varthabharthi


ಕರ್ನಾಟಕ

ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಪ್ರಶ್ನಿಸಿ ಅರ್ಜಿ: ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್‌ಗೆ ಸಮಯಾವಕಾಶ ಕೇಳಿದ ಸರಕಾರ

ವಾರ್ತಾ ಭಾರತಿ : 8 Nov, 2019

ಬೆಂಗಳೂರು, ಅ.31: ರಾಜ್ಯ ಸರಕಾರದ 2019ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಪ್ರಮಾಣ ಪತ್ರ ಸಲ್ಲಿಸಲು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಈ ಕುರಿತು ವಿಜಯನಗರದ ಕೇಶವಗೋಪಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿ, ಅದರ ಕಾರ್ಯನಿರ್ವಹಣೆ ಕುರಿತು ಪ್ರಮಾಣ ಪತ್ರ ಸಲ್ಲಿಸಲು ನ್ಯಾಯಪೀಠವು ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿತ್ತು. ಶುಕ್ರವಾರ ಸರಕಾರದ ಪರ ವಕೀಲರು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.

2016ರಲ್ಲಿ ರಚನೆಯಾಗಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸರಕಾರವು ಬಿಜೆಪಿ ಪಕ್ಷದ ಪರ ಕೆಲಸ ಮಾಡುವ ವಿಜಯ ಸಂಕೇಶ್ವರ, ಪ್ರಕಾಶ್ ಶೆಟ್ಟಿ, ಪ್ರಭಾತ್ ಆರ್ಟ್ ಇಂಟರ್‌ನ್ಯಾಷನಲ್‌ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿ, ಪ್ರಶಸ್ತಿಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ರಾಜ್ಯ ಸರಕಾರದ ಆಯ್ಕೆ ಸಮಿತಿಯಲ್ಲಿದ್ದ ರಾಜ್ಯ ಸರಕಾರ, ನಿರುಪಮಾ ರಾಜೇಂದ್ರ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಕೇಶವಗೋಪಾಲ್ ಕೂಡ ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)