varthabharthi


ಅಂತಾರಾಷ್ಟ್ರೀಯ

ಇಮ್ರಾನ್‌ಗೆ ಮತ್ತೆ 48 ಗಂಟೆಗಳ ಗಡುವು ನೀಡಿದ ಧಾರ್ಮಿಕ ನಾಯಕ

ವಾರ್ತಾ ಭಾರತಿ : 8 Nov, 2019

ಇಸ್ಲಾಮಾಬಾದ್, ನ. 8: ಧಾರ್ಮಿಕ ನಾಯಕ ಹಾಗೂ ರಾಜಕಾರಣಿ ಮೌಲಾನಾ ಫಝ್ಲುರ್ರಹಮಾನ್ ನೇತೃತ್ವದ ಪಾಕಿಸ್ತಾನದ ಪ್ರತಿಪಕ್ಷ ನಾಯಕರು, ರಾಜೀನಾಮೆ ನೀಡಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ಗೆ ಗುರುವಾರ 48 ಗಂಟೆಗಳ ಗಡುವು ನೀಡಿದ್ದಾರೆ. ಎರಡು ದಿನಗಳ ಬಳಿಕ, ಬೃಹತ್ ಸರಕಾರ ವಿರೋಧಿ ಪ್ರತಿಭಟೆನಯು ಹೊಸ ದಿಕ್ಕನ್ನು ಪಡೆದುಕೊಳ್ಳಲಿದೆ ಎಂದು ಅವರು ಘೋಷಿಸಿದ್ದಾರೆ.

‘ಆಝಾದಿ ಮಾರ್ಚ್’ (ಸ್ವಾತಂತ್ರ್ಯದ ಮೆರವಣಿಗೆ) ಎಂದು ಕರೆಯಲ್ಪಡುವ ಬೃಹತ್ ಪ್ರತಿಭಟನೆಯ ನೇತೃತ್ವವನ್ನು ಜಮೀಯತ್ ಉಲೇಮಾ-ಎ-ಇಸ್ಲಾಮ್ ಫಝ್ಲಾ (ಜೆಯುಐ-ಎಫ್)ನ ನಾಯಕ ರೆಹಮಾನ್ ವಹಿಸಿಕೊಂಡಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುವ ಚಳವಳಿ ಗುರುವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.

2018ರಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ವಂಚನೆ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ.

ಪ್ರಧಾನಿ ರಾಜೀನಾಮೆ ನೀಡುವ ವಿಷಯವಿಲ್ಲದಿದ್ದರೆ ಅವರ ಸರಕಾರದ ಸಂಧಾನಕಾರರು ಮಾತುಕತೆಗೆ ಬರಬಾರದು ಎಂದು ಗುರುವಾರ ರಾತ್ರಿ ಸಾವಿರಾರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರೆಹಮಾನ್ ಹೇಳಿದ್ದಾರೆ.

‘‘ನೀವು ಮಾತುಕತೆಗೆ ಬರುವಾಗ ಅಧಿಕಾರದಿಂದ ಕೆಳಗಿಳಿಯುವ ಕಾರ್ಯಸೂಚಿಯೊಂದಿಗೆ ಬನ್ನಿ. ಇಲ್ಲದಿದ್ದರೆ ನೀವು ಬರುವ ಅಗತ್ಯವಿಲ್ಲ’’ ಎಂದು ಅವರು ಹೇಳಿರುವುದಾಗಿ ‘ಜಿಯೋ ಟಿವಿ’ ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)