varthabharthi


ರಾಷ್ಟ್ರೀಯ

ವಕ್ಫ್ ಆಸ್ತಿಗಳ ಶೇ.100ರಷ್ಟು ಡಿಜಿಟಲೀಕರಣ: ನಖ್ವಿ

ವಾರ್ತಾ ಭಾರತಿ : 8 Nov, 2019

ಕೊಚ್ಚಿ,ನ.8: ದೇಶಾದ್ಯಂತ ವಕ್ಫ್ ಆಸ್ತಿಗಳ ದಾಖಲೆಗಳ ಡಿಜಿಟಲೀಕರಣ ಶೇ.100ರಷ್ಟು ಪೂರ್ಣಗೊಂಡಿದೆಯೆಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಶುಕ್ರವಾರ ತಿಳಿಸಿದ್ದಾರೆ.

ಕೊಚ್ಚಿಯಲ್ಲಿ ಶುಕ್ರವಾರ ನಡೆದ ದಕ್ಷಿಣ ಭಾರತದ ರಾಜ್ಯಗಳ ವಕ್ಫ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ‘‘ಡಿಜಿಟಲೀಕರಣ ಹಾಗೂ ಜಿಯೋ ಮ್ಯಾಪಿಂಗ್ ವ್ಯವಸ್ಥೆಯಿಂದಾಗಿ, ದೊಡ್ಡ ಸಂಖ್ಯೆಯ ವಕ್ಫ್ ಆಸ್ತಿಗಳು ವಕ್ಫ್ ದಾಖಲೆಗಳ ಭಾಗವಾಗಿ ಬಿಟ್ಟಿದೆ’’ ಎಂದು ಹೇಳಿದರು.

ಹಲವಾರು ದಶಕಗಳಿಂದ ವಕ್ಫ್ ಆಸ್ತಿಗಳು, ಸರಕಾರಿ ಕಡತಗಳಲ್ಲಿ ‘‘ಕಣ್ಮರೆಯಾಗಿದ್ದವು’’ ಎಂದವರು ಹೇಳಿದರು.

ವಕ್ಫ್ ಆಸ್ತಿಗಳ ಡಿಜಿಟಲೀಕರಣವನ್ನು ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರವು ಸಮರೋಪಾದಿಯಲ್ಲಿ ನಡೆಸಿದ್ದರಿಂದಾಗಿ ವಕ್ಫ್ ಆಸ್ತಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಯಿತೆಂದು ಅವರು ಹೇಳಿದ್ದಾರೆ. ದೇಶಾದ್ಯಂತ ಆರು ಲಕ್ಷಕ್ಕೂ ಅಧಿಕ ನೋಂದಾಯಿತ ವಕ್ಫ್ ಆಸ್ತಿಗಳಿರುವುದಾಗಿ ನಖ್ವಿ ತಿಳಿಸಿದರು.

 ‘‘ ವಕ್ಫ್ ಆಸ್ತಿಗಳನ್ನು ಸಮಾಜದ ಒಳಿತಿಗಾಗಿ ಬಳಸುವುದನ್ನು ಖಾತರಿಪಡಿಸಲು ವಕ್ಫ್ ಆಸ್ತಿಗಳ ಶೇ.100 ಜಿಯೋ ಟ್ಯಾಗಿಂಗ್ ಹಾಗೂ ಡಿಜಿಟಲೀಕರಣವನ್ನು ಆರಂಭಿಸಲಾಗಿತ್ತು. ಡಿಜಿಟಲೀಕರಣ ಹಾಗೂ ಜಿಯೋ ಟ್ಯಾಗಿಂಗ್‌ನಿಂದಾಗಿ ವಕ್ಫ್ ಮಾಫಿಯಾದ ಪಿಡುಗಿಗೆ ಕಡಿವಾಣ ಹಾಕಲು ಸಾಧ್ಯವಾಗಿದೆಯೆಂದು ನಖ್ವಿ ಹೇಳಿದರು.

ಸುಮಾರು 24 ಸಾವಿರ ವಕ್ಫ್ ಆಸ್ತಿಗಳ ಜಿಯೋ ಟ್ಯಾಗಿಂಗ್ ಪೂರ್ಣಗೊಳಿಸಲಾಗಿದೆಯೆಂದು ಸಚಿವರು ಮಾಹಿತಿ ನೀಡಿದರು.

 ಐಐಟಿ ರೂರ್ಕಿ ಹಾಗೂ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ನೆರವಿನಿಂದ ವಕ್ಫ್ ಆಸ್ತಿಗಳ ಜಿಐಎಸ್/ಜಿಪಿಎಸ್ ಮ್ಯಾಪಿಂಗ್ ನಡೆಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

     ವಕ್ಫ್ ಆಸ್ತಿಗಳ ಜಿಯೋಟ್ಯಾಗಿಂಗ್ ಹಾಗೂ ಡಿಜಿಟಲೀಕರಣಕ್ಕೆ ಬೇಕಾದ ಹಣಕಾಸು ನೆರವು ಹಾಗೂ ತಾಂತ್ರಿಕ ಸಹಕಾರವನ್ನು ಕೇಂದ್ರೀಯ ವಕ್ಫ್ ಮಂಡಳಿಯು ಒದಗಿಸಿದ್ದಂದಾಗಿ ಸಂಪೂರ್ಣ ಡಿಜಿಟಲೀಕರಣವನ್ನು ನಿರ್ಧರಿತ ಕಾಲಮಿತಿಯೊಳಗೆ ನಡೆಸಲು ಸಾಧ್ಯವಾಯಿತೆಂದು ನಖ್ವಿ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)