ಗುರುತಿಸುತ್ತದೆ. ಅವರ ವೇಗದ ಬದುಕಿಗೆ ಆ ಹೆಸರುಗಳು ರುದ್ರರೂಪಕದಂತಿದೆ. ಮರಾಠಿ ರಂಗಭೂಮಿಯಲ್ಲಿ ಬೆಳೆದು, ಅಲ್ಲಿಂದ ಕನ್ನಡ ಸಿನೆಮಾಲೋಕಕ್ಕೆ ಕಾಲಿಟ್ಟ ಶಂಕರ್ ನಾಗ್ ತಮ್ಮ ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದರು. ‘ಒಂದಾನೊಂದು ಕಾಲದಲ್ಲಿ’, ಗಿರೀಶ್ ಕಾರ್ನಾಡರ ‘ಮಾಸ್ಟರ್ ಪೀಸ್’. ಈ ಚಿತ್ರಕ್ಕಾಗಿ ಶಂಕರ್‌ನಾಗ್ ಅತ್ಯುತ್ತಮ ನಟನಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಈ ಚಿತ್ರ ಕಲಾತ್ಮಕವಾಗಿಯೂ, ಮನರಂಜನಾತ್ಮಕವಾಗಿಯೂ ಗೆದ್ದಿತು. 70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಪಟ್ಟಾಭಿರಾಮ, ಕಾರ್ನಾಡ್, ಲಂಕೇಶರಂತಹ ಬರಹಗಾರರು ಕಲಾತ್ಮಕ ಪ್ರಯೋಗಗಳನ್ನು ಮಾಡುತ್ತಿದ್ದ ಕಾಲ. ಆದರೆ ಶಂಕರ್ ನಾಗ್ ತನ್ನ ಸಿನೆಮಾ ಬದುಕನ್ನು ಗಂಭೀರ ಸಿನೆಮಾಗಳಿಗೆ ಸೀಮಿತವಾಗಿಸಲಿಲ್ಲ. ಅವರು ಅದಾಗಲೇ, ಜನಸಾಮಾನ್ಯರ ನಟನಾಗುವುದಕ್ಕೆ ಬಯಸಿದ್ದರು. ಕಮರ್ಶಿಯಲ್ ಮತ್ತು ಕಲಾತ್ಮಕ ಚಿತ್ರಗಳ ನಡುವೆ ಒಂದು ಸೇತುವೆಯಂತೆ ಸಿನೆಮಾಗಳಲ್ಲಿ ಅವರು ಬದುಕಿದರು. ನಾವಿಂದು ಶಂಕರ್‌ನಾಗ್ ಅವರನ್ನು ಮಿಂಚಿನ ಓಟ, ಆ್ಯಕ್ಸಿಡೆಂಟ್, ಗೀತಾ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಒಂದಾನೊಂದು ಕಾಲದಲ್ಲಿ, ಒಂದು ಮುತ್ತಿನ ಕತೆ ಮೊದಲಾದ ಚಿತ್ರಗಳ ಮೂಲಕ ಗುರುತಿಸುತ್ತೇವೆ. ಇದೇ ಸಂದರ್ಭದಲ್ಲಿ ಆಟೋರಾಜ, ಲಾರಿ ಡ್ರೈವರ್, ಸೀತಾರಾಮು, ಸಾಂಗ್ಲಿಯಾನ, ಸಿಬಿಐ ಶಂಕರ್....ಮೊದಲಾದ ಚಿತ್ರಗಳ ಮೂಲಕ ಜನ ನಟನಾಗಿ ಅವರು ಜನಪ್ರಿಯರಾದರು.

ಅವರು ಹಲವು ವಿಷಯಗಳಲ್ಲಿ ಇಂತಹದೊಂದು ಸಮನ್ವಯವನ್ನು ಸಾಧಿಸಿದ್ದರು. ಒಂದೆಡೆ ರಂಗಭೂಮಿ ಮತ್ತು ಸಿನೆಮಾಗಳ ನಡುವೆ ಸೇತುವೆಯಾಗಲು ಬಯಸಿದರು. ರಂಗಶಂಕರ ಕನಸಿನ ಬೀಜ ಬಿತ್ತಿದ್ದು ಅವರೇ. ಮರಾಠಿ ರಂಗಭೂಮಿಯ ಹಿನ್ನೆಲೆಯ ಕಾರಣದಿಂದಲೋ ಏನೋ, ಅವರು ಸಿನೆಮಾಗಳ ಭರಾಟೆಯಲ್ಲಿ ರಂಗಭೂಮಿಯನ್ನು ಮರೆಯಲಿಲ್ಲ. ದೊಡ್ಡಪರದೆ ಮತ್ತು ಕಿರುಪರದೆಗೂ ಅವರು ಸೇತುವೆಯಾದರು. ‘ಮಾಲ್ಗುಡಿ ಡೇಸ್’ ಮೂಲಕ ಅವರು ದೇಶಾದ್ಯಂತ ಟಿವಿಗಳಲ್ಲಿ ಜನಪ್ರಿಯರಾದರು. ಮಾಸ್ಟರ್ ಮಂಜುನಾಥ್ ಎಂಬ ಬಾಲಕಲಾವಿದನ ಪ್ರತಿಭೆಯನ್ನು ದೇಶಾದ್ಯಂತ ಪರಿಚಯಿಸುವಲ್ಲಿ ಶಂಕರ್‌ನಾಗ್ ಕೊಡುಗೆ ದೊಡ್ಡದು. ಅವರು ಭಾಷೆಗಳ ನಡುವಿನ ಬೆಸುಗೆಯಾಗಿ ಕೆಲಸ ಮಾಡಿದರು. ಒಂದೆಡೆ ಕನ್ನಡದಲ್ಲಿ ನಟ, ನಿರ್ದೇಶಕನಾಗಿ ವಿಜೃಂಭಿಸುತ್ತಿರುವ ಸಂದರ್ಭದಲ್ಲೇ ಮಗದೊಂದೆಡೆ ಹಿಂದಿ ಸಿನೆಮಾಗಳಲ್ಲಿ ಗುರುತಿಸಿಕೊಂಡರು. ಹಿಂದಿಯ ‘ಉತ್ಸವ್’ ಚಿತ್ರದಲ್ಲಿ ಶಂಕರ್‌ನಾಗ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡರು. ಮರಾಠಿಗೂ ಕನ್ನಡಕ್ಕೂ ಸೇತು ಬಂಧವಾದರು. ಅತ್ಯಂತ ಜನಪ್ರಿಯ ನಟನಾಗಿಯೂ ಮಿಂಚಿನ ಓಟ, ಆಕ್ಸಿಡೆಂಟ್‌ನಂತಹ ಗಂಭೀರ ಚಿತ್ರಗಳ ನಿರ್ದೇಶನಕ್ಕಿಳಿದದ್ದು ಅವರ ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ.

ಡ್ರಗ್ಸ್, ಮೋಜು, ಮಸ್ತಿಯಿಂದಾಗಿ ಶ್ರೀಮಂತ ವರ್ಗದ ಒಂದು ಯುವ ಸಮೂಹ ಹೇಗೆ ‘ಅಪಘಾತ’ದೆಡೆ ಸಾಗುತ್ತಿವೆ ಎನ್ನುವುದನ್ನು ಹೇಳುವ ಚಿತ್ರ ‘ಆ್ಯಕ್ಸಿಡೆಂಟ್’. ಶ್ರೀಮಂತ ಯುವಕನೊಬ್ಬ ಬೇಜವಾಬ್ದಾರಿಯಿಂದ ಕಾರು ಓಡಿಸಿ ಫುಟ್‌ಪಾತ್‌ನಲ್ಲಿ ಮಲಗಿದ್ದ ಅಮಾಯಕರ ಸಾವಿಗೆ ಕಾರಣನಾಗುವುದೇ ಕಥಾವಸ್ತು. ಈ ಚಿತ್ರದ ವಸ್ತುವೇ ಮುಂದೆ ಮಾಧ್ಯಮಗಳಲ್ಲಿ ವಾಸ್ತವ ರೂಪ ತಾಳಿ ಸುದ್ದಿಯಾಯಿತು. ಈ ವಸ್ತುವನ್ನು ಕೇಂದ್ರವಾಗಿಟ್ಟು ಬಾಲಿವುಡ್‌ಗಳಲ್ಲೂ ಸಿನೆಮಾಗಳು ಬಂದವು. ಕನ್ನಡದ ಶ್ರೇಷ್ಠ ನಟ ರಾಜ್‌ಕುಮಾರ್ ಅವರ ‘ಒಂದು ಮುತ್ತಿನ ಕತೆ’ಯನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದು.

ಅರುಂಧತಿ ನಾಗ್ ಅವರು ಶಂಕರ್ ಅವರ ದೇಹದ ಇನ್ನೊಂದು ಭಾಗವೇ ಆಗಿ ಬದುಕಿದವರು. ಅವರ ಪತ್ನಿಯಾಗಿಯಷ್ಟೇ ಅಲ್ಲ, ಅವರ ಸೃಜನಶೀಲ ಬದುಕಿನ ಹಿಂದೆಯೂ ಹೆಜ್ಜೆಗೆ ಹೆಜ್ಜೆಯಿಟ್ಟವರು. ಶಂಕರ್‌ನಾಗ್ ಅವರ ಜೊತೆಗೆ ನಿರ್ದೇಶನದಲ್ಲಿ ಸಹಾಯಕರಾಗಿ ಜೊತೆಗಿದ್ದರು. ಬೆಂಗಳೂರಿನಲ್ಲಿ ಒಂದು ಅತ್ಯುತ್ತಮವಾದ ರಂಗಭೂಮಿಯ ಕನಸನ್ನು ಶಂಕರ್‌ನಾಗ್ ಕಂಡಿದ್ದರು. ಆದರೆ ಆ ಕನಸಿನ ಬೀಜಗಳನ್ನು ಅರುಂಧತಿ ನಾಗ್ ಕೈಯಲ್ಲಿಟ್ಟು, ಮಿಂಚಿನಂತೆ ಮಾಯವಾದರು. ಇಂದು ಶಂಕರ್‌ನಾಗ್ ಇಲ್ಲದೇ ಇರಬಹುದು, ಆದರೆ ‘ರಂಗಶಂಕರ’ ಪ್ರತಿ ದಿನ ಅವರನ್ನು ಸ್ಮರಿಸುತ್ತಿದೆ. ಇದೇ ಸಂದರ್ಭದಲ್ಲಿ ಸಂಕೇತ್ ಸ್ಟುಡಿಯೋ ಕೂಡ ಶಂಕರ್‌ನಾಗ್ ಕನಸಾಗಿದೆ. ಚಿತ್ರೀಕರಣಕ್ಕೆ ತಮಿಳುನಾಡಿಗೆ ಹಾರುತ್ತಿದ್ದವರನ್ನು ಕರ್ನಾಟಕದ ನೆಲದಲ್ಲೇ ಉಳಿಸಿದ್ದು ಇದೇ ಸ್ಟುಡಿಯೋ.

ಶಂಕರ್‌ನಾಗ್ 90ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದರು. ಪ್ರೀತಿ ಮಾಡು ತಮಾಷೆ ನೋಡು, ಮೂಗನ ಸೇಡು, ಸೀತಾರಾಮು, ಆಟೋರಾಜ, ರಸ್ತೆ ರಾಜ, ಲಾರಿ ಡ್ರೈವರ್, ಜನ್ಮಜನ್ಮದ ಅನುಬಂಧ, ಗೀತಾ, ಜೀವಕ್ಕೆ ಜೀವ, ಇಂದಿನ ಭಾರತ, ಅರ್ಚನಾ, ಸಾಂಗ್ಲಿಯಾನ, ಸಿಬಿಐ ಶಂಕರ್...ಹೀಗೆ...ಅವರು ಕಮರ್ಶಿಯಲ್ ಚಿತ್ರಗಳಲ್ಲೂ ವೈವಿಧ್ಯಮಯ ಪಾತ್ರಗಳನ್ನು ಆರಿಸಿಕೊಂಡರು. ಇಂದಿಗೂ ಬೆಂಗಳೂರಿನ ಆಟೋಚಾಲಕರು ತಮ್ಮ ಆಟೋಗಳ ಹಿಂದೆ ಶಂಕರ್‌ನಾಗ್ ಭಾವಚಿತ್ರ ಹಾಕಿಕೊಳ್ಳುತ್ತಾರೆ ಎಂದರೆ, ಅದುವೇ ಅವರ ಜನಪ್ರಿಯತೆಯನ್ನು ಹೇಳುತ್ತದೆ. ಗೀತಾ ಚಿತ್ರದ ಸುಮುಧುರ ಹಾಡುಗಳಿಗೆ ಹೆಜ್ಜೆಯಿಟ್ಟ ಶಂಕರ್‌ನಾಗ್‌ರನ್ನು ಮರೆಯಲುಂಟೆ? ಇದೇ ಸಂದರ್ಭದಲ್ಲಿ ರಂಗಭೂಮಿಯ ಕಾರ್ಯತಂತ್ರಗಳನ್ನು ಸಿನೆಮಾಗಳಲ್ಲಿ ದುಡಿಸಿಕೊಳ್ಳುತ್ತಾ, ಕನ್ನಡ ಸಿನೆಮಾಗಳ ಏಕತಾನತೆಯನ್ನು ನಿವಾರಿಸಿದರು. ಸಣ್ಣ ಪ್ರಾಯದಲ್ಲಿ ಮಿಂಚಿನಂತೆ ಚಿತ್ರೋದ್ಯಮದಲ್ಲಿ ಓಡಾಡಿ ಹಲವು ಸಾಧನೆಗಳನ್ನು ಮಾಡಿದ ಶಂಕರ್‌ನಾಗ್, ಹೊಸ ತಲೆಮಾರಿನ ಕನ್ನಡ ನಟ, ನಿರ್ದೇಶಕರಿಗೆ ಮಾದರಿಯಾಗಬೇಕಾಗಿದೆ.

ಶಂಕರ್‌ನಾಗ್ ಪ್ರತಿ ಕ್ಷೇತ್ರದಲ್ಲೂ ಸ್ವಂತಿಕೆಯನ್ನು ಛಾಪಿಸಿದವರು. ರಾಜಕೀಯದಲ್ಲೂ ಅಷ್ಟೇ. ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಮೆರೆಯುತ್ತಿದ್ದ ಕಾಲದಲ್ಲಿ ಶಂಕರ್‌ನಾಗ್ ಜನತಾಪಕ್ಷದ ಪರವಾಗಿ ಗುರುತಿಸಿಕೊಂಡರು. ರಾಮಕೃಷ್ಣ ಹೆಗಡೆಯ ಹಿಂದೆ ನಿಂತುಕೊಂಡು, ಕರ್ನಾಟಕದಲ್ಲಿ ಪರ್ಯಾಯ ರಾಜಕೀಯದ ಕನಸು ಕಂಡರು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರದ ಕುರಿತಂತೆಯೂ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದರು. ಜನಸಾಮಾನ್ಯರಿಗಾಗಿ ವಿವಿಧ ಯೋಜನೆಗಳನ್ನು ರೂಪಿಸುವ ಉದ್ದೇಶಗಳನ್ನೂ ಹೊಂದಿದ್ದರು. ಆದರೆ ಆ ಸಣ್ಣ ವಯಸ್ಸಿಗೆ ಅವರ ಚಟುವಟಿಕೆಯ ವೇಗವನ್ನು ಭರಿಸಿಕೊಳ್ಳುವ ಶಕ್ತಿಯಿರಲಿಲ್ಲವೇನೋ ಎಂಬಂತೆ ಅಪಘಾತವೊಂದು ನಡೆದು ಹೋಯಿತು. ಇಂದು ಶಂಕರ್‌ನಾಗ್ ಇಲ್ಲವಾಗಿರಬಹುದು. ಆದರೆ ಶಂಕರ್‌ರ ನೆನಪು ಮಾತ್ರ ಅಜರಾಮರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)