varthabharthiಕರಾವಳಿ

ಅಪರಾಹ್ನ 3 ಕ್ಕೆ ಮುಷ್ಕರ ಕರೆ ವಾಪಾಸು; ಸೇವೆ ಪುನರಾರಂಭ

ಉಡುಪಿ:ಖಾಸಗಿ ಆಸ್ಪತ್ರೆ ಹೊರರೋಗಿ ಸೇವೆ ಸ್ಥಗಿತ, ಕ್ಲಿನಿಕ್ ಬಂದ್

ವಾರ್ತಾ ಭಾರತಿ : 8 Nov, 2019

ಉಡುಪಿ, ನ.8: ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಸ್ನಾತಕೋತ್ತರ ಮಹಿಳಾ ವೈದ್ಯ ವಿದ್ಯಾರ್ಥಿ ಮೇಲೆ ಹಲ್ಲೆ ಯತ್ನ, ಬೆದರಿಕೆ ಹಾಗೂ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ರಾಜ್ಯ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ ಕರೆಯಂತೆ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಘಟಕದ ವೈದ್ಯರು ಶುಕ್ರವಾರ ಜಿಲ್ಲೆಯಾದ್ಯಂತ ಹೊರ ರೋಗಿ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆ, ಕೆಎಂ ಮಾರ್ಗದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳೂ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲದೇ ಮಣಿಪಾಲದ ಕೆಎಂಸಿ ಆಸ್ಪತ್ರೆಗಳನ್ನು ಹೊರತು ಪಡಿಸಿ ಜಿಲ್ಲೆಯ ಉಳಿದೆಲ್ಲಾ ಖಾಸಗಿ ಕ್ಲಿನಿಕ್, ಡಿಸ್ಪೆಸ್ಸರಿ ಹಾಗೂ ಖಾಸಗಿ ನರ್ಸಿಂಗ್ ಹೋಮ್‌ಗಳು ಐಎಂಎ ನೀಡಿದ ಮುಷ್ಕದ ಕರೆಯನ್ನು ಬೆಂಬಲಿಸಿ ಹೊರ ರೋಗಿ ವಿಭಾಗಗಳ ಸೇವೆಯನ್ನು ರದ್ದುಗೊಳಿಸಿ ದರು. ಆದರೆ ಎಲ್ಲಾ ಆಸ್ಪತ್ರೆಗಳಲ್ಲೂ ವಿವಿಧ ತುರ್ತುಸೇವೆಗಳು ಎಂದಿನಂತೆ ಕಾರ್ಯಾಚರಿಸಿತ್ತು.

ಆದರೆ ಅಪರಾಹ್ನದ ಬಳಿಕ ಬೆಂಗಳೂರಿನಲ್ಲಿ ಘಟನೆಗೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಐಎಂಎ ರಾಜ್ಯ ಘಟಕ ಮುಷ್ಕರದ ಕರೆಯನ್ನು ಹಿಂದೆಗೆದುಕೊಂಡಿದ್ದು, ಅದರಂತೆ ಜಿಲ್ಲೆಯಲ್ಲೂ ಅಪರಾಹ್ನ 3:00 ಗಂಟೆಯಿಂದ ಎಲ್ಲಾ ವೈದ್ಯರು ತಮ್ಮ ಮುಷ್ಕರವನ್ನು ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾ ದರು ಎಂದು ಐಎಂಎ ಉಡುಪಿ-ಕರಾವಳಿ ಘಟಕದ ಅಧ್ಯಕ್ಷ ಡಾ.ಉವೆುೀಶ್ ಪ್ರಭು ಪತ್ರಿಕೆಗೆ ತಿಳಿಸಿದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳ ರೋಗಿ ಹಾಗೂ ಹೊರ ರೋಗಿ ವಿಭಾಗ ಸಹಿತ ಹೆಚ್ಚಿನ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಸೌಲಭ್ಯ ಲಭ್ಯವಿದ್ದ ಪರಿಣಾಮ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ.

ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆ ಲಭ್ಯವಾಗಿದ್ದು, ಇಂದು ಬೆಳಗಿನ ಹೊತ್ತಿನಲ್ಲಿ ರೋಗಿಗಳ ಸಂಖ್ಯೆಯಲ್ಲಿ ಶೇ.20ರಷ್ಟು ಹೆಚ್ಚಳ ಕಂಡುಬಂದಿತ್ತು. ಸಾಧಾರಣವಾಗಿ ಶುಕ್ರವಾರದಂದು ಸರಾಸರಿ 600 ರೋಗಿಗಳು ಹೊರರೋಗಿ ವಿಭಾಗ ದಲ್ಲಿ ಚಿಕಿತ್ಸೆಗೆ ಬಂದರೆ ಇಂದು 800 ಮಂದಿ ವಿವಿಧ ಪರೀಕ್ಷೆಗಳಿಗೆ ಹಾಜರಾದರು. ಆದರೆ ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡಿ ದ್ದೇವೆ ಎಂದು ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ತಿಳಿಸಿದರು.

ಇಂದು ಬೆಳಗ್ಗೆ 6ರಿಂದ ಅಪರಾಹ್ನ 3 ಗಂಟೆಯವರೆಗೆ ಹೊರರೋಗಿ ವಿಭಾಗದ ಸೇವೆಯನ್ನು ಮಾತ್ರ ನಿಲ್ಲಿಸಲಾಗಿತ್ತು. ಉಳಿದಂತೆ ಎಲ್ಲಾ ವಿಧದ ತುರ್ತು ಹಾಗೂ ಒಳರೋಗಿಗಳಿಗೆ ಚಿಕಿತ್ಸೆ ಲಭ್ಯವಿತ್ತು. ಪ್ರಸಾದ್ ನೇತ್ರಾಲಯ ಸಂಪೂರ್ಣ ಮುಚ್ಚಿದ್ದು, ಮುಷ್ಕರದ ಕುರಿತಂತೆ ಮುಖ್ಯ ಪ್ರವೇಶ ದ್ವಾರಕ್ಕೆ ಕರಪತ್ರ ಅಂಟಿಸಲಾಗಿತ್ತು. ಆಸ್ಪತ್ರೆಗೆ ಬಂದ ರೋಗಿಗಳಿಗೆ ವೈದ್ಯರ ಮುಷ್ಕರದ ುರಿತು ಮನವರಿಕೆ ಮಾಡಲಾಯಿತು.

 ಐಎಂಎಯ ಸದಸ್ಯರಾಗಿರುವ ಉಡುಪಿ ಜಿಲ್ಲೆಯ 240 ವೈದ್ಯರು ಇಂದಿನ ಮುಷ್ಕದಲ್ಲಿ ಭಾಗಿಯಾಗಿದ್ದಾರೆ. ಬ್ರಹ್ಮಾವರ, ಉಡುಪಿ, ಕಾಪು ಸಹಿತ 11 ಆಸ್ಪತ್ರೆ ಹಾಗೂ ಎಲ್ಲಾ ಕ್ಲಿನಿಕ್‌ಗಳನ್ನು ಬಂದ್ ಮಾಡಲಾಗಿತ್ತು. ಆದರೆ ಯಾವುದೇ ರೋಗಿಗೂ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸಿದ್ದೇವೆ ಎಂದು ಡಾ.ಉಮೇಶ್ ಪ್ರಭು ತಿಳಿಸಿದ್ದಾರೆ.

ಮನವಿ ಅರ್ಪಣೆ: ಪ್ರಕರಣವನ್ನು ಖಂಡಿಸಿ ಕರ್ತವ್ಯ ನಿರತ ವೈದ್ಯರ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ವೈದ್ಯರಿಗೆ ಸೂಕ್ತ ರಕ್ಷಣೆ ನೀಡುವ ಕಠಿಣ ಕಾನೂನು ಕ್ರಮ ಜಾರಿ ಮಾಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುವ ಮನವಿಯನ್ನು ಡಾ.ಉಮೇಶ್ ಪ್ರಭು ನೇತೃತ್ವದಲ್ಲಿ ಐಎಂಎ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)