varthabharthi


ಕರ್ನಾಟಕ

ಸದಾಶಿವ ವರದಿ ಜಾರಿಗೆ ಆಗ್ರಹ: ಡಿ.11ಕ್ಕೆ ಚಿಕ್ಕಬಳ್ಳಾಪುರದಲ್ಲಿ ಕರಾಳ ದಿನಾಚರಣೆ

ವಾರ್ತಾ ಭಾರತಿ : 8 Nov, 2019

ಬೆಂಗಳೂರು, ನ.8: ದಲಿತರಿಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಡಿ.11 ರಂದು ಚಿಕ್ಕಬಳ್ಳಾಪುರದಲ್ಲಿ 7ನೆ ವರ್ಷದ ಕರಾಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎ.ಕೇಶವಮೂರ್ತಿ, ಪರಿಶಿಷ್ಟ ಜಾತಿಗಳಲ್ಲಾದ ಮೀಸಲಾತಿಯ ತಾರತಮ್ಯ ನಿವಾರಣೆಗಾಗಿ ನ್ಯಾ.ಸದಾಶಿವ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು. ಆ ಸಮಿತಿಯು 2012 ರಲ್ಲಿಯೇ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ, ಅದನ್ನು ಜಾರಿ ಮಾಡಲು ಸರಕಾರಗಳು ನಿರಾಸಕ್ತಿ ತೋರುತ್ತಿರುವುದು ಸಲ್ಲ ಎಂದರು.

ಸದಾಶಿವ ವರದಿಯನ್ನು ಜಾರಿ ಮಾಡುವಂತೆ 2012 ರಲ್ಲಿ ಬೆಳಗಾವಿಯಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗಿತ್ತು. ಅಂದಿನಿಂದಲೂ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ, ಆಳುವವರು ಯಾರೂ ಈ ಬಗ್ಗೆ ಗಮನ ನೀಡುತ್ತಿಲ್ಲ. 2018 ರಲ್ಲಿನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಇದೇ ಕಾರಣಕ್ಕೆ ಸೋಲು ಕಾಣಬೇಕಾಯಿತು. ಹೀಗಾಗಿ, ಈಗಿರುವ ಸರಕಾರವಾದರೂ ವರದಿ ಜಾರಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಡಿಸೆಂಬರ್‌ನಲ್ಲಿ ರಾಜ್ಯದ 15 ವಿಧಾಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಸದಾಶಿವ ವರದಿಯನ್ನು ಅಂಗೀಕರಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಅಭಿಪ್ರಾಯ ಸ್ವಷ್ಟಪಡಿಸಬೇಕು. ಇಲ್ಲದಿದ್ದರೆ, ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಮತ ಚಲಾವಣೆಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಬಿಜಾಪುರ ಜಿಲ್ಲೆಯ ರೇಣುಕಾ ಮಾದರ್ ಅತ್ಯಾಚಾರ ಮತ್ತು ಕೊಲೆ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿನ ದಲಿತ ಜೋಡಿ ಕೊಲೆ ಪ್ರಕರಣ ಹಾಗೂ ಗಜೇಂದ್ರಗಡ ತಾಲೂಕಿನ ರಮೇಶ್ ಮಾದರ ಮತ್ತು ಗಂಗಮ್ಮರ ಕೊಲೆ ಪ್ರಕರಣವನ್ನು ಖಂಡಿಸಿದರು. ಈ ಘಟನೆಗೆ ಕಾರಣವಾದವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಪರಶುರಾಮ್ ಮರೇಗುದ್ದಿ, ಉಪಾಧ್ಯಕ್ಷ ಮುರುಗೇಶ್ ಕಂಬಣ್ಣನವರ್, ಪ್ರಧಾನ ಕಾರ್ಯದರ್ಶಿ ಶಿವರಾಜ್ ಅಕ್ಕರಕ್ಕಿ, ಕಾರ್ಯದರ್ಶಿ ಭಾನು ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)