varthabharthi


ಬೆಂಗಳೂರು

ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ

ಗೃಹ ರಕ್ಷಕರನ್ನು ಪೊಲೀಸ್‌ ಇಲಾಖೆಗೆ ಸೇರಿಸಿ: ರಾಜ್ಯಪಾಲ ವಾಜುಭಾಯಿ ವಾಲಾ

ವಾರ್ತಾ ಭಾರತಿ : 8 Nov, 2019

ಬೆಂಗಳೂರು, ನ.8: ಅತ್ಯುತ್ತಮ ಸೇವೆಗೆ ರಾಷ್ಟ್ರಪತಿ ಪದಕ ಪಡೆದ ಮತ್ತು ಹಿರಿಯ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆಯಲ್ಲಿ ನೇಮಿಸಿಕೊಳ್ಳಬೇಕು ಎಂದು ರಾಜ್ಯಪಾಲ ವಾಜುಭಾಯಿ ವಾಲ ಹೇಳಿದರು.

ಶುಕ್ರವಾರ ನಗರದ ರಾಜಭವನದ ಗಾಜಿನಮನೆಯಲ್ಲಿ ಗೃಹ ರಕ್ಷಕದಳ, ತರ್ತು ಸೇವೆ, ಪೌರ ರಕ್ಷಣೆ ವಿಪತ್ತು ಸ್ಪಂದನೆ ಹಾಗೂ ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿಗೆ ರಾಷ್ಟ್ರಪತಿ ಸೇವಾ ಪದಕ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗೃಹ ರಕ್ಷಕರು ಸಹ ಪೊಲೀಸರಂತೆ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಅವರಿಗೆ ವೇತನ ಕಡಿಮೆ. ಪೊಲೀಸರಿಗೆ 100 ರೂ.ಸಿಕ್ಕರೆ, ಇವರಿಗೆ 60 ರೂ. ಮಾತ್ರ ದೊರೆಯುತ್ತಿದೆ. ಗೃಹ ರಕ್ಷಕರ ಶ್ರಮವನ್ನು ಗುರುತಿಸಿ, ಗೌರವಿಸುವ ಕೆಲಸ ನಡೆಯಬೇಕು. ಹಾಗಾಗಿ, ಗೃಹ ರಕ್ಷಕ ದಳದ ಹಿರಿಯ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆಯಲ್ಲಿಯೇ ನೇಮಕಾತಿ ಮಾಡಿಕೊಳ್ಳಬೇಕು ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣೆ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಗಳು ಇತ್ತೀಚಿಗೆ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ಮಾಡಿ, ಹಲವರ ಜೀವ ರಕ್ಷಣೆ ಮಾಡಿದ್ದಾರೆ ಎಂದರು.

ಸದೃಢವಾದ ಅಗ್ನಿಶಾಮಕ ಇಲಾಖೆಗೆ ನೈತಿಕ ಶಕ್ತಿ ತುಂಬುವುದು ಸರಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಆಧುನಿಕ ಉಪಕರಣಗಳ ಖರೀದಿಗಾಗಿ 20 ಕೋಟಿ ಅನುದಾನ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದ ಅವರು, ಪೊಲೀಸ್ ಇಲಾಖೆಗೆ ಮತ್ತಷ್ಟು ಬಲಪಡಿಸಲು ವಿವಿಧ ತುರ್ತು ಸ್ಪಂದನ ಕರೆಗಳ ಸ್ವೀಕರಿಸುವ ಸಹಾಯವಾಣಿ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಗ್ನಿಶಾಮಕ ಪಡೆಯ ಪೊಲೀಸ್ ಮಹಾ ನಿರ್ದೇಶಕ ಎಂ.ಎನ್.ರೆಡ್ಡಿ, ಪೌರ ರಕ್ಷಣಾ ದಳದ ಮುಖ್ಯಸ್ಥ ಸುನೀಲ್ ಅಗರವಾಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)