varthabharthi

ರಾಷ್ಟ್ರೀಯ

ಕೇಂದ್ರಕ್ಕೆ ಪತ್ರಕರ್ತರು, ಮಾನವಹಕ್ಕು ಹೋರಾಟಗಾರರ ಆಗ್ರಹ

ಸ್ಪೈವೇರ್‌ ಬೇಹುಗಾರಿಕೆ ಪ್ರಕರಣದ ಮಾಹಿತಿ ಬಹಿರಂಗಪಡಿಸಿ

ವಾರ್ತಾ ಭಾರತಿ : 8 Nov, 2019

ಹೊಸದಿಲ್ಲಿ, ನ.8: ಇಸ್ರೇಲ್‌ನ ಸ್ಪೈವೇರ್‌ನ ಸೈಬರ್ ದಾಳಿ ಕುರಿತು ಲಭ್ಯ ಮಾಹಿತಿಯನ್ನು ಹೊರಗೆಡಹುವಂತೆ ಸೈಬರ್ ದಾಳಿಗೆ ಗುರಿಯಾಗಿರುವ 19 ಮಂದಿ ಭಾರತೀಯರು ಕೇಂದ್ರ ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸೈಬರ್ ದಾಳಿ, ಸಾಮೂಹಿಕ ನಿಗಾ ಪ್ರಕ್ರಿಯೆಯ ಇತರ ಮಾದರಿ ಹಾಗೂ ಶಂಕಿತರ ಗುರುತಿನ ಕುರಿತು ಲಭ್ಯ ಮಾಹಿತಿಯನ್ನು ಬಹಿರಂಗೊಳಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ. ಅಜ್ಞಾತ ಸಂಸ್ಥೆಯೊಂದು ನಮ್ಮ ಮೇಲೆ ನಿಕಟ ನಿಗಾ ಇರಿಸಿದೆ ಮತ್ತು ನಮ್ಮ ಸಮಗ್ರ ವಿವರ, ವೈಯಕ್ತಿಕ ಸಂಭಾಷಣೆ, ಆರ್ಥಿಕ ವ್ಯವಹಾರ ಇತ್ಯಾದಿಗಳ ಕುರಿತು ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ವಿಷಯದಿಂದ ತೀವ್ರ ಆತಂಕವಾಗಿದೆ ಎಂದು ಸ್ವೈವೇರ್‌ನ ಸೈಬರ್ ದಾಳಿಗೆ ಒಳಗಾಗಿರುವ ಪತ್ರಕರ್ತರು, ಮಾನವಹಕ್ಕು ಹೋರಾಟಗಾರರು ಹಾಗೂ ಸಾಹಿತಿಗಳನ್ನೊಳಗೊಂಡ 19 ಭಾರತೀಯರ ತಂಡ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

“ಇದು ನಮ್ಮ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದ್ದು ನಮ್ಮ ಭದ್ರತೆ ಮಾತ್ರವಲ್ಲ, ನಮ್ಮ ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ಗ್ರಾಹಕರು ಮುಂತಾದವರ  ಖಾಸಗಿ ಮಾಹಿತಿಯನ್ನು ಕದಿಯಲಾಗಿದೆ . ಈ ರೀತಿಯ ನಿಗಾ ವ್ಯವಸ್ಥೆಗೆ ಕೋಟ್ಯಾಂತರ ರೂಪಾಯಿ ಹಣದ ಜೊತೆಗೆ ಮಾಹಿತಿ ತಂತ್ರಜ್ಞಾನದ ಅಗಾಧ ಮೂಲಸೌಕರ್ಯದ ಅಗತ್ಯವಿದ್ದು, ಭಾರತೀಯರು ಪಾವತಿಸುವ ತೆರಿಗೆ ಹಣವನ್ನು ಇದಕ್ಕೆ ಬಳಸಲಾಗಿದೆಯೇ” ಎಂಬ ಪ್ರಶ್ನೆ ಜನಮನದಲ್ಲಿ ಮೂಡಿದೆ.

ಅಂತರಾಷ್ಟ್ರೀಯ ಖಾಸಗಿ ಸಂಸ್ಥೆಗಳು ಹಾಗೂ ಇತರ ಕೆಲವು ವಿದೇಶಿ ಸಂಸ್ಥೆಗಳು ಭಾರತದ ಎಲ್ಲಾ ಹಂತದ  ದೂರಸಂಪರ್ಕ ಮಾಧ್ಯಮವನ್ನು ಭೇದಿಸಿದ್ದು ಹಲವು ಭಾರತೀಯರ ಪೌರರ ಗೌಪ್ಯ ವಿವರಗಳನ್ನು ಕೈವಶ ಮಾಡಿಕೊಳ್ಳಲು ಸಮರ್ಥವಾಗಿವೆ. ಇದರಿಂದ ನಮ್ಮ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಬೆದರಿಕೆ ಎದುರಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

“ಭಾರತದಲ್ಲಿ ಕಾರ್ಯಾಚರಿಸಲು ಸ್ಪೈವೇರ್ ಅಥವಾ ಇತರ ಮಾಲ್‌ವೇರ್ ಸಂಸ್ಥೆಯನ್ನು ನಿಯೋಜಿಸುವ ಬಗ್ಗೆ ವಿವಿಧ ಸಚಿವಾಲಯ, ಇಲಾಖೆಗಳು, ಏಜೆನ್ಸಿಗಳು ಅಥವಾ ಯಾವುದೇ ರಾಜ್ಯ ಸರಕಾರ, ಎನ್‌ಎಸ್‌ಒ ಸಮೂಹದ ಮಧ್ಯೆ ಯಾವುದಾದರೂ ಒಪ್ಪಂದ ಏರ್ಪಟ್ಟಿರುವ ಬಗ್ಗೆ ಸರಕಾರಕ್ಕೆ ಅರಿವು ಇದೆಯೇ.? ಒಂದು ವೇಳೆ ಒಪ್ಪಂದ ಏರ್ಪಟ್ಟಿದ್ದರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಒಪ್ಪಂದದ ವಿವರ( ಒಟ್ಟು ಮೊತ್ತ ಮತ್ತು ಒಪ್ಪಂದದ ವ್ಯವಸ್ಥೆ ಮಾಡಿರುವ ಏಜೆನ್ಸಿ)ವನ್ನು ಬಹಿರಂಗಗೊಳಿಸಬೇಕು. ಒಂದು ವೇಳೆ ಸರಕಾರದ ಬಳಿ ಈ ಮಾಹಿತಿ ಇಲ್ಲದಿದ್ದರೆ ಈ ಸೈಬರ್ ದಾಳಿಯ ಹಿಂದಿರುವ ಅಪರಾಧಿಗಳನ್ನು ಗುರುತಿಸಲು ಮತ್ತು ದೂರಸಂಪರ್ಕ ವ್ಯವಸ್ಥೆಯ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪೂರ್ಣ ಮಾಹಿತಿ ನೀಡಬೇಕು” ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಜವಾಬ್ದಾರಿಯುತ ಸರಕಾರ ತನ್ನ ಪ್ರಜೆಗಳ ಸುರಕ್ಷತೆಯನ್ನು ಖಾತರಿಗೊಳಿಸಬೇಕು ಎಂದು ಆಗ್ರಹಿಸಿರುವ ಪತ್ರಕ್ಕೆ ಬೇಲಾ ಭಾಟಿಯಾ, ಡಿಗ್ರೀಪ್ರಸಾದ್ ಚೌಹಾಣ್, ಶಾಲಿನಿ ಗೇರ, ಸೀಮಾ ಆಝಾದ್ ಮುಂತಾದ ಮಾನವಹಕ್ಕು ಹೋರಾಟಗಾರರ ಸಹಿತ 19 ಮಂದಿ ಸಹಿ ಹಾಕಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)